105 ವರ್ಷದ ತಾಯಿಯನ್ನು ನೋಡಲು ಬೆಟ್ಟ, ಗುಡ್ಡ ದಾಟಿ ಬಂದ 85 ವರ್ಷದ ಮಗಳು; ಎರಡು ದಶಕಗಳ ಬಳಿಕ ಕರುಳ ಬಳ್ಳಿಯ ಮಿಲನ
ಕರುಳು ಬಳ್ಳಿಯ ಸಂಬಂಧವೇ ಹಾಗೆ ಎಷ್ಟೇ ದೂರವಿದ್ದರೂ ಮನಸ್ಸು ಅವರನ್ನು ನೋಡಲು ಹಾತೊರೆಯುತ್ತಿರುತ್ತದೆ. ಇದೀಗ ಅಂತಹುದೇ ಘಟನೆಯೊಂದು ವೈರಲ್ ಆಗಿದ್ದು, 105 ವರ್ಷದ ತಾಯಿಯನ್ನು ನೋಡಲು 85 ವರ್ಷದ ಮಗಳು ಬೆಟ್ಟ ಗುಡ್ಡವನ್ನು ದಾಟಿ, ದುರ್ಗಮ ಹಾದಿಯಲ್ಲಿ ಸಂಚರಿಸಿ ಬರೋಬ್ಬರಿ 20 ವರ್ಷಗಳ ಬಳಿಕ ತವರು ಮನೆ ಸೇರಿದ್ದಾರೆ.
ಸಂಗ್ರಹ ಚಿತ್ರ -
ಬೆಳ್ತಂಗಡಿ: ಕರುಳು ಬಳ್ಳಿಯ ಸಂಬಂಧವೇ ಹಾಗೆ ಎಷ್ಟೇ ದೂರವಿದ್ದರೂ ಮನಸ್ಸು ಅವರನ್ನು ನೋಡಲು ಹಾತೊರೆಯುತ್ತಿರುತ್ತದೆ. ಇದೀಗ ಅಂತಹುದೇ ಘಟನೆಯೊಂದು ವೈರಲ್ ಆಗಿದ್ದು, 105 ವರ್ಷದ ತಾಯಿಯನ್ನು ನೋಡಲು 85 ವರ್ಷದ ಮಗಳು ಬೆಟ್ಟ ಗುಡ್ಡವನ್ನು ದಾಟಿ, ದುರ್ಗಮ ಹಾದಿಯಲ್ಲಿ ಸಂಚರಿಸಿ ಬರೋಬ್ಬರಿ 20 ವರ್ಷಗಳ ಬಳಿಕ ತವರು ಮನೆ ಸೇರಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಮಕ್ಕಿಯಲ್ಲಿ ಈ ಘಟನೆ ನಡೆದಿದೆ.
ಮಕ್ಕಿಯಲ್ಲಿ ಮಕ್ಕಳೊಂದಿಗೆ ವಾಸವಾಗಿರುವ 105 ವರ್ಷದ ಸೀತಮ್ಮ ಅವರಿಗೆ 11 ಮಂದಿ ಮಕ್ಕಳು. ಅವರಲ್ಲಿ ಹಿರಿಯ ಪುತ್ರಿ ಸುಶೀಲಾ ಅವರಿಗೆ 85 ವರ್ಷ. ಸೀತಮ್ಮ ಅವರ ಮನೆಗೆ ತೆರಳಲು ರಸ್ತೆಯೇ ಇಲ್ಲ. ಜೀಪಿನಲ್ಲಿ ದುರ್ಗಮ ಕಾಡಿನ ಕಲ್ಲು- ಮಣ್ಣಿನ ರಸ್ತೆಯಲ್ಲಿ ಸಾಗಿದ ಬಳಿಕ ಸುಮಾರು ಒಂದೂವರೆ ಕಿ.ಮೀ. ಬೆಟ್ಟ ಇಳಿದು, ಬಂಡೆ ಹತ್ತಿ, ಹೊಳೆ ದಾಟಿ ಕಾಲ್ನಡಿಗೆಯಲ್ಲಿ ಸಾಗಬೇಕು. ಸುಶೀಲಾ ಅವರನ್ನು ಮಿತ್ತಬಾಗಿಲು ಗ್ರಾಮದ ಫಗರೆ ಎಂಬಲ್ಲಿ ಮದುವೆ ಮಾಡಿ ಕೊಡಲಾಗಿತ್ತು.
ಸುಶೀಲಾ ಅವರಿಗೆ ವಯಸ್ಸಾಗುತ್ತಿದ್ದಂತೆ ಎರಡು ದಶಕಗಳಿಂದ ತವರು ಮನೆಗೆ ಹೋಗುವುದನ್ನು ನಿಲ್ಲಿಸಿದ್ದರು. ಹೀಗಾಗಿ ವರ್ಷಗಳು ಕಳೆದರೂ ತಾಯಿ–ಮಗಳ ಭೇಟಿ ಸಾಧ್ಯವಾಗಿರಲಿಲ್ಲ. ಮೊಮ್ಮಕ್ಕಳು ಅಜ್ಜಿಯ ಬಹುದಿನಗಳ ಆಸೆಯನ್ನು ಈಡೇರಿಸಲು ನಿರ್ಧರಿಸಿದರು. ವಯಸ್ಸು ಹಾಗೂ ಆರೋಗ್ಯದ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ನೆರವಿನೊಂದಿಗೆ ಸುಶೀಲಾ ಅವರನ್ನು ತಾಯಿಯ ಮನೆಗೆ ಕರೆದೊಯ್ಯಲು ಮುಂದಾದರು. ಅಂದುಕೊಂಡಂತೆ ಬೆಳಗ್ಗೆಯೇ ಸುಶೀಲಾ ಅವರನ್ನು ಮನೆಯಿಂದ ಕರೆದುಕೊಂಡು ಜೀಪಿನಲ್ಲಿ ಕಾಡಿನ ಕಚ್ಚಾ ರಸ್ತೆಯ ಮೂಲಕ ಮಕ್ಕಿಯತ್ತ ಅಜ್ಜಿಯನ್ನು ಕರೆದುಕೊಂಡು ಹೋಗಿದ್ದರು.
ದುರ್ಗಮ ಹಾದಿಯಲ್ಲಿ ಜಿಗಣೆ ಕಚ್ಚಿಸಿಕೊಂಡು ತವರು ಮನೆ ತಲುಪಿದ್ದಾರೆ. ತಾಯಿಯನ್ನು ಕಣ್ಣಾರೆ ಕಂಡ 85 ವರ್ಷದ ಸುಶೀಲಾ ಅವರ ಕಣ್ಣಂಚಿನಲ್ಲಿ ಆನಂದಭಾಷ್ಪವಿತ್ತು. ಸೀತಮ್ಮ ಅವರಿಗೆ ವಯಸ್ಸಿನ ಪರಿಣಾಮದಿಂದ ಹಿಂದಿನ ನೆನಪುಗಳು ಮಸುಕಾಗಿವೆ. ಆದರೂ ತಾಯಿ – ಮಗಳ ಸಮ್ಮಿಲನದ ಆ ಕ್ಷಣ ಕುಟುಂಬದ ಪಾಲಿಗೆ ಅತ್ಯಂತ ವಿಶೇಷವಾಗಿತ್ತು. ಅಜ್ಜಿಯ ಬಹುದಿನಗಳ ಆಸೆಯನ್ನು ಈಡೇರಿಸಿದ ಮೊಮ್ಮಕ್ಕಳು ಈ ಅಪರೂಪದ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದರು. ಹೊರಡುವಾಗ ಸುಶೀಲಾ ತಾಯಿ ಬಳಿ ಇದೇ ನಮ್ಮ ಕೊನೆಯ ಭೇಟಿ ಎಂದು ಹೇಳಿ ಭಾವುಕರಾದರು.