ಕಾನ್ಸ್ ಸಿನಿಮೋತ್ಸವದಲ್ಲಿ ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ʻಬಾಲನ್ ದಿ ಬಾಯ್ಸ್ʼ ಪ್ರದರ್ಶನ; ಇದು 'ಮಂಜುಮ್ಮೆಲ್ ಬಾಯ್ಸ್' ನಿರ್ದೇಶಕರ ಸಿನಿಮಾ
'ಕೆವಿಎನ್ ಪ್ರೊಡಕ್ಷನ್ಸ್' ಸಂಸ್ಥೆಯು 79ನೇ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಈ ನಿರ್ಮಾಣ ಸಂಸ್ಥೆಯ ಮಲಯಾಳಂ ಚಿತ್ರ 'ಬಾಲನ್ ದಿ ಬಾಯ್' ಪ್ರತಿಷ್ಠಿತ ಕಾನ್ಸ್ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ. ಯಶ್ ಅವರ 'ಟಾಕ್ಸಿಕ್' ಸೇರಿದಂತೆ ಸಾಲು ಸಾಲು ಪ್ಯಾನ್-ಇಂಡಿಯಾ ಚಿತ್ರಗಳ ಮೂಲಕ ಕೆವಿಎನ್ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
-
ದಕ್ಷಿಣ ಭಾರತದ ಚಿತ್ರರಂಗದಲ್ಲಿ 'ಕೆವಿಎನ್ ಪ್ರೊಡಕ್ಷನ್ಸ್' (KVN Productions) ಹೊಸ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಬೃಹತ್ ಬಜೆಟ್‌ನ ಚಿತ್ರಗಳಿಗೆ ಹೆಸರಾಗಿರುವ ಈ ಸಂಸ್ಥೆ, ಈಗ ತನ್ನ ಜನಪ್ರಿಯತೆಯನ್ನು ವಿಶ್ವದ ಅತ್ಯಂತ ಪ್ರತಿಷ್ಠಿತ ವೇದಿಕೆಯಾದ 'ಕಾನ್ಸ್ ಚಲನಚಿತ್ರೋತ್ಸವ'ಕ್ಕೆ (Cannes Film Festival) ಕೊಂಡೊಯ್ಯುವ ಮೂಲಕ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ.
ವೆಂಕಟ್ ಕೆ. ನಾರಾಯಣ್ ಅವರ ಒಡೆತನದ 'ಕೆವಿಎನ್ ಪ್ರೊಡಕ್ಷನ್ಸ್' ಸಂಸ್ಥೆಯು ನೂರಾರು ಕೋಟಿ ರೂಪಾಯಿಗಳನ್ನು ಹೂಡಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಿನಿಮಾಗಳನ್ನು ನಿರ್ಮಿಸುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಬ್ಯಾನರ್‌ನ 'ಕೆಡಿ' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಕೇವಲ ಕನ್ನಡಕ್ಕೆ ಸೀಮಿತವಾಗದೇ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲೂ ಕೆವಿಎನ್ ತನ್ನ ಪ್ರಭಾವವನ್ನು ವಿಸ್ತರಿಸಿದೆ. ಮಲಯಾಳಂ ಚಿತ್ರರಂಗಕ್ಕೆ ಅಧಿಕೃತವಾಗಿ ಕಾಲಿಟ್ಟಿರುವ ಈ ಸಂಸ್ಥೆ, ಅಲ್ಲಿ 'ಬಾಲನ್ ದಿ ಬಾಯ್' ಎಂಬ ಸಿನಿಮಾವನ್ನು ನಿರ್ಮಿಸಿದ್ದು, ಈ ಚಿತ್ರವೇ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಕಾನ್ಸ್ ವೇದಿಕೆಯಲ್ಲಿ 'ಬಾಲನ್ ದಿ ಬಾಯ್'
ಮೇ 14ರಂದು ಅದ್ಧೂರಿಯಾಗಿ ಆರಂಭವಾಗಲಿರುವ ಕಾನ್ಸ್ ಸಿನಿಮೋತ್ಸವದಲ್ಲಿ ವಿಶ್ವದ ಮೂಲೆ ಮೂಲೆಗಳಿಂದ ಸಿನಿಮಾ ಕಲಾವಿದರು ಮತ್ತು ತಂತ್ರಜ್ಞರು ಭಾಗವಹಿಸಲಿದ್ದಾರೆ. ಈ ವೇದಿಕೆಯಲ್ಲಿ ಕೆವಿಎನ್ ನಿರ್ಮಾಣದ 'ಬಾಲನ್ ದಿ ಬಾಯ್' ಸಿನಿಮಾ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ. ಈ ಚಿತ್ರಕ್ಕೆ 'ಮಂಜುಮ್ಮೆಲ್ ಬಾಯ್ಸ್' ಖ್ಯಾತಿಯ ಚಿದಂಬರಂ ಅವರು ಆಕ್ಷನ್ ಕಟ್ ಹೇಳಿದ್ದು, ಹಾಗಾಗಿ ಚಿತ್ರದ ಮೇಲೆ ಸಹಜವಾಗಿಯೇ ಭಾರಿ ನಿರೀಕ್ಷೆಗಳಿವೆ.
ಸಾಲು ಸಾಲು ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್
ಕೆವಿಎನ್ ಪ್ರೊಡಕ್ಷನ್ಸ್ ಕೇವಲ ಸಿನಿಮಾ ನಿರ್ಮಾಣಕ್ಕಷ್ಟೇ ಸೀಮಿತವಾಗಿಲ್ಲ, ಸಿನಿಮಾಗಳನ್ನು ದೊಡ್ಡ ಮಟ್ಟದಲ್ಲಿ ಮಾರ್ಕೆಟಿಂಗ್ ಮಾಡುವ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತೀಯ ಕಥೆಗಳನ್ನು ಪ್ರಸ್ತುತಪಡಿಸುವ ಕಲೆಯನ್ನೂ ಕರಗತ ಮಾಡಿಕೊಳ್ಳುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಜಾಗತಿಕ ವಿತರಣೆಗೆ ಮುಂದಾಗಿರುವುದೇ ಇದಕ್ಕೊಂದು ಸಾಕ್ಷಿ.
KVN Productions: ಟಾಲಿವುಡ್‌ಗೆ ಕಾಲಿಟ್ಟ ಕೆವಿಎನ್ ಪ್ರೊಡಕ್ಷನ್ಸ್; ಚಿರಂಜೀವಿ ನಟನೆಯ ಚಿತ್ರ ನಿರ್ಮಾಣ
ಕಾನ್ಸ್‌ನಂತಹ ವೇದಿಕೆಯಲ್ಲಿ ಪ್ರಾದೇಶಿಕ ಭಾಷೆಯ ಸಿನಿಮಾವನ್ನು ಪ್ರದರ್ಶಿಸುವ ಮೂಲಕ, ಕೆವಿಎನ್ ಸಂಸ್ಥೆಯು ಭಾರತೀಯ ಸಿನಿಮಾ ರಂಗದ ಗಡಿಯನ್ನು ವಿಸ್ತರಿಸುತ್ತಿದೆ. ಇದು ಕೇವಲ ಮಲಯಾಳಂ ಚಿತ್ರರಂಗಕ್ಕೆ ಮಾತ್ರವಲ್ಲದೆ, ಇಂತಹ ಪ್ರತಿಭೆಗಳನ್ನು ಬೆನ್ನುತಟ್ಟುತ್ತಿರುವ ಕನ್ನಡಿಗ ವೆಂಕಟ್ ಕೆ. ನಾರಾಯಣ್ ಮತ್ತು ಅವರ ಕೆವಿಎನ್ ಪ್ರೊಡಕ್ಷನ್ಸ್‌ಗೆ ಸಂದ ಗೌರವವಾಗಿದೆ.
'ಬಾಲನ್ ದಿ ಬಾಯ್' ಸಿನಿಮಾ ಕುರಿತು ಕೆವಿಎನ್ ಟ್ವೀಟ್
Taking Balan The Boy to the world stage. The film will be showcased with a Market Screening at the Marché du Film during the Cannes Film Festival on the 14th May.#BalanTheBoy #Cannes2026 #MarcheDuFilm@KvnProductions @thespianfilms_ @ShailajaD #SatishFenn @SUPRITH_87… pic.twitter.com/mI3Ow8GFP3
— KVN Productions (@KvnProductions) May 3, 2026
ಕೆವಿಎನ್ ಪ್ರೊಡಕ್ಷನ್ಸ್ ಸದ್ಯ ದಕ್ಷಿಣ ಭಾರತದ ಅತ್ಯಂತ ಬ್ಯುಸಿ ನಿರ್ಮಾಣ ಸಂಸ್ಥೆಯಾಗಿದ್ದು, ಈ ಬ್ಯಾನರ್‌ನ ಮುಂದಿನ ಸಿನಿಮಾಗಳ ಲಿಸ್ಟ್ ಇಲ್ಲಿದೆ.
* ದಳಪತಿ ವಿಜಯ್ - 'ಜನ ನಾಯಗನ್'
* ರಾಕಿಂಗ್ ಸ್ಟಾರ್ ಯಶ್ - 'ಟಾಕ್ಸಿಕ್'
* ಅಕ್ಷಯ್ ಕುಮಾರ್ - 'ಹೈವಾನ್'
* ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರ ಮುಂದಿನ ಪ್ರಾಜೆಕ್ಟ್
* ರಾಜ್ ಬಿ. ಶೆಟ್ಟಿ ಹೊಸ ಸಿನಿಮಾಗೆ ಕೆವಿಎನ್ ಸಾಥ್
* 'ಮಂಜುಮ್ಮೆಲ್ ಬಾಯ್ಸ್' ಖ್ಯಾತಿಯ ಚಿದಂಬರಂ ನಿರ್ದೇಶನದ 'ಬಾಲನ್ ದಿ ಬಾಯ್'