ಭಾರತ ಮಂಟಪ ಮಾದರಿಯಲ್ಲಿ 'ಕರ್ನಾಟಕ ಮಂಟಪ' ನಿರ್ಮಾಣಕ್ಕೆ ಚಿಂತನೆ: ಸಿಎಂ ಡಿ.ಕೆ. ಶಿವಕುಮಾರ್
Karnataka Mandapam: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಮೊದಲ ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡಿದ್ದಾರೆ. ಭಾರತೀಯರಿಗೂ ಪ್ರವಾಸದಲ್ಲಿ ಆಸಕ್ತಿಯಿದೆ. ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಎಲ್ಲವೂ ಲಭ್ಯವಿದೆ. ನಮ್ಮ ಸರ್ಕಾರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬದ್ಧವಾಗಿದೆ ಎಂದು ಸಿಎಂ ಹೇಳಿದ್ದಾರೆ.
-
ಬೆಂಗಳೂರು, ಸೆ.27: "ದೆಹಲಿಯಲ್ಲಿ ಭಾರತ ಮಂಟಪದ ಮಾದರಿಯಲ್ಲಿ ಜಕ್ಕೂರು, ಮೈಸೂರು ಲ್ಯಾಂಪ್ಸ್ ಅಥವಾ ಎನ್ ಜಿ ಇ ಎಫ್ ಸ್ಥಳದಲ್ಲಿ , ಮೆಟ್ರೋ ನಿಲ್ದಾಣ ಸಮೀಪ 'ಕರ್ನಾಟಕ ಮಂಟಪ' (Karnataka Mandapam) ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸಿದೆ" ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಮೊದಲ ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
"ಪ್ರವಾಸೋದ್ಯಮ ಕಣ್ಣಿಗೆ, ಮನಸ್ಸಿಗೆ ಆನಂದ ನೀಡುತ್ತದೆ. ನಮ್ಮ ರಾಜ್ಯದ ಪರಿಸರ ನಮ್ಮ ದೊಡ್ಡ ಆಸ್ತಿ. ನಮ್ಮ ಸರ್ಕಾರ ಕಲೆ, ಸಂಸ್ಕೃತಿ, ಮನರಂಜನೆ ಒಳಗೊಂಡಂತೆ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುತ್ತಿದೆ" ಎಂದರು.
ಜೈಪುರ ಮೆಟ್ರೋದ ಸ್ವಚ್ಛತಾ ನಿರ್ವಹಣೆಗೆ ರಷ್ಯನ್ ಮಹಿಳೆ ಫಿದಾ: ದುಬೈ ಮೆಟ್ರೋದಂತಿದೆ ಎಂದು ಪ್ರಶಂಸೆ
ಈಸ್ ಆಫ್ ಡೂಯಿಂಗ್ ಬಿಸಿನೆಸ್ ಮೂಲಕ 2-3 ತಿಂಗಳಲ್ಲೇ ಅನುಮತಿ
"ಪರಿಸರ, ಸಂಸ್ಕೃತಿ, ಉಳಿಸಬೇಕು. ಕೊಡಗು, ಮಲೆನಾಡು ಪ್ರದೇಶಗಳಲ್ಲಿ ಪ್ರವಾಸೋದ್ಯಮ ಉತ್ತೇಜನ ನೀಡಲು ಚಿಂತಿಸಲಾಗಿದೆ. ನಮ್ಮ ಸಂಸ್ಕೃತಿ ಹಾಳುಮಾಡಬಾರದು. ಭಾರತ ಗೊತ್ತಿಲ್ಲದಿದ್ದರೂ ಜನಕ್ಕೆ ಬೆಂಗಳೂರು ಗೊತ್ತಿದೆ. ಬೆಂಗಳೂರಿನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವಿದೇಶಿ ಪಾಸ್ ಪೋರ್ಟ್ ದಾರರು ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ವೈಟ್ ಫೀಲ್ಡ್, ಏರ್ ಪೋರ್ಟ್ ರಸ್ತೆಯಲ್ಲಿ ಸಾಕಷ್ಟು ಹೋಟೆಲುಗಳನ್ನು ತೆರೆಯಲಾಗಿದ್ದು, ಹೊಸದಾಗಿ ತೆರೆಯಲಾಗುವ ಹೋಟೆಲುಗಳಿಗೆ ಈಸ್ ಆಫ್ ಡೂಯಿಂಗ್ ಬಿಸಿನೆಸ್ ಮೂಲಕ 2-3 ತಿಂಗಳಲ್ಲೇ ಅನುಮತಿ ದೊರಕಿಸಲಾಗುವುದು" ಎಂದರು.

ಹಣ ಸಂಚರಿಸುತ್ತಿದ್ದರೆ ಆರ್ಥಿಕತೆಗೆ ಶಕ್ತಿ
"ಹಣ ಸಂಚರಿಸುತ್ತಿದ್ದರೆ ಆರ್ಥಿಕತೆಗೆ ಶಕ್ತಿ ಬರುತ್ತದೆ. ಆರ್ಥಿಕವಾಗಿ ಶಕ್ತಿಯಿದ್ದರೆ ಇನ್ನಷ್ಟು ಹೊಟೇಲುಗಳನ್ನು ತೆರೆಯಲು ಸಾಧ್ಯ. ಭಾರತದ ಜನ ಹೊರಗೆ ಹೋಗಿ ಹೂಡಿಕೆ ಮಾಡಿದಂತೆ ಬೇರೆ ಯಾವ ದೇಶದಲ್ಲಿಯೂ ಹೂಡಿಕೆ ಮಾಡಲಾಗುವುದಿಲ್ಲ. ಭಾರತೀಯ ಆರ್ಥಿಕತೆ ಬಲವಾಗಿದೆ. ಭಾರತೀಯರಿಗೂ ಪ್ರವಾಸದಲ್ಲಿ ಆಸಕ್ತಿಯಿದೆ. ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಎಲ್ಲವೂ ಲಭ್ಯವಿದೆ. ನಮ್ಮ ಸರ್ಕಾರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬದ್ಧವಾಗಿದೆ" ಎಂದರು.
ಪ್ರವಾಸೋದ್ಯಮದಲ್ಲಿ ಬದ್ಧತೆ, ಉತ್ಸಾಹವಿದ್ದರೆ ಮಾತ್ರ ಯಶಸ್ವಿ
ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಅಗತ್ಯವಿರುವ ಎಲ್ಲವೂ ಇದೆ. ರಾಜ್ಯದಲ್ಲಿ ಪ್ರವಾಸೋದ್ಯಮವೆಂದರೆ ಆತಿಥ್ಯ. ಇದು ಸಾಮಾನ್ಯ ವಿಚಾರವಲ್ಲ. ಪ್ರವಾಸೋದ್ಯಮದಲ್ಲಿ ತೊಡಗಿಕೊಳ್ಳಲು ಬದ್ಧತೆ ಮತ್ತು ಉತ್ಸಾಹವಿರಬೇಕು. ಇದಿಲ್ಲದಿದ್ದರೆ ಪ್ರವಾಸೋದ್ಯಮದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದರು.
ಪ್ರವಾಸೋದ್ಯಮದಲ್ಲಿ ದುಡಿಯುತ್ತಿರುವವರನ್ನು ಗುರುತಿಸಲಾಗಿದೆ
"ಪ್ರವಾಸೋದ್ಯಮದ ಬಗ್ಗೆ ನಾನು ಅಧ್ಯಯನ ಮಾಡಿದ್ದೇನೆ. ಪ್ರವಾಸ ಕೈಗೊಳ್ಳುವುದು ನನ್ನ ಹಿಂದಿನ ಹವ್ಯಾಸವಾಗಿತ್ತು. ಪ್ರವಾಸೋದ್ಯಮದಲ್ಲಿ ದುಡಿಯುತ್ತಿರುವವರನ್ನು ಗುರುತಿಸಿ ಹೆಚ್ಚಿನ ಜವಾಬ್ದಾರಿ ನೀಡಲು ನಮ್ಮ ಸರ್ಕಾರ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿ ನೀಡುವಾಗ ಹಾಕುವ ಹಾರ ಮತ್ತು ಶಾಲು ಬಹಳ ಭಾರ. ಅದಕ್ಕೆ ತನ್ನದೇ ಆದ ತೂಕವಿದೆ ಎಂದರು. 350ಕ್ಕೂ ಹೆಚ್ಚು ಜನ ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿಗಳನ್ನು ಪಡೆದಿದ್ದಾರೆ" ಎಂದರು.

ಗೈಡ್, ಚಾಲಕರು ಪ್ರವಾಸೋದ್ಯಮದ ರಾಯಭಾರಿಗಳು
"ಗೈಡ್ ಕೇವಲ ದಾರಿ ತೋರುವವನಲ್ಲ ಕರ್ನಾಟಕದ ಕಥೆ ಹೇಳುವವನಲ್ಲ. ಟ್ಯಾಕ್ಸಿ ಚಾಲಕ ಕೇವಲ ಚಾಲಕನಲ್ಲ. ಅವರೆಲ್ಲಾ ಪ್ರವಾಸೋದ್ಯಮದ ರಾಯಭಾರಿಗಳು ಎನ್ನುವುದನ್ನು ನಾವು ಮರೆಯುವುದಿಲ್ಲ. ಕರ್ನಾಟಕದಲ್ಲಿ ಅಗಾಧವಾದ ಸಂಪತ್ತಿದ್ದು ನೈಸರ್ಗಿಕ ಸಂಪನ್ಮೂಲಗಳಿವೆ. ಆದರೆ ಇವುಗಳನ್ನು ನಾವು ಹೆಚ್ಚು ಬಳಸಿಕೊಂಡಿಲ್ಲ. ಇದನ್ನು ಪ್ರಪಂಚಕ್ಕೆ ನಾವು ತೋರಿಸಿಲ್ಲ. ಪ್ರಸ್ತುತ ಪ್ರವಾಸೋದ್ಯಮದಲ್ಲಿ ಹೊಸ ಹಂತಕ್ಕೆ ಬೆಳೆಯುತ್ತಿದ್ದೇವೆ" ಎಂದರು.
ರಾಜ್ಯದ ಸಂಪತ್ತನ್ನು ಹೆಚ್ಚಿನ ಜನರಿಗೆ ಪರಿಚಯ ಮಾಡಿಸಬೇಕು
"ಇಡೀ ಏಷ್ಯಾ ಖಂಡದಲ್ಲಿಯೇ ಮೊಟ್ಟಮೊದಲ ಬಾರಿಗೆ ವಿದ್ಯುತ್ ಬೆಳಕು ಕಂಡ ರಾಜ್ಯ ನಮ್ಮದು. ಶಿವನಸಮುದ್ರದ ಗಗನಚುಕ್ಕಿ, ಭರಚುಕ್ಕಿ ಜಲಪಾತಗಳು ಜೋಗ ಜಲಪಾತಕ್ಕಿಂತಲೂ ಅದ್ಭುತವಾಗಿದೆ. ನಮ್ಮ ಸಂಪತ್ತನ್ನು ಹೆಚ್ಚಿನ ಜನರಿಗೆ ಪರಿಚಯ ಮಾಡಿಸಬೇಕು ಪರಿಸರವೂ ಉಳಿಯಬೇಕು. ಹುಲಿ, ಆನೆ, ಸೇರಿದಂತೆ ಕಾಡಿನ ಎಲ್ಲಾ ಪ್ರಾಣಿಗಳನ್ನು ಉಳಿಸಬೇಕು. ಸರ್ಕಾರ ಅನೇಕ ಪ್ರವಾಸೋದ್ಯಮ ನೀತಿಗಳನ್ನು ಹೊರ ತಂದಿದೆ" ಎಂದು ತಿಳಿಸಿದರು.
ನೈಸರ್ಗಿಕ ಮತ್ತು ಸಾಂಸ್ಕೃತಿಕ ಸಂಪತ್ತಿನ ಸದ್ಬಳಕೆ ಅಗತ್ಯ
"ನಮ್ಮ 360 ಕಿಲೋಮೀಟರ್ ವ್ಯಾಪ್ತಿಯ ಕರಾವಳಿಯ ಸಾಮರ್ಥ್ಯವನ್ನು ನಾವು ಹೆಚ್ಚಾಗಿ ಬಳಸಿಕೊಂಡಿಲ್ಲ. ಮಂಗಳೂರಿನಲ್ಲಿ ಬೃಹತ್ ಕೈಗಾರಿಕೆಗಳಿವೆ. ಬಂದರು ಇದೆಯಾದರೂ ಪಂಚತಾರಾ ಹೋಟೆಲ್‌ಗಳಿಲ್ಲ. ಜಾರ್ಜ್ ಅವರಿಗೆ ಪ್ರವಾಸೋದ್ಯಮದಲ್ಲಿ ಹೆಚ್ಚಿನ ಉತ್ಸಾಹವಿದ್ದು, ಇಲಾಖೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಕರಾವಳಿ ಮತ್ತು ಮಲೆನಾಡು ಭಾಗದ ನೈಸರ್ಗಿಕ ಮತ್ತು ಸಾಂಸ್ಕೃತಿಕ ಸಂಪತ್ತನ್ನು ಸದ್ಬಳಕೆ ಮಾಡಿಕೊಳ್ಳಲು 'ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026' ಗೆ ಅನುಮೋದನೆ ನೀಡಿದೆ. ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಮುಖ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಇದರಡಿಯಲ್ಲಿ ಪ್ರವಾಸೋದ್ಯಮ ಯೋಜನೆಗಳಿಗೆ 'ಕೈಗಾರಿಕಾ ಮತ್ತು ಮೂಲಸೌಕರ್ಯ ಸ್ಥಾನಮಾನ' ನೀಡಲು ತೀರ್ಮಾನಿಸಲಾಗಿದೆ" ಎಂದು ವಿವರಿಸಿದರು.
ಹೂಡಿಕೆದಾರರ ಆಸಕ್ತಿ ಕಾಪಾಡಲು ಸಕಲ ವ್ಯವಸ್ಥೆ
"ಜಾಗತಿಕ ಹೂಡಿಕೆದಾರರ ಇಲಾಖೆಯನ್ನು ಕೂಡ ತೆರೆಯಲಾಗಿದ್ದು, ಅನಿವಾಸಿ ಭಾರತೀಯರಿಗೆ ವಿಶೇಷ ಸೌಲಭ್ಯಗಳು, ಹೂಡಿಕೆ ಮಾರ್ಗದರ್ಶನ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಈಸ್ ಆಫ್ ಡೂಯಿಂಗ್ ಬಿಸಿನೆಸ್ ಕಲ್ಪಿಸಿ 2-3 ತಿಂಗಳಲ್ಲೇ ಎಲ್ಲಾ ಅನುಮತಿಗಳನ್ನು ನೀಡುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹೂಡಿಕೆದಾರರ ಆಸಕ್ತಿ ಕಾಪಾಡಲು ಸಕಲ ವ್ಯವಸ್ಥೆ ಮಾಡಲಾಗುತ್ತಿದೆ" ಎಂದರು.
ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳ ಸಮಸ್ಯೆಗಳಿಗೆ ಮುಕ್ತಿ ನೀಡಲು ಯತ್ನ
"ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳ ಸಮಸ್ಯೆಗಳಿಗೂ ಮುಕ್ತಿ ನೀಡಲು ಅನೇಕ ರಾಜ್ಯಗಳೊಂದಿಗೆ ವಿಚಾರ ವಿನಿಮಯ ಮಾಡಿ ಕೇರಳ ಹಾಗೂ ಗೋವಾ ಮಾದರಿಯ ನೀತಿಗಳಿಗೆ ನೀಡಿದಂತೆ ಶಕ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು" ಎಂದರು.
ಚರ್ಚೆಗಳನ್ನು ಸರ್ಕಾರ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತದೆ
"ತುಳುನಾಡಿನಿಂದ ಹೊರಗಿನ ದೇಶಗಳಿಗೆ ತೆರಳಿರುವವರನ್ನು ತವರಿಗೆ ಕರೆಸಿ ತುಳುನಾಡಿನಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಮನವಿ ಮಾಡಲಾಗಿದೆ. ದಸರಾದಲ್ಲಿ ತುಳುನಾಡು ಬಯಲುಕುಪ್ಪೆ, ರಕ್ಷಣಾ ಇಲಾಖೆಗಳ ಸ್ತಬ್ಧಚಿತ್ರ ರಚಿಸಲು, ತಯಾರಿಸಲು ಸೂಚಿಸಲಾಗಿದೆ. ಕಾವೇರಿ ಆರತಿ ಕಾರ್ಯಕ್ರಮ ಕೂಡ ನಡೆಯಲಿದ್ದು, ಮೈಸೂರು ಸೇರಿದಂತೆ ಪ್ರವಾಸೋದ್ಯಮಕ್ಕೆ ಹೊಸ ರೂಪ ನೀಡಲು ಪ್ರಯತ್ನಿಸಲಾಗುತ್ತಿದೆ" ಎಂದರು.
"ರಾಜ್ಯದಲ್ಲಿ ಅನೇಕ ವಿಶ್ವ ಪಾರಂಪರಿಕ ತಾಣಗಳು ಇವೆ. ಚರ್ಚೆಗಳನ್ನು ಸರ್ಕಾರ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತದೆ. ಪ್ರವಾಸೋದ್ಯಮದಿಂದ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಹೂಡಿಕೆದಾರರಿಗೆ ಶಕ್ತಿ ತುಂಬಬೇಕಿದೆ. ಪರಂಪರೆ, ಇತಿಹಾಸ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ನಮ್ಮ ರಾಜ್ಯದ ಸಂಪತ್ತನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ. ನಮ್ಮ ಊರು, ನಮ್ಮ ಊಟ, ಸಂಸ್ಕೃತಿ, ಇತಿಹಾಸ ಎಲ್ಲಕ್ಕೂ ಮಹತ್ವ ನೀಡಬೇಕು" ಎಂದರು.
ಕನ್ವೆನ್ಷನ್ ಕೇಂದ್ರ ಸ್ಥಾಪಿಸಲು ಚಿಂತನೆ
"ಬುಕ್ ಮೈ ಶೋ ತಂಡದವರು ಮುಂಬೈ ಬಿಟ್ಟರೆ ಬೆಂಗಳೂರಿನಲ್ಲಿಯೇ ಕೋಲ್ಡ್ ಪ್ಲೇ ಸೇರಿದಂತೆ ವರ್ಷಕ್ಕೆ ಕನಿಷ್ಠ 25 ರಿಂದ 30 ಪ್ರದರ್ಶನಗಳನ್ನು ಬೆಂಗಳೂರಿನಲ್ಲಿಯೇ ನಡೆಸುವುದಾಗಿ ಚರ್ಚೆ ಮಾಡಿದ್ದಾರೆ. ಕನ್ವೆನ್ಷನ್ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿಯೂ ಸರ್ಕಾರ ಚಿಂತನೆ ನಡೆಸುತ್ತಿದೆ. ಕೆಎಸ್‌ಸಿಎ ಅವರೊಂದಿಗೆ ಮುಂದಿನ ವಾರ ನಡೆಸಲಾಗುವ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು. ಬ್ರಿಗೇಡ್ ಸಂಸ್ಥೆಯವರು ಕೂಡ ಇದರ ಭಾಗವಾಗಲು ಇಚ್ಛಿಸಿದ್ದಾರೆ" ಎಂದರು.
"ಏಷ್ಯಾದ ಅತಿ ಎತ್ತರದ ಸ್ಕೈ ಡೆಕ್ ನಿರ್ಮಾಣ ಕಾರ್ಯ ಇಷ್ಟು ಹೊತ್ತಿಗೆ ಮುಗಿಯಬೇಕಿತ್ತು. ಇದರ ಅನುಷ್ಠಾನಕ್ಕೆ ಪಿಪಿಪಿ ಮಾದರಿ ಅನುಸರಿಸಬೇಕಿತ್ತು. ಸೂಕ್ತ ಸ್ಥಳ ಗುರುತಿಸಿ ಅನುಷ್ಠಾನ ಮಾಡಲಾಗುವುದು" ಎಂದರು.
"ಮಂಗಳೂರು ಐ"- ಮಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ದುಬೈ ಶೈಲಿಯ ಬೃಹತ್ ಆಕಾಶಗೋಪುರ ಮತ್ತು ಪ್ರವಾಸಿ ಆಕರ್ಷಣೆಯ ಯೋಜನೆಯಾಗಿದೆ. ಇವುಗಳ ಅನುಷ್ಠಾನ ಕಷ್ಟಕರ ಹಾಗೂ ಸಮಯ ಹಿಡಿಯಲಿದೆ. ಮಂಗಳೂರಿನಲ್ಲಿ ತೆಗೆದುಕೊಂಡ ನಿರ್ಧಾರಗಳ ಅನುಷ್ಠಾನಕ್ಕೆ ತೀರ್ಮಾನಿಸಬೇಕಿದೆ" ಎಂದರು.