Chikkaballapur News: 80 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳ ಭಾಗವಹಿಸುವಿಕೆ ನಿರೀಕ್ಷೆ 1 ಕೋಟಿಗೂ ಅಧಿಕ ಬಹುಮಾನ, ಸೆಪ್ಟೆಂಬರ್‌ನಲ್ಲಿ ಮಹಾ ಫೈನಲ್
ಈಶ ಗ್ರಾಮೋತ್ಸವವು ಗ್ರಾಮೀಣ ಪ್ರದೇಶದ ರೈತರು, ಮೀನುಗಾರರು, ದಿನಗೂಲಿ ಕಾರ್ಮಿಕರು, ಕುಶಲಕರ್ಮಿಗಳು, ವಿದ್ಯಾರ್ಥಿಗಳು ಹಾಗೂ ಗೃಹಿಣಿಯರಿಗೆ ತಮ್ಮ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಲು ಅಪರೂಪದ ಅವಕಾಶ ಕಲ್ಪಿಸಿದೆ. ಪುರುಷರಿಗಾಗಿ ವಾಲಿಬಾಲ್ ಹಾಗೂ ಮಹಿಳೆಯರಿಗಾಗಿ ಥ್ರೋಬಾಲ್ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ತಂಡದ ಮನೋಭಾವ, ಆರೋಗ್ಯಕರ ಜೀವನಶೈಲಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಒತ್ತು ನೀಡಲಾಗಿದೆ.
-
ಚಿಕ್ಕಬಳ್ಳಾಪುರ: ಗ್ರಾಮೀಣ ಭಾರತದ ಕ್ರೀಡಾ ಪ್ರತಿಭೆಗಳಿಗೆ ರಾಷ್ಟ್ರೀಯ ವೇದಿಕೆ ಕಲ್ಪಿಸುವ ಉದ್ದೇಶದಿಂದ ಸದ್ಗುರುಗಳ ಪರಿಕಲ್ಪನೆಯಲ್ಲಿ ಆರಂಭಗೊಂಡಿರುವ ಈಶ ಗ್ರಾಮೋತ್ಸವ ತನ್ನ 18ನೇ ಆವೃತ್ತಿಯೊಂದಿಗೆ ಕರ್ನಾಟಕದ 18 ಜಿಲ್ಲೆಗಳಲ್ಲಿ ಗ್ರಾಮೀಣ ಕ್ರೀಡಾ ಚೈತನ್ಯವನ್ನು ಮತ್ತಷ್ಟು ಉತ್ತೇಜಿಸಲು ಸಜ್ಜಾಗಿದೆ. ಭಾರತದ ಅತಿದೊಡ್ಡ ಗ್ರಾಮೀಣ ಕ್ರೀಡಾ ಹಬ್ಬವಾಗಿ ಬೆಳೆದಿರುವ ಈ ಕ್ರೀಡಾಕೂಟದಲ್ಲಿ ದೇಶದ 10 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ 40 ಸಾವಿರಕ್ಕೂ ಹೆಚ್ಚು ಗ್ರಾಮಗಳಿಂದ 80 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದ್ದು, ಕರ್ನಾಟಕವೂ ಈ ಬಾರಿ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದೆ.
ಆಕ್ಷನ್ ಫಾರ್ ರೂರಲ್ ರೆಜುವಿನೇಷನ್ ಅಡಿಯಲ್ಲಿ ಈಶ ಔಟ್ ರೀಚ್(Isha Outreach) ಆಯೋಜಿಸುತ್ತಿರುವ ಈ ಕ್ರೀಡಾಕೂಟದಲ್ಲಿ ಸುಮಾರು 7 ಸಾವಿರ ತಂಡಗಳು ಪಾಲ್ಗೊಳ್ಳಲಿದ್ದು, 15 ಸಾವಿರಕ್ಕೂ ಅಧಿಕ ಮಹಿಳಾ ಕ್ರೀಡಾಪಟುಗಳು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.
ಕರ್ನಾಟಕದ 18 ಜಿಲ್ಲೆಗಳಲ್ಲಿ ಈಗಾಗಲೇ ಕ್ಲಸ್ಟರ್ ಹಂತದ ಪಂದ್ಯಗಳು ಆರಂಭವಾಗಿದ್ದು, ಒಟ್ಟು ₹1 ಕೋಟಿಗೂ ಅಧಿಕ ನಗದು ಬಹುಮಾನಕ್ಕಾಗಿ ಗ್ರಾಮೀಣ ತಂಡಗಳು ಸೆಣಸಲಿವೆ.
ಕರ್ನಾಟಕ ಹಂತದ ಗ್ರಾಮೋತ್ಸವಕ್ಕೆ ಜು.11ರಂದು ಬೆಂಗಳೂರಿನ ಸದ್ಗುರು ಸನ್ನಿಧಿಯಲ್ಲಿ ಚಾಲನೆ ನೀಡಲಾಯಿತು. ಕಳೆದ ವರ್ಷದ ಚಾಂಪಿಯನ್ ತಂಡಗಳೊಂದಿಗೆ ನಟಿ ಹರಿಪ್ರಿಯಾ, ನಟ ವಸಿಷ್ಠ ಸಿಂಹ ಹಾಗೂ ಆರ್‌ಜೆ ಅಮಿತ್ ಪಾಲ್ಗೊಂಡ ಸೌಹಾರ್ದ ಪಂದ್ಯ ಕ್ರೀಡಾಕೂಟಕ್ಕೆ ಮೆರುಗು ತಂದಿತು. ಹಿರಿಯ ಬಾಲಕಿಯರ 'ಜೈ ಮಾರುತಿ ಹೊನ್ನೇನಹಳ್ಳಿ' ಹಾಗೂ ಕಿರಿಯ ಬಾಲಕಿಯರ 'ಜೈ ಭಜರಂಗಿ ಹೊನ್ನೇನಹಳ್ಳಿ' ತಂಡಗಳು ಪ್ರದರ್ಶನ ಪಂದ್ಯದಲ್ಲಿ ಪಾಲ್ಗೊಂಡು ಗ್ರಾಮೀಣ ಕ್ರೀಡಾ ಸಂಭ್ರಮಕ್ಕೆ ಮುನ್ನುಡಿ ಬರೆದವು.
ಗ್ರಾಮೀಣ ಪ್ರತಿಭೆಗಳಿಗೆ ವಿಶೇಷ ವೇದಿಕೆ
ಈಶ ಗ್ರಾಮೋತ್ಸವವು ಗ್ರಾಮೀಣ ಪ್ರದೇಶದ ರೈತರು, ಮೀನುಗಾರರು, ದಿನಗೂಲಿ ಕಾರ್ಮಿಕರು, ಕುಶಲಕರ್ಮಿಗಳು, ವಿದ್ಯಾರ್ಥಿಗಳು ಹಾಗೂ ಗೃಹಿಣಿಯರಿಗೆ ತಮ್ಮ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಲು ಅಪರೂಪದ ಅವಕಾಶ ಕಲ್ಪಿಸಿದೆ. ಪುರುಷರಿಗಾಗಿ ವಾಲಿಬಾಲ್ ಹಾಗೂ ಮಹಿಳೆಯರಿಗಾಗಿ ಥ್ರೋಬಾಲ್ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ತಂಡದ ಮನೋಭಾವ, ಆರೋಗ್ಯಕರ ಜೀವನಶೈಲಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಒತ್ತು ನೀಡಲಾಗಿದೆ.
ಹಲವು ಹಂತಗಳಲ್ಲಿ ಪಂದ್ಯಾವಳಿ
ಕ್ಲಸ್ಟರ್, ವಿಭಾಗೀಯ, ಸೆಮಿಫೈನಲ್ ಹಾಗೂ ಮಹಾ ಫೈನಲ್ ಹಂತಗಳಲ್ಲಿ ನಡೆಯಲಿರುವ ಈ ಪಂದ್ಯಾವಳಿಯ ಅಂತಿಮ ಸುತ್ತು ಸೆಪ್ಟೆಂಬರ್ 6ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ಆದಿಯೋಗಿಯ ಸನ್ನಿಧಿಯಲ್ಲಿ ನಡೆಯಲಿದೆ. ವಿಜೇತ ವಾಲಿಬಾಲ್ ಹಾಗೂ ಥ್ರೋಬಾಲ್ ತಂಡಗಳಿಗೆ ತಲಾ 5 ಲಕ್ಷ, ರನ್ನರ್ಸ್‌ಅಪ್ ತಂಡಗಳಿಗೆ 3 ಲಕ್ಷ, ಮೂರನೇ ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಗಳಿಗೆ ಕ್ರಮವಾಗಿ 1 ಲಕ್ಷ ಹಾಗೂ 50 ಸಾವಿರ ನಗದು ಬಹುಮಾನ ನೀಡಲಾಗುವುದು. ಕ್ಲಸ್ಟರ್ ಹಾಗೂ ವಿಭಾಗೀಯ ಹಂತಗಳಲ್ಲೂ ನಗದು ಬಹುಮಾನಗಳನ್ನು ಘೋಷಿಸಲಾಗಿದೆ.
"ಕ್ರೀಡೆಯೇ ಗ್ರಾಮಗಳನ್ನು ಒಗ್ಗೂಡಿಸುವ ಶಕ್ತಿ"
ಗ್ರಾಮೋತ್ಸವದ ಸಂಯೋಜಕ ಸ್ವಾಮಿ ಪುಳಕ ಮಾತನಾಡಿ, "ಈಶ ಗ್ರಾಮೋತ್ಸವವು ಕೇವಲ ಕ್ರೀಡಾ ಕೂಟವಲ್ಲ, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ರಾಷ್ಟ್ರೀಯ ಮಟ್ಟಕ್ಕೆ ತರುವ ವೇದಿಕೆಯಾಗಿದೆ. ಪ್ರತಿಯೊಂದು ಅರ್ಹ ಗ್ರಾಮೀಣ ತಂಡವೂ ಈ ಅವಕಾಶವನ್ನು ಬಳಸಿಕೊಳ್ಳ ಬೇಕು" ಎಂದು ಕರೆ ನೀಡಿದರು. ವೃತ್ತಿಪರ ಕ್ರೀಡಾಪಟುಗಳನ್ನು ಹೊರತುಪಡಿಸಿ ಗ್ರಾಮೀಣ ಪ್ರತಿಭೆಗಳಿಗೆ ಮಾತ್ರ ಅವಕಾಶ ಕಲ್ಪಿಸಿರುವುದು ಈ ಕ್ರೀಡಾಕೂಟದ ವಿಶೇಷತೆ ಎಂದು ಹೇಳಿದರು.
ಸದ್ಗುರು: ಕ್ರೀಡೆ ಸಾಮಾಜಿಕ ಸಾಮರಸ್ಯದ ಸೇತುವೆ
ಈಶ ಗ್ರಾಮೋತ್ಸವ ಕುರಿತು ಸದ್ಗುರು ಮಾತನಾಡಿ, "ಕ್ರೀಡೆ ಎನ್ನುವುದು ಜೀವನದ ಸಂಭ್ರಮ. ಅದು ಜಾತಿ, ಮತ, ಸಾಮಾಜಿಕ ಭೇದಗಳನ್ನು ಮೀರಿ ಜನರನ್ನು ಒಂದಾಗಿಸುತ್ತದೆ. ಉತ್ತಮ ಕ್ರೀಡಾಪಟು ವಾಗುವುದಕ್ಕಿಂತ ಉತ್ತಮ ಕ್ರೀಡಾ ಮನೋಭಾವವನ್ನು ಜೀವನದುದ್ದಕ್ಕೂ ಉಳಿಸಿಕೊಳ್ಳುವುದು ಮುಖ್ಯ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಸಾಧನೆ ಗಮನಾರ್ಹ
ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯ ಬಡಗನ್ನೂರು ತಂಡ ಮಹಿಳೆಯರ ಥ್ರೋಬಾಲ್ ವಿಭಾಗ ದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಗ್ಗಡಿಹಳ್ಳಿ ತಂಡ ಪುರುಷರ ವಾಲಿಬಾಲ್ ವಿಭಾಗದಲ್ಲಿ ರನ್ನರ್ಸ್‌ಅಪ್ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿತ್ತು.
ಅರ್ಹತಾ ನಿಯಮಗಳು
ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಅಥವಾ ಭಾರತವನ್ನು ಪ್ರತಿನಿಧಿಸದ ಗ್ರಾಮೀಣ ಕ್ರೀಡಾಪಟುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ತಂಡದ ಎಲ್ಲ ಆಟಗಾರರು ಒಂದೇ ಗ್ರಾಮ ಪಂಚಾಯಿತಿಗೆ ಸೇರಿದವರಾಗಿರಬೇಕು. ವಾಲಿಬಾಲ್‌ಗೆ ಕನಿಷ್ಠ 14 ವರ್ಷ ಹಾಗೂ ಥ್ರೋ ಬಾಲ್‌ಗೆ 13 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮಹಿಳಾ ಥ್ರೋಬಾಲ್ ತಂಡದಲ್ಲಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗರಿಷ್ಠ ಮೂವರು ಆಟಗಾರರನ್ನು ಸೇರಿಸಿಕೊಳ್ಳಬಹುದು.
ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ರಾಷ್ಟ್ರೀಯ ಕ್ರೀಡಾ ಪ್ರೋತ್ಸಾಹಕ ಸಂಸ್ಥೆ (NSPO) ಎಂದು ಮಾನ್ಯತೆ ಪಡೆದಿರುವ ಈಶ ಗ್ರಾಮೋತ್ಸವ, ಕ್ರೀಡೆಯ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ, ಮಹಿಳಾ ಸಬಲೀಕರಣ, ಯುವಕರಲ್ಲಿ ವ್ಯಸನಮುಕ್ತ ಜೀವನ ಹಾಗೂ ಸಾಮಾಜಿಕ ಸಾಮರಸ್ಯ ಬೆಳೆಸುವ ಮಹತ್ವಾಕಾಂಕ್ಷೆಯ ಉಪಕ್ರಮವಾಗಿ ರೂಪುಗೊಂಡಿದೆ.
ಈಶ ಗ್ರಾಮೋತ್ಸವ-2026ಕ್ಕೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಗ್ರಾಮೀಣ ಕ್ರೀಡಾಪಟುಗಳು ತಮ್ಮ ಗ್ರಾಮ ಪಂಚಾಯಿತಿ ಮೂಲಕ ಹೆಸರು ನೋಂದಾಯಿಸಿಕೊಳ್ಳ ಬಹುದಾಗಿದೆ ಎಂದು ತಿಳಿಸಿದ್ದಾರೆ.