ಮೃತ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಪುತ್ರಿಗೆ ಸರ್ಕಾರಿ ಉದ್ಯೋಗ; ನೇಮಕ ಪತ್ರ ಹಸ್ತಾಂತರಿಸಿದ ಸಿಎಂ ಸಿದ್ದರಾಮಯ್ಯ
Mahantesh Bilagi: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕರ್ನಾಟಕ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಪುತ್ರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಲು ಒಪ್ಪಿಗೆ ನೀಡಿದ್ದ ರಾಜ್ಯ ಸರ್ಕಾರ ಆದೇಶ ಪತ್ರ ಹಸ್ತಾಂತರಿಸಿದೆ.
ಆದೇಶ ಪತ್ರ ಹಸ್ತಾಂತರಿಸಿದ ಸಿದ್ದರಾಮಯ್ಯ -
ಬೆಂಗಳೂರು, ಜ. 28: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ (Road Accident) ಮೃತಪಟ್ಟ ಕರ್ನಾಟಕ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (Mahantesh Bilagi) ಅವರ ಪುತ್ರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಲು ಒಪ್ಪಿಗೆ ನೀಡಿದ್ದ ರಾಜ್ಯ ಸರ್ಕಾರ ಇದೀಗ ನೇಮಕಾತಿ ಪತ್ರ ಹಸ್ತಾಂತರಿಸಿದೆ. ಜನವರಿ 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಾಂತೇಶ್ ಬೀಳಗಿ ಅವರ ಪುತ್ರಿ ಚೈತನ್ಯ ಅವರಿಗೆ ಅನುಕಂಪದ ಆಧಾರದ ಮೇಲೆ ಗ್ರೂಪ್ ಸಿ ಹುದ್ದೆ ನೀಡಲು ತೀರ್ಮಾನಿಸಲಾಗಿತ್ತು. ಬುಧವಾರ (ಜನವರಿ 28) ಸಿದ್ದರಾಮಯ್ಯ ನೇಮಕಾತಿ ಪತ್ರ ನೀಡಿದರು.
ಚೈತನ್ಯ ಅವರಿಗೆ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಉದ್ಯೋಗ ನೀಡಲಾಗಿದೆ. 2025ರ ನವೆಂಬರ್ 25ರಂದು ಜೇವರ್ಗಿ ಸಮೀಪ ಮಹಾಂತೇಶ್ ಬೀಳಗಿ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಈ ಅಪಘಾತದಲ್ಲಿ ಜನಸ್ನೇಹಿ ಅಧಿಕಾರಿ ಮಹಾಂತೇಶ್ ಮೃತಪಟ್ಟಿದ್ದರು.
ಚೈತನ್ಯ ಅವರಿಗೆ ಆದೇಶ ಪತ್ರ ಹಸ್ತಾಂತರಿಸಿದ ಸಿಎಂ ಸಿದ್ದರಾಮಯ್ಯ:
ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಸೇವೆಯಲ್ಲಿರುವಾಗಲೇ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರ ಪುತ್ರಿ ಚೈತನ್ಯಾ ಎಮ್.ಬೀಳಗಿ ಅವರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರವನ್ನು ಇಂದು ಹಸ್ತಾಂತರಿಸಿ, ತಂದೆಯಂತೆಯೇ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುವಂತೆ ಶುಭ ಕೋರಿದೆ.
— Siddaramaiah (@siddaramaiah) January 28, 2026
ಸಚಿವರಾದ ಹೆಚ್.ಕೆ.ಪಾಟೀಲ್,… pic.twitter.com/NHXwy3tULQ
ಆದೇಶ ಪತ್ರದಲ್ಲಿ ಏನಿದೆ?
ಇದೀಗ ಹೊರಡಿಸಲಾದ ಆದೇಶ ಪತ್ರದಲ್ಲಿ ಚೈತನ್ಯ ಅವರಿಗೆ ನೀಡಲಾದ ಉದ್ಯೋಗದ ಬಗ್ಗೆ ವಿವರಿಸಲಾಗಿದೆ. ʼʼಭಾರತೀಯ ಆಡಳಿತ ಸೇವೆಗೆ ಸೇರಿದ ಅಧಿಕಾರಿಯಾದ ಮಹಾಂತೇಶ್ ಬೀಳಗಿ ಸೇವೆಯಲ್ಲಿರುವಾಗಲೇ 2025ರ ನವೆಂಬರ್ 25ರಂದು ನಿಧನ ಹೊಂದಿರುವುದರಿಂದ ಇವರ ಪುತ್ರಿ ಚೈತನ್ಯ ಎಂ. ಬೀಳಗಿ ಅವರನ್ನು ಕರ್ನಾಟಕ ನಾಗರೀಕ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996ರ ನಿಯಮ 6(1)ರನ್ವಯ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಸಹಾಯಕ ಹುದ್ದೆಗೆ ಎರಡು ವರ್ಷಗಳ ಪರೀಕ್ಷಾರ್ಥಾವಧಿಯ ಮೇರೆಗೆ ಹಾಗೂ ಷರತ್ತುಗಳಿಗೆ ಒಳಪಟ್ಟು ಅನುಕಂಪದ ಆಧಾರದ ಮೇಲೆ ನೇಮಕ ಮಾಡಲಾಗಿದೆ. 15 ದಿನಗಳ ಒಳಗೆ ಕೆಲಸಕ್ಕೆ ಹಾಜರಾಗಬೇಕುʼʼ ಎಂದು ಸೂಚಿಸಲಾಗಿದೆ.
ಪ್ರಾಮಾಣಿಕ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಬದುಕಿನ ಹೃದಯಸ್ಪರ್ಶಿ ಕತೆ
ಮಹಾಂತೇಶ್ ಹಿನ್ನೆಲೆ
ಮಹಾಂತೇಶ್ ಬೀಳಗಿ ಬಡತನದ ಹಿನ್ನೆಲೆಯಿಂದ ಬಂದವರು. ಅವರ ಬಾಲ್ಯದಲ್ಲಿ ಎರಡು ಹೊತ್ತು ಊಟಕ್ಕೂ ಕಷ್ಟಪಡುತ್ತಿದ್ದರು. ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡಿ, ತಮ್ಮ ಶಿಕ್ಷಣಕ್ಕೆ ಹಣವನ್ನು ಹೊಂದಿಸಿಕೊಳ್ಳುತ್ತಿದ್ದರು. ಅವರ ತಾಯಿ ಊರೂರಿನಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದರು. ಪುಸ್ತಕಗಳನ್ನು ಖರೀದಿಸಲು ಹಣವಿಲ್ಲದಿದ್ದಾಗ, ತಮ್ಮ ಆತ್ಮೀಯ ಸ್ನೇಹಿತರು ಮತ್ತು ಸಹಪಾಠಿಗಳಿಂದ ಪುಸ್ತಕಗಳನ್ನು ಪಡೆದು, ಗ್ರಂಥಾಲಯಗಳನ್ನು ಬಳಸಿಕೊಂಡು ಅಭ್ಯಾಸ ಮಾಡುತ್ತಿದ್ದರು.
ಬಡತನದ ನಡುವೆಯೂ ಮಹಾಂತೇಶ್ ಅವರಿಗೆ ಅಧ್ಯಯನದ ಬಗ್ಗೆ ಅಪಾರ ಆಸಕ್ತಿ ಇತ್ತು. ಬಸವೇಶ್ವರ ಕಾಲೇಜಿನಲ್ಲಿ ಪಿಯುಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಅವರು, ಸಿಎಸ್ ಬೆಂಬಳಗಿ ಕಾಲೇಜಿನಲ್ಲಿ ಸಮಾಜಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದರು. ನಂತರ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಅವರು ಐಎಎಸ್ ಅಧಿಕಾರಿಯಾಗಿ ಬಡ್ತಿ ಪಡೆದಿದ್ದರು. ವಿದ್ಯಾರ್ಥಿಗಳು ಸಿಕ್ಕರೆ ಉತ್ಸಾಹ ತುಂಬಿಸುವ ಮಾತುಗಳನ್ನು ಆಡುತ್ತಿದ್ದರು. ಇದೇ ಕಾರಣಕ್ಕೆ ಅವರ ಜನಸ್ನೇಹಿ ಅಧಿಕಾರಿ ಎನಿಸಿಕೊಂಡಿದ್ದರು. ಅವರು ಮೃತಪಟ್ಟಾಗ ಇಡೀ ರಾಜ್ಯವೇ ಕಂಬನಿ ಮಿಡಿದಿತ್ತು.