ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅರುಣಾಚಲ ಪ್ರದೇಶದಲ್ಲಿ ಅಣೆಕಟ್ಟು ವಿರೋಧಿ ಹೋರಾಟದ ಕಿಚ್ಚು: ಗಲಭೆ ನಿಯಂತ್ರಣಕ್ಕೆ ಭದ್ರತಾ ಪಡೆಗಳ ಏರ್‌ಲಿಫ್ಟ್

Anti-Dam Protests: ಅರುಣಾಚಲ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆ ವಿರುದ್ಧ ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳನ್ನು ಬೃಹತ್ ಸಂಖ್ಯೆಯಲ್ಲಿ ನಿಯೋಜಿಸಲಾಗುತ್ತಿದೆ. ಆರ್‌ಎಎಫ್ ಮತ್ತು ಇತರ ಭದ್ರತಾ ಪಡೆಗಳನ್ನು ಹೊತ್ತ ಭಾರತೀಯ ವಾಯುಪಡೆಯ ಸಾರಿಗೆ ವಿಮಾನಗಳು ಹಲವು ಬಾರಿ ಪಾಸಿಘಾಟ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿವೆ.

ಅರುಣಾಚಲ ಪ್ರದೇಶದಲ್ಲಿ ಅಣೆಕಟ್ಟು ವಿರೋಧಿ ಹೋರಾಟದ ಕಿಚ್ಚು

ಅರುಣಾಚಲ ಪ್ರದೇಶದಲ್ಲಿ ನಡೆದ ಪ್ರತಿಭಟನೆ -

Priyanka P
Priyanka P Oct 27, 2026 4:13 PM

ಇಟಾನಗರ, ಅ. 27: ಅರುಣಾಚಲ ಪ್ರದೇಶದ (Arunachal Pradesh) ಸಿಯಾಂಗ್ ಕಣಿವೆಯಲ್ಲಿ ಪ್ರಸ್ತಾವಿತ 11,200 ಮೆಗಾವಾಟ್ ಸಾಮರ್ಥ್ಯದ ಸಿಯಾಂಗ್ ಜಲವಿದ್ಯುತ್ ಯೋಜನೆಗಾಗಿ ಅಣೆಕಟ್ಟು ನಿರ್ಮಿಸುವ ಯೋಜನೆ ವಿರುದ್ಧ ಮತ್ತಷ್ಟು ಪ್ರತಿಭಟನೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳನ್ನು ಬೃಹತ್ ಸ‍ಂಖ್ಯೆಯಲ್ಲಿ ನಿಯೋಜಿಸಲಾಗುತ್ತಿದೆ. ಅರುಣಾಚಲ ಪ್ರದೇಶಕ್ಕೆ ಹೆಚ್ಚುವರಿ ಭದ್ರತೆಗಾಗಿ ಮಹಾರಾಷ್ಟ್ರದ ಮುಂಬೈಯಿಂದಎರಡು ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ (RAF) ಘಟಕಗಳು ಪಾಸಿಘಾಟ್‌ಗೆ ತಲುಪಿವೆ.

ಆರ್‌ಎಎಫ್ ಮತ್ತು ಇತರ ಭದ್ರತಾ ಪಡೆಗಳನ್ನು ಹೊತ್ತ ಭಾರತೀಯ ವಾಯುಪಡೆಯ ಸಾರಿಗೆ ವಿಮಾನಗಳು ಹಲವು ಬಾರಿ ಪಾಸಿಘಾಟ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿವೆ. ಈಗಾಗಲೇ ಸಿಯಾಂಗ್ ಮತ್ತು ಅಪ್ಪರ್ ಸಿಯಾಂಗ್ ಜಿಲ್ಲೆಗಳಲ್ಲಿ ಆರ್‌ಎಎಫ್‌ನ ಹಲವು ಘಟಕಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದಲ್ಲದೆ ಅಸ್ಸಾಂನ ದಿಬ್ರುಗಢ, ಶಿವಸಾಗರ, ಜೋರ್ಹಾಟ್, ನಾಗಾಂವ್ ಮತ್ತು ನಲ್ಬರಿಯಿಂದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಘಟಕಗಳನ್ನು ಸಿಯಾಂಗ್ ಕಣಿವೆ ಪ್ರದೇಶಕ್ಕೆ ತುರ್ತಾಗಿ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್ ಜಿಲ್ಲೆಯಲ್ಲಿ ಪ್ರಸ್ತಾವಿತ ಸಿಯಾಂಗ್ ಅಣೆಕಟ್ಟು ಯೋಜನೆ ವಿರುದ್ಧ ಅಕ್ಟೋಬರ್ 23ರಂದು ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಎನ್‌ಎಚ್‌ಪಿಸಿಯ ಸ್ಥಳೀಯ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಅಲ್ಲದೆ, ಹಲವು ಸ್ಥಳಗಳಲ್ಲಿ ಬೆಂಕಿ ಹಾಕಲಾಗಿದೆ. ಪೊಲೀಸ್ ವಾಹನಗಳೂ ಅಗ್ನಿಗೆ ಆಹುತಿಯಾಗಿದೆ. ಶಾಸಕರ ಮನೆಗಳ ಬಳಿಯೂ ಪ್ರತಿಭಟನಾಕಾರರ ಗುಂಪು ದಾಂಧಲೆ ನಡೆಸಿದೆ.

ಮತ ಕಳ್ಳತನ ವಿರುದ್ಧ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಬಿಜೆಪಿ ಪ್ರತಿಭಟನೆ

ಸಿಯಾಂಗ್ ಕಣಿವೆ ಪ್ರದೇಶದ ಪಾಸಿಘಾಟ್, ಮೆಬೊ ಮತ್ತು ರುಕ್ಸಿನ್‌ನಲ್ಲಿ ಅಧಿಕಾರಿಗಳು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163ರ ಅಡಿಯಲ್ಲಿ ನಿರ್ಬಂಧಗಳನ್ನು ಮುಂದುವರಿಸಿದ್ದಾರೆ. ಕಳೆದ ವಾರ ಪಾಸಿಘಾಟ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಅರುಣಾಚಲ ಪ್ರದೇಶ ಪೊಲೀಸರು ಹಲವಾರು ಪ್ರಕರಣಗಳನ್ನು ದಾಖಲಿಸಿದ್ದು, ಇಲ್ಲಿಯವರೆಗೆ 21 ಜನರನ್ನು ಬಂಧಿಸಲಾಗಿದೆ.

ಇದೇ ವೇಳೆ, ಸಿಯಾಂಗ್ ಕಣಿವೆಯಲ್ಲಿ ಉಂಟಾದ ಅಶಾಂತಿಯ ಬೆನ್ನಲ್ಲೇ, ಪ್ರಸ್ತಾವಿತ ಬೃಹತ್ ಅಣೆಕಟ್ಟು ಯೋಜನೆ ವಿಚಾರವಾಗಿ ಅರುಣಾಚಲ ಪ್ರದೇಶದ ಅಪ್ಪರ್ ಸುಬನ್ಸಿರಿ ಜಿಲ್ಲೆಯಲ್ಲೂ ಉದ್ವಿಗ್ನತೆ ಉಂಟಾಗಿದೆ. ಅಪ್ಪರ್ ಸುಬನ್ಸಿರಿ ಜಲವಿದ್ಯುತ್ ಯೋಜನೆ ವಿರೋಧಿಸಿ ಟಾಗಿನ್ ವಿದ್ಯಾರ್ಥಿ ಸಂಘ ಕರೆ ನೀಡಿದ್ದ 12 ಗಂಟೆಗಳ ಜಿಲ್ಲಾ ಬಂದ್‌ನಿಂದಾಗಿ, ಜಿಲ್ಲಾ ಕೇಂದ್ರವಾದ ದಪೋರಿಜೋದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ರಸ್ತೆಗಳಲ್ಲಿ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆದಿದೆ.

ಶನಿವಾರ (ಅ. 24) ರಾತ್ರಿ ಟಾಗಿನ್ ವಿದ್ಯಾರ್ಥಿ ಸಂಘದ ಅಧ್ಯಕ್ಷರ ನಿವಾಸವನ್ನು ಶೋಧಿಸಿದ ಬಳಿಕ, ವಶಕ್ಕೆ ಪಡೆಯಲು ಅರುಣಾಚಲ ಪ್ರದೇಶ ಪೊಲೀಸರು ಯತ್ನಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಂದ್‌ಗೆ ಕರೆ ನೀಡಲಾಗಿತ್ತು. 1,600 ಮೆಗಾವಾಟ್ ಸಾಮರ್ಥ್ಯದ ಪ್ರಸ್ತಾವಿತ ಅಪ್ಪರ್ ಸುಬನ್ಸಿರಿ ಜಲವಿದ್ಯುತ್ ಯೋಜನೆಯನ್ನು ರದ್ದುಗೊಳಿಸಬೇಕೆಂದೂ ಸಂಘವು ಆಗ್ರಹಿಸಿದೆ.