MLA Pradeep Eshwar: ಸಂಪುಟ ಸಭೆ ಜಿಲ್ಲೆಯ ಅಭಿವೃದ್ಧಿ ಮತ್ತು ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ವಿಶ್ವಾಸವಿದೆ : ಪ್ರದೀಪ್ ಈಶ್ವರ್
ಸಚಿವ ಸಂಪುಟ ಸಭೆ ಈ ಭಾಗದ ಜಿಲ್ಲೆಗಳ ಅಭಿವೃದ್ಧಿ ಮತ್ತು ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ನಿರೀಕ್ಷೆ ಇದೆ. ಈಗಾಗಲೇ ಹಲವು ವಿಷಯಗಳನ್ನು ಪಟ್ಟಿ ಮಾಡಿ ಮುಖ್ಯಮಂತ್ರಿಗಳಿಗೆ ನೀಡಲಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ.

ನಂದಿಬೆಟ್ಟದಲ್ಲಿ ಶಾಸಕ ಪ್ರದೀಪ್ ಈಶ್ವರ್ ಸಂಪುಟ ಸಭೆ ನಡೆಯುವ ಸ್ಥಳದ ಪರಿಶೀಲನೆ ನಡೆಸಿ ಮಾಧ್ಯಮದೊಂದಿಗೆ ಮಾತನಾಡಿದರು.

ಚಿಕ್ಕಬಳ್ಳಾಪುರ: ಇದೇ ತಿಂಗಳ 19ರಂದು ನಂದಿಗಿರಿಧಾಮದಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತಿತರ ಜಿಲ್ಲೆಗಳ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತು ವಿಶೇಷವಾಗಿ ಬೆಳಕು ಚೆಲ್ಲುವ ವಿಶ್ವಾಸವಿದೆ ಎಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ಇದೇ 19ರಂದು ನಂದಿಗಿರಿಧಾಮದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯುವ ಹಿನ್ನೆಲೆಯಲ್ಲಿ ಅವರು ಶುಕ್ರವಾರ ಅಧಿಕಾರಿಗಳ ತಂಡದೊಂದಿಗೆ ನಂದಿಗಿರಿಧಾಮಕ್ಕೆ ಭೇಟಿ ನೀಡಿ ಪೂರ್ವ ಸಿದ್ದತೆಗಳ ಕುರಿತು ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನಂದಿಗಿರಿಧಾಮದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆ ಈ ಭಾಗಕ್ಕೆ ಹೆಮ್ಮೆಯ ವಿಷಯ ವಾಗಿದೆ. ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿರುವ ಜೊತೆಗೆ ಪ್ರತಿಷ್ಠಿತ ಸಾರ್ಕ್ ಸಮ್ಮೇಳನವೂ ನಡೆದಿರುವ ಇತಿಹಾಸವನ್ನು ನಂದಿಗಿರಿಧಾಮ ಹೊಂದಿದೆ.
ಸಚಿವ ಸಂಪುಟ ಸಭೆ ಈ ಭಾಗದ ಜಿಲ್ಲೆಗಳ ಅಭಿವೃದ್ಧಿ ಮತ್ತು ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ನಿರೀಕ್ಷೆ ಇದೆ. ಈಗಾಗಲೇ ಹಲವು ವಿಷಯಗಳನ್ನು ಪಟ್ಟಿ ಮಾಡಿ ಮುಖ್ಯಮಂತ್ರಿಗಳಿಗೆ ನೀಡಲಾ ಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ.
150 ಕೋಟಿ ರೂಪಾಯಿ ವೆಚ್ಚದ ಹೂವಿನ ಮಾರುಕಟ್ಟೆ, ರೋಪ್‌ವೇ ಗೆ ಅನುಮೋದನೆ, ಈ ಭಾಗದ ಜಕ್ಕಲಮಡುಗು ಜಲಾಶಯದ ಅಣೆಕಟ್ಟೆಯ ಎತ್ತರವನ್ನು ಏರಿಸಿ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ನಂದಿಗಿರಿಧಾಮವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡುವ ವಿಷಯಗಳನ್ನು ಮುಖ್ಯಮಂತ್ರಿಗಳ ಮುಂದಿಡಲಾಗಿದೆ. ನಂದಿಗಿರಿಧಾಮ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದರೆ ವಿದೇಶಿಯರ ಗಮನ ಈ ಕಡೆಗೆ ಸೆಳೆದು ಬಂಡವಾಳ ಹರಿದು ಬಂದು ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ, ಐಜಿಪಿ ಲಾಭೂರಾಮ್, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.