'ದೇವದಾಸ್' ಚಿತ್ರದ 'ಡೋಲಾ ರೇ ಡೋಲಾ' ಹಾಡಿನ ಶೂಟಿಂಗ್ ವೇಳೆ ನಟಿ ಮಾಧುರಿ ದೀಕ್ಷಿತ್ ಗರ್ಭಿಣಿ ಆಗಿದ್ರಾ? ಕೊನೆಗೂ ಸತ್ಯ ಬಹಿರಂಗ!
‘ದೇವದಾಸ್’ ಚಿತ್ರದ ‘ಡೋಲಾ ರೇ ಡೋಲಾ’ ಹಾಡಿನ ಚಿತ್ರೀಕರಣದ ವೇಳೆ ನಟಿ ಮಾಧುರಿ ದೀಕ್ಷಿತ್ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು ಎಂಬ ಸಹ ನೃತ್ಯ ನಿರ್ದೇಶಕಿ ರುಬೀನಾ ಖಾನ್ ಅವರ ಹೇಳಿಕೆ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಸ್ವತಃ ಮಾಧುರಿ ಆ ಹೇಳಿಕೆಯನ್ನ ತಳ್ಳಿಹಾಕಿದ್ದಾರೆ.
-
ಶಾರುಖ್ ಖಾನ್ ನಟನೆಯ 'ದೇವದಾಸ್' ಚಿತ್ರದ ಸೂಪರ್ ಹಿಟ್ 'ಡೋಲಾ ರೇ ಡೋಲಾ' ಹಾಡಿನ ಚಿತ್ರೀಕರಣದ ಸಮಯದಲ್ಲಿ ನಟಿ ಮಾಧುರಿ ದೀಕ್ಷಿತ್ ಗರ್ಭಿಣಿಯಾಗಿದ್ದರು ಎಂಬ ವದಂತಿ ಈಚೆಗೆ ಸದ್ದು ಮಾಡಿತ್ತು.
ಆ ಹಾಡಿನ ನೃತ್ಯ ನಿರ್ದೇಶಕಿ ಸರೋಜ್ ಖಾನ್ ಅವರ ಸಹಾಯಕಿಯಾಗಿದ್ದ ರುಬೀನಾ ಖಾನ್ ಎಂಬುವವರು ಇತ್ತೀಚೆಗೆ ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡುವಾಗ, "ಆ ಹಾಡಿನ ಚಿತ್ರೀಕರಣದ ಸಮಯದಲ್ಲಿ ಮಾಧುರಿ ಅವರು 4 ತಿಂಗಳ ಗರ್ಭಿಣಿಯಾಗಿದ್ದರು" ಎಂದು ಹೇಳಿಕೆ ನೀಡಿದ್ದರು. ಇದೀಗ ನಟಿ ಮಾಧುರಿ ದೀಕ್ಷಿತ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಮಗ ಹುಟ್ಟಿದ್ದು 2003ರಲ್ಲಿ!
"ನನ್ನ ಮಗ ಆರಿನ್ ಜನಿಸಿದ್ದು 2003ರಲ್ಲಿ. ಹಾಗಾಗಿ ಬಿಡುಗಡೆಯ ದಿನಾಂಕಗಳನ್ನು ನೀವೇ ಲೆಕ್ಕ ಹಾಕಿ ನೋಡಿ, ನಿಮಗೇ ತಿಳಿಯುತ್ತದೆ)" ಎಂದು ಹೇಳಿರುವ ಮಾಧುರಿ, ಆ ಹಾಡಿನ ಚಿತ್ರೀಕರಣದ ಸಮಯದಲ್ಲಿ ತಾವು ದೈಹಿಕವಾಗಿ ತುಂಬಾ ಸುಸ್ತಾಗುತ್ತಿದ್ದೆ ಎಂಬುದನ್ನು ನೆನಪಿಸಿಕೊಂಡಿದ್ದಾರೆ.
9 ತಿಂಗಳು ಮುಂಚೆಯೇ ದೇವದಾಸ್ ಸಿನಿಮಾ ರಿಲೀಸ್
ಹೌದು, ಮಾಧುರಿ ಅವರ ಹಿರಿಯ ಮಗ ಆರಿನ್ ನೇನೇ ಜನಿಸಿದ್ದು 2003ರ ಮಾರ್ಚ್ 17ರಂದು. ಆದರೆ, 'ದೇವದಾಸ್' ಸಿನಿಮಾವು 2002ರ ಮೇ ತಿಂಗಳಲ್ಲಿ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು, 2002ರ ಜುಲೈ 12ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಅಂದರೆ, ಆರಿನ್ ಹುಟ್ಟುವುದಕ್ಕೂ 9 ತಿಂಗಳು ಮುಂಚೆಯೇ ದೇವದಾಸ್ ಸಿನಿಮಾ ರಿಲೀಸ್ ಆಗಿತ್ತು. ಹೀಗಿರುವಾಗ ಅದ್ಹೇಗೆ ಮಾಧುರಿ ಆ ಸಿನಿಮಾದ ಹಾಡಿನ ಶೂಟಿಂಗ್ ಸಮಯದಲ್ಲಿ ನಾಲ್ಕು ತಿಂಗಳ ಗರ್ಭಿಣಿ ಆಗೋದಕ್ಕೆ ಸಾಧ್ಯ? ಇದೇ ಪ್ರಶ್ನೆಯನ್ನು ಪರೋಕ್ಷವಾಗಿ ಎಲ್ಲರ ಮುಂದಿಟ್ಟಿದ್ದಾರೆ ಮಾಧುರಿ.
ಪತಿ ಜೊತೆಗೆ ಅಮೆರಿದಕಲ್ಲಿ ಸೆಟ್ಲ್ ಆಗಿದ್ದ ಮಾಧುರಿ
1999ರಲ್ಲಿ ಡಾ. ಶ್ರೀರಾಮ್ ನೇನೇ ಅವರನ್ನು ವಿವಾಹವಾದ ನಂತರ ಮಾಧುರಿ ಅಮೆರಿಕಕ್ಕೆ ಶಿಫ್ಟ್ ಆಗಿದ್ದರು. ಕೌಟುಂಬಿಕ ಜೀವನದ ಕಡೆಗೆ ಗಮನ ಹರಿಸಲು ಚಿತ್ರರಂಗದಿಂದ ತಾತ್ಕಾಲಿಕ ವಿರಾಮ ತೆಗೆದುಕೊಳ್ಳುವ ಮುನ್ನ ಅವರು ಪೂರ್ಣಗೊಳಿಸಿದ ಕೊನೆಯ ಚಿತ್ರಗಳಲ್ಲಿ 'ದೇವದಾಸ್' ಕೂಡ ಒಂದು. ಆ ಅವಧಿಯಲ್ಲಿ ಭಾರತ ಮತ್ತು ಅಮೆರಿಕ ನಡುವೆ ಸತತವಾಗಿ ಮಾಧುರಿ ಪ್ರಯಾಣ ಮಾಡುತ್ತಿದ್ದರಿಂದ, ಶೂಟಿಂಗ್ ಸಮಯದಲ್ಲಿ ಅವರ ಆರೋಗ್ಯ ಅಷ್ಟಾಗಿ ಚೆನ್ನಾಗಿರಲಿಲ್ಲವಂತೆ.
"ನಾನು ತುಂಬಾ ಪ್ರಯಾಣ ಮಾಡುತ್ತಿದ್ದರಿಂದ ನನ್ನ ಆರೋಗ್ಯದಲ್ಲಿ ಕೊಂಚ ಏರುಪೇರಾಗಿತ್ತು. ಇಲ್ಲಿ ಶೂಟಿಂಗ್ ಮುಗಿಸಿ ಅಲ್ಲಿಗೆ ಹೋಗುವುದು, ಅಲ್ಲಿಂದ ಮತ್ತೆ ಇಲ್ಲಿಗೆ ಬರುವುದು ಮಾಡುತ್ತಿದ್ದೆ. ಅದರಲ್ಲೂ ನನ್ನ ಎಲ್ಲಾ ಶೂಟಿಂಗ್‌ಗಳು ನೈಟ್ ಶಿಫ್ಟ್ ಇರುತ್ತಿದ್ದವು. ಹಾಗಾಗಿ ಅದು ನನಗೆ ತುಂಬಾ ಕಷ್ಟಕರವಾಗಿತ್ತು. ಹೌದು, 'ಡೋಲಾ ರೇ ಡೋಲಾ' ಹಾಡಿನ ಚಿತ್ರೀಕರಣದ ನನಗೆ ಸ್ವಲ್ಪ ಹುಷಾರಿರಲಿಲ್ಲ. ಆದರೆ ಅದನ್ನೇ ಈಗ ಎಲ್ಲರೂ ಅಂದುಕೊಳ್ಳುತ್ತಿರುವಂತಹ ವಿಷಯವೇನೂ ಅಂದು ಇರಲಿಲ್ಲ" ಎಂದು ಮಾಧುರಿ ಸ್ಪಷ್ಟನೆ ನೀಡಿದ್ದಾರೆ.
Star Fashion 2025: 50 ವರ್ಷ ದಾಟಿದರೂ ಡ್ರೇಪ್ಡ್ ಸ್ಕರ್ಟ್‌ನಲ್ಲಿ ಯುವತಿಯಂತೆ ಕಂಡ ಮಾಧುರಿ ದೀಕ್ಷಿತ್
ರುಬೀನಾ ಖಾನ್ ಹೇಳಿದ್ದೇನು?
ಸಂದರ್ಶನದಲ್ಲಿ ರುಬೀನಾ ಖಾನ್ ಅವರು 'ಡೋಲಾ ರೇ ಡೋಲಾ' ಹಾಡಿನ ಮೇಕಿಂಗ್ ಬಗ್ಗೆ ಮಾತನಾಡುತ್ತಾ, "ಆ ಹಾಡಿನಲ್ಲಿ ಮಾಧುರಿ ಅವರು ತಿರುಗಿ ಕೆಳಗೆ ಕೂರುವ ಒಂದು ಸ್ಟೆಪ್ ಇತ್ತು. ಆ ಒಂದು ಶಾಟ್‌ಗಾಗಿ ಬೆಳಗ್ಗೆ 9 ರಿಂದ ರಾತ್ರಿ 10 ರವರೆಗೆ ಶೂಟಿಂಗ್ ನಡೆದಿತ್ತು. ಏಕೆಂದರೆ ಆಗ ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಹೀಗಾಗಿ ಅವರಿಗೆ ಸರಿಯಾಗಿ ತಿರುಗಲು ಸಾಧ್ಯವಾಗುತ್ತಿರಲಿಲ್ಲ ಮತ್ತು ತಲೆಸುತ್ತು ಬರುತ್ತಿತ್ತು" ಎಂದು ಹೇಳಿದ್ದರು. ಅದೇ ದೊಡ್ಡ ಸುದ್ದಿಯಾಗಿತ್ತು.
ಅಂದಹಾಗೆ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ದೇವದಾಸ್' ಚಿತ್ರದಲ್ಲಿ ಶಾರುಖ್ ಖಾನ್, ಐಶ್ವರ್ಯಾ ರೈ ಬಚ್ಚನ್ ಮತ್ತು ಮಾಧುರಿ ದೀಕ್ಷಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. 'ಚಂದ್ರಮುಖಿ' ಪಾತ್ರಕ್ಕೆ ಮಾಧುರಿ ಜೀವ ತುಂಬಿದ್ದರು. ಸರೋಜ್ ಖಾನ್ ನೃತ್ಯ ನಿರ್ದೇಶನ ಮಾಡಿದ್ದ 'ಡೋಲಾ ರೇ ಡೋಲಾ' ಹಾಡಿನಲ್ಲಿ ಮಾಧುರಿ ಮತ್ತು ಐಶ್ವರ್ಯಾ ಒಟ್ಟಿಗೆ ಹೆಜ್ಜೆ ಹಾಕಿದ್ದರು. ಆ ಹಾಡು ದೊಡ್ಡ ಹಿಟ್ ಆಗಿತ್ತು.