ಕೋಮು ದ್ವೇಷದ ಹೇಳಿಕೆ; ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ
ಪುತ್ತೂರಿನಲ್ಲಿ ವಿವೇಕಾನಂದ ಜಯಂತಿಯಲ್ಲಿ ಭಾಗವಹಿಸಿದ್ದ ಪ್ರಭಾಕರ್ ಭಟ್ ಅವರು ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯಗಳ ವಿರುದ್ಧ ದ್ವೇಷ ಹರಡುವಂತಹ ಭಾಷಣ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಪುತ್ತೂರು ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.
ಕಲ್ಲಡ್ಕ ಪ್ರಭಾಕರ್ ಭಟ್ (ಸಂಗ್ರಹ ಚಿತ್ರ) -
ಬೆಂಗಳೂರು: ಕೋಮು ದ್ವೇಷದ ಮಾತುಗಳನ್ನಾಡಿದ ಸಂಬಂಧ ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat) ವಿರುದ್ಧ ದಾಖಲಾದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾದ ವಿಡಿಯೋ ಆಧರಿಸಿ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ, ಪ್ರಕರಣ ರದ್ದು ಕೋರಿ ಪ್ರಭಾಕರ್ ಭಟ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಪ್ರಭಾಕರ್ ಭಟ್ ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು, ''ಪ್ರಭಾಕರ್‌ಭಟ್ ಭಾಷಣ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಸಂಬಂಧಿತ ಪ್ರಕರಣದಲ್ಲಿ ಬಿಎನ್‌ಎಸ್‌ಎಸ್ ಸೆಕ್ಷನ್ 35(3) ನೋಟಿಸ್ ನೀಡಿ, ಆರೋಪಿಯನ್ನು ಆಲಿಸದ ಹೊರತು ಬಂಧಿಸುವಂತಿಲ್ಲ ಎಂದು ತೆಲಂಗಾಣ ಹೈಕೋರ್ಟ್ ರೂಪಿಸಿರುವ ಮಾರ್ಗಸೂಚಿಗಳನ್ನು ಇತ್ತೀಚೆಗೆ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಹಾಲಿ ಪ್ರಕರಣದಲ್ಲಿ ಈ ಪ್ರಕ್ರಿಯೆ ಪಾಲಿಸಿಲ್ಲ. ಸತ್ಯೇಂದರ್ ಕುಮಾರ್ ಆಂಟಿಲ್ ಪ್ರಕರಣದ ತೀರ್ಪು ಆಧರಿಸಿ, ಪ್ರಭಾಕರ್ ಭಟ್ ವಿರುದ್ಧದ ಎಲ್ಲಾ ತನಿಖೆ ಮತ್ತು ಪ್ರಕ್ರಿಯೆಗೆ ತಡೆ ನೀಡಲಾಗಿದೆ'' ಎಂದು ಆದೇಶಿಸಿದೆ.
ಏನಿದು ಪ್ರಕರಣ?
ಪುತ್ತೂರಿನಲ್ಲಿ ವಿವೇಕಾನಂದ ಜಯಂತಿಯಲ್ಲಿ ಭಾಗವಹಿಸಿದ್ದ ಪ್ರಭಾಕರ್ ಭಟ್ ಅವರು ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯಗಳ ವಿರುದ್ಧ ದ್ವೇಷ ಹರಡುವಂತಹ ಭಾಷಣ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಮೊದಲಿಗೆ ಮೊಘಲರು, ಆನಂತರ ಕ್ರಿಶ್ಚಿಯನ್ನರು ದಾಳಿ ನಡೆಸಿದ್ದಾರೆ. ಪ್ರತ್ಯೇಕ ಪಾಕಿಸ್ತಾನ ನೀಡದಿದ್ದರೂ ಹಿಂದೂಗಳ ಮೇಲೆ ದಾಳಿ ಮಾಡುತ್ತೇವೆಂದು ಹೇಳಿದ್ದರು. ದೇವಸ್ಥಾನ ಒಡೆದು, ಗೋವು ಕತ್ತರಿಸಿ, ತಾಯಂದಿರ ಮೇಲೆ ಅತ್ಯಾಚಾರ ಮಾಡಿದ್ದಾರೆ. ಲಕ್ಷಾಂತರ ಹಿಂದೂಗಳ ಹತ್ಯೆ ಮಾಡಿದ್ದಾರೆ. ಅಂದಿನ ಚಿತ್ರ ಮತ್ತೆ ಇಂದೂ ಕಾಣುತ್ತಿದೆ ಎಂದು 2026ರ ಜ.12 ರಂದು ಭಾಷಣ ಮಾಡಿದ್ದರು. ಆ ಭಾಷಣವನ್ನು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಲಾಗಿತ್ತು.
QR code for water bill payment: ಪುರಸಭೆಯ ನೀರಿನ ಕರ ಪಾವತಿಗೆ ಕ್ಯೂಆರ್ ಕೋಡ್
ಭಾಷಣ ಆಧರಿಸಿ ಕಲ್ಲಡ್ಕ ಪ್ರಭಾಕರ್ ಭಟ್, ವಿಕಸನ ಯೂಟ್ಯೂಬ್ ಮತ್ತು ಕಾರ್ಯಕ್ರಮದ ಸಂಘಟಕರ ವಿರುದ್ಧ ಬಿಎನ್‌ಎಸ್ ಸೆಕ್ಷನ್‌ಗಳಾದ 196, 299, 302, 353(2) ಜತೆಗೆ 3(5)ಅಡಿ ಪ್ರಕರಣ ದಾಖಲಿಸಲಾಗಿತ್ತು. ಅದನ್ನು ರದ್ದುಗೊಳಿಸಲು ಭಟ್ ಹೈಕೋರ್ಟ್ ಮೊರೆ ಹೋಗಿದ್ದರು.