ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala: ಉಜಿರೆಯಲ್ಲಿ ನರ್ಸಿಂಗ್, ಕೃಷಿ ಕಾಲೇಜ್‌ ಪ್ರಾರಂಭ: ಧರ್ಮಸ್ಥಳದಲ್ಲಿ ಡಾ. ವೀರೇಂದ್ರ ಹೆಗ್ಗಡೆ ಘೋಷಣೆ

ಶೀಘ್ರದಲ್ಲಿಯೇ ಉಜಿರೆಯಲ್ಲಿ ನರ್ಸಿಂಗ್ ಕಾಲೇಜ್ ಅನ್ನು ಪ್ರಾರಂಬಿಸುವುದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಘೋಷಿಸಿದರು. ಅವರು ಶನಿವಾರ ಉಜಿರೆಯಿಂದ ಧರ್ಮಸ್ಥಳಕ್ಕೆ ಬಂದ ಸಾವಿರಾರು ಪಾದಯಾತ್ರಿಗಳನ್ನು ಅಮೃತವರ್ಷಿಣಿ ಸಭಾ ಭವನದಲ್ಲಿ ಉದ್ದೇಶಿಸಿ ಅವರು ಮಾತನಾಡಿದರು.

ಉಜಿರೆಯಲ್ಲಿ ಪ್ರಾರಂಭ ಆಗಲಿದೆ ನರ್ಸಿಂಗ್ ಕಾಲೇಜ್

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ -

Profile
Sushmitha Jain Nov 15, 2025 11:10 PM

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ (Shree Kshetra Dharmasthala) ವತಿಯಿಂದ ಉಜಿರೆಯಲ್ಲಿ ಈ ವರ್ಷ ನರ್ಸಿಂಗ್ ಕಾಲೇಜ್‌ (Nursing College) ಪ್ರಾರಂಭಿಸಲಾಗುವುದು. ನೂರು ಎಕರೆ ಪ್ರದೇಶದಲ್ಲಿ ಕೃಷಿ ಕಾಲೇಜ್‌ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ (Dr.D Veerendra Heggade) ಘೋಷಿಸಿದರು. ಕೃಷಿ ಕಾಲೇಜಿಗಾಗಿ ನೂರು ಎಕರೆ ಪ್ರದೇಶ ದೊರಕಿದಲ್ಲಿ ತಕ್ಷಣ ಕಾಲೇಜು ಸ್ಥಾಪನೆಯ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

ಲಕ್ಷ ದೀಪೋತ್ಸವ ಪ್ರಾರಂಭದ ದಿನವಾದ ಶನಿವಾರ ಉಜಿರೆಯಿಂದ ಧರ್ಮಸ್ಥಳಕ್ಕೆ ಬಂದ ಸಾವಿರಾರು ಪಾದಯಾತ್ರಿಗಳನ್ನು ಅಮೃತವರ್ಷಿಣಿ ಸಭಾ ಭವನದಲ್ಲಿ ಉದ್ದೇಶಿಸಿ ಅವರು ಮಾತನಾಡಿದರು.

ತನ್ನ ಬಗ್ಗೆ ಹಾಗೂ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಭಕ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ತೋರುವ ಪ್ರೀತಿ-ವಿಶ್ವಾಸ, ಭಕ್ತಿ, ಶ್ರದ್ಧೆ, ವಿಶ್ವಾಸ ಮತ್ತು ಗೌರವ ಹಾಗೂ ನಾವೆಲ್ಲರೂ ಸದಾ ನಿಮ್ಮ ಜತೆ ಇದ್ದೇವೆ ಎಂದು ನೀಡುವ ಭರವಸೆ ಮತ್ತು ವಿಶ್ವಾಸ ತನಗೆ ಹೆಚ್ಚಿನ ಸೇವಾ ಕಾರ್ಯ ಮಾಡಲು ಉತ್ಸಾಹ, ಪ್ರೇರಣೆ ಮತ್ತು ನವ ಚೈತನ್ಯ ನೀಡುತ್ತದೆ ಎಂದು ಅವರು ಹೇಳಿದರು.

ಪ್ರಸ್ತುತ ಜನರಲ್ಲಿ ಅನೇಕ ಸಂದೇಹಗಳು, ಸಂಶಯಗಳು ಮೂಡಿಬಂದು ಅನಾವಶ್ಯಕ ಅಪಾದನೆಗಳು ಕೇಳಿ ಬರುತ್ತಿವೆ. ಆದರೆ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಹಾಗೂ ಎಲ್ಲ ಭಕ್ತರ ಪ್ರೀತಿ-ವಿಶ್ವಾಸದಿಂದ ಸರ್ವ ಆಪಾದನೆಗಳೂ ನಿವಾರಣೆಯಾಗಿ ತಾನು ಸಂತೋಷ ಮತ್ತು ತೃಪ್ತಿಯಿಂದ ಇದ್ದೇನೆ ಎಂದು ಅವರು ಹೇಳಿದರು. ಪಾದಯಾತ್ರಿಯು ಲಕ್ಷದೀಪೋತ್ಸವದ ಸಂಪ್ರದಾಯವಾಗಿ ಬೆಳೆದುಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಎಲ್ಲರಿಗೂ ಸನ್ಮಂಗಳವಾಗಿ ಲೋಕಕಲ್ಯಾಣವಾಗಲಿ ಎಂದು ಹೆಗ್ಗಡೆ ಹಾರೈಸಿದರು.

ಈ ಸುದ್ದಿಯನ್ನು ಓದಿ: Dharmasthala case: ಧರ್ಮಸ್ಥಳ ಪ್ರಕರಣ; ಎಸ್‌ಐಟಿ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆ ತೆರವು ಮಾಡಿದ ಹೈಕೋರ್ಟ್

ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಬದಲಾದ ಇಂದಿನ ಭಾರತದಲ್ಲಿ ನಮ್ಮತನವನ್ನು ಗುರುತಿಸಿ ಉಳಿಸಿಕೊಳ್ಳಲು ಸಾಮೂಹಿಕವಾಗಿ ಭಜನೆ, ಭೋಜನ, ಮಾತೃಭಾಷೆಯ ಬಳಕೆ, ಸಾತ್ವಿಕ ಉಡುಪುಗಳನ್ನು ಧರಿಸುವುದು. ತೀರ್ಥಯಾತ್ರೆ, ಪಾದಯಾತ್ರೆಯಂತಹ ಸತ್ಸಂಪ್ರದಾಯ ಬೆಳೆಸಿಕೊಂಡಾಗ ಸಭ್ಯ, ಸುಸಂಸ್ಕೃತ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಈ ದಿಸೆಯಲ್ಲಿ ಹೆಗ್ಗಡೆಯವರೇ ಸೂಕ್ತ ಸ್ಫೂರ್ತಿ ಹಾಗೂ ಪ್ರೇರಣೆ ನೀಡುವ ಆದರ್ಶ ಮಾರ್ಗದರ್ಶಕರು ಎಂದು ಅವರು ಅಭಿಪ್ರಾಯಪಟ್ಟರು.

ಶಾಸಕ ಹರೀಶ್ ಪೂಂಜ ಮಾತನಾಡಿ, ತಾನು ಪ್ರತಿವರ್ಷ ಉತ್ಸಾಹದಿಂದ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿರುವುದಾಗಿ ಸಂತೋಷ ವ್ಯಕ್ತಪಡಿಸಿದರು. ವರ್ಷದಿಂದ ವರ್ಷಕ್ಕೆ ಪಾದಯಾತ್ರಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು. ಧಾರ್ಮಿಕ ಸಂಸ್ಥೆಯು ಸಾಮಾಜಿಕ ಬದ್ಧತೆಯೊಂದಿಗೆ ಲೋಕ ಕಲ್ಯಾಣಕ್ಕಾಗಿ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದಕ್ಕೆ ಹೆಗ್ಗಡೆಯವರು ವಿಶ್ವಕ್ಕೆ ಮಾದರಿ ವ್ಯಕ್ತಿ ಎಂದು ಬಣ್ಣಿಸಿದರು.

ಡಿ. ಹರ್ಷೇಂದ್ರ ಕುಮಾರ್, ಹೆಗ್ಗಡೆ ಅವರ ಕುಟುಂಬ ವರ್ಗದವರು, ಸೋನಿಯಾ ಯಶೋವರ್ಮ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಇ.ಒ. ಅನಿಲ್ ಕುಮಾರ್ ಮತ್ತು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಶ್ರೀನಾಥ್ ಮತ್ತಿತರರು ಉಪಸ್ಥಿತರಿದ್ದರು.

ಉಜಿರೆಯ ರಬ್ಬರ್ ಸೊಸೈಟಿಯ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಸ್ವಾಗತಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಧನ್ಯವಾದವಿತ್ತರು. ಶ್ರೀನಿವಾಸ್ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.