ಅಜಿತ್ ಪವಾರ್ ಜೆಟ್ ಅಪಘಾತದಲ್ಲಿ ಮೃತಪಟ್ಟ ಪೈಲಟ್ ಕ್ಯಾಪ್ಟನ್ ಸುಮಿತ್ ಕಪೂರ್, ಶಾಂಭವಿ ಪಾಠಕ್ ಯಾರು?
Maharashtra Plane Crash: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ಜೆಟ್ ವಿಮಾನ ಅಪಘಾತದಲ್ಲಿ ಮೃತಪಟ್ಟ ಪೈಲಟ್ ಕ್ಯಾಪ್ಟನ್ ಸುಮಿತ್ ಕಪೂರ್ ಹಾಗೂ ಕ್ಯಾಪ್ಟನ್ ಶಾಂಭವಿ ಪಾಠಕ್ ಕುರಿತು ಮಾಹಿತಿ ಇದೀಗ ಹೊರಬಂದಿದೆ. ಇಬ್ಬರೂ ಅನುಭವಿ ಹಾಗೂ ತರಬೇತಿ ಪಡೆದ ಪೈಲಟ್‌ಗಳಾಗಿದ್ದು, ವಿಎಸ್‌ಆರ್ ಏವಿಯೇಷನ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ವಿಮಾನ ಅಪಘಾತದಲ್ಲಿ ಮೃತಪಟ್ಟ ಪೈಲಟ್ ಶಾಂಭವಿ ಪಾಠಕ್ -
ಮುಂಬೈ, ಜ. 28: ಬುಧವಾರ (ಜನವರಿ 28) ಬೆಳಗ್ಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಪ್ರಯಾಣಿಸುತ್ತಿದ್ದ ಚಾರ್ಟರ್ಡ್ ಲಿಯರ್‌ಜೆಟ್ 45 ವಿಮಾನವು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿದೆ (Maharashtra Plane Crash). ಈ ಅಪಘಾತದಲ್ಲಿ ಅಜಿತ್ ಪವಾರ್, ಅವರ ವೈಯಕ್ತಿಕ ಭದ್ರತಾ ಅಧಿಕಾರಿ ಮತ್ತು ಇಬ್ಬರು ಪೈಲಟ್‌ಗಳು ಸೇರಿದಂತೆ ವಿಮಾನದಲ್ಲಿದ್ದ ಎಲ್ಲ ಐವರು ಮೃತಪಟ್ಟಿದ್ದಾರೆ.
ಮುಂಬೈಯಿಂದ ಬೆಳಗ್ಗೆ 8 ಗಂಟೆ ಸುಮಾರಿಗೆ ಹೊರಟಿದ್ದ ವಿಮಾನ ಬಾರಾಮತಿಯಲ್ಲಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾಗ ನಿಯಂತ್ರಣ ಕಳೆದುಕೊಂಡು ಪತನಗೊಂಡಿತು. ಇದರಿಂದಾಗಿ ಭಾರಿ ಬೆಂಕಿ ಉಂಟಾಯಿತು ಮತ್ತು ಸ್ಫೋಟ ಸಂಭವಿಸಿದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಪುಣೆಯ ಬಾರಾಮತಿಗೆ ಹೊರಟಿದ್ದೇಕೆ? ಹುಟ್ಟೂರಲ್ಲೇ ಅಂತ್ಯ ಕಂಡ ನಾಯಕ
ಅಪಘಾತದಲ್ಲಿ ಪೈಲಟ್‌ಗಳು ಬಲಿ
ವಿಮಾನದಲ್ಲಿದ್ದ ಪೈಲಟ್‌ಗಳಾದ ಕ್ಯಾಪ್ಟನ್ ಸುಮಿತ್ ಕಪೂರ್ ಮತ್ತು ಕ್ಯಾಪ್ಟನ್ ಶಾಂಭವಿ ಪಾಠಕ್ ಇಬ್ಬರೂ ಅನುಭವಿಗಳು. ಈ ವಿಮಾನವನ್ನು ನಿರ್ವಹಿಸುತ್ತಿದ್ದ ವಿಎಸ್‌ಆರ್ ಏವಿಯೇಷನ್ ಸಂಸ್ಥೆಯು ಅವರ ಗುರುತನ್ನು ದೃಢಪಡಿಸಿದೆ.
ಕ್ಯಾಪ್ಟನ್ ಶಾಂಭವಿ ಪಾಠಕ್ ಸೇನಾಧಿಕಾರಿಯ ಮಗಳು. ಅವರು ವಾಯುಪಡೆಯ ಬಾಲ ಭಾರತಿ ಶಾಲೆಯಲ್ಲಿ ಅಧ್ಯಯನ ಮಾಡಿದರು. ಮುಂಬೈ ವಿಶ್ವವಿದ್ಯಾಲಯದಿಂದ ಏರೋನಾಟಿಕ್ಸ್, ವಾಯುಯಾನ ಮತ್ತು ಏರೋಸ್ಪೇಸ್ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬಿಎಸ್‌ಸಿ ಪೂರ್ಣಗೊಳಿಸಿದರು. ನಂತರ ಅವರು ನ್ಯೂಜಿಲೆಂಡ್ ಅಂತಾರಾಷ್ಟ್ರೀಯ ವಾಣಿಜ್ಯ ಪೈಲಟ್ ಅಕಾಡೆಮಿಯಲ್ಲಿ ತರಬೇತಿ ಪಡೆದರು.
ಇಬ್ಬರಲ್ಲಿ ಹೆಚ್ಚು ಅನುಭವಿ ಕ್ಯಾಪ್ಟನ್ ಸುಮಿತ್ ಕಪೂರ್, ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಸೇರಿದಂತೆ ನಿರ್ಣಾಯಕ ಹಂತಗಳಲ್ಲಿ ವಿಮಾನವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊಂದಿದ್ದರು.
ವಿಮಾನದಲ್ಲಿ ತಾಂತ್ರಿಕ ವೈಫಲ್ಯಗಳಿರಲಿಲ್ಲ
ಇಬ್ಬರೂ ಪೈಲಟ್‌ಗಳು ದೆಹಲಿಯಲ್ಲಿ ನೆಲೆಸಿದ್ದು, ವ್ಯಾಪಕ ಹಾರಾಟದ ಅನುಭವ ಹೊಂದಿದ್ದಾರೆ ಎಂದು ವಿಎಸ್ಆರ್ ಏವಿಯೇಷನ್‌ನ ಉನ್ನತ ಅಧಿಕಾರಿ ವಿ.ಕೆ. ಸಿಂಗ್ ಹೇಳಿದ್ದಾರೆ. ʼʼನಮಗೆ ತಿಳಿದ ಮಟ್ಟಿಗೆ ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷ ಇರಲಿಲ್ಲ. ಅದನ್ನು ಚೆನ್ನಾಗಿ ನಿರ್ವಹಿಸಲಾಗಿತ್ತುʼʼ ಎಂದು ತಿಳಿಸಿದ್ದಾರೆ.
ಕಡಿಮೆ ಗೋಚರತೆಯು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ಮಾಹಿತಿಗಳು ಸೂಚಿಸಿವೆ ಎಂದು ಅವರು ವಿವರಿಸಿದ್ದಾರೆ. ಕ್ಯಾಪ್ಟನ್ ಕಪೂರ್ 16,000 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರೆ, ಸಹ ಪೈಲಟ್ ಪಾಠಕ್ ಸುಮಾರು 1,500 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
ʼʼಇಬ್ಬರೂ ತುಂಬಾ ಅನುಭವಿಯಾಗಿದ್ದರು. ಕಪೂರ್ ಸಹಾರಾ, ಜೆಟ್‌ಲೈನ್ ಮತ್ತು ಜೆಟ್ ಏರ್‌ವೇಸ್‌ನೊಂದಿಗೆ ಕೆಲಸ ಮಾಡಿದ್ದರು. ಈ ರೀತಿಯ ವಿಮಾನಗಳಲ್ಲಿ ಅವರಿಗೆ ಬಹಳ ಅನುಭವವಿತ್ತುʼʼ ಎಂದು ಸಿಂಗ್ ವಿವರಿಸಿದ್ದಾರೆ.
ಪೈಲಟ್‌ಗಳೊಂದಿಗಿನ ತಮ್ಮ ವೈಯಕ್ತಿಕ ಬಾಂಧವ್ಯವನ್ನು ನೆನಪಿಸಿಕೊಂಡ ಸಿಂಗ್, ಇಬ್ಬರೂ ತಮಗೆ ಆಪ್ತರಾಗಿದ್ದರು ಎಂದು ಹೇಳಿದರು. ಕ್ಯಾಪ್ಟನ್ ಸುಮಿತ್ ಕಪೂರ್ ನನ್ನ ಆತ್ಮೀಯ ಸ್ನೇಹಿತ. ಅವರ ಮಗ ಕೂಡ ಪೈಲಟ್ ಆಗಿದ್ದಾರೆ. ಕ್ಯಾಪ್ಟನ್ ಶಾಂಭವಿ ನನ್ನ ಮಗಳಂತೆ. ಅವರಿಬ್ಬರೂ ತುಂಬಾ ಒಳ್ಳೆಯ ವ್ಯಕ್ತಿಗಳಾಗಿದ್ದರು ಮತ್ತು ಅತ್ಯಂತ ಒಳ್ಳೆಯ ಪೈಲಟ್‌ಗಳಾಗಿದ್ದರು. ಇಬ್ಬರು ಕೂಡ ದೆಹಲಿ ಮೂಲದವರು ಎಂದು ಅವರು ಹೇಳಿದರು. ಇನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯವು ಅಪಘಾತದ ಬಗ್ಗೆ ಹೆಚ್ಚಿನ ತನಿಖೆಯನ್ನು ಪ್ರಾರಂಭಿಸಿದೆ.