Chikkaballapur News: ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ದಾಖಲೆ ರಹಿತ ನಿವಾಸಿಗಳ ಆಶಾಕಿರಣವಾದ ಕಂದಾಯ ಗ್ರಾಮ ಅಭಿಯಾನ
ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ನೆಲೆಗೊಂಡಿರುವ ದಾಖಲೆ ರಹಿತ ಜನ ವಸತಿಗಳಾದ ತಾಂಡ, ಹಟ್ಟಿ, ಹಾಡಿ, ಪಾಳ್ಯ, ಮಜಿರೆ, ಕ್ಯಾಂಪ್, ಕಾಲೋನಿ ಇತ್ಯಾದಿಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ವಾಸದ ಮನೆಗಳ ಹಕ್ಕು ದಾಖಲೆಗಳು ಇಲ್ಲದೆ ಅನೇಕ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದರು. ಇಂತಹ ಅನೇಕ ಗ್ರಾಮಗಳು ಮೂಲಭೂತ ಸೌಕರ್ಯ ಪಡೆಯಲು ಹರ ಸಾಹಸ ಪಡಬೇಕಾಗಿತ್ತು
ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಕಂದಾಯ ಗ್ರಾಮ ಅಭಿಯಾನದಲ್ಲಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮದ ನೋಟ.... -
ಮುನಿರಾಜು ಎಂ ಅರಿಕೆರೆ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮಾಲೀಕತ್ವಕ್ಕೆ ಸಂಬಂಧಪಟ್ಟ ಎಲ್ಲ ಕಂದಾಯ ದಾಖಲೆ ಗಳನ್ನು ಕಾನೂನು ರೀತ್ಯಾ ಸೃಜಿಸಿ ದಾಖಲೆ ರಹಿತ ವಸತಿಗಳಲ್ಲಿ ವಾಸಿಸುತ್ತಿರುವ ಅರ್ಹ ಫಲಾನುಭವಿಗಳಿಗೆ 2000 ಹಕ್ಕುಪತ್ರಗಳನ್ನು ವಿತರಣೆ ಮಾಡುವ ಮೂಲಕ ಜಿಲ್ಲಾಡಳಿತ ರಾಜ್ಯದ ಗಮನ ಸೆಳೆದಿದೆ. ಅಲ್ಲದೆ ಮುಂದಿನ 8 ತಿಂಗಳಲ್ಲಿ 86,652 ಹಕ್ಕು ಪತ್ರಗಳನ್ನು ವಿತರಣೆ ಮಾಡಲು ಕಾರ್ಯೋನ್ಮುಖವಾಗಿದೆ.
ಜಿಲ್ಲೆಯಲ್ಲಿ ನಡೆದಿರುವ ಕಂದಾಯ ಗ್ರಾಮ ಅಭಿಯಾನ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಕಂದಾಯ ಸಚಿವ ಕೃಷ್ಣಬೈರೇಗೌಡ(Revenue Minister Krishna Byre Gowda) ಅವರ ನಿರ್ದೇಶನದಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್(District In-charge Minister Dr.M.C.Sudhakar) ನೇತೃತ್ವದಲ್ಲಿ ಕಂದಾಯ ಗ್ರಾಮ ಅಭಿಯಾನ ಕಾರ್ಯ ಸಮರೋಪಾದಿಯಲ್ಲಿ ಸಾಗಿದ್ದು ದಾಖಲೆ ಹೊಂದುವ ಆಸೆ ಹೊಂದಿದ್ದ ಜಿಲ್ಲೆಯ ನಾಗರೀಕರಲ್ಲಿ ಆಶಾವಾದ ಕೈಗೂಡುವಂತಾಗಿರುವುದು ನೂತನ ಜಿಲ್ಲಾಧಿಕಾರಿಗಳ ಜನಪರ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ.
ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ನೆಲೆಗೊಂಡಿರುವ ದಾಖಲೆ ರಹಿತ ಜನ ವಸತಿಗಳಾದ ತಾಂಡ, ಹಟ್ಟಿ, ಹಾಡಿ, ಪಾಳ್ಯ, ಮಜಿರೆ, ಕ್ಯಾಂಪ್, ಕಾಲೋನಿ ಇತ್ಯಾದಿಗಳಲ್ಲಿ ವಾಸಿಸು ತ್ತಿರುವ ನಿವಾಸಿಗಳಿಗೆ ವಾಸದ ಮನೆಗಳ ಹಕ್ಕು ದಾಖಲೆಗಳು ಇಲ್ಲದೆ ಅನೇಕ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದರು. ಇಂತಹ ಅನೇಕ ಗ್ರಾಮಗಳು ಮೂಲಭೂತ ಸೌಕರ್ಯ ಪಡೆಯಲು ಹರಸಾಹಸ ಪಡಬೇಕಾಗಿತ್ತು. ಇಂತಹ ಕೆಲವು ಗ್ರಾಮಗಳನ್ನು ಗುರುತಿಸಿ ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದೆ.
ಇದನ್ನೂ ಓದಿ: Chikkaballapur News: ಏ.7ರಂದು ಶುದ್ಧ ಕುಡಿಯುವ ನೀರಿಗಾಗಿ ಬೃಹತ್ ಪಾದಯಾತ್ರೆ: ಹರಿಕೃಷ್ಣ ಪೌಂಡೇಷನ್ ಅಧ್ಯಕ್ಷ ಹರೀಶ್‌ರೆಡ್ಡಿ
ಅಲ್ಲದೆ ಅಲ್ಲಿನ ದಾಖಲೆ ರಹಿತ ನಿವಾಸಿಗಳಿಗೆ ಮಾಲೀಕತ್ವದ ಹಕ್ಕು ದಾಖಲೆಗಳನ್ನು ನೀಡುವ ಮೂಲಕ ಸೌಲಭ್ಯ ವಂಚಿತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಭಾಗವಾಗಿ ಕಳೆದ ಫೆಬ್ರವರಿ 27 ರಂದು 2000 ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ಕಂದಾಯ ಸಚಿವರ ಅಮೃತ ಹಸ್ತದಿಂದ ವಿತರಣೆ ಮಾಡಲಾಗಿದೆ.
ಈ ಹಿಂದೆ ಇಷ್ಟು ಪ್ರಮಾಣದಲ್ಲಿ ದಾಖಲೆ ರಹಿತ ವಸತಿ ಮನೆಗಳಿಗೆ ಹಕ್ಕು ಪತ್ರಗಳನ್ನು ಕೊಟ್ಟ ಇತಿಹಾಸ ಜಿಲ್ಲೆಗಿಲ್ಲ. ಅಂತಹ ಐತಿಹಾಸಿಕ ಸಾಧನೆಗೆ 2026ನೇ ವರ್ಷದ ಆರಂಭ ದಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆ ಸಾಕ್ಷೀಭೂತವಾಗಿದೆ.
ಕಂದಾಯ ಗ್ರಾಮ ಅಭಿಯಾನದಡಿ “ಮಾಡಿರುವ ಕೆಲಸ ಅಟ್ಟದಷ್ಟು ಮಾಡಬೇಕಿರುವ ಕೆಲಸ ಹಿಮಾಲಯ ಪರ್ವತದಷ್ಟು” ಎಂಬುದನ್ನು ಜಿಲ್ಲಾಡಳಿತ ಮರೆತಿಲ್ಲ. ಜಿಲ್ಲೆಯಲ್ಲಿ ದಾಖಲೆ ರಹಿತ ವಸತಿಗಳಲ್ಲಿ ವಾಸಿಸುತ್ತಿರುವವರ ಸಂಖ್ಯೆ ಇನ್ನೂ ಅಗಾದ ಪ್ರಮಾಣದಲ್ಲಿದೆ ಎಂಬುದನ್ನು ಅರಿತು ಸಮೀಕ್ಷೆ ಕಾರ್ಯ ಕೈಗೊಂಡು ಹಕ್ಕು ಪತ್ರಗಳನ್ನು ನೀಡಬಹುದಾದ 86,652 ದಾಖಲೆ ರಹಿತ ಮನೆಗಳನ್ನು ಗುರುತಿಸಿ ಆ ಮನೆಗಳ ಮಾಲೀಕರಿಗೆ ಹಂತ ಹಂತ ವಾಗಿ ಮಾಲೀಕತ್ವದ ದಾಖಲೆ ಪತ್ರಗಳನ್ನು ನೀಡಲು ಜಿಲ್ಲಾಡಳಿತ ಅಹರ್ನಿಶಿ ಶ್ರಮಿಸುತ್ತಿದೆ.
ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು, ತಹಸೀಲ್ದಾರರು, ಭೂ ಮಾಪಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು “ವಿಶೇಷ ಕಂದಾಯ ಗ್ರಾಮ ಅಭಿಯಾನ 2.0 ಕಾರ್ಯಕ್ರಮದ ಯಶಸ್ವಿ ಅನುಷ್ಠಾನದ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಜಿಲ್ಲಾಧಿಕಾರಿ ಜಿ.ಪ್ರಭು ಅವರು ಈ ಅಭಿಯಾನ ಅನುಷ್ಠಾನದ ಪ್ರಮುಖ ರೂವಾರಿ ಆಗಿದ್ದಾರೆ. ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಡುವೆ ಸಮನ್ವಯತೆ ಸಾಧಿಸಿಕೊಂಡು ಕಂದಾಯ ಗ್ರಾಮ ಅಭಿಯಾನದಡಿ ಜಿಲ್ಲೆಯಲ್ಲಿ 86,652 ಕುಟುಂಬಗಳಿಗೆ ಮಾಲಿಕತ್ವದ ಕಂದಾಯ ದಾಖಲೆಗಳನ್ನು ವಿತರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕಟಿಬದ್ದರಾಗಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ.
ಸ್ವಾತಂತ್ರ‍್ಯ ಬಂದು 79 ವರ್ಷಗಳು ಕಳೆದರೂ ಕೂಡ ಜಿಲ್ಲೆಯ 80 ಸಾವಿರಕ್ಕೂ ಹೆಚ್ಚು ಕುಟುಂಬಗಳು ದಾಖಲೆ ರಹಿತ ಮನೆಗಳಲ್ಲಿ ವಾಸಿಸುತ್ತಿರುವುದು ಬೇಸರದ ಸಂಗತಿ ಯಾದರೂ ಕೂಡ, ಪ್ರಸ್ತುತ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ "ವಿಶೇಷ ಕಂದಾಯ ಗ್ರಾಮ ಅಭಿಯಾನ 2.0 ಕಾರ್ಯಕ್ರಮ"ದಡಿ ಜಿಲ್ಲಾಡಳಿತ ಕಳೆದ ಫೆಬ್ರವರಿ 27ರಿಂದ ನಿರ್ವಹಿಸಿರುವ ಕಾರ್ಯ ಜಿಲ್ಲೆಯ ದಾಖಲೆ ರಹಿತ ವಸತಿ ಕುಟುಂಬಗಳಲ್ಲಿ ಆಶಾಕಿರಣವಾಗಿ ಭರವಸೆ ಮೂಡಿಸಿರುವುದಂತು ಸುಳ್ಳಲ್ಲ.
*
ಜಿಲ್ಲೆಯಲ್ಲಿ ಹಕ್ಕುಪತ್ರಗಳನ್ನು ನೀಡಲು ಅರ್ಹರಿರುವ ಫಲಾನುಭವಿಗಳ ಪಟ್ಟಿ
ಚಿಕ್ಕಬಳ್ಳಾ ಪುರ-3117, ಗೌರಿಬಿದನೂರು-21106, ಗುಡಿಬಂಡೆ-6203, ಬಾಗೇಪಲ್ಲಿ-17117, ಶಿಡ್ಲಘಟ್ಟ-11034, ಚಿಂತಾಮಣಿ-15202. ಮಂಚೇನಹಳ್ಳಿ-2949, ಚೇಳೂರು-9924, ಒಟ್ಟು 8 ತಾಲೂಕುಗಳಿಂದ 86652 ಹಕ್ಕುಪತ್ರಗಳನ್ನು 8 ತಿಂಗಳ ಅವಧಿಯಲ್ಲಿ ವಿತರಿಸಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ.
![]()
ಫೆಬ್ರವರಿ 27ರಿಂದ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ "ವಿಶೇಷ ಕಂದಾಯ ಗ್ರಾಮ ಅಭಿಯಾನ 2.0 ಯೋಜನೆ"ಯಡಿ ಮುಂದಿನ ಎಂಟು ತಿಂಗಳ ಒಳಗಾಗಿ ಸುಮಾರು 80000 ಅನಧಿಕೃತ ಮನೆಗಳಿಗೆ ಅಧಿಕೃತ ಕಂದಾಯ ದಾಖಲೆಗಳನ್ನು ಸೃಜಿಸಿ ಅರ್ಹ ಫಲಾನುಭವಿಗಳಿಗೆ ವಿತರಿಸುವ ಬೃಹತ್ ಕಾರ್ಯ ಆಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್(District In-charge Minister Dr.M.C.Sudhakar) ಅವರ ಮಾರ್ಗ ದರ್ಶನ ಹಾಗೂ ಸಹಕಾರ ಪ್ರೇರಣಾದಾಯಕವಾಗಿದೆ. ಶಾಸಕರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಉತ್ತಮ ಸ್ಪಂದನೆ ನೀಡಿದ್ದಾರೆ. ನೂತನ ಕಂದಾಯ ಗ್ರಾಮಗಳ ಸೃಜನೆಯ ಭಾಗವಾಗಿ ಭೂ ಮಾಪಕರ ಹಾಗೂ ಅಧಿಕಾರಿಗಳ ತಂಡ ತಮ್ಮ ಗ್ರಾಮಗಳಿಗೆ ಮುಂದಿನ ವಾರದಿಂದ ಬಂದು ಸರ್ವೆ ಕಾರ್ಯ ಮಾಡಲಿದ್ದಾರೆ. ಜಿಲ್ಲೆಯ ಸಮಸ್ತ ನಾಗರಿಕರು ಈ ಕಾರ್ಯಕ್ಕೆ ಸಹಕಾರ ನೀಡಿ.
ಜಿ.ಪ್ರಭು. ಜಿಲ್ಲಾಧಿಕಾರಿ ಚಿಕ್ಕಬಳ್ಳಾಪುರ ಜಿಲ್ಲೆ
![]()
ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ "ವಿಶೇಷ ಕಂದಾಯ ಗ್ರಾಮ ಅಭಿಯಾನ 2.0 ಯೋಜನೆ" ಯಡಿ ದಲಿತರಿಗೂ ಭೂಮಿ ಭಾಗ್ಯ ಒದಗಿಸುವ ಕೆಲಸವನ್ನು ಜಿಲ್ಲಾಡಳಿತ ಮತ್ತು ಸಕಾರ ಮಾಡಬೇಕಿದೆ. ದಲಿತರು ಸರಕಾರಿ ಭೂಮಿಯಲ್ಲಿ ಎರಡು ಮೂರು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದರೂ ಈವರೆಗೆ ಹಕ್ಕುಪತ್ರ ವಿತರಣೆ ಮಾಡುವ ಕೆಲಸ ಸಮರ್ಪಕವಾಗಿ ಆಗಿಲ್ಲ. ಕಾಲಕಾಲಕ್ಕೆ ದರಖಾಸ್ತು ಸಮಿತಿ ಸಭೆ ನಡೆಸಿದ್ದರೆ, ಅರ್ಹರನ್ನು ಪ್ರಾಮಾಣಿಕವಾಗಿ ಗುರುತಿಸಿದ್ದರೆ ಈ ಕೆಲಸ ಸಾಧ್ಯವಾಗುತ್ತಿತ್ತು. ಆಗೊಮ್ಮೆ ಈಗೊಮ್ಮೆ ಸಮಿತಿಗಳು ರಚನೆ ಆಗಿದ್ದರೂ ಎಂಎಲ್‌ಎ ಗಳ ಬೆಂಬಲಿಗರನ್ನು ಗುರುತಿಸಿ ನೀಡಲಾ ಗಿರುತ್ತದೆ. ಯಾವುದೇ ರಾಜಕೀಯ ಬೆಂಬಲ ಇಲ್ಲದ ಬಾಯಿಯಿಲ್ಲದವರ ಮೂಕರೋಧನೆಗೆ ಬೆಲೆಯಿಲ್ಲವಾಗಿದೆ. ನೂತನ ಜಿಲ್ಲಾಧಿಕಾರಿಗಳು ಈ ಯೋಜನೆಯನ್ನು ಬಳಸಿಕೊಂಡಲ್ಲಿ ದಿಕ್ಕಿಲ್ಲದವರ ಬದುಕಲ್ಲಿ ದೀಪ ಬೆಳಗಿದಂತೆ ಆಗಲಿದೆ.ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಇತ್ತ ಗಮನ ಹರಿಸಿ ಪ್ರಥಮಾಧ್ಯತೆಯಾಗಿ ಎಸ್‌ಸಿ, ಎಸ್‌ಟಿ ಜನಾಂಗವನ್ನು ಪರಿಗಣಿಸಿ ದಾಖಲೆ ನೀಡಿದರೆ ಪಕ್ಷಕ್ಕೂ ಸರಕಾರಕ್ಕೂ ಹೆಸರು ಬರುವಂತೆ ಜಿಲ್ಲಾಡಳಿತಕ್ಕೂ ಒಳ್ಳೆಯ ಹೆಸರು ಬದಲಿದೆ.
-ಸುಧಾವೆಂಕಟೇಶ್-ದಸಂಸ ರಾಜ್ಯ ಸಂಘಟನಾ ಸಂಚಾಲಕರು.