ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಶ್ವ ವೇದಿಕೆಯಲ್ಲಿ ಕನ್ನಡದ ದಿಂಡಿಮ: ಮಹೇಶ್ ಮಹದೇವ್, ಪ್ರಿಯದರ್ಶಿನಿಗೆ 3ನೇ ಅಂತರರಾಷ್ಟ್ರೀಯ ಪ್ರಶಸ್ತಿ

ಮಹೇಶ್ ಮಹದೇವ್ ಅವರ ಅರ್ಥಪೂರ್ಣ ಸಾಹಿತ್ಯ, ಮನಮೋಹಕ ಸಂಗೀತ ಸಂಯೋಜನೆ ಹಾಗೂ ಸೃಜನಶೀಲ ನಿರ್ದೇಶನದಲ್ಲಿ ಈ ಗೀತೆ ಮೂಡಿಬಂದಿದೆ. ಛತ್ರಪತಿ ಶಿವಾಜಿ ಮಹಾರಾಜರ ಜೀವನ, ಶೌರ್ಯ, ಆದರ್ಶ ಮತ್ತು ಪರಂಪರೆಯನ್ನು ಸಮಕಾಲೀನ ಸಂಗೀತ ಹಾಗೂ ಸಿನಿಮೀಯ ಕಥನದ ಮೂಲಕ ಪರಿಚಯಿಸುವ ಈ ಕೃತಿ ನೃತ್ಯಾಧಾರಿತ ಹಾಗೂ ಲಯಬದ್ಧ ಸ್ವರೂಪ ಹೊಂದಿದೆ.

ಮಹೇಶ್ ಮಹದೇವ್, ಪ್ರಿಯದರ್ಶಿನಿಗೆ 3ನೇ ಅಂತರರಾಷ್ಟ್ರೀಯ ಪ್ರಶಸ್ತಿ

-

Profile
Ashok Nayak Sep 29, 2026 12:22 AM

ಕನ್ನಡದಲ್ಲಿ ಮೂಡಿ ಬಂದ ‘ಜೈ ಶಿವಾಜಿ ಜೈ ಭವಾನಿ’ ಗೀತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ದೊರೆತಿದೆ. ಭಾರತೀಯ ಸಂಗೀತ ಸಂಯೋಜಕ ಮಹೇಶ್ ಮಹದೇವ್(Mahesh Mahadev) ಹಾಗೂ ಸಿಂಗಾಪುರ ಮೂಲದ ಬಹುಭಾಷಾ ಹಿನ್ನೆಲೆಯ ಗಾಯಕಿ ಡಾ. ಪ್ರಿಯದರ್ಶಿನಿ(Dr Priyadarshini) ಅವರ ಸಹಯೋಗ ದಲ್ಲಿ ರೂಪುಗೊಂಡ ಈ ಗೀತೆಗೆ ಅಮೆರಿಕದ ಟೆನ್ನೆಸ್ಸೀ ರಾಜ್ಯದ ನ್ಯಾಶ್‌ವಿಲ್‌ನಲ್ಲಿ ನಡೆದ 12ನೇ ವಾರ್ಷಿಕ ಜೋಸಿ ಮ್ಯೂಸಿಕ್ ಅವಾರ್ಡ್ಸ್ನಲ್ಲಿ(Josie Music Awards) ಗೌರವ ಲಭಿಸಿದೆ.

‘ವಿಶ್ವದ ಸಂಗೀತದ ರಾಜಧಾನಿ’ ಎಂದು ಗುರುತಿಸಿಕೊಂಡಿರುವ ನ್ಯಾಶ್‌ವಿಲ್‌ನ ವಿಶ್ವವಿಖ್ಯಾತ “ಗ್ರ್ಯಾಂಡ್ ಓಲೆ ಓಪ್ರಿ” ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

Josie Music Awards 2026_6 ok

ಮಹೇಶ್ ಮಹದೇವ್ ಅವರ ಅರ್ಥಪೂರ್ಣ ಸಾಹಿತ್ಯ, ಮನಮೋಹಕ ಸಂಗೀತ ಸಂಯೋಜನೆ ಹಾಗೂ ಸೃಜನಶೀಲ ನಿರ್ದೇಶನದಲ್ಲಿ ಈ ಗೀತೆ ಮೂಡಿಬಂದಿದೆ. ಛತ್ರಪತಿ ಶಿವಾಜಿ ಮಹಾರಾಜರ ಜೀವನ, ಶೌರ್ಯ, ಆದರ್ಶ ಮತ್ತು ಪರಂಪರೆಯನ್ನು ಸಮಕಾಲೀನ ಸಂಗೀತ ಹಾಗೂ ಸಿನಿಮೀಯ ಕಥನದ ಮೂಲಕ ಪರಿಚಯಿಸುವ ಈ ಕೃತಿ ನೃತ್ಯಾಧಾರಿತ ಹಾಗೂ ಲಯಬದ್ಧ ಸ್ವರೂಪ ಹೊಂದಿದೆ. ಪ್ರಿಯದರ್ಶಿನಿ ಮತ್ತು ಮಹೇಶ್ ಮಹದೇವ್ ಗೀತೆಗೆ ಧ್ವನಿ ನೀಡಿದ್ದು, ಸಿದ್ಧಾರ್ಥ್ ಶಾಂಡಿಲ್ಯಾಸ ಅವರು ಸಹಗಾಯನದ ಮೂಲಕ ಕೊಡುಗೆ ನೀಡಿದ್ದಾರೆ.

ಗೀತೆಯನ್ನು ಕನ್ನಡ, ಮರಾಠಿ ಹಾಗೂ ಹಿಂದಿ ಭಾಷೆಗಳಲ್ಲಿ ರೂಪಿಸುವ ಉದ್ದೇಶ ಹೊಂದ ಲಾಗಿದ್ದು, ಪ್ರಸ್ತುತ ಕನ್ನಡ ಆವೃತ್ತಿ ಮಾತ್ರ ಬಿಡುಗಡೆಯಾಗಿದೆ. ಸಂಗೀತ ವಿಡಿಯೋದಲ್ಲಿ ಪ್ರಿಯದರ್ಶಿನಿ, ಮಹೇಶ್ ಮಹದೇವ್ ಹಾಗೂ ಚಲನಚಿತ್ರ ನಟ ಗಣೇಶ್ ರಾವ್ ಕೇಸರ್ಕರ್ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ. ಶಿವಶಕ್ತಿ ಗ್ರೂಪ್ ವಿಡಿಯೋವನ್ನು ತಯಾರಿಸಿದ್ದು, ಪಿ.ಎಂ. ಆಡಿಯೋಸ್ ಮತ್ತು ಎಂಟರ್ಟೈನ್ಮೆಂಟ್ಸ್ ಪ್ರಸ್ತುತಪಡಿಸಿದೆ.

Josie Music Awards 2026_2 ok

ಬೆಂಗಳೂರಿನ ಪ್ರಿಸಮ್ ರೆಕಾರ್ಡಿಂಗ್ ಸ್ಟುಡಿಯೊಸ್ನಲ್ಲಿ ಹಾಡಿನ ರೆಕಾರ್ಡಿಂಗ್, ಮಿಕ್ಸಿಂಗ್ ಮತ್ತು ಮಾಸ್ಟರಿಂಗ್ ನಡೆದಿದ್ದು, ಸುನಿಲ್ ಮಹದೇವ್ ಅವರು ಗ್ರಾಫಿಕ್ಸ್ ಹಾಗೂ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿಯ ಅಂಗವಾಗಿ ಈ ವರ್ಷದ ಆರಂಭದಲ್ಲಿ ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ(Dr. C.N. Ashwathnarayan) ಅವರು ಗೀತೆಯನ್ನು ಬಿಡುಗಡೆ ಮಾಡಿದ್ದರು.

ಕರ್ನಾಟಕ ಸರ್ಕಾರದ ಅಧಿಕೃತ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿಯೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಸಂಗೀತ ವಿಡಿಯೋವನ್ನು ವಿಶೇಷವಾಗಿ ಪ್ರದರ್ಶಿಸಲಾಗಿತ್ತು.

ಈ ವರ್ಷದ ಜೋಸಿ ಮ್ಯೂಸಿಕ್ ಅವಾರ್ಡ್ಸ್‌ಗೆ ವಿಶ್ವದಾದ್ಯಂತದ ಕಲಾವಿದರಿಂದ 1,01,000ಕ್ಕೂ ಅಧಿಕ ಸಲ್ಲಿಕೆಗಳು ಬಂದಿದ್ದವು. ಸೃಜನಶೀಲತೆ, ಸಾಹಿತ್ಯದ ಗುಣಮಟ್ಟ, ವೈಶಿಷ್ಟ್ಯತೆ ಹಾಗೂ ಸಂಗೀತ ಕ್ಷೇತ್ರದಲ್ಲಿನ ಕಲಾತ್ಮಕ ಸಾಧನೆ ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಂಗೀತ ಕ್ಷೇತ್ರದ ಅನುಭವಿ ವೃತ್ತಿಪರರು ಹಾಗೂ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಕಲಾವಿದರು ಸೇರಿದಂತೆ ತೀರ್ಪುಗಾರರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಈ ಜಾಗತಿಕ ಸಲ್ಲಿಕೆಗಳ ಪೈಕಿ ಕನ್ನಡದ ‘ಜೈ ಶಿವಾಜಿ ಜೈ ಭವಾನಿ’ ಗೀತೆಗೆ ಪ್ರಶಸ್ತಿ ದೊರೆತಿರುವುದು ಕನ್ನಡ ಸಂಗೀತದ ಅಂತರರಾಷ್ಟ್ರೀಯ ಪ್ರಾತಿನಿಧ್ಯಕ್ಕೆ ಮಹತ್ವದ ಬೆಳವಣಿಗೆಯಾಗಿದೆ.

ಮಹೇಶ್ ಮಹದೇವ್ ಮಾತನಾಡಿ, “ಇದು ನಮ್ಮಿಬ್ಬರಿಗೂ ದೊರೆತ 3ನೇ ಅಂತಾರಾಷ್ಟ್ರೀಯ ಪ್ರಶಸ್ತಿ ಹಾಗೂ ಜೋಸಿ ಮ್ಯೂಸಿಕ್ ಅವಾರ್ಡ್ಸ್‌ನಿಂದ ದೊರೆತ ಮೊದಲ ಪ್ರಶಸ್ತಿ. ಕಲಾವಿದರಿಗೆ ಇಂತಹ ಪ್ರತಿಷ್ಠಿತ ಅಂತರರಾಷ್ಟ್ರೀಯ ವೇದಿಕೆಯನ್ನು ಕಲ್ಪಿಸಿರುವ ಜೋಸಿ ಪಸಾಂಟಿನೋ ಮತ್ತು ಟಿನಾಮೇರಿ ಪಸಾಂಟಿನೋ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ನನ್ನ ಮಾತೃಭಾಷೆ ಮರಾಠಿ ಯಾದರೂ, ನಾನು ಹುಟ್ಟಿದ್ದು ಕರ್ನಾಟಕದಲ್ಲಿ. ಕರ್ನಾಟಕವೇ ನನ್ನ ಮಾತೃಭೂಮಿ. ಕನ್ನಡದಲ್ಲಿ ಹಲವಾರು ಸಾಹಿತ್ಯಗಳನ್ನು ಬರೆದು, ಅನೇಕ ಗೀತೆಗಳನ್ನು ರಚಿಸಿದ್ದೇನೆ.

ಕನ್ನಡದಲ್ಲಿ ರಚಿಸಿರುವ ಈ ಗೀತೆಗೆ ವಿಶ್ವ ಮಟ್ಟದಲ್ಲಿ ಮನ್ನಣೆ ದೊರೆತಿರುವುದು ನನಗೆ ಅಪಾರ ಹೆಮ್ಮೆ ಹಾಗೂ ಆತ್ಮತೃಪ್ತಿ ತಂದಿದೆ,” ಎಂದು ಹೇಳಿದರು. ಪ್ರಿಯದರ್ಶಿನಿ ಮಾತನಾಡಿ, “ನಮ್ಮ ಸಾಂಸ್ಕೃತಿಕ ಕಥನಗಳಿಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮನ್ನಣೆ ದೊರೆತಿರುವುದು ಈ ಗೌರವದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.

ವಿವಿಧ ಭಾಷೆ, ಸಂಸ್ಕೃತಿ ಹಾಗೂ ಸಂಗೀತ ಪರಂಪರೆಗಳಿಗೆ ಸೇರಿದ ಕಲಾವಿದರನ್ನು ಒಂದೇ ವೇದಿಕೆ ಯಲ್ಲಿ ಒಗ್ಗೂಡಿಸುತ್ತಿರುವ ಜೋಸಿ ಮ್ಯೂಸಿಕ್ ಸಂಸ್ಥೆಗೆ ನಾನು ಕೃತಜ್ಞಳಾಗಿದ್ದೇನೆ. ಕನ್ನಡನಾಡಿನ ಹಾಗೂ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂಗೀತದ ಮೂಲಕ ಜಾಗತಿಕ ಪ್ರೇಕ್ಷಕರಿಗೆ ಪರಿಚಯಿಸುವ ನಮ್ಮ ಪ್ರಯತ್ನಕ್ಕೆ ಈ ಗೌರವ ಮತ್ತಷ್ಟು ಪ್ರೋತ್ಸಾಹ ನೀಡಿದೆ,” ಎಂದು ಹೇಳಿದರು. 2026ರ ಜೋಸಿ ಮ್ಯೂಸಿಕ್ ಅವಾರ್ಡ್ಸ್‌ನಲ್ಲಿ ಪ್ರಿಯದರ್ಶಿನಿ ಅವರು ‘World Artist of the Year’ ಸೇರಿದಂತೆ ಒಟ್ಟು ಎರಡು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದರು.

PM Audios & Entertainments ಸಂಸ್ಥೆಯೂ ‘Record Label of the Year’ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿತ್ತು. ಭಾರತೀಯ ಹಾಗೂ ಸಿಂಗಾಪುರದ ಕಲಾವಿದರ ಸಹಯೋಗದಲ್ಲಿ ಮೂಡಿ ಬಂದ ‘ಜೈ ಶಿವಾಜಿ ಜೈ ಭವಾನಿ’ ಗೀತೆಗೆ ದೊರೆತಿರುವ ಈ ಅಂತರರಾಷ್ಟ್ರೀಯ ಗೌರವವು ಕನ್ನಡ ಸಂಗೀತಕ್ಕೆ ಜಾಗತಿಕ ಮಟ್ಟದಲ್ಲಿ ದೊರೆತಿರುವ ಗಮನಾರ್ಹ ಮಾನ್ಯತೆಯಾಗಿದೆ.