‘ಧುರಂಧರ್’ ಖ್ಯಾತಿಯ ನಟಿ ಸಾರಾ ಅರ್ಜುನ್‌ಗೆ ಜಾಕ್‌ಪಾಟ್; ಟಾಲಿವುಡ್ ಸ್ಟಾರ್ ನಟನ ಸಿನಿಮಾದಿಂದ ಬಂತು ಬಂಪರ್ ಆಫರ್!
ನಟಿ ಸಾರಾ ಅರ್ಜುನ್ ಅವರು ರಣವೀರ್ ಸಿಂಗ್ ಜೊತೆಗಿನ ‘ಧುರಂಧರ್’ ಸರಣಿಯ ಯಶಸ್ಸಿನ ಬೆನ್ನಲ್ಲೇ ಟಾಲಿವುಡ್‌ನ ಬಹುನಿರೀಕ್ಷಿತ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಾಮ್ ಚರಣ್ ಹಾಗೂ ಸುಕುಮಾರ್ ಜೋಡಿಯ ಮೆಗಾ ಪ್ರಾಜೆಕ್ಟ್‌ನಲ್ಲಿ ಸಾರಾ ಅರ್ಜುನ್ ನಟಿಸುವುದು ಬಹುತೇಕ ಫಿಕ್ಸ್ ಎನ್ನಲಾಗಿದೆ.
-
ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸರಣಿಯ ಸಿನಿಮಾಗಳ ಮೂಲಕ ಬಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟವರು ನಟಿ ಸಾರಾ ಅರ್ಜುನ್. ಭರ್ಜರಿ ಗೆಲುವು ಸಾಧಿಸಿರುವ ಸಾರಾ ಅರ್ಜುನ್ ಮುಂದೆ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲ ಸಿನಿಪ್ರಿಯರಲ್ಲಿದೆ. ಅದಕ್ಕೀಗ ಉತ್ತರ ಸಿಕ್ಕಿದ್ದು, ತೆಲುಗಿನ ಸ್ಟಾರ್ ನಟ ರಾಮ್ ಚರಣ್ ಅವರ ಮುಂದಿನ ಚಿತ್ರಕ್ಕೆ ಸಾರಾ ಅರ್ಜುನ್ ನಾಯಕಿಯಾಗಿ ಆಯ್ಕೆಯಾಗುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಸುಕುಮಾರ್ ಜೊತೆ ರಾಮ್ ಚರಣ್ ಸಿನಿಮಾ
ಟಾಲಿವುಡ್‌ನ ಟ್ರೆಂಡ್‌ಸೆಟ್ಟರ್ ಕಾಂಬಿನೇಷನ್‌ಗಳಲ್ಲಿ ಸುಕುಮಾರ್ ಮತ್ತು ರಾಮ್ ಚರಣ್ ಜೋಡಿ ಪ್ರಮುಖವಾದದ್ದು. ಇವರಿಬ್ಬರ ಜೋಡಿಯಲ್ಲಿ ಮೂಡಿಬಂದ ‘ರಂಗಸ್ಥಲಂ’ ಸಿನಿಮಾ ಇಂಡಸ್ಟ್ರಿ ರೆಕಾರ್ಡ್‌ಗಳನ್ನು ಧೂಳಿಪಟ ಮಾಡಿ, ಆಲ್‌ಟೈಮ್ ಕ್ಲಾಸಿಕ್ ಚಿತ್ರವಾಗಿ ಹೊರಹೊಮ್ಮಿತ್ತು. ಸದ್ಯ ಈ ಜೋಡಿ ಮತ್ತೆ ಯಾವಾಗ ಒಂದಾಗಲಿದೆಯೋ ಎಂದು ಇಡೀ ಚಿತ್ರರಂಗವೇ ತೀವ್ರ ಕುತೂಹಲದಿಂದ ಎದುರುನೋಡುತ್ತಿದೆ. ಇತ್ತೀಚೆಗಷ್ಟೇ ಮಣಿಕಟ್ಟಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಚರಣ್, ಈಗ ಸುಕುಮಾರ್ ಜೊತೆಗಿನ ಮುಂದಿನ ಪ್ರಾಜೆಕ್ಟ್‌ಗಾಗಿ ಸಜ್ಜಾಗುತ್ತಿದ್ದಾರೆ. ಸುಕುಮಾರ್ ನಿರ್ದೇಶನದ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಸದ್ಯ ಭರದಿಂದ ಸಾಗುತ್ತಿವೆ.
ಹೀರೋಯಿನ್ ರೇಸ್‌ನಲ್ಲಿ ಸಾರಾ ಅರ್ಜುನ್
ಈ ಪ್ಯಾನ್-ಇಂಡಿಯಾ ಚಿತ್ರದಲ್ಲಿ ನಾಯಕಿ ಆಯ್ಕೆಯ ಕುರಿತು ಕಳೆದ ಕೆಲ ದಿನಗಳಿಂದ ಹಲವು ಹೆಸರುಗಳು ಕೇಳಿಬರುತ್ತಿದ್ದವು. ಆರಂಭದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನನ್ ಹೆಸರುಗಳು ಮುಂಚೂಣಿಯಲ್ಲಿದ್ದರೆ, ಕೊನೆಗೆ ಕಿಯಾರಾ ಅಡ್ವಾಣಿ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಜೋರಾಗಿ ಹರಡಿತ್ತು. ಆದರೆ ಈ ಹಿಂದೆ ರಾಮ್ ಚರಣ್ ಮತ್ತು ಕಿಯಾರಾ ಕಾಂಬಿನೇಷನ್‌ನಲ್ಲಿ ಬಂದಿದ್ದ ‘ವಿನಯ ವಿಧೇಯ ರಾಮ’ ಹಾಗೂ ‘ಗೇಮ್ ಚೇಂಜರ್’ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಹೀಗಾಗಿ ಮೆಗಾ ಅಭಿಮಾನಿಗಳು ಕೂಡ ಈ ಜೋಡಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ರಾಮ್ ಚರಣ್‌ಗೆ ಹೊಸ ಮುಖವನ್ನು ನಾಯಕಿಯನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಸುಕುಮಾರ್ ತಂಡವು ಈಗ ಸಾರಾ ಅರ್ಜುನ್ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ.
‘ಧುರಂಧರ್’ ಫ್ರಾಂಚೈಸ್ ಮೂಲಕ ಸೆನ್ಸೇಷನ್ ಸೃಷ್ಟಿಸಿದ ಸಾರಾ
ಬಾಲನಟಿಯಾಗಿ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಮುದ್ದಾದ ಅಭಿನಯದ ಮೂಲಕ ಗಮನಸೆಳೆದಿದ್ದ ಸಾರಾ ಅರ್ಜುನ್, ನಾಯಕಿಯಾಗಿ ಎಂಟ್ರಿ ಕೊಟ್ಟ ತಕ್ಷಣವೇ ಅಪಾರ ಮಟ್ಟದ ಸ್ಟಾರ್‌ಡಮ್ ಸಂಪಾದಿಸಿಕೊಂಡರು. ‘ಧುರಂಧರ್’ ಫ್ರಾಂಚೈಸ್‌ನ ಎರಡು ಭಾಗಗಳಲ್ಲಿ ‘ಯಾಲೀನಾ’ ಪಾತ್ರದಲ್ಲಿ ಅವರು ನೀಡಿದ ಅಭಿನಯಕ್ಕೆ ದೇಶಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. ಇದರ ಮೊದಲ ಭಾಗವು ಅಂದಾಜು ₹1350 ಕೋಟಿ ಗಳಿಸಿದರೆ, ಎರಡನೇ ಭಾಗವು ಬರೋಬ್ಬರಿ ₹1850 ಕೋಟಿ ಕಲೆಕ್ಷನ್ ಮಾಡಿ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತು.
Dhurandhar: ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ದಿನ ಧುರಂಧರ್ ದಿ ರಿವೆಂಜ್ ಸ್ಟ್ರೀಮಿಂಗ್!
ಒಟ್ಟಾರೆಯಾಗಿ ₹3200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಫ್ರಾಂಚೈಸ್ ಮೂಲಕ ರಾತ್ರೋರಾತ್ರಿ ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಬೆಳೆದ ಸಾರಾ ಅರ್ಜುನ್, ಬಾಲಿವುಡ್‌ನಿಂದ ಟಾಲಿವುಡ್‌ವರೆಗೆ ಬಹುತೇಕ ಟಾಪ್ ನಿರ್ದೇಶಕ-ನಿರ್ಮಾಪಕರ ಹಾಟ್ ಫೇವರೆಟ್ ಆಗಿ ಹೊರಹೊಮ್ಮಿದ್ದಾರೆ.
ಈ ಹಿಂದೆ ಗುಣಶೇಖರ್ ನಿರ್ದೇಶನದ ‘ಯುಫೋರಿಯಾ’ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದ ಸಾರಾ ಅರ್ಜುನ್‌ಗೆ ಇದು ತೆಲುಗಿನಲ್ಲಿ ಎರಡನೇ ಪ್ರಾಜೆಕ್ಟ್ ಆಗಲಿದೆ. ರಾಮ್ ಚರಣ್ ಮತ್ತು ಸಾರಾ ಅರ್ಜುನ್ ಕಾಂಬಿನೇಷನ್‌ಗಾಗಿ ಚಿತ್ರತಂಡವು ಮುಂದಿನ ತಿಂಗಳು ವಿಶೇಷ ಲುಕ್ ಟೆಸ್ಟ್ ನಡೆಸಿ, ಆ ಬಳಿಕ ಅಧಿಕೃತವಾಗಿ ಈ ಜೋಡಿಯನ್ನು ಘೋಷಿಸುವ ಸಾಧ್ಯತೆಯಿದೆ. ಈ ಸಿನಿಮಾಗೆ ದಸರಾ ಹಬ್ಬದ ಸಂದರ್ಭದಲ್ಲಿ ಮುಹೂರ್ತ ನೆರವೇರಿಸಿ, ನವೆಂಬರ್‌ನಿಂದ ಚಿತ್ರೀಕರಣ ಆರಂಭಿಸಲು ಯೋಜಿಸಲಾಗಿದೆ.