Chikkaballapur News: ಸಮುದಾಯದ ಏಳಿಗೆಯ ಗುರಿಯೊಂದಿಗೆ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಅಭಿವೃದ್ಧಿ ಟ್ರಸ್ಟ್ ಸ್ಥಾಪನೆ: ಉಪಾಧ್ಯಕ್ಷ ಶಿವಕುಮಾರ್
ವಾಲ್ಮೀಕಿ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಆದ್ಯತೆ ನೀಡುವ ಉದ್ದೇಶ ದಿಂದ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಅಭಿವೃದ್ಧಿ ಟ್ರಸ್ಟ್ ಸ್ಥಾಪಿಸಲಾಗಿದೆ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸುವುದು ಹಾಗೂ ಸಮುದಾಯದ ಹಿತ ಕಾಪಾಡುವುದು ಟ್ರಸ್ಟ್‌ನ ಮುಖ್ಯ ಗುರಿಯಾಗಿದೆ ಎಂದು ಟ್ರಸ್ಟ್ ಉಪಾಧ್ಯಕ್ಷ ಹಾಗೂ ದಿಶಾ ಸಮಿತಿ ಸದಸ್ಯ ಶಿವಕುಮಾರ್ ತಿಳಿಸಿದರು.
-
ಚಿಕ್ಕಬಳ್ಳಾಪುರ: ವಾಲ್ಮೀಕಿ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಆದ್ಯತೆ ನೀಡುವ ಉದ್ದೇಶದಿಂದ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಅಭಿವೃದ್ಧಿ ಟ್ರಸ್ಟ್ ಸ್ಥಾಪಿಸಲಾಗಿದೆ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸುವುದು ಹಾಗೂ ಸಮುದಾಯದ ಹಿತ ಕಾಪಾಡುವುದು ಟ್ರಸ್ಟ್‌ನ ಮುಖ್ಯ ಗುರಿಯಾಗಿದೆ ಎಂದು ಟ್ರಸ್ಟ್ ಉಪಾಧ್ಯಕ್ಷ ಹಾಗೂ ದಿಶಾ ಸಮಿತಿ ಸದಸ್ಯ ಶಿವಕುಮಾರ್ ತಿಳಿಸಿದರು.
ನಗರದ ಪೊಲೀಸ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಆಚರಣೆ ಹಾಗೂ ಟ್ರಸ್ಟ್ ಕಚೇರಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಸಣ್ಣ ಸಸಿಯಂತೆ ಆರಂಭವಾಗಿರುವ ಟ್ರಸ್ಟ್ ಮುಂದಿನ ದಿನಗಳಲ್ಲಿ ಹೆಮ್ಮರವಾಗಿ ಬೆಳೆದು ಸಮುದಾಯದ ಬೆನ್ನೆಲುಬಾಗಲಿದೆ ಎಂಬ ವಿಶ್ವಾಸವಿದೆ. ಸಮುದಾಯದ ಮುಖಂಡರು ಒಗ್ಗಟ್ಟಿ ನಿಂದ ಕಾರ್ಯನಿರ್ವಹಿಸಿ, ಅರ್ಹರಿಗೆ ನೆರವಾಗುವ ಮೂಲಕ ಜನಾಂಗದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಇದನ್ನೂ ಓದಿ: Chikkaballapur News: ಡಿ.31ರವರೆಗೆ ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶಿಬಿರಗಳ ಆಯೋಜನೆ
ಯುವ ಮುಖಂಡ ಮಣಿ ಮಾತನಾಡಿ, ವಿಶ್ವದ ಮೊದಲ ನೇತ್ರದಾನಿ ಎಂದೇ ಗುರುತಿಸಲ್ಪಡುವ ಬೇಡರ ಕಣ್ಣಪ್ಪ, ಶಬರಿ ಹಾಗೂ ಸಿಂಧೂರ ಲಕ್ಷ್ಮಣರಂತಹ ಮಹನೀಯರು ಸಮುದಾಯದ ಹೆಮ್ಮೆಯ ಪ್ರತೀಕಗಳಾಗಿದ್ದಾರೆ. ಆದಿ ಜನಾಂಗವಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗದಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿಲ್ಲು ಹಿಡಿದು ಬೇಟೆಯಲ್ಲಿ ನಿಪುಣರಾಗಿದ್ದ ಸಮುದಾಯದ ಯುವಜನರು ಇಂದು ಶಿಕ್ಷಣದ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸಿ, ತಹಶೀಲ್ದಾರ್, ಸಹಾಯಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಾಗಿ ಆಡಳಿತ ನಡೆಸುವ ಗುರಿ ಹೊಂದಬೇಕು ಎಂದು ಹೇಳಿದರು.
ಕೀಳರಿಮೆಯಿಂದ ಹೊರಬಂದು ಸ್ವಾಭಿಮಾನದಿಂದ ಬದುಕಬೇಕು. ರಾಮನಿಗೆ ಸೇತುವೆ ನಿರ್ಮಿಸು ವಾಗ ಅಳಿಲು ನೆರವಾದಂತೆ, ಸಮುದಾಯದ ಪ್ರತಿಯೊಬ್ಬರೂ ಇತರರ ಏಳಿಗೆಗೆ ಕೈಲಾದ ಕೊಡುಗೆ ನೀಡಬೇಕು. ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.
ಜಿಲ್ಲಾ ಸಾಂಖ್ಯಿಕ ಅಧಿಕಾರಿ ವೆಂಕಟಪ್ಪ ಮಾತನಾಡಿ, ಶೈಕ್ಷಣಿಕ ಪ್ರಗತಿಯೇ ಸಮಾಜದ ಅಭಿವೃದ್ಧಿಗೆ ಪ್ರಮುಖ ಅಡಿಪಾಯ. ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಸಮುದಾಯದ ಮುಖಂಡರು ಕ್ರಮವಹಿಸಬೇಕು ಎಂದರು.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನಂದಿ ನಾರಾಯಣಸ್ವಾಮಿ ಮಾತನಾಡಿ, ಸಮುದಾಯದ ಸಮಸ್ಯೆ ಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಂಡು ಎಲ್ಲರೂ ಒಗ್ಗಟ್ಟಿನಿಂದ ಸಾಗಬೇಕು ಎಂದರು.
ಟ್ರಸ್ಟ್ ಖಜಾಂಚಿ ಹಾಗೂ ಮಾಜಿ ಸೈನಿಕ ಟಿ. ಚಂದ್ರಶೇಖರ್ ಮಾತನಾಡಿ, ಮೀಸಲಾತಿ ಹೆಚ್ಚಳಕ್ಕಾಗಿ ಸಮುದಾಯದ ಸ್ವಾಮೀಜಿಗಳು ನಡೆಸಿದ ಹೋರಾಟವನ್ನು ಸ್ಮರಿಸಿದರು. ಮೀಸಲಾತಿ ವಿಚಾರದಲ್ಲಿ ಎದುರಾಗಿರುವ ಸವಾಲುಗಳ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳವರು ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕುಡುವತಿ ಶ್ರೀನಿವಾಸ್ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಅನುದಾನ ಸದ್ಬಳಕೆಗೆ ಆದ್ಯತೆ
ಟ್ರಸ್ಟ್ ಅಧ್ಯಕ್ಷ ನಂಜುಂಡಯ್ಯ ಮಾತನಾಡಿ, ಟ್ರಸ್ಟ್‌ನಲ್ಲಿ ಯಾವುದೇ ಅವ್ಯವಹಾರಕ್ಕೆ ಅವಕಾಶ ನೀಡುವುದಿಲ್ಲ. ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕು. ಶೇ.90ರಷ್ಟು ಅನುದಾನ ವಾಪಸ್ ಆಗುತ್ತಿದೆ ಎಂಬ ವಿಚಾರ ವನ್ನು ಪ್ರಸ್ತಾಪಿಸಿದ ಅವರು, ಅನುದಾನ ವ್ಯರ್ಥವಾಗದಂತೆ ತಡೆದು ಸಮುದಾಯದ ಏಳಿಗೆಗೆ ವಿನಿಯೋಗಿಸಲು ಶ್ರಮಿಸುವುದಾಗಿ ತಿಳಿಸಿದರು.
ಬಾಲಕುಂಟಹಳ್ಳಿ ಗಂಗಾಧರ, ಪತ್ರಕರ್ತರ ಸಂಘದ ರವಿಕುಮಾರ್, ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.