Sandur News: ಜೀವನ ಮೌಲ್ಯಗಳನ್ನು ತಮ್ಮ ಬದುಕಿನ ಮೂಲಕವೇ ಸಾವಿರಾರು ವಿದ್ಯಾರ್ಥಿಗಳಿಗೆ ಧಾರೆ ಎರೆದಿದ್ದರು: ಕುಮಾರ್ ಎಸ್.ನಾನಾವಟೆ.
ರಾಷ್ಟ್ರೀಯ ಸೇವಾ ಯೋಜನೆ(NSS)ಯ ಮೂಲಕ ಯುವಜನತೆಗೆ ಪಠ್ಯೇತರ ಮಾರ್ಗದರ್ಶನ ನೀಡುವುದರ ಜೊತೆಗೆ, ಅಳಿವಿನಂಚಿನಲ್ಲಿರುವ ನಿತ್ಯ ಪೂಜಾಪಾಠ, ಶ್ಲೋಕ ಹಾಗೂ ಸಂಧ್ಯಾ ವಂದನೆ ಯನ್ನು ಮುಂದಿನ ಪೀಳಿಗೆಗೆ ಕಲಿಸಿಕೊಡುವ ಮಹತ್ಕಾರ್ಯ ಮಾಡುತ್ತಿದ್ದರಲ್ಲದೇ, ಬಡ ಕುಟುಂಬಗಳಿಗೆ ನೆರವಾಗಲು ಹಲವಾರು ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದರು
-
ಸಂಡೂರು: ಕೇವಲ ಪಠ್ಯ ಜ್ಞಾನವನ್ನಷ್ಟೇ ಅಲ್ಲದೆ, ಹೇಗೆ ಮತ್ತು ಯಾಕೆ ಬದುಕಬೇಕು ಎಂಬ ಜೀವನ ಮೌಲ್ಯಗಳನ್ನು ತಮ್ಮ ಬದುಕಿನ ಮೂಲಕವೇ ಸಾವಿರಾರು ವಿದ್ಯಾರ್ಥಿಗಳಿಗೆ ಧಾರೆ ಎರೆದಿದ್ದ ನೆಚ್ಚಿನ ಲೆಕ್ಕಶಾಸ್ತ್ರ (Accountancy) ಉಪನ್ಯಾಸಕ ಅರುಣ್ ದತ್ತಾತ್ರೇಯ ಕರ್ಮರ್ಕರ್ ಅವರು ತೀವ್ರ ಹೃದಯಾಘಾತದಿಂದ ಅಕಾಲಿಕ ನಿಧನರಾಗಿದ್ದು ಇದರಿಂದ ನನ್ನನ್ನೂ ಸೇರಿದಂತೆ ಅವರ ಸಾವಿರಾರು ವಿದ್ಯಾರ್ಥಿ ವೃಂದಕ್ಕೆ ಅತೀವ ಅಘಾತವಾಗಿದೆ ಎಂದು ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಆಡಳಿತಾಧಿಕಾರಿ ಕುಮಾರ್ ಎಸ್ ನಾನಾವಟೆ ಸ್ಮರಿಸಿದರು.
ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಹಮ್ಮಿಕೊಂಡಿದ್ದ ನುಡಿ-ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅರುಣ್ ಕರ್ಮರ್ಕರ್ ಗುರುಗಳು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಪಾದರಸಕ್ಕೂ ಪಾಠ ಹೇಳಿಕೊಡುವಂತಹ ಅಪಾರ ಲವಲವಿಕೆ, ಉತ್ಸಾಹ ಕೊನೆಯವರೆಗೂ ಅವರಲ್ಲಿತ್ತು ಎಂದರು.
ಹಗಲಿರುಳು ಹಣೆಯ ಮೇಲೆ ಭಸ್ಮ, ಕುಂಕುಮ ಧರಿಸಿ ಕಂಗೊಳಿಸುತ್ತಿದ್ದ ಅವರನ್ನು ಕಂಡರೆ ಸಾಕ್ಷಾತ್ 'ನಡೆದಾಡುವ ಜ್ಞಾನದ ತೇರಿನಂತೆ' ಭಾಸವಾಗುತ್ತಿತ್ತು. ಶ್ರೀ ಕಾರ್ತಿಕೇಯನ ಅಪ್ರತಿಮ ಭಕ್ತರಾಗಿದ್ದರು. ನಿತ್ಯ ತ್ರಿಕಾಲ ಸಂಧ್ಯಾವಂದನೆಯನ್ನು ತಪ್ಪದೇ ಆಚರಿಸುತ್ತಿದ್ದರು.
ಇದನ್ನೂ ಓದಿ: Sandur News: ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಚಂದ್ರಶೇಖರ್ ಆಜಾದ್: ಕುಮಾರ್ ಎಸ್.ನಾನಾವಟೆ
ತರಗತಿಯಲ್ಲಿ ಅತ್ಯಂತ ಕ್ಲಿಷ್ಟಕರವಾದ ವಿಷಯವನ್ನು ಹಲವಾರು ಉದಾಹರಣೆಗಳನ್ನು ನೀಡಿ, ಅವರಿಗೆ ಸಂಪೂರ್ಣ ಅರ್ಥವಾಗುವವರೆಗೂ ವಿವರಿಸುವ ಅದ್ಭುತ ವಾಕ್ಚಾತುರ್ಯ ಅವರದಾಗಿತ್ತು ಎಂದು ಸ್ಮರಿಸಿದರು.
ತಮ್ಮ ವೈಯಕ್ತಿಕ ಹಾಗೂ ಆರ್ಥಿಕ ಸಂಕಷ್ಟಗಳ ನಡುವೆಯೂ ಸಮಾಜ ಹಾಗೂ ಧರ್ಮದ ಉದ್ಧಾರಕ್ಕಾಗಿ ಅವರು ಸದಾ ಕಟಿಬದ್ಧರಾಗಿದ್ದರು. ನೂರಾರು ಬಡ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಮನೆಯಲ್ಲಿಯೇ ಆಶ್ರಯ ನೀಡಿ ಉಚಿತ ಶಿಕ್ಷಣ ನೀಡುತ್ತಿದ್ದರು ಎಂದರು.
ರಾಷ್ಟ್ರೀಯ ಸೇವಾ ಯೋಜನೆ(NSS)ಯ ಮೂಲಕ ಯುವಜನತೆಗೆ ಪಠ್ಯೇತರ ಮಾರ್ಗದರ್ಶನ ನೀಡುವುದರ ಜೊತೆಗೆ, ಅಳಿವಿನಂಚಿನಲ್ಲಿರುವ ನಿತ್ಯ ಪೂಜಾಪಾಠ, ಶ್ಲೋಕ ಹಾಗೂ ಸಂಧ್ಯಾ ವಂದನೆಯನ್ನು ಮುಂದಿನ ಪೀಳಿಗೆಗೆ ಕಲಿಸಿಕೊಡುವ ಮಹತ್ಕಾರ್ಯ ಮಾಡುತ್ತಿದ್ದರಲ್ಲದೇ, ಬಡ ಕುಟುಂಬಗಳಿಗೆ ನೆರವಾಗಲು ಹಲವಾರು ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದರು ಎಂದು ತಿಳಿಸಿದರು.
ತಾಳ್ಮೆ, ಬಹುಮುಖ ಪ್ರತಿಭೆ ಮತ್ತು ನಿಸ್ವಾರ್ಥ ಸೇವೆಯಿಂದ ಎಲ್ಲರ ಮನಗೆದ್ದಿದ್ದ ಗುರುಗಳ ಅಗಲಿಕೆಯಿಂದ ಇಂದಿನ ಉದಯ ನಿಜಕ್ಕೂ 'ಅರುಣನಿಲ್ಲದ ಉದಯ'ವಾಗಿದೆ. ಅವರು ಬಿತ್ತಿದ ಜ್ಞಾನ ಮತ್ತು ಸಂಸ್ಕಾರದ ಬೀಜಗಳು ಸಾವಿರಾರು ಶಿಷ್ಯರ ಮೂಲಕ ಸದಾ ಜೀವಂತವಾಗಿರಲಿವೆ ಎಂದು ಭಾವುಕರಾಗಿ ನುಡಿದರು.
ಸಭೆಯಲ್ಲಿ ನೆರೆದಿದ್ದ ಎಲ್ಲರೂ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಿ ಅಗಲಿದ ಹಿರಿಯ ಚೇತನಕ್ಕೆ ಶಾಂತಿ ಆ ಭಗವಂತ ನೀಡಲೆಂದು ಪ್ರಾರ್ಥಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಸನಾ ಉಲ್ಲಾ, ರುಕ್ಮಿಣಿಬಾಯಿ, ಹೀನಾ ಕೌಸರ್, ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.