Chinthamani News: ಮುತ್ತುಕದಹಳ್ಳಿಯಲ್ಲಿ ಮಾರಮ್ಮ, ಚೌಡೇಶ್ವರಮ್ಮ, ಪಟಾಲಮ್ಮ ದೇವಿಯರ ವೈಭವದ ವಾರ್ಷಿಕೋತ್ಸವ
ಗ್ರಾಮದ ಯುವಕರು, ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಜಾತಿ, ಧರ್ಮ, ಪಕ್ಷ ಭೇದವಿಲ್ಲದೆ ಒಗ್ಗಟ್ಟಿನಿಂದ ಉತ್ಸವವನ್ನು ಆಯೋಜಿಸಿದ್ದು ವಿಶೇಷವಾಗಿತ್ತು. ಹಲವು ದಶಕಗಳ ಹಿಂದೆ ಸ್ಥಗಿತ ಗೊಂಡಿದ್ದ ಈ ಸಂಪ್ರದಾಯವನ್ನು ಕಳೆದ ವರ್ಷ ಪುನರಾರಂಭಿಸಲಾಗಿದ್ದು, ಎರಡನೇ ವರ್ಷದ ಉತ್ಸವವನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸಲಾಗಿದೆ
-
ಚಿಂತಾಮಣಿ: ಆಷಾಢ ಮಾಸದ ಪವಿತ್ರ ಸಂದರ್ಭದಲ್ಲಿ ಚಿಂತಾಮಣಿ ತಾಲ್ಲೂಕಿನ ಮುತ್ತುಕದ ಹಳ್ಳಿ ಗ್ರಾಮದಲ್ಲಿ ಜಗನ್ಮಾತೆ ಶ್ರೀ ಮಾರಮ್ಮ, ಶ್ರೀ ಚೌಡೇಶ್ವರಮ್ಮ ಹಾಗೂ ಶ್ರೀ ಪಟಾಲಮ್ಮ ತಾಯಿಯರ ಎರಡನೇ ವರ್ಷದ ವಾರ್ಷಿಕೋತ್ಸವ ಮತ್ತು ವೈಭವದ ಮೆರವಣಿಗೆ ಉತ್ಸವ ಭಾನುವಾರ ಶ್ರದ್ಧಾ-ಭಕ್ತಿಯಿಂದ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಗ್ರಾಮದ ಮೂಲದೇವರಾದ ಶ್ರೀ ವೇಣುಗೋಪಾಲಸ್ವಾಮಿ ಹಾಗೂ ಜಗನ್ಮಾತೆಯರಿಗೆ ವಿಶೇಷ ಅಲಂಕಾರ, ಅಭಿಷೇಕ, ಮಹಾಮಂಗಳಾರತಿ ಮತ್ತು ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಬಳಿಕ ನಾದಸ್ವರ, ತಮಟೆ ಹಾಗೂ ಸಾಂಪ್ರದಾಯಿಕ ವಾದ್ಯಘೋಷಗಳ ನಡುವೆ ದೇವಿಯರ ಉತ್ಸವ ಮೂರ್ತಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಭಕ್ತರು ದೀಪಾರಾಧನೆ, ಪೂಜೆ ಸಲ್ಲಿಸಿ ದೇವಿಯರ ಆಶೀರ್ವಾದ ಪಡೆದರು.
ಇದನ್ನೂ ಓದಿ: Chinthamani News: ಜು.30ಕ್ಕೆ ಬಾರ್ಲಹಳ್ಳಿ ಕ್ರಾಸ್ ಸಾಯಿಬಾಬಾ ಮಂದಿರದಲ್ಲಿ ಭವ್ಯ ಗುರುಪೂರ್ಣಿಮೆ!
ಗ್ರಾಮದ ಯುವಕರು, ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಜಾತಿ, ಧರ್ಮ, ಪಕ್ಷ ಭೇದವಿಲ್ಲದೆ ಒಗ್ಗಟ್ಟಿನಿಂದ ಉತ್ಸವವನ್ನು ಆಯೋಜಿಸಿದ್ದು ವಿಶೇಷವಾಗಿತ್ತು. ಹಲವು ದಶಕಗಳ ಹಿಂದೆ ಸ್ಥಗಿತ ಗೊಂಡಿದ್ದ ಈ ಸಂಪ್ರದಾಯವನ್ನು ಕಳೆದ ವರ್ಷ ಪುನರಾರಂಭಿಸಲಾಗಿದ್ದು, ಎರಡನೇ ವರ್ಷದ ಉತ್ಸವವನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸಲಾಗಿದೆ ಎಂದು ಯುವಕರು ತಿಳಿಸಿದರು.
ಗುನ್ನಹಳ್ಳಿ, ಕೊಂಗನಹಳ್ಳಿ, ತಳಗವಾರ, ಮಡಬಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮ ಗಳಿಂದ ನೂರಾರು ಭಕ್ತರು ಆಗಮಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಬೆಳಗ್ಗೆ ದೇವಿಯರಿಗೆ ಮಡಿಲಕ್ಕಿ ತುಂಬುವ ಕಾರ್ಯಕ್ರಮವೂ ನೆರವೇರಿತು.
ಗ್ರಾಮದಲ್ಲಿ ಉತ್ತಮ ಮಳೆ, ಸಮೃದ್ಧ ಬೆಳೆ, ಹಾಲಿನ ಉತ್ಪಾದನೆ ಹೆಚ್ಚಳ ಹಾಗೂ ಎಲ್ಲರಿಗೂ ಆಯುರಾರೋಗ್ಯ ಮತ್ತು ನೆಮ್ಮದಿ ದೊರೆಯಲಿ ಎಂದು ದೇವಿಯರಲ್ಲಿ ಪ್ರಾರ್ಥಿಸಲಾಯಿತು. ಮುಂದಿನ ವರ್ಷಗಳಲ್ಲಿ ಗ್ರಾಮಸ್ಥರು ಹಾಗೂ ಮುಖಂಡರ ಸಹಕಾರದೊಂದಿಗೆ ಉತ್ಸವವನ್ನು ಜಾತ್ರಾ ಮಹೋತ್ಸವವಾಗಿ ಇನ್ನಷ್ಟು ವೈಭವದಿಂದ ಆಚರಿಸುವ ಸಂಕಲ್ಪವನ್ನು ಯುವಕರು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಭೀಮರಾಜ್, ಮಂಜುನಾಥ್, ತಿರುಮಳಪ್ಪ, ಹರ್ಷವರ್ಧನ್, ಪುನೀತ್ ಕುಮಾರ್, ಶಶಿಕುಮಾರ್, ಮೋಹನ್, ರಾಜ್ ಕುಮಾರ್, ಮುರಳಿ, ಮೂರ್ತಿ, ಸಾಗರ್, ರಾಮು, ಲೋಕೇಶ್, ಅಶೋಕ್, ಅಭಿ, ಮನೋಹರ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.