BJP Protest: ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ನ್ಯಾಯ ಕೊಡಿಸುವವರೆಗೆ ಬಿಜೆಪಿ ವಿರಮಿಸುವುದಿಲ್ಲ: ಆರ್.ಅಶೋಕ್
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಸಂಬಂಧಿಸಿ ಪ್ರಿಯಾಂಕ್ ಖರ್ಗೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಲಬುರಗಿಯ ಜಗತ್ ಸರ್ಕಲ್ ಬಳಿ ಇಂದು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ (BJP Protest) ನಡೆಸಲಾಯಿತು.
Vishwavani News
January 4, 2025
ಕಲಬುರಗಿ: ರಾಜ್ಯದ ಕಾಂಗ್ರೆಸ್ ಸರ್ಕಾರವು (State Congress Government) ಗಾಳಿ ಒಂದನ್ನು ಬಿಟ್ಟು ಬೇರೆಲ್ಲದಕ್ಕೂ ತೆರಿಗೆ ಹಾಕಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದರು. ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಸಂಬಂಧಿಸಿ ಪ್ರಿಯಾಂಕ್ ಖರ್ಗೆ (Priyank Kharge), ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ಕಲಬುರಗಿಯ ಜಗತ್ ಸರ್ಕಲ್ ಬಳಿ ಇಂದು ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ (BJP Protest) ಮಾತನಾಡಿದ ಅವರು, ಹಾಲು, ಪೆಟ್ರೋಲ್, ಆಲ್ಕೋಹಾಲ್, ಕರೆಂಟ್, ಬಸ್ ಚಾರ್ಜ್ ಸೇರಿ ಎಲ್ಲ ದರಗಳನ್ನು ಹೆಚ್ಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿನ್ ಆತ್ಮಹತ್ಯೆಗೆ ಕಾರಣನಾದ ರಾಜು ಕಪನೂರ್ ಒಬ್ಬ ಗೂಂಡಾ. ಅವನನ್ನು ಕಾಂಗ್ರೆಸ್ಸಿಗರು ಗೂಂಡಾ ಕಾಯಿದೆಯಿಂದ ತೆಗೆಸಿದ್ದಾರೆ. ಈಗ ನಮ್ಮವನಲ್ಲ. ನಮ್ಮವನಲ್ಲ ಎನ್ನುತ್ತಿದ್ದಾರೆ. ಎಂದು ಆರೋಪಿಸಿದ ಅವರು, ಆರೋಪಿಗಳಲ್ಲಿ ಮೊದಲ 3 ಜನ ಕಾಂಗ್ರೆಸ್ಸಿಗರು. ಈ ಭ್ರಷ್ಟ, ಆತ್ಮಹತ್ಯೆಗಳಿಗೆ ಕಾರಣವಾಗುವ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ನ್ಯಾಯ ಕೊಡಿಸುವವರೆಗೆ ಬಿಜೆಪಿ ವಿರಮಿಸುವುದಿಲ್ಲ ಎಂದು ಅವರು ತಿಳಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಪ್ರಿಯಾಂಕ್ ಖರ್ಗೆಯವರು ಸಚಿವರಾಗಲು ಮೆರಿಟ್ ಕೋಟಾ ಇತ್ತೇ ಅಥವಾ ಪೇಮೆಂಟ್ ಕೋಟಾ ಇತ್ತೇ ಎಂದು ಪ್ರಶ್ನಿಸಿದರು. ಇದು ಬಾಬಾಸಾಹೇಬ ಅಂಬೇಡ್ಕರರು ನಮಗೆ ಕೊಟ್ಟ ಸಾಂವಿಧಾನಿಕ ಹಕ್ಕಿನ ದುರುಪಯೋಗ ಎಂದು ದೂರಿದ ಅವರು, ಬೇರೆ ದಲಿತರನ್ನು ತುಳಿದು ಸಮಾಧಿ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ನಿಮ್ಮ ಆಸ್ತಿ ತೆಗೆದುಕೊಂಡು ಹೋಗಲು ನಾವು ಬಂದಿಲ್ಲ. ನಿಮ್ಮ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ. ಕಲ್ಯಾಣ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯವರು ಯಾಕೆ ಮೇಲಕ್ಕೆ ಬಂದಿಲ್ಲ ಎಂಬುದಕ್ಕೆ ಪ್ರಿಯಾಂಕ್ ಉತ್ತರಿಸಬೇಕು ಎಂದು ಅವರು ಸವಾಲು ಹಾಕಿದರು.
ಈ ಸುದ್ದಿಯನ್ನೂ ಓದಿ | Mysore News: ಹೊಸ ವರ್ಷಾಚರಣೆಗೆ ತಂದಿದ್ದ ಕೇಕ್ ತಿಂದು 30ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥ
ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಮಾತನಾಡಿ, ರಜಾಕರನ್ನು ಸದೆಬಡಿದಿದ್ದೇವೆ. ನಿಜಾಮನನ್ನು ಪಾಕಿಸ್ತಾನಕ್ಕೆ ಓಡಿಸಿದ್ದೇವೆ. ನಿಮ್ಮನ್ನೂ ಜನರು ಮನೆಗೆ ಕಳಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂದು ಎಚ್ಚರಿಸಿದರು.
ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ರಾಜ್ಯದಲ್ಲಿ ಸುಪಾರಿ ರಾಜಕಾರಣ ನಡೆಯಲು ಸಾಧ್ಯವಿಲ್ಲ. ಇಲ್ಲಿ ಸಂವಿಧಾನಬದ್ಧ ರಾಜಕಾರಣ ಮಾತ್ರ ನಡೆಯಬೇಕು. ಸುಪಾರಿ ರಾಜಕಾರಣ ಮಾಡುವವರಿಗೆ ಕಲಬುರಗಿಯ ಜನತೆ ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿ, ಆತ್ಮೀಯರಾದ ಪ್ರಿಯಾಂಕ್ ಖರ್ಗೆಯವರು ನಮಗೆಲ್ಲ ಎಳನೀರು, ಬಿಸ್ಕೆಟ್ ಮೊದಲಾದವುಗಳನ್ನು ವ್ಯವಸ್ಥೆ ಮಾಡಿದ್ದಾರಂತೆ. ಪ್ರಿಯಾಂಕ್ ಖರ್ಗೆಯವರು ಜಗತ್ತಿನಲ್ಲಿ ನಾನೇ ಬುದ್ಧಿವಂತ. ನನ್ನನ್ನು ಬಿಟ್ಟರೆ ಬೇರೆ ಯಾರೂ ಬುದ್ಧಿವಂತರಲ್ಲ ಎಂದುಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆಯವರೇ ನಿಮಗೆ ಮಾನವೀಯತೆ, ಮನುಷ್ಯತ್ವ ಇದ್ದರೆ, ಧಮ್ಮಿದ್ದರೆ, ತಾಕತ್ತಿದ್ದರೆ ಸಚಿನ್ ಮನೆಗೆ ಹೋಗಿ ಬನ್ನಿ ಎಂದು ಒತ್ತಾಯಿಸಿದರು.
ಈ ಸುದ್ದಿಯನ್ನೂ ಓದಿ | HSRP Deadline: ವಾಹನ ಮಾಲಿಕರಿಗೆ ರಿಲೀಫ್, ಎಚ್‌ಎಸ್‌ಆರ್‌ಪಿ ಅಳವಡಿಕೆ ಡೆಡ್‌ಲೈನ್ ವಿಸ್ತರಣೆ
ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಮಾಜಿ ಸಂಸದ ಡಾ. ಉಮೇಶ್ ಜಾಧವ್, ಶಾಸಕ ಬಸವರಾಜ್ ಮತ್ತಿಮೂಡ್, ಡಾ. ಶೈಲೆಂದ್ರ ಬೆಲ್ದಾಳೆ, ಶರಣು ಸಲಗರ, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್, ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ್ ಪಾಟೀಲ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಕಲಬುರ್ಗಿ ನಗರ ಜಿಲ್ಲಾಧ್ಯಕ್ಷ ಚಂದ್ರಕಾಂತ ಪಾಟೀಲ್, ಕಲಬುರಗಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಿ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.