ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಫ್‌ಪಿಒ ಮಾರಾಟ ಕೇಂದ್ರದ ವಿರುದ್ಧ ದೂರು; ಐಸಿಎಲ್ ಕಂಪನಿ ಹೆಸರಿನಲ್ಲಿ ನಕಲಿ ಉತ್ಪನ್ನ ಮಾರಾಟ ಶಂಕೆ

ರೈತರೇ ನಡೆಸುತ್ತಿರುವ ಕೃಷಿ ರೈತ ಉತ್ಪಾದಕರ  ಸಂಸ್ಥೆಯೊಂದರ ರಸಗೊಬ್ಬರ  ಮಾರಾಟ ಕೇಂದ್ರದಲ್ಲೇ ನಕಲಿ ರಸಗೊಬ್ಬರ ಮಾರಾಟವಾಗಿರುವ ಆರೋಪ ಕೇಳಿ ಬಂದಿದ್ದು, ಇದರಿಂದ ಮೋಸಕ್ಕೊಳಗಾದ ರೈತರು ಶನಿವಾರ ಅಂಗಡಿ ಎದುರು ಪ್ರತಿಭಟನೆ ನಡೆಸಿದ ಘಟನೆ ನಂದಿ ಕ್ರಾಸ್‌ನಲ್ಲಿ ನಡೆದಿದೆ

ನಕಲಿ ರಸಗೊಬ್ಬರ ಮಾರಾಟ ಆರೋಪ: ರೈತರ ಆಕ್ರೋಶ

-

Profile
Ashok Nayak Jul 19, 2026 10:30 PM

ಚಿಕ್ಕಬಳ್ಳಾಪುರ: ರೈತರೇ ನಡೆಸುತ್ತಿರುವ ಕೃಷಿ ರೈತ ಉತ್ಪಾದಕರ ಸಂಸ್ಥೆಯೊಂದರ ರಸಗೊಬ್ಬರ  ಮಾರಾಟ ಕೇಂದ್ರದಲ್ಲೇ ನಕಲಿ ರಸಗೊಬ್ಬರ ಮಾರಾಟವಾಗಿರುವ ಆರೋಪ ಕೇಳಿ ಬಂದಿದ್ದು, ಇದರಿಂದ ಮೋಸಕ್ಕೊಳಗಾದ ರೈತರು ಅಂಗಡಿ ಎದುರು ಪ್ರತಿಭಟನೆ ನಡೆಸಿದ ಘಟನೆ ನಂದಿ ಕ್ರಾಸ್‌ನಲ್ಲಿ ನಡೆದಿದೆ. 

ಐಸಿಎಲ್ (ICL) ಕಂಪನಿಯ ಹೆಸರಿನಲ್ಲಿ 13-0-45, 0-52-34 ಹಾಗೂ  0-52-34, ಎಂ.ಕೆ.ಪಿ. ಸೇರಿದಂತೆ ವಿವಿಧ ರಸಗೊಬ್ಬರಗಳನ್ನು ಮಾರಾಟ ಮಾಡಲಾಗುತ್ತಿದ್ದು, ಅವು ಕಂಪನಿಯ ಅಧಿಕೃತ ಉತ್ಪನ್ನ ಗಳಲ್ಲ ಎಂದು ಕಂಪನಿಯ ಪ್ರತಿನಿಧಿಗಳು ಶಂಕೆ ವ್ಯಕ್ತಪಡಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ತಾಲೂಕಿನ ನಂದಿ ಕ್ರಾಸ್‌ನಲ್ಲಿರುವ ಶ್ರೀ ನಂಜುಂಡೇಶ್ವರ ಕೃಷಿ ರೈತ ಉತ್ಪಾದಕರ ಕಂಪನಿ ಮಾರಾಟ ಕೇಂದ್ರದಿಂದ ರಸಗೊಬ್ಬರ ಖರೀದಿಸಿದ್ದ ರೈತರಿಗೆ ಉತ್ಪನ್ನಗಳ ಅಸಲಿಯತ್ತಿನ ಬಗ್ಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಐಸಿಎಲ್ ಕಂಪನಿಯ ಪ್ರತಿನಿಧಿಗಳನ್ನು ಸಂಪರ್ಕಿಸಲಾಗಿದೆ. ರೈತರು ಕಳುಹಿಸಿದ ಫೋಟೋಗಳನ್ನು ಪರಿಶೀಲಿಸಿದ ಕಂಪನಿಯ ಅಧಿಕಾರಿಗಳು, ಅವು ತಮ್ಮ ಸಂಸ್ಥೆಯ ಉತ್ಪನ್ನಗಳಲ್ಲ ಎಂದು ತಿಳಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: Chikkaballapur News: ಪೆರೇಸಂದ್ರದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ; ನೂರಾರು ಮಂದಿಗೆ ತಜ್ಞ ವೈದ್ಯರಿಂದ ಸೇವೆ

ಈ ವೇಳೆ ಮಾರಾಟಗಾರರಿಂದ ಖರೀದಿ ಮೂಲದ ಬಗ್ಗೆ ಸಮರ್ಪಕ ಮಾಹಿತಿ ದೊರೆಯದೇ, ಪರಸ್ಪರ ವಿರುದ್ಧ ಹೇಳಿಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

 ಪ್ರಕರಣ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣೆಗೆ ದೂರು ನೀಡಲು ರೈತರು ಮುಂದಾದರೂ, ದೂರು ದಾಖಲಿಸಿ ಕೊಂಡು ತಕ್ಷಣ ಎಫ್‌ಐಆರ್ ಮಾಡಿಲ್ಲ ಎಂದು ಬಿಜ್ಜವಾರ ಗ್ರಾಮದ ರೈತ ಪುನೀತ್   ಆರೋಪಿಸಿದ್ದಾರೆ. 

ಹೀಗಾಗಿ ಸೋಮವಾರ ಕಂಪನಿಯ ಹಿರಿಯ ಅಧಿಕಾರಿಗಳೇ ನಂದಿ ಕ್ರಾಸ್ ಗೆ ಬಂದು ಲಿಖಿತ ದೂರು ಸಲ್ಲಿಸಲಿದ್ದು, ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಂಪನಿ ಪ್ರತಿನಿಧಿಗಳು ಭರವಸೆ ನೀಡಿರುವುದಾಗಿ ರೈತರು ತಿಳಿಸಿದ್ದಾರೆ.

ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಳಲ್ಲಿ ವ್ಯಾಪಕವಾಗಿ ಬಳಸುವ ಸಾವಿರಾರು ರೂಪಾಯಿ ಬೆಲೆತೆರುವ ದುಬಾರಿ ರಸಗೊಬ್ಬರಗಳ ಹೆಸರಿನಲ್ಲಿ ನಕಲಿ ಉತ್ಪನ್ನಗಳು ಮಾರಾಟವಾಗುತ್ತಿರುವ ಆರೋಪ ರೈತರಲ್ಲಿ ಆತಂಕ ಮೂಡಿಸಿದ್ದು, ರೈತರ ಹೆಸರಿನಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳಲ್ಲಿಯೇ ಇಂತಹ ಘಟನೆಗಳು ನಡೆಯುತ್ತಿರುವುದು ಕೃಷಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಐಸಿಎಲ್ ಕಂಪನಿಯ ಅಧಿಕಾರಿಗಳು ಶ್ರೀ ಭೋಗ ನಂದೀಶ್ವರ ಕೃಷಿ ರೈತ ಉತ್ಪಾದಕರ ಮಳಿಗೆಗೆ ಭೇಟಿ ನೀಡಿ ಈ ಸಂಸ್ಥೆಯ ಮಾರಾಟ ಪ್ರತಿನಿಧಿ ಮೋಹನ್ ಅವರನ್ನು ಪ್ರಶ್ನಿಸಿದರು. ಈತ ಒಂದೊಂದು ಗಳಿಗೆಗೆ ಒಂದೊಂದು ಹೇಳಿಕೆ ನೀಡುತ್ತಿದ್ದರಿಂದ ಅನುಮಾನಗೊಂಡ ಅಧಿಕಾರಿಗಳು ನಂದಿ ಗಿರಿಧಾಮ ಪೊಲೀಸ್ ಠಾಣೆಗೆ ಕರೆದೊಯ್ದು ವೇಳೆ ಹೊಸಕೋಟೆಯ ಮಹದೇವ್ ಎಂಬುವವರಿಂದ ನಕಲಿ ರಸ ಗೊಬ್ಬರ ಖರೀದಿಸಿರುವುದಾಗಿ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ.

ರೈತಾಪಗಳ ಬಾಯಿಗೆ  ಮಣ್ಣು ಹಾಕುತ್ತಿರುವ ಈ ಪ್ರಕರಣವು ರೈತರಿಗೆ ನ್ಯಾಯ ಕೊಡುವುದು ಇಲ್ಲವೇ ಮುಂದೆ ಯಾವ ಸ್ವರೂಪ ಪಡೆದುಕೊಳ್ಳುವುದೋ ಕಾದು ನೋಡಬೇಕಿದೆ.