IND vs NZ: 35 ಎಸೆತಗಳಲ್ಲಿ ಶತಕ ಬಾರಿಸಿ ಹಲವು ವಿಶ್ವ ದಾಖಲೆಗಳನ್ನು ಮುರಿದ ಅಭಿಷೇಕ್ ಶರ್ಮಾ!
ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಸ್ಫೋಟಕ ಶತಕ ಸಿಡಿಸಿ ಹಲವು ದಾಖಲೆಗಳನ್ನು ಮುರಿದಿದ್ದಾರೆ. ವೆಲ್ಲಿಂಗ್ಟನ್ನಲ್ಲಿ ನಡೆದಿದ್ದ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ತಮ್ಮ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದ ನಾಲ್ಕನೇ ಶತಕ ದಾಖಲಿಸಿದರು.
35 ಎಸೆತಗಳಲ್ಲಿ ಸೆಂಚುರಿ ಬಾರಿಸಿ ಹಲವು ದಾಖಲೆಗಳನ್ನು ಮುರಿದ ಅಭಿಷೇಕ್ ಶರ್ಮಾ. -
ವೆಲ್ಲಿಂಗ್ಟನ್: ಇಲ್ಲಿನ ಹೆನ್ರಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದಿದ್ದ ಐದು ಪಂದ್ಯಗಳ ಟಿ2ಐ ಸರಣಿಯ ಮೂರನೇ ಪಂದ್ಯದಲ್ಲಿ (IND vs NZ) ಅಭಿಷೇಕ್ ಶರ್ಮಾ (Abhishek Sharma) ತಮ್ಮ ವೃತ್ತಿಜೀವನದ ಅತ್ಯುತ್ತಮ ಇನಿಂಗ್ಸ್ ಅನ್ನು ಆಡಿದರು. ನ್ಯೂಜಿಲೆಂಡ್ ವಿರುದ್ಧ ಕೇವಲ 38 ಎಸೆತಗಳಲ್ಲಿ 113 ರನ್ ಸಿಡಿಸಿದ ಅವರು, ಭಾರತ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. 199 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ, 40 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿತು.
ಯುವ ಆಟಗಾರ ವೈಭವ್ ಸೂರ್ಯವಂಶಿ (19 ಎಸೆತಗಳಲ್ಲಿ 44 ರನ್) ಅವರೊಂದಿಗೆ ಅಭಿಷೇಕ್ ಕೇವಲ 7.1 ಓವರ್ಗಳಲ್ಲಿ 133 ರನ್ಗಳ ಜೊತೆಯಾಟವಾಡಿದರು. ಅಭಿಷೇಕ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, 35 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಈ ಮೂಲಕ ಅಭಿಷೇಕ್ ತಮ್ಮ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ನಾಲ್ಕನೇ ಶತಕ ದಾಖಲಿಸಿದರು.
ಭಾರತ ಪರ ಅತಿ ಹೆಚ್ಚು ಟಿ20 ಅಂತಾರಾಷ್ಟ್ರೀಯ ಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಐದು ಶತಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಅಭಿಷೇಕ್ ತಮ್ಮ ಇನಿಂಗ್ಸ್ನಲ್ಲಿ 297.37ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದರು. ಒಟ್ಟು ಒಂಬತ್ತು ಬೌಂಡರಿ ಹಾಗೂ 11 ಸಿಕ್ಸರ್ಗಳನ್ನು ಸಿಡಿಸಿದರು.
IND vs NZ 3rd T20I: ಪವರ್ಪ್ಲೇನಲ್ಲಿ 118 ರನ್ ಬಾರಿಸಿ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ!
ಅಭಿಷೇಕ್ ಶರ್ಮಾ ಮುರಿದ ದಾಖಲೆಗಳ ಸಂಪೂರ್ಣ ಪಟ್ಟಿ
40 ಎಸೆತಗಳಿಗಿಂತ ಕಡಿಮೆ ಅವಧಿಯಲ್ಲಿ ಮೂರು ಟಿ20ಐ ಶತಕ
ಟಿ20 ಕ್ರಿಕೆಟ್ನಲ್ಲಿ 40 ಎಸೆತಗಳಿಗಿಂತ ಕಡಿಮೆ ಅವಧಿಯಲ್ಲಿ ಅಭಿಷೇಕ್ ಶರ್ಮಾ ಮೂರನೇ ಬಾರಿ ಶತಕ ಗಳಿಸಿದ್ದಾರೆ. ಕಳೆದ ತಿಂಗಳು ದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ 30 ಎಸೆತಗಳಲ್ಲಿ ಶತಕ ಸಿಡಿಸಿದ್ದ ಅವರು, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ 37 ಎಸೆತಗಳಲ್ಲಿ ಶತಕ ಗಳಿಸಿದ್ದರು.
ಈ ಸಾಧನೆಯೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ 40 ಎಸೆತಗಳಿಗಿಂತ ಕಡಿಮೆ ಅವಧಿಯಲ್ಲಿ ಮೂರು ಶತಕಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟೆಸ್ಟ್ ಆಡುವ ರಾಷ್ಟ್ರಗಳ ಆಟಗಾರರು ಹಾಗೂ ಅಸೋಸಿಯೇಟ್ ರಾಷ್ಟ್ರಗಳ ಆಟಗಾರರು ಸೇರಿದಂತೆ ಬೇರೆ ಯಾರೂ ಈ ಸಾಧನೆಯನ್ನು ಎರಡು ಬಾರಿಯೂ ಮಾಡಿಲ್ಲ. ಅಲ್ಲದೆ, ಟಿ20ಐ ಕ್ರಿಕೆಟ್ನಲ್ಲಿ 35 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಎರಡು ಶತಕಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನೂ ಅಭಿಷೇಕ್ ತಮ್ಮದಾಗಿಸಿಕೊಂಡಿದ್ದಾರೆ.
1⃣1⃣3⃣ runs 3⃣8⃣ balls 2⃣9⃣7⃣.3⃣7⃣ strike rate 9⃣ fours & 1⃣1⃣ sixes Abhishek Sharma, take a bow for that astonishing innings 🙇♂️ Updates ▶️ https://t.co/zf4CnZQ8CD #TeamIndia | #NZvIND https://t.co/RxygJwIOUw
— BCCI (@BCCI) October 27, 2026
ಟೆಸ್ಟ್ ಆಡುವ ರಾಷ್ಟ್ರಗಳ ಪೈಕಿ ವೇಗದ ಟಿ20ಐ ಶತಕ ಗಳಿಸಿದವರು
ಅಭಿಷೇಕ್ ಶರ್ಮಾ vs ಅಫ್ಘಾನಿಸ್ತಾನ, 30 ಎಸೆತಗಳು
ಸಿಕಂದರ್ ರಾಝಾ vs ಗ್ಯಾಂಬಿಯಾ, 33 ಎಸೆತಗಳು
ಫಿನ್ ಆಲೆನ್ vs ದಕ್ಷಿಣ ಆಫ್ರಿಕಾ, 33 ಎಸೆತಗಳು
ಡೇವಿಡ್ ಮಿಲ್ಲರ್ vs ಬಾಂಗ್ಲಾದೇಶ, 35 ಎಸೆತಗಳು
ರೋಹಿತ್ ಶರ್ಮಾ vs ಶ್ರೀಲಂಕಾ, 35 ಎಸೆತಗಳು
ಅಭಿಷೇಕ್ ಶರ್ಮಾ vs ನ್ಯೂಜಿಲೆಂಡ್, 35 ಎಸೆತಗಳು
35 ಎಸೆತಗಳೊಳಗೆ ನಾಲ್ಕು ಟಿ20 ಶತಕಗಳು
ಅಭಿಷೇಕ್ ಶರ್ಮಾ ಅಂತಾರಾಷ್ಟ್ರೀಯ, ದೇಶಿ ಹಾಗೂ ಫ್ರಾಂಚೈಸಿ ಟಿ20 ಕ್ರಿಕೆಟ್ ಸೇರಿದಂತೆ ಒಟ್ಟಾರೆ ನಾಲ್ಕು ಬಾರಿ 35 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಶತಕ ಗಳಿಸಿದ್ದಾರೆ. ಉರ್ವಿಲ್ ಪಟೇಲ್ ಮತ್ತು ವೈಭವ್ ಸೂರ್ಯವಂಶಿ ತಲಾ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. 40 ಎಸೆತಗಳೊಳಗೆ ಅಭಿಷೇಕ್ ಒಟ್ಟು ಐದು ಟಿ20 ಶತಕಗಳನ್ನು ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಉರ್ವಿಲ್ ಪಟೇಲ್ ಮತ್ತು ವೈಭವ್ ಸೂರ್ಯವಂಶಿ ತಲಾ ಮೂರು ಶತಕಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.
1️⃣9️⃣9️⃣ chased down in 13.2 overs 💥 📸 #TeamIndia take a 3️⃣-0️⃣ lead and seal the series with a run-chase for the ages 👏 🙌 Updates ▶️ https://t.co/zf4CnZQ8CD #NZvIND https://t.co/pP6zHBmuns
— BCCI (@BCCI) October 27, 2026
ನ್ಯೂಜಿಲೆಂಡ್ ವಿರುದ್ಧದ ವೇಗದ ಟಿ20ಐ ಶತಕ
ನ್ಯೂಜಿಲೆಂಡ್ ವಿರುದ್ಧ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವೇಗವಾಗಿ ಶತಕ ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಅಭಿಷೇಕ್ ಶರ್ಮಾ ತಮ್ಮದಾಗಿಸಿಕೊಂಡಿದ್ದಾರೆ. ಅವರು ಕೇವಲ 35 ಎಸೆತಗಳಲ್ಲಿ ಈ ಸಾಧನೆ ಮಾಡಿದರು.
ಈ ಹಿಂದೆ ಭಾರತದ ಇಶಾನ್ ಕಿಶನ್ 42 ಎಸೆತಗಳಲ್ಲಿ ಶತಕ ಗಳಿಸಿ ದಾಖಲೆ ಬರೆದಿದ್ದರು. ಈ ವರ್ಷದ ಜನವರಿಯಲ್ಲಿ ತಿರುವನಂತಪುರದಲ್ಲಿ ನಡೆದಿದ್ದ ಭಾರತದ ತವರಿನ ಸರಣಿಯ ಐದನೇ ಟಿ20 ಪಂದ್ಯದಲ್ಲಿ ಇಶಾನ್ ಈ ಸಾಧನೆ ಮಾಡಿದ್ದರು.
ಇದರ ಜೊತೆಗೆ, ನ್ಯೂಜಿಲೆಂಡ್ ನೆಲದಲ್ಲಿ 40 ಎಸೆತಗಳಿಗಿಂತ ಕಡಿಮೆ ಅವಧಿಯಲ್ಲಿ ಟಿ20 ಅಂತಾರಾಷ್ಟ್ರೀಯ ಶತಕ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಅಭಿಷೇಕ್ ಪಾತ್ರರಾಗಿದ್ದಾರೆ. ಈ ಹಿಂದೆ ಶ್ರೀಲಂಕಾದ ಕುಸಲ್ ಪೆರೆರಾ 2015ರಲ್ಲಿ ನೆಲ್ಸನ್ನಲ್ಲಿ 44 ಎಸೆತಗಳಲ್ಲಿ ಶತಕ ಗಳಿಸಿದ್ದು ದಾಖಲೆಯಾಗಿತ್ತು.
ಅಭಿಷೇಕ್ ಶರ್ಮಾ ಸ್ಪೋಟಕ ಶತಕ, ಮೂರನೇ ಪಂದ್ಯ ಗೆದ್ದು ಟಿ20ಐ ಸರಣಿಯನ್ನು ವಶಪಡಿಸಿಕೊಂಡ ಭಾರತ!
15 ಎಸೆತಗಳೊಳಗೆ ಮೂರು ಅರ್ಧಶತಕಗಳು
ಅಭಿಷೇಕ್ ಶರ್ಮಾ ಟಿ20ಐ ಕ್ರಿಕೆಟ್ನಲ್ಲಿ 15 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಮೂರನೇ ಬಾರಿ ಅರ್ಧಶತಕ ಪೂರೈಸಿದ್ದಾರೆ. ಬೇರೆ ಯಾವುದೇ ಆಟಗಾರ ಈ ಸಾಧನೆಯನ್ನು ಒಂದಕ್ಕಿಂತ ಹೆಚ್ಚು ಬಾರಿ ಮಾಡಿಲ್ಲ. ಈ ಅಂಕಿಅಂಶವು ಟಿ20 ಕ್ರಿಕೆಟ್ನಲ್ಲಿ ಅಭಿಷೇಕ್ ಅವರ ಸ್ಫೋಟಕ ಬ್ಯಾಟಿಂಗ್ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ.
ಟಿ20ಐ ಪಂದ್ಯದಲ್ಲಿ 10ಕ್ಕಿಂತ ಹೆಚ್ಚು ಸಿಕ್ಸರ್ಗಳು
ನ್ಯೂಜಿಲೆಂಡ್ ವಿರುದ್ಧದ ಇನಿಂಗ್ಸ್ನಲ್ಲಿ ಅಭಿಷೇಕ್ ಶರ್ಮಾ 11 ಸಿಕ್ಸರ್ಗಳನ್ನು ಸಿಡಿಸಿದರು. ಇದರೊಂದಿಗೆ ಟಿ20ಐ ಪಂದ್ಯವೊಂದರಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್ಗಳನ್ನು ಗಳಿಸಿದ ಮೂರನೇ ಇನಿಂಗ್ಸ್ ಇದಾಗಿದೆ.
ಟೆಸ್ಟ್ ಆಡುವ ರಾಷ್ಟ್ರಗಳ ಆಟಗಾರರ ಪೈಕಿ ಈ ಸಾಧನೆಯನ್ನು ಅತಿ ಹೆಚ್ಚು ಬಾರಿ ಮಾಡಿದ ಆಟಗಾರ ಎಂಬ ದಾಖಲೆಯನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ ಆರೋನ್ ಫಿಂಚ್ ಮತ್ತು ಕ್ರಿಸ್ ಗೇಲ್ ತಲಾ ಎರಡು ಬಾರಿ 10 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್ಗಳನ್ನು ಸಿಡಿಸಿ ಈ ದಾಖಲೆಯನ್ನು ಹಂಚಿಕೊಂಡಿದ್ದರು. ಆದರೆ ಮಲೇಷ್ಯಾದ ಕರಣ್ಬೀರ್ ಸಿಂಗ್ ಐದು ಬಾರಿ ಈ ಸಾಧನೆ ಮಾಡಿದ್ದು, ಒಟ್ಟಾರೆ ಆಟಗಾರರ ಪಟ್ಟಿಯಲ್ಲಿ ಅವರೇ ಮುಂಚೂಣಿಯಲ್ಲಿದ್ದಾರೆ.