Karnataka SSLC Result: ಎಸ್ಸೆಸ್ಸೆಲ್ಸಿ ಎರಡನೇ ಪರೀಕ್ಷೆ ಮೇ 18ರಿಂದ, ಈ ಸಲ ಮೂರನೇ ಪರೀಕ್ಷೆ ಇಲ್ಲ
ಈ ಬಾರಿ ಫೇಲಾದ ಮಕ್ಕಳಿಗೆ ಮೂರನೇ ಬಾರಿ ಪರೀಕ್ಷೆ ಇರುವುದಿಲ್ಲ. ಎರಡನೇ ಬಾರಿ ಪರೀಕ್ಷೆ ಬರೆಯಲು ಅವಕಾಶವಿದ್ದು, ಮೇ 18ರಿಂದ ಪರೀಕ್ಷೆ ಆರಂಭ ಆಗಲಿದೆ. ಯಾರೆಲ್ಲಾ ಫೇಲ್ ಆಗಿದ್ದಾರೋ ಅವರಿಗೆ ತರಬೇತಿ ಕೊಡುವ ಕೆಲಸ ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಫಲಿತಾಂಶ -
ಬೆಂಗಳೂರು, ಏ.23: ರಾಜ್ಯದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ- 1ರ ಫಲಿತಾಂಶ (Karnataka SSLC Result) ಪ್ರಕಟಗೊಂಡಿದ್ದು, ದಾಖಲೆಯ ಫಲಿತಾಂಶ ಪ್ರಕಟವಾಗಿದೆ. ಅನುತ್ತೀರ್ಣಗೊಂಡ ಮಕ್ಕಳಿಗೆ ಎರಡನೇ ಬಾರಿ ಪರೀಕ್ಷೆ ಬರೆಯಲು ಅವಕಾಶವಿದ್ದು, ಮೇ 18ರಿಂದ ಪರೀಕ್ಷೆ ಆರಂಭ ಆಗಲಿದೆ.
ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ಮಧು ಬಂಗಾರಪ್ಪ ಈ ವಿಚಾರ ತಿಳಿಸಿದರು. ಈ ಬಾರಿ ಫೇಲಾದ ಮಕ್ಕಳಿಗೆ ಮೂರನೇ ಬಾರಿ ಪರೀಕ್ಷೆ ಇರುವುದಿಲ್ಲ. ಎರಡನೇ ಬಾರಿ ಪರೀಕ್ಷೆ ಬರೆಯಲು ಅವಕಾಶವಿದ್ದು, ಮೇ 18ರಿಂದ ಪರೀಕ್ಷೆ ಆರಂಭ ಆಗಲಿದೆ. ಯಾರೆಲ್ಲಾ ಫೇಲ್ ಆಗಿದ್ದಾರೋ ಅವರಿಗೆ ತರಬೇತಿ ಕೊಡುವ ಕೆಲಸ ಆಗಲಿದೆ. ಯಾವ ವಿಷಯದಲ್ಲಿ ಫೇಲ್ ಆಗಿದ್ದಾರೆ ಅದರಲ್ಲಿ ಮಕ್ಕಳನ್ನು ಪಾಸ್ ಮಾಡಿಸುವ ಕೆಲಸವನ್ನು ಸಂಬಂಧಪಟ್ಟ ಶಿಕ್ಷಕರು, ಇಲಾಖೆಯವರು ಮಾಡಲಿದ್ದಾರೆ. ಯಾವ ಯಾವ ದಿನಾಂಕದಂದು ಯಾವ್ಯಾವ ಸಬ್ಜೆಕ್ಟ್ ಅನ್ನುವುದನ್ನು ಮುಂದಿನ ದಿನಗಳಲ್ಲಿ ಅನೌನ್ಸ್ ಮಾಡುವುದಾಗಿ ಮಧು ಬಂಗಾರಪ್ಪ ಹೇಳಿದ್ದಾರೆ.
ಈ ಸಲ ಪರೀಕ್ಷೆಯಲ್ಲಿ ಏಳು ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಗಳಿಸಿದ್ದಾರೆ. ದಾವಣಗೆರೆಯ ಭರತ್, ರಾಯಚೂರಿನ ಸುಖದೇವ್, ಚಿಕ್ಕೋಡಿಯ ಪ್ರಾರ್ಥನಾ, ಚಿಕ್ಕಮಗಳೂರಿನ ಬೃಂದಾ, ಉಡುಪಿ ಪ್ರೀತಂ, ವಿಜಯಪುರದ ಸೌಜನ್ಯ, ಬೆಂಗಳೂರು ಉತ್ತರ ಧನುಷ್ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಟಾಪ್ 5 ಜಿಲ್ಲೆಗಳು ಹೀಗಿವೆ:
ದಕ್ಷಿಣ ಕನ್ನಡ - ಶೇ 98.4 ಉಡುಪಿ - ಶೇ 98.18 ಉತ್ತರ ಕನ್ನಡ - ಶೇ 98.02 ಹಾಸನ - ಶೇ 97.51 ಮಂಡ್ಯ - ಶೇ 97.4
ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಲಭ್ಯ
ಈ ವರ್ಷ ಮಂಡಳಿಯು ಪ್ರಥಮ ಬಾರಿಗೆ ವಿಶೇಷ ಹೆಜ್ಜೆಯೊಂದನ್ನು ಇಟ್ಟಿದ್ದು, ವಿದ್ಯಾರ್ಥಿಗಳ ಅಧಿಕೃತ ಅಂಕಪಟ್ಟಿಯನ್ನು ಫಲಿತಾಂಶ ಪ್ರಕಟವಾದ ತಕ್ಷಣವೇ ‘ಡಿಜಿಲಾಕರ್’ನಲ್ಲಿ ಲಭ್ಯವಾಗುವಂತೆ ಮಾಡಿದೆ. ವಿದ್ಯಾರ್ಥಿಗಳು ಇದೀಗ https://www.digilocker.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು
ಹಿಂದಿ ಸೇರಿ ತೃತೀಯ ಭಾಷೆಗೆ ಅಂಕ
ಪ್ರಸಕ್ತ ವರ್ಷದಿಂದಲೇ ಹಿಂದಿ ಸೇರಿ ತೃತೀಯ ಭಾಷೆಗೆ ಅಂಕದ ಬದಲು ಗ್ರೇಡ್ ನೀಡಲು ಶಿಕ್ಷಣ ಇಲಾಖೆ ಮುಂದಾಗಿತ್ತು. ಈ ಬಗ್ಗೆ ಹೈಕೋರ್ಟ್‌ನಿಂದ ತಡೆ ನೀಡಿದ್ದು, ಗ್ರೇಡ್ ಬೇಡ ಅಂಕ ನೀಡಲು ಆದೇಶಿಸಲಾಗಿತ್ತು. ಹೀಗಾಗಿ, ಈ ವರ್ಷ ಅಂಕ ನೀಡಲಾಗುತ್ತಿದೆ. 625 ಅಂಕಗಳಿಗೆ ಫಲಿತಾಂಶ ಪ್ರಕಟವಾಗಿದೆ. ತೃತೀಯ ಭಾಷೆ ಪಾಸ್ ಆಗುವುದು ಕಡ್ಡಾಯವಾಗಿದೆ.
ಫಲಿತಾಂಶ ಚೆಕ್ ಮಾಡುವುದು ಹೇಗೆ?
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು 3 ವಿಧಾನಗಳ ಮೂಲಕ ಸುಲಭವಾಗಿ ಪಡೆಯಬಹುದಾಗಿದೆ. ಅಧಿಕೃತ ವೆಬ್‌ಸೈಟ್: https://karresults.nic.in/ ಲಿಂಕ್‌ಗೆ ಭೇಟಿ ನೀಡಿ ಫಲಿತಾಂಶ ವೀಕ್ಷಿಸಬಹುದು. ಮೊಬೈಲ್ ಆಪ್: ‘KarnatakaOne Mobile App’ ಮೂಲಕವೂ ರಿಸಲ್ಟ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ವಾಟ್ಸಾಪ್/ಎಸ್‌ಎಂಎಸ್: ವಿದ್ಯಾರ್ಥಿಗಳು ಮಂಡಳಿಯಲ್ಲಿ ನೋಂದಾಯಿಸಿರುವ ತಮ್ಮ ಮೊಬೈಲ್ ಸಂಖ್ಯೆಗೆ ನೇರವಾಗಿ ವಾಟ್ಸಾಪ್ ಮತ್ತು ಎಸ್‌ಎಂ ಎಸ್ ಮೂಲಕ ಫಲಿತಾಂಶದ ಮಾಹಿತಿಯನ್ನು ರವಾನಿಸಲಾಗುತ್ತದೆ.