ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vasudha Chakravarthy: ನಿಗೂಢವಾಗಿ ಸಾವನ್ನಪ್ಪಿದ ಖ್ಯಾತ ವನ್ಯಜೀವಿ ಛಾಯಾಗ್ರಾಹಕಿ ವಸುಧಾ ಚಕ್ರವರ್ತಿ

ಕೆಲವು ದಿನಗಳ ಹಿಂದೆ ನಿಗೂಢವಾಗಿ ಕಣ್ಮರೆಯಾಗಿದ್ದ ಖ್ಯಾತ ವನ್ಯಜೀವಿ ಛಾಯಾಗ್ರಾಹಕಿ ವಸುಧಾ ಚಕ್ರವರ್ತಿ ಅವರ ಶವ ಶನಿವಾರ ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಪತ್ತೆಯಾಗಿದೆ. ಇವರು ಆಗಸ್ಟ್ 27ರಂದು ಬೆಂಗಳೂರಿನಿಂದ ಕೊಲ್ಲೂರಿಗೆ ಬಂದಿದ್ದು, ಅತಿಥಿ ಗೃಹದ ಮುಂದೆ ತಮ್ಮ ಕಾರನ್ನು ನಿಲ್ಲಿಸಿ ದೇವಾಲಯಕ್ಕೆ ಬಂದಿದ್ದರು.

ಖ್ಯಾತ ವನ್ಯಜೀವಿ ಛಾಯಾಗ್ರಾಹಕಿ ನಿಗೂಢ ಸಾವು

-

ಕೊಲ್ಲೂರು: ಖ್ಯಾತ ವನ್ಯಜೀವಿ ಛಾಯಾಗ್ರಾಹಕಿ (Wildlife photographer) ವಸುಧಾ ಚಕ್ರವರ್ತಿ (45) (Vasudha Chakravarthy) ಅವರ ಶವ ಉಡುಪಿ ಜಿಲ್ಲೆಯ ಕೊಲ್ಲೂರಿನ (Kollur) ಸೌಪರ್ಣಿಕಾ ನದಿಯಲ್ಲಿ (Sauparnika River) ಪತ್ತೆಯಾಗಿದೆ. ಇವರು ಆಗಸ್ಟ್ 27ರಂದು ಬೆಂಗಳೂರಿನಿಂದ (Bengaluru) ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದು, ಅತಿಥಿ ಗೃಹದ ಮುಂದೆ ತಮ್ಮ ಕಾರನ್ನು ನಿಲ್ಲಿಸಿ ದೇವಾಲಯಕ್ಕೆ ಬಂದಿದ್ದರು. ಬಳಿಕ ಅವರು ಅಸಹಜವಾಗಿ ವರ್ತಿಸುತ್ತಿರುವುದನ್ನು ದೇವಾಲಯದ ಅಧಿಕಾರಿಗಳು ನೋಡಿದ್ದಾರೆ. ಅನಂತರ ಅವರು ದೇವಸ್ಥಾನದಿಂದ ಹೊರಗೆ ಓಡಿ ಹೋಗಿದ್ದರು. ಬಳಿಕ ನಾಪತ್ತೆಯಾಗಿದ್ದರು.

ವಸುಧಾ ಅವರ ತಾಯಿ ವಿಮಲಾ ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ ತಮ್ಮ ಮನೆಯಿಂದ ವಸುಧಾ ಅವರಿಗೆ ಪದೇ ಪದೆ ಫೋನ್ ಮಾಡುತ್ತಿದ್ದರು. ಆದರೆ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಆಗಸ್ಟ್ 28ರಂದು ವಿಮಲಾ ಕೊಲ್ಲೂರಿಗೆ ಆಗಮಿಸಿ ತಮ್ಮ ಮಗಳನ್ನು ಹುಡುಕಿ ಕೊಡುವಂತೆ ಕೊಲ್ಲೂರು ಪೊಲೀಸರಿಗೆ ದೂರು ನೀಡಿದ್ದಾರೆ.

ವಿಚಾರಣೆಯ ಸಮಯದಲ್ಲಿ ಕೆಲವು ಪ್ರವಾಸಿಗರು ವಸುಧಾ ಸೌಪರ್ಣಿಕಾ ನದಿಗೆ ಹಾರುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಶನಿವಾರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ, ಡೈವಿಂಗ್ ತಜ್ಞ ಈಶ್ವರ್ ಮಲ್ಪೆ ಮತ್ತು ಇತರ ಕೆಲವು ಸ್ಥಳೀಯ ನಿವಾಸಿಗಳೊಂದಿಗೆ ಶೋಧ ಕಾರ್ಯಾಚರಣೆ ನಡೆಸಿದರು.

ವಸುಧಾ ನದಿಗೆ ಹಾರಿದ ಸ್ಥಳದಿಂದ ಸುಮಾರು ಮೂರು ಕಿ.ಮೀ. ಕೆಳಗಿನ ಪೊದೆಯಲ್ಲಿ ಅವರ ಶವ ಪತ್ತೆಯಾಗಿದೆ. ರಕ್ಷಣಾ ಸಿಬ್ಬಂದಿ ಶವವನ್ನು ಹೊರತೆಗೆದು ದಟ್ಟ ಕಾಡಿನ ಮೂಲಕ ಹೊರತಂದು ಮರಣೋತ್ತರ ಪರೀಕ್ಷೆಯ ಅನಂತರ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದರು. ವಸುಧಾ ಅವರ ಅಂತಿಮ ವಿಧಿವಿಧಾನಗಳನ್ನು ಕೊಲ್ಲೂರಿನಲ್ಲೇ ನೆರವೇರಿಸಲಾಯಿತು.

ಈ ಕುರಿತು ಮಾಹಿತಿ ನೀಡಿರುವ ಕೊಲ್ಲೂರು ಪೊಲೀಸರು, ವಸುಧಾ ಚಕ್ರವರ್ತಿ ಸಾವನ್ನಪ್ಪುವ ಮೊದಲು ಹಲವಾರು ಗಂಟೆಗಳ ಕಾಲ ನಾಪತ್ತೆಯಾಗಿದ್ದರು. ಅವರ ಸಾವಿನ ನಿಖರವಾದ ಸಂದರ್ಭಗಳನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ. ಅವರು ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿರುವ ಸಾಧ್ಯತೆಯೂ ಇದೆ. ಆದರೆ ಇತರ ಕಾರಣಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Actor Darshan: ನಟ ದರ್ಶನ್‌ಗೆ ಗಲ್ಲು ಶಿಕ್ಷೆ ಆಗಲೇಬೇಕು; ಕೋರ್ಟ್‌ಗೆ ಅಪರಿಚಿತ ವ್ಯಕ್ತಿ ಅರ್ಜಿ!

ಬೆಂಗಳೂರಿನವರಾದ ಚಕ್ರವರ್ತಿ, ದಟ್ಟವಾದ ಕಾಡುಗಳು, ದುರ್ಬಲವಾದ ಜೌಗು ಪ್ರದೇಶ. ಹೀಗೆ ಭಾರತದ ವೈವಿಧ್ಯಮಯ ಪರಿಸರ ವ್ಯವಸ್ಥೆಗಳನ್ನು ಚಿತ್ರದ ಮೂಲಕ ಪ್ರದರ್ಶಿಸಿದ್ದಾರೆ. ಅವರ ಛಾಯಾಗ್ರಹಣವು ವನ್ಯಜೀವಿಗಳ ಸೌಂದರ್ಯವನ್ನು ಸೆರೆಹಿಡಿಯುವುದಲ್ಲದೆ, ತುರ್ತು ಸಂರಕ್ಷಣಾ ಸವಾಲುಗಳನ್ನು ಕೂಡ ಎತ್ತಿ ತೋರಿಸಿತ್ತು. ಕೆಲವು ತಿಂಗಳುಗಳಿಂದ ಅವರು ನದಿ ಜೀವ ವೈವಿಧ್ಯತೆಯ ಚಿತ್ರಗಳನ್ನು ಸೆರೆಹಿಡಿಯುತ್ತಿದ್ದು, ಇದಕ್ಕಾಗಿಯೇ ಅವರು ಕೊಲ್ಲೂರಿಗೆ ಬಂದಿದ್ದರು ಎನ್ನಲಾಗಿದೆ.