ಕನಕದಾಸರ ಸಾಹಿತ್ಯದಲ್ಲಿ ಸಾಮಾಜಿಕ ನ್ಯಾಯ, ಮಾನವೀಯತೆ ಮತ್ತು ಆತ್ಮಗೌರವದ ಸಂದೇಶ ಅಡಕ
ಕನಕದಾಸರು ತಮ್ಮ ಕಾಲಘಟ್ಟದಲ್ಲಿ ಜಾತಿ ತಾರತಮ್ಯ ಮತ್ತು ಸಾಮಾಜಿಕ ಅಡೆತಡೆಗಳನ್ನು ಎದುರಿಸಿದರೂ, ತಮ್ಮ ಸಾಹಿತ್ಯದ ಮೂಲಕ ಸಮಾನತೆಯ ಸಮಾಜದ ಕನಸು ಕಂಡಿದ್ದರು. ಅವರ ಬದುಕು ಕೇವಲ ಭಕ್ತಿಯ ಪ್ರತೀಕವಲ್ಲ; ಅದು ಸಾಮಾಜಿಕ ಅನ್ಯಾಯದ ವಿರುದ್ಧದ ಚಿಂತನೆ ಹಾಗೂ ಮಾನವ ಘನತೆಯ ಪ್ರತಿಪಾದನೆಯಾಗಿತ್ತು ಎಂದರು.
ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ನಡೆದ ಕನಕದಾಸರ ಜಯಂತಿಯಲ್ಲಿ ಉಪನ್ಯಾಸಕ ಮುನಿರಾಜು ಶಾಸಕ ಸುಬ್ಬಾರೆಡ್ಡಿ ಮಾತನಾಡಿದರು. -
ಚಿಕ್ಕಬಳ್ಳಾಪುರ-ಗುಡಿಬಂಡೆ: ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಿದ್ದರೂ ಜಾತಿಯ ಹೆಸರಿನಲ್ಲಿ ತಾರತಮ್ಯ ನಡೆಯುತ್ತಿರುವುದು ವಿಷಾದನೀಯ. ಇಂತಹ ಸಾಮಾಜಿಕ ಅಸಮಾನತೆ ಹಾಗೂ ಭೇದಭಾವಗಳ ವಿರುದ್ಧ 15ನೇ ಶತಮಾನದಲ್ಲಿಯೇ ಕನಕದಾಸರು ಸಮರ ಸಾರಿದ್ದರು ಎಂದು ಉಪನ್ಯಾಸಕ ಮುನಿರಾಜು ಎಂ ಅರಿಕೆರೆ ತಿಳಿಸಿದರು.
ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಕುರುಬರ ಸಂಘದ ವತಿಯಿಂದ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಅವರು ಕನಕದಾಸರು ಸಾಮಾಜಿಕ, ಪಾರಮಾರ್ಥಿಕ ಚಿಂತನೆಯ ತಮ್ಮ ಕೀರ್ತನೆಗಳು ಮತ್ತು ಸಾಹಿತ್ಯದ ಮೂಲಕ ಮಾನವೀಯತೆ, ಸಮಾನತೆ ಹಾಗೂ ಆತ್ಮಗೌರವದ ಸಂದೇಶ ಸಾರಿದ್ದಾರೆ. ಅವರ ಸಾಹಿತ್ಯದ ಮಹತ್ವವನ್ನು ಸಮಾಜದ ಪ್ರತಿಯೊಬ್ಬರೂ ಅರಿತು, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕನಕದಾಸರು ತಮ್ಮ ಕಾಲಘಟ್ಟದಲ್ಲಿ ಜಾತಿ ತಾರತಮ್ಯ ಮತ್ತು ಸಾಮಾಜಿಕ ಅಡೆತಡೆಗಳನ್ನು ಎದುರಿಸಿದರೂ, ತಮ್ಮ ಸಾಹಿತ್ಯದ ಮೂಲಕ ಸಮಾನತೆಯ ಸಮಾಜದ ಕನಸು ಕಂಡಿದ್ದರು. ಅವರ ಬದುಕು ಕೇವಲ ಭಕ್ತಿಯ ಪ್ರತೀಕವಲ್ಲ; ಅದು ಸಾಮಾಜಿಕ ಅನ್ಯಾಯದ ವಿರುದ್ಧದ ಚಿಂತನೆ ಹಾಗೂ ಮಾನವ ಘನತೆಯ ಪ್ರತಿಪಾದನೆಯಾಗಿತ್ತು ಎಂದರು.
ಇದನ್ನೂ ಓದಿ: Chikkaballapur News: ಸಂವಿಧಾನದ ಮೌಲ್ಯಗಳು ಪ್ರಜಾಪ್ರಭುತ್ವದ ಬಲಿಷ್ಠ ಅಡಿಪಾಯ: ಸೀಕಲ್ ರಾಮಚಂದ್ರಗೌಡ
ಕನಕದಾಸರ ಕೀರ್ತನೆಗಳಲ್ಲಿ ಸಾಮಾನ್ಯ ಜನರ ಬದುಕಿನ ನೋವು, ಸಮಾಜದಲ್ಲಿನ ಮೇಲು-ಕೀಳು ಭಾವನೆಗಳು ಹಾಗೂ ಮನುಷ್ಯನ ಅಂತರಂಗದ ಶುದ್ಧತೆಯ ಮಹತ್ವವನ್ನು ಕಾಣಬಹುದು. ದೇವರನ್ನು ಕಾಣಲು ಜಾತಿ, ಅಂತಸ್ತು ಅಥವಾ ಆಡಂಬರ ಮುಖ್ಯವಲ್ಲ; ನಿಷ್ಕಲ್ಮಶ ಭಕ್ತಿ ಮತ್ತು ಪರಿಶುದ್ಧ ಮನಸ್ಸು ಮುಖ್ಯ ಎಂಬುದನ್ನು ಅವರು ಸಾರಿ ಸಾರಿ ಹೇಳಿದ್ದಾರೆ. ಸಮಾಜದಲ್ಲಿ ಮನುಷ್ಯನನ್ನು ಆತನ ಜನ್ಮದ ಆಧಾರದ ಮೇಲೆ ಅಳೆಯದೆ, ಗುಣ, ನಡತೆ ಮತ್ತು ಮಾನವೀಯತೆ ಯ ಆಧಾರದ ಮೇಲೆ ಗೌರವಿಸಬೇಕು ಎಂಬುದು ಅವರ ಸಾಹಿತ್ಯದ ಸಾರವಾಗಿದೆ ಎಂದು ವಿಶ್ಲೇಷಿಸಿದರು.
ಕನಕದಾಸರ 'ರಾಮಧಾನ್ಯ ಚರಿತೆ' ಕೃತಿಯು ಅಕ್ಕಿ ಮತ್ತು ರಾಗಿಯ ನಡುವಿನ ಸಂವಾದದ ರೂಪಕದ ಮೂಲಕ ಸಮಾಜದಲ್ಲಿನ ಮೇಲು-ಕೀಳು ಭಾವನೆಗಳನ್ನು ಪ್ರಶ್ನಿಸುತ್ತದೆ. 'ಹರಿಭಕ್ತಿಸಾರ' ಮತ್ತು 'ಮೋಹನ ತರಂಗಿಣಿ' ಕೃತಿಗಳಲ್ಲಿಯೂ ಭಕ್ತಿ, ಜೀವನ ಮೌಲ್ಯ ಹಾಗೂ ಸಾಮಾಜಿಕ ಚಿಂತನೆಗಳು ವ್ಯಕ್ತವಾಗಿವೆ. ಹೀಗಾಗಿ ಕನಕದಾಸರ ಸಾಹಿತ್ಯವನ್ನು ಕೇವಲ ಧಾರ್ಮಿಕ ದೃಷ್ಟಿಕೋನ ದಿಂದ ನೋಡದೆ, ಸಾಮಾಜಿಕ ಪರಿವರ್ತನೆಯ ಆಶಯಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಪ್ರತಿಯೊಂದು ಮನೆಯಲ್ಲೂ ಮಕ್ಕಳಿಗೆ ಕನಕದಾಸರ ಕೀರ್ತನೆಗಳು, ಸಾಹಿತ್ಯ ಮತ್ತು ಜೀವನದ ವಿಚಾರಗಳನ್ನು ಪರಿಚಯಿಸಬೇಕು. ಉತ್ತಮ ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಸಮಾನತೆ, ಸಹಬಾಳ್ವೆ, ಪರಸ್ಪರ ಗೌರವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಜಯಂತಿಗಳು ಕೇವಲ ಆಚರಣೆಗಳಿಗೆ ಸೀಮಿತವಾಗದೆ, ಮಹನೀಯರ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅನುಸರಿಸುವ ಸಂಕಲ್ಪದ ವೇದಿಕೆಗಳಾಗಬೇಕು. ಜಾತಿ ಭೇದದ ಗೋಡೆಗಳನ್ನು ಕೆಡವಿ ಎಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಿದಾಗ ಮಾತ್ರ ಕನಕದಾಸರ ಆಶಯಗಳಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಶಾಸಕ ಸುಬ್ಬಾರೆಡ್ಡಿ
ಕನಕದಾಸರು ತಮ್ಮ ಕೀರ್ತನೆಗಳು ಹಾಗೂ ಸಾಹಿತ್ಯದ ಮೂಲಕ ಸಮಾಜಕ್ಕೆ ಸಮಾನತೆ, ಮಾನವೀಯತೆ ಮತ್ತು ಭಕ್ತಿಯ ಸಂದೇಶ ಸಾರಿದ್ದಾರೆ. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕನಕದಾಸರ ಜಯಂತಿಯನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ, ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಆಚರಿಸಬೇಕು. ಇಲ್ಲವಾದಲ್ಲಿ ಮಹಾತ್ಮರ ಜಯಂತಿಗಳಿಗೆ ಅರ್ಥ ಇರುವುದಿಲ್ಲ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ(MLA S N Subbareddy) ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆ ಆವರಣದಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರ ವಿಚಾರಗಳು ಇಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಜಾತಿ ಭೇದ ಮರೆತು ಪರಸ್ಪರ ಗೌರವದಿಂದ ಬದುಕುವ ಮೂಲಕ ಅವರ ತತ್ವಗಳಿಗೆ ಗೌರವ ಸಲ್ಲಿಸಬೇಕು ಎಂದು ಕರೆ ನೀಡಿದ ಅವರು ಕನಕ ಭವನ ನಿರ್ಮಾಣಕ್ಕೆ 50 ಲಕ್ಷ ಅನುದಾನ ಮೀಸಲಾಗಿಡಲಾಗಿದೆ. ಭವನ ನಿರ್ಮಾಣ ಆದ ಮೇಲೆ ಶೈಕ್ಷಣಿಕ ಚಟವಟಿಕೆಗೆ ಬಳಸಿಕೊಳ್ಳಿ ಎಂದರು.
ಜಯಂತಿ ಅಂಗವಾಗಿ ಪಟ್ಟಣದ ರಾಜಬೀದಿಯಲ್ಲಿ ತಮಟೆ ವಾದ್ಯಗಳೊಂದಿಗೆ 10ಕ್ಕೂ ಹೆಚ್ಚು ಬಂಗಾರ ಮತ್ತು ಬೆಳ್ಳಿ ರಥದಲ್ಲಿ ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಬಳಿಕ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ತೋರಿದ ವಿದ್ಯಾರ್ಥಿಗಳನ್ನು, ಉಪನ್ಯಾಸಕ ಮುನಿರಾಜು ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಇ.ಒ ನಾಗಮಣಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣೇಗೌಡ(Kannada Rajyotsava awardee Krishna Gowda) ಅವರು ಕೂಡ ಕನಕದಾಸರ ಬದುಕು ಬರಹ ತತ್ವ ಸಂದೇಶಗಳನ್ನು ಕುರಿತು ಜನತೆಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವೈ. ರವಿ, ತಾಪಂ ಇಒ ನಾಗಮಣಿ, ಪಪಂ ಮುಖ್ಯಾಧಿಕಾರಿ ಆರತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಲಕ್ಷ್ಮೀಪತಿ ರೆಡ್ಡಿ, ನೌಕರರ ಸಂಘದ ಅಧ್ಯಕ್ಷ ಮುನಿಕೃಷ್ಣ, ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿಯ ತಾಲೂಕು ಅಧ್ಯಕ್ಷ ವಿ. ಶ್ರೀರಾಮಪ್ಪ, ಕುರುಬರ ಸಂಘದ ಅಧ್ಯಕ್ಷ ಅಶ್ವತ್ಥಗೌಡ, ಹೊಸದಿಂಗಂತ ವರದಿಗಾರ ನವೀನ್ಗೌಡ, ತಾಲೂಕು ಕಸಾಪ ಮಂಜುನಾಥ್, ಪತ್ರಕರ್ತರ ಸಂಘದ ಅಧ್ಯಕ್ಷ ಈಶ್ವರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.