ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shidlaghatta News: ಗೋಮಾಳ ಜಮೀನು ಒತ್ತುವರಿ ವಿರುದ್ಧ ದಲಿತ ಕುಟುಂಬ ಪಾದಯಾತ್ರೆ: ಆಡಳಿತಕ್ಕೆ  ಮನವಿ

ಗ್ರಾಮದಲ್ಲಿನ ಗೋಮಾಳ ಜಮೀನಿನ ಮೇಲೆ ಅಕ್ರಮ ಒತ್ತುವರಿಗಳು ನಡೆಯುತ್ತಿದ್ದು, ಇದರಿಂದ ಪಶುಸಂಗೋಪನೆಗೆ ತೀವ್ರ ತೊಂದರೆ ಉಂಟಾಗಿದೆ. ನಮ್ಮ ಜೀವನೋಪಾಯಕ್ಕೆ ಆಧಾರವಾಗಿರುವ ಗೋಮಾಳ ಜಮೀನು ಉಳಿಸಿಕೊಡಬೇಕು. ಅಕ್ರಮಗಳನ್ನು ತಕ್ಷಣವೇ ತಡೆಯಬೇಕು” ಎಂದು ಈ ಧರೆ ಪ್ರಕಾಶ್ ನಾಗರೀಕರ ಪರವಾಗಿ ಒತ್ತಾಯಿಸಿದರು.

ಗೋಮಾಳ ಜಮೀನು ಒತ್ತುವರಿ ವಿರುದ್ಧ ದಲಿತ ಕುಟುಂಬ ಪಾದಯಾತ್ರೆ

-

Profile
Ashok Nayak Apr 18, 2026 10:16 PM

ಶಿಡ್ಲಘಟ್ಟ : ಗೋಮಾಳ ಜಮೀನಿನ ರಕ್ಷಣೆಗೆ ಆಗ್ರಹಿಸಿ ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದ ದಲಿತ ಕುಟುಂಬಗಳು ಹಾಗೂ ಜನಪದ ಕಲಾವಿದ ಈ ಧರೆ ಪ್ರಕಾಶ್ ನೇತೃತ್ವದಲ್ಲಿ ಹಸುಗಳು ಮತ್ತು ಕುರಿಗಳನ್ನು ಕರೆದುಕೊಂಡು ಗ್ರಾಮದಿಂದ ತಾಲ್ಲೂಕು ಕಚೇರಿವರೆಗೆ ಪಾದಯಾತ್ರೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮದಲ್ಲಿನ ಗೋಮಾಳ ಜಮೀನಿನ ಮೇಲೆ ಅಕ್ರಮ ಒತ್ತುವರಿಗಳು ನಡೆಯುತ್ತಿದ್ದು, ಇದರಿಂದ ಪಶುಸಂಗೋಪನೆಗೆ ತೀವ್ರ ತೊಂದರೆ ಉಂಟಾಗಿದೆ. ನಮ್ಮ ಜೀವನೋಪಾಯಕ್ಕೆ ಆಧಾರವಾಗಿರುವ ಗೋಮಾಳ ಜಮೀನು ಉಳಿಸಿಕೊಡಬೇಕು. ಅಕ್ರಮಗಳನ್ನು ತಕ್ಷಣವೇ ತಡೆಯಬೇಕು” ಎಂದು ಈ ಧರೆ ಪ್ರಕಾಶ್ ನಾಗರೀಕರ ಪರವಾಗಿ ಒತ್ತಾಯಿಸಿದರು.

ಅವರು ಮುಂದುವರೆದು, “ಶಾಸಕರು ಸದನದಲ್ಲಿ ಮಾತನಾಡುವುದಷ್ಟೇ ಅಲ್ಲ, ನಮ್ಮ ಊರಿನಲ್ಲಿ ನಡೆಯುತ್ತಿರುವ ಅಕ್ರಮಗಳು ಅವರಿಗೆ ಕಾಣುತ್ತಿಲ್ಲವೇ? ದಲಿತರ ಮೇಲೆ, ಹೆಣ್ಮಕ್ಕಳ ಮೇಲೆ ಅನ್ಯಾಯ ನಡೆಯುತ್ತಿದೆ. ಇದನ್ನು ಕೇಳಿಕೊಳ್ಳುವವರು ಯಾರೂ ಇಲ್ಲವೇ?” ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Shidlaghatta News: ಜನಪದ ಪರಂಪರೆಗೆ ಜೀವ ತುಂಬಿದ ಕೋಲಾಟ ಪ್ರದರ್ಶನ

ಇದೇ ವೇಳೆ  ಮತ್ತೊಂದು ಗಂಭೀರ ಆರೋಪ ಮಾಡಿದ್ದು, ಸ್ವಂತ ಜಮೀನುಗಳಿಗೆ ಕಾಂಪೌಂಡ್ ಹಾಕದೇ, ಗೋಮಾಳ ಜಮೀನುಗಳಿಗೆ ರಾಜಕೀಯ ಬೆಂಬಲದೊಂದಿಗೆ ಕಾಂಪೌಂಡ್ ಹಾಕಿಕೊಂಡು ದರ್ಪ ತೋರಿಸುತ್ತಿದ್ದಾರೆ. ದಲಿತ ಕುಟುಂಬಗಳು ಗೋಮಾಳ ಜಮೀನಿನಲ್ಲಿ ತಿಪ್ಪೆ ಹಾಕಿಕೊಂಡಿ ದ್ದರೂ, ಅವರ ಮೇಲೆ ದೌರ್ಜನ್ಯ ನಡೆಸಿ ಜಮೀನು ಒತ್ತುವರಿ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಹಶೀಲ್ದಾರ್ ಮೂಲಕ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಸಮಸ್ಯೆಗೆ ಶೀಘ್ರ ಪರಿಹಾರ ನೀಡುವಂತೆ ಆಗ್ರಹಿಸಿದರು.

ತಹಶೀಲ್ದಾರ್ ಗಗನ ಸಿಂಧು ಪ್ರತಿಕ್ರಿಯಿಸಿ, “ಗೋಮಾಳ ಜಮೀನನ್ನು ಯಾರೂ ಒತ್ತುವರಿ ಮಾಡಲು ಅವಕಾಶ ನೀಡುವುದಿಲ್ಲ. ಈ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರೈತರು ಮಾಧ್ಯಮಗಳಿಗೆ ಹೋಗುವ ಮೊದಲು ನಮ್ಮ ಗಮನಕ್ಕೆ ತಂದರೆ ಸಮಸ್ಯೆಯನ್ನು ಬೇಗ ಬಗೆಹರಿಸಲು ಪ್ರಯತ್ನಿಸುತ್ತೇವೆ” ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಚಲಪತಿ, ನರಸಿಂಹಮೂರ್ತಿ (ಎಂಟಿಆರ್), ವಿಜಯ್ ಕುಮಾರ್, ರೈತ ಮುಖಂಡ ಪ್ರತೀಶ್, ದೇವಪ್ಪ ಸೇರಿದಂತೆ ಹಲವರು ಹಾಜರಿದ್ದರು.