Ajay Devgn: ಅಜಯ್ ದೇವಗನ್ ‘ದೃಶ್ಯಂ’ ಚಿತ್ರದ ಒಟಿಟಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ಅಸ್ತು
Ajay Devgn: ಅಜಯ್ ದೇವಗನ್ (Ajay Devagn) ಮತ್ತು ಟಬು ಅಭಿನಯದ ಬಹುನಿರೀಕ್ಷಿತ ಹಿಂದಿ ಚಿತ್ರ ‘ದೃಶ್ಯಂ: ದಿ ಕನ್ಕ್ಲೂಷನ್’ ಬಿಡುಗಡೆಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಚಿತ್ರದ ಪ್ರದರ್ಶನ, ವಿತರಣೆ ಹಾಗೂ ಒಟಿಟಿ (OTT) ವೇದಿಕೆಗಳಲ್ಲಿನ ಬಿಡುಗಡೆಯನ್ನು ತಡೆಯುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ
ಅಜಯ್ ದೇವಗನ್ -
ಅಜಯ್ ದೇವಗನ್ (Ajay Devagn) ಮತ್ತು ಟಬು ಅಭಿನಯದ ಬಹುನಿರೀಕ್ಷಿತ ಹಿಂದಿ ಚಿತ್ರ ‘ದೃಶ್ಯಂ: ದಿ ಕನ್ಕ್ಲೂಷನ್’ ಬಿಡುಗಡೆಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಚಿತ್ರದ ಪ್ರದರ್ಶನ, ವಿತರಣೆ ಹಾಗೂ ಒಟಿಟಿ (OTT) ವೇದಿಕೆಗಳಲ್ಲಿನ ಬಿಡುಗಡೆಯನ್ನು ತಡೆಯುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
‘ದೃಶ್ಯಂ’ ಫ್ರಾಂಚೈಸಿಯ ಹಿಂದಿ ರಿಮೇಕ್ ಹಕ್ಕುಗಳಿಗೆ ಸಂಬಂಧಿಸಿದ ಕಾಪಿರೈಟ್ ವಿವಾದದ ಹಿನ್ನೆಲೆಯಲ್ಲಿ ರಾಜ್ಕುಮಾರ್ ಥಿಯೇಟರ್ಸ್ ಪ್ರೈವೇಟ್ ಲಿಮಿಟೆಡ್ ಈ ಅರ್ಜಿ ಸಲ್ಲಿಸಿತ್ತು. ನ್ಯಾಯಮೂರ್ತಿ ಪಿ.ಬಿ. ಬಾಲಾಜಿ ಅವರು ಮಧ್ಯಂತರ ತಡೆಯಾಜ್ಞೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಕಾಪಿರೈಟ್ ಉಲ್ಲಂಘನೆಗೆ ಪ್ರಾಥಮಿಕ ಸಾಕ್ಷ್ಯವಿಲ್ಲ
ಮಲಯಾಳಂ ಮೂಲದ ‘ದೃಶ್ಯಂ’ ಸಿನಿಮಾ ಹಾಗೂ ಅದರ ಮುಂದಿನ ಭಾಗಗಳ ಹಿಂದಿ ರಿಮೇಕ್ ಹಕ್ಕುಗಳು ತಮ್ಮ ಬಳಿ ಇವೆ ಎಂದು ರಾಜ್ಕುಮಾರ್ ಥಿಯೇಟರ್ಸ್ ವಾದಿಸಿತ್ತು. ಆದರೆ, ಕಾಪಿರೈಟ್ ಉಲ್ಲಂಘನೆಯಾಗಿದೆ ಎಂಬುದನ್ನು ಸಾಬೀತುಪಡಿಸಲು ಕಂಪನಿಯು ಪ್ರಾಥಮಿಕ ಹಂತದಲ್ಲೇ ಅಗತ್ಯವಾದ ಸಾಕ್ಷ್ಯಗಳನ್ನು ಒದಗಿಸಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: Bigg Boss Kannada 13: ಆಸಿಯಾ ಈಗ ಯುವರಾಣಿ! ನಾಮಿನೇಶನ್ ಅಧಿಕಾರ ಚೆನ್ನಾಗಿ ನಿಭಾಯಿಸಿದ್ರಾ ಸೌಂದರ್ಯ?
ಇದೇ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆಯ ಸೆಕ್ಷನ್ 9ರ ಅಡಿಯಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನೂ ಈ ಹಿಂದೆ ನ್ಯಾಯಾಲಯವು ವಿಚಾರಣೆ ನಡೆಸಿ ತಿರಸ್ಕರಿಸಿತ್ತು.ಹೀಗಾಗಿ, ಅದೇ ರೀತಿಯ ಮಧ್ಯಂತರ ಪರಿಹಾರವನ್ನು ಮತ್ತೆ ಸಿವಿಲ್ ಮೊಕದ್ದಮೆಯ ಮೂಲಕ ಕೋರುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹಿಂದಿನ ಅರ್ಜಿಯನ್ನು ಅರ್ಹತೆಯ ಆಧಾರದ ಮೇಲೆ ತಿರಸ್ಕರಿಸಿರುವುದರಿಂದ, ಅದೇ ವಿಚಾರದಲ್ಲಿ ಮತ್ತೆ ಪರಿಹಾರ ಕೋರುವುದು ‘ರೆಸ್ ಜುಡಿಕಾಟಾ’ (Res Judicata) ತತ್ವಕ್ಕೆ ವಿರುದ್ಧವಾಗುತ್ತದೆ ಎಂದು ಹೇಳಿದೆ.
"ಸೆಕ್ಷನ್ 9ರ ಅರ್ಜಿಯಲ್ಲಿ ಕೋರಲಾಗಿದ್ದ ಪರಿಹಾರವನ್ನು ಅರ್ಹತೆಯ ಆಧಾರದ ಮೇಲೆ ನಿರ್ಧರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಹಾಗೆ ನಿರ್ಧರಿಸಿದ್ದರೆ, ಅದೇ ಪರಿಹಾರವನ್ನು ಮತ್ತೆ ಈ ನ್ಯಾಯಾಲಯದ ಮುಂದೆ ಕೋರುವುದನ್ನು ತಡೆಯಲು ರೆಸ್ ಜುಡಿಕಾಟಾ ತತ್ವ ಅನ್ವಯಿಸುತ್ತದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
2013ರಿಂದ ಆರಂಭವಾದ ರಿಮೇಕ್ ಹಕ್ಕುಗಳ ವಿವಾದ
2013ರಲ್ಲಿ ಬಿಡುಗಡೆಯಾದ ಮಲಯಾಳಂನ ಮೂಲ ‘ದೃಶ್ಯಂ’ ಚಿತ್ರದ ಹಿಂದಿ ರಿಮೇಕ್ ಹಕ್ಕುಗಳಿಗೆ ಸಂಬಂಧಿಸಿದ ಒಪ್ಪಂದಗಳಿಂದ ಈ ವಿವಾದ ಆರಂಭವಾಗಿತ್ತು. 2013ರ ಡಿಸೆಂಬರ್ನಲ್ಲಿ ಮೂಲ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ವೈಡ್ ಆಂಗಲ್ ಕ್ರಿಯೇಷನ್ಸ್ ಸಂಸ್ಥೆಗೆ ಹಿಂದಿ ಸೇರಿದಂತೆ ಉತ್ತರ ಭಾರತದ ಇತರ ಭಾಷೆಗಳಲ್ಲಿ ಚಿತ್ರದ ರಿಮೇಕ್, ಡಬ್ಬಿಂಗ್ ಹಾಗೂ ರೂಪಾಂತರ ಮಾಡುವ ವಿಶೇಷ ಹಕ್ಕುಗಳನ್ನು ನೀಡಿದ್ದರು.
ನಂತರ 2014ರ ಜೂನ್ನಲ್ಲಿ ವೈಡ್ ಆಂಗಲ್ ಕ್ರಿಯೇಷನ್ಸ್ ಸಂಸ್ಥೆಯು ರಾಜ್ಕುಮಾರ್ ಥಿಯೇಟರ್ಸ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದ ಪ್ರಕಾರ ಹಿಂದಿ ರಿಮೇಕ್ ಚಿತ್ರದ ಜಂಟಿ ಅಭಿವೃದ್ಧಿ ಹಾಗೂ ವಾಣಿಜ್ಯ ಬಳಕೆಗೆ ಸಂಬಂಧಿಸಿದ ಹಕ್ಕುಗಳನ್ನು ಹಂಚಿಕೊಳ್ಳಲಾಗಿತ್ತು. ಈ ಒಪ್ಪಂದಗಳ ಆಧಾರದ ಮೇಲೆ ಮುಂದಿನ ಹಿಂದಿ ರೂಪಾಂತರಗಳಾದ ‘ದೃಶ್ಯಂ 3’ ಸೇರಿದಂತೆ ಚಿತ್ರಗಳ ಮೇಲೂ ತಮಗೆ ಹಕ್ಕುಗಳಿವೆ ಎಂದು ರಾಜ್ಕುಮಾರ್ ಥಿಯೇಟರ್ಸ್ ವಾದಿಸಿತ್ತು.
ಆದರೆ, ಹಿಂದಿ ಚಿತ್ರದ ನಿರ್ಮಾಪಕರು ಈ ವಾದವನ್ನು ತಳ್ಳಿಹಾಕಿದ್ದಾರೆ. ‘ದೃಶ್ಯಂ: ದಿ ಕನ್ಕ್ಲೂಷನ್’ ಹಿಂದಿನ ಒಪ್ಪಂದಗಳ ವ್ಯಾಪ್ತಿಗೆ ಬರುವ ರಿಮೇಕ್ ಅಥವಾ ಮುಂದುವರಿದ ಭಾಗವಲ್ಲ. ಇದು ಸ್ವತಂತ್ರ ರೂಪಾಂತರವಾಗಿದೆ ಎಂದು ಪ್ರತಿಪಾದಿಸಿದ್ದರು. 2013ರಿಂದ 2025ರ ಅವಧಿಯಲ್ಲಿ ಮಾಡಿಕೊಳ್ಳಲಾಗಿದ್ದ ನಾಲ್ಕು ಒಪ್ಪಂದಗಳನ್ನು ನ್ಯಾಯಾಲಯ ಪರಿಶೀಲಿಸಿದೆ.
ಈ ಒಪ್ಪಂದಗಳ ಪ್ರಕಾರ ರಾಜ್ಕುಮಾರ್ ಥಿಯೇಟರ್ಸ್ ಸಂಸ್ಥೆಗೆ ಮೂಲ ಚಿತ್ರದ ಹಿಂದಿ ರಿಮೇಕ್ಗೆ ಸಂಬಂಧಿಸಿದ ವಾಣಿಜ್ಯ ಬಳಕೆಯ ಹಕ್ಕುಗಳು ಮಾತ್ರ ಲಭಿಸಿವೆ. ಆದರೆ, ಮೂಲ ಸೃಷ್ಟಿಕರ್ತರ ಬಳಿ ಇರುವ ಸಂಪೂರ್ಣ ಕಾಪಿರೈಟ್ ಹಕ್ಕುಗಳು ಸಂಸ್ಥೆಗೆ ವರ್ಗಾವಣೆಯಾಗಿಲ್ಲ ಎಂದು ನ್ಯಾಯಾಲಯ ತಿಳಿಸಿದೆ."ಪ್ರತಿವಾದಿ ನಿರ್ಮಾಪಕರ ಪರವಾಗಿ ರೂಪಾಂತರದ ಹಕ್ಕುಗಳನ್ನು ನೀಡುವುದನ್ನು ತಡೆಯಲು ಅರ್ಜಿದಾರರು ಅಥವಾ ದೂರುದಾರರು ಯಾವ ಅಸ್ತಿತ್ವದಲ್ಲಿರುವ ಹಕ್ಕನ್ನು ಹೊಂದಿದ್ದಾರೆ ಎಂಬುದನ್ನು ಪ್ರಾಥಮಿಕವಾಗಿ ಸಾಬೀತುಪಡಿಸಲು ವಿಫಲರಾಗಿದ್ದಾರೆ" ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರದ ನಿರ್ಮಾಪಕರು ತಮ್ಮ ಹಕ್ಕುಗಳನ್ನು ತಪ್ಪಿಸಲು ಉದ್ದೇಶಪೂರ್ವಕವಾಗಿ ಚಿತ್ರದ ಶೀರ್ಷಿಕೆಯಿಂದ ‘3’ ಎಂಬ ಸಂಖ್ಯೆಯನ್ನು ಕೈಬಿಟ್ಟಿದ್ದಾರೆ ಎಂಬ ರಾಜ್ಕುಮಾರ್ ಥಿಯೇಟರ್ಸ್ ವಾದವನ್ನೂ ನ್ಯಾಯಾಲಯ ತಿರಸ್ಕರಿಸಿದೆ.
ಇದನ್ನೂ ಓದಿ: Bigg Boss Kannada 13: ಗಂಡಸರ ಹಾಗೆ ನಡೆದುಕೋ; ಜಗ್ಗುಗೆ ಮಂಜು ಅವಾಜ್
ಅಲ್ಲದೆ, ಬಿಡುಗಡೆಯಾದ ಚಿತ್ರವು ತಮ್ಮ ಹಕ್ಕುಗಳನ್ನು ಯಾವ ರೀತಿಯಲ್ಲಿ ಉಲ್ಲಂಘಿಸಿದೆ ಎಂಬುದನ್ನು ರಾಜ್ಕುಮಾರ್ ಥಿಯೇಟರ್ಸ್ ಸ್ಪಷ್ಟವಾಗಿ ವಿವರಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.ಈ ಎಲ್ಲ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯವು ರಾಜ್ಕುಮಾರ್ ಥಿಯೇಟರ್ಸ್ ಸಲ್ಲಿಸಿದ್ದ ಮಧ್ಯಂತರ ತಡೆಯಾಜ್ಞೆ ಅರ್ಜಿಯನ್ನು ವಜಾಗೊಳಿಸಿದೆ.ಈ ಪ್ರಕರಣದಲ್ಲಿ ರಾಜ್ಕುಮಾರ್ ಥಿಯೇಟರ್ಸ್ ಪರ ಹಿರಿಯ ವಕೀಲ ಕೆ. ರವಿ ವಾದ ಮಂಡಿಸಿದ್ದರು. ಅವರಿಗೆ ರುಗನ್ ಅಂಡ್ ಆರ್ಯ ಸಂಸ್ಥೆಯ ವಕೀಲ ಆರ್. ಮುರುಗನ್ ಸಹಕಾರ ನೀಡಿದ್ದರು.