ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಕುಸಿದು ಬೀಳುವ 5 ನಿಮಿಷ ಮುಂಚೆಯೂ ಉಲ್ಲಾಸ್ ಎನರ್ಜೆಟಿಕ್ ಆಗಿಯೇ ಇದ್ದʼ; ನಿರ್ಮಾಪಕ ಭಾ. ಮಾ. ಹರೀಶ್‌ ಪುತ್ರನ ಕೊನೇ ಕ್ಷಣಗಳ ಮಾಹಿತಿ ನೀಡಿದ ಸ್ನೇಹಿತ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ. ಮಾ. ಹರೀಶ್ ಅವರ ಪುತ್ರ ಉಲ್ಲಾಸ್ (ಜೂನ್ 27) ಶಿವಮೊಗ್ಗದ ಕೊಡಚಾದ್ರಿ ಬೆಟ್ಟದಲ್ಲಿ ಟ್ರೆಕ್ಕಿಂಗ್ ಮುಗಿಸಿ ಮರಳುವಾಗ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮುಂಬರುವ ಡಿಸೆಂಬರ್‌ನಲ್ಲಿ ಮದುವೆ ನಿಶ್ಚಯವಾಗಿದ್ದ ಉಲ್ಲಾಸ್, ಕುಸಿಯುವ ಐದು ನಿಮಿಷ ಮುಂಚೆಯೂ ಚುರುಕಾಗಿದ್ದರು ಎಂದು ಸ್ನೇಹಿತರು ತಿಳಿಸಿದ್ದಾರೆ.

ನಿರ್ಮಾಪಕ ಭಾ. ಮಾ. ಹರೀಶ್‌ ಮಗ ಉಲ್ಲಾಸ್‌ಗೆ ಕೊಡಚಾದ್ರಿಯಲ್ಲಿ ಆಗಿದ್ದೇನು?

-

Avinash GR
Avinash GR Jun 28, 2026 7:16 PM

ನಿರ್ಮಾಪಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ. ಮಾ. ಹರೀಶ್‌ ಅವರ ಪುತ್ರ ಉಲ್ಲಾಸ್‌ ಅವರು ಶನಿವಾರ (ಜೂನ್‌ 27) ಶಿವಮೊಗ್ಗದ ಕೊಡಚಾದ್ರಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸ್ನೇಹಿತರ ಜೊತೆ ಟ್ರೆಕ್ಕಿಂಗ್‌ ಹೋಗಿದ್ದ ಉಲ್ಲಾಸ್‌ಗೆ ಕೊನೇ ಕ್ಷಣದಲ್ಲಿ ಏನಾಯಿತು? ಅವರ ಆಪ್ತ ಸ್ನೇಹಿತರು ಕೊಡಚಾದ್ರಿಯಲ್ಲಿ ಉಲ್ಲಾಸ್‌ಗೆ ಏನಾಯಿತು ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಡೀಹೈಡ್ರೇಷನ್‌ನಿಂದ ಸುಸ್ತಾಗಿರಬಹುದು ಅಂತ ಭಾವಿಸಿದ್ದೆವು

"ಉಲ್ಲಾಸ್ ಟ್ರೆಕ್ಕಿಂಗ್ ಹೋಗಬೇಕು ಎಂದು ಹೇಳಿದ್ದರಿಂದ, ನಾವು ಟ್ರಿಪ್‌ ಪ್ಲ್ಯಾನ್‌ ಮಾಡಿ, ಪ್ಯಾಕೇಜ್‌ನಲ್ಲಿ ಹೋಗಿದ್ದೆವು. ಬೆಳಗ್ಗೆ ಕೊಡಚಾದ್ರಿ ತಲುಪಿ, ಮುಖ ತೊಳೆದು ಸಿದ್ಧರಾಗಿ ಬೆಟ್ಟ ಹತ್ತಲು ಜೀಪ್‌ನಲ್ಲಿ ಮೇಲೆ ಹೋದೆವು. ಬೆಟ್ಟ ಹತ್ತುವುದನ್ನು ಮುಗಿಸಿಕೊಂಡು ಹಿಂತಿರುಗಿ ಕೆಳಗೆ ಬಂದಿದ್ದೆವು. ಉಲ್ಲಾಸ್‌ ತಕ್ಷಣವೇ 'ಬಹಳ ಸುಸ್ತಾಗುತ್ತಿದೆ' ಎಂದು ಹೇಳಿ ಕುಳಿತುಕೊಂಡವನೇ, ಹಾಗೇ ಪ್ರಜ್ಞೆ ತಪ್ಪಿ ಬಿದ್ದ. ಮೊದಲಿಗೆ ಡೀಹೈಡ್ರೇಷನ್‌ನಿಂದ ಸುಸ್ತಾಗಿರಬಹುದು ಎಂದು ಭಾವಿಸಿ, ತಕ್ಷಣವೇ ಮುಖಕ್ಕೆ ನೀರು ಚಿಮುಕಿಸಿದೆ. ಆದರೆ ಆತ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆಗ ಸಮಯ ವ್ಯರ್ಥ ಮಾಡದೆ, ಸ್ಥಳೀಯರ ಸಹಾಯ ಪಡೆದು, ಆಂಬುಲೆನ್ಸ್‌ಗೆ ಕರೆಮಾಡಿ ಅಲ್ಲಿಂದ ಆಸ್ಪತ್ರೆಗೆ ಹೊರಟೆವು" ಎಂದು ಉಲ್ಲಾಸ್‌ ಆಪ್ತ ಗೆಳೆಯ ತಿಳಿಸಿದ್ದಾರೆ.

ನಿರ್ಮಾಪಕ ಭಾ.ಮಾ. ಹರೀಶ್‌ ಪುತ್ರ ಹೃದಯಾಘಾತದಿಂದ ನಿಧನ; ಟ್ರೆಕ್ಕಿಂಗ್‌ ವೇಳೆ ಕೊಡಚಾದ್ರಿಯಲ್ಲಿ ಅವಘಡ

ಉಲ್ಲಾಸ್‌ಗೆ ಟ್ರೆಕ್ಕಿಂಗ್‌ ಹೊಸದೇನಲ್ಲ

"ಅಲ್ಲಿ ಆ ರೀತಿಯ ಘಟನೆ ನಡೆದಾಗ, ನಾವು ಯಾರಾದರೂ ವೈದ್ಯರಿದ್ದಾರಾ? ನಮಗೆ ತುರ್ತು ಪರಿಸ್ಥಿತಿ ಇದೆ ಎಂದು ಜೋರಾಗಿ ಕೂಗಾಡಿದ್ದೆವು. ಆಗ ಯಾರೋ ಒಬ್ಬರು ಸ್ಥಳೀಯ ವೈದ್ಯರು ಬಂದು ನಮಗೆ ಸಹಾಯ ಮಾಡಿದರು. ಆಸ್ಪತ್ರೆಗೆ ತಲುಪುವವರೆಗೂ ಅವರು ಕೃತಕ ಉಸಿರಾಟದ ಪ್ರಕ್ರಿಯೆಯನ್ನು (ಸಿಪಿಆರ್) ಮಾಡುತ್ತಲೇ ಬಂದರು. ಅಲ್ಲಿಯವರೆಗೂ ಸ್ವಲ್ಪ ಪಲ್ಸ್ ರೇಟ್ ಇತ್ತು. ಆದರೆ ಆಸ್ಪತ್ರೆಗೆ ತಲುಪಿದಾಗ, ವೈದ್ಯರು ಜೀವ ಹೋಗಿದೆ ಎಂದರು. ಉಲ್ಲಾಸ್‌ಗೆ ಟ್ರೆಕ್ಕಿಂಗ್‌ ಹೊಸದೇನಲ್ಲ, ಆತ ತುಂಬಾ ಟ್ರೆಕ್ಕಿಂಗ್‌ ಮಾಡುತ್ತಿದ್ದ. ಅವನಿಗೆ ಬೆಟ್ಟ ಹತ್ತುವುದೆಂದರೆ ಹುಚ್ಚು ಆಸೆ. ನಿಯಮಿತವಾಗಿ ಟ್ರೆಕ್ಕಿಂಗ್‌ಗೆ ಹೋಗುತ್ತಿದ್ದ. ಈ ಘಟನೆ ನಡೆಯುವ 5 ನಿಮಿಷ ಮುಂಚೆಯೂ ಆತ ಪೂರ್ಣ ಎನರ್ಜೆಟಿಕ್ ಆಗಿಯೇ ಇದ್ದ. ಕೇವಲ ಒಂದೆರಡು ನಿಮಿಷಗಳಲ್ಲಿ ಇದೆಲ್ಲವೂ ನಡೆದುಹೋಯಿತು" ಎಂದು ಉಲ್ಲಾಸ್ ಜೊತೆಯಲ್ಲಿದ್ದ ಆಪ್ತ ಗೆಳೆಯ ಭಾವುಕರಾಗಿದ್ದಾರೆ.

ಉಲ್ಲಾಸ್‌ ತುಂಬಾ ಒಳ್ಳೆಯ ಹುಡುಗ

"ಟ್ರೆಕ್ಕಿಂಗ್‌ ಎಲ್ಲಾ ಹೋಗಬೇಡಪ್ಪ ಎಂದು ಒಂದೆರಡು ಬಾರಿ ಹೇಳಿದ್ದೆವು. ಆದರೆ ಆತ ಒಬ್ಬೊಬ್ಬನೇ ಹೋಗುತ್ತಿದ್ದ. ಅವನಿಗೆ ಬೆಟ್ಟ ಹತ್ತುವುದೆಂದರೆ ತುಂಬಾ ಇಷ್ಟವಿತ್ತು. ಹಾಗೆಯೇ ಶಿವಮೊಗ್ಗದ ಕೊಡಚಾದ್ರಿಗೆ ಹೋಗಿದ್ದ. ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ನಾಲಿಗೆ ಹೊರಗೆ ಬಂದು, ಬಾಯಿಯಿಂದ ನೊರೆ ಬಂದಿತ್ತಂತೆ. ಅಲ್ಲಿದ್ದ ಸ್ಥಳೀಯರು ಜೀಪ್‌ನಲ್ಲಿ ಕರೆದುಕೊಂಡು ಬಂದು, ಹೊಸನಗರದ ಆಸ್ಪತ್ರೆಗೆ ತಲುಪಿಸುವಷ್ಟರಲ್ಲೇ ಪ್ರಾಣ ಹೋಗಿಬಿಟ್ಟಿದೆ. ಅವನಿಗೆ ಯಾವುದೇ ಆರೋಗ್ಯದ ಸಮಸ್ಯೆ ಇರಲಿಲ್ಲ. ಮುಂಬರುವ ಡಿಸೆಂಬರ್‌ನಲ್ಲಿ ಅವನ ಮದುವೆ ಇತ್ತು. ಆಗಸ್ಟ್‌ನಲ್ಲಿ ನಿಶ್ಚಿತಾರ್ಥವಿತ್ತು. ಏನೇನೋ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಅವನು ಯಾರಿಗೂ ಯಾವತ್ತೂ ಕೆಟ್ಟದ್ದನ್ನು ಮಾಡಿಲ್ಲ, ತುಂಬಾ ಒಳ್ಳೆಯ ಹುಡುಗ" ಎಂದು ಉಲ್ಲಾಸ್ ಅವರ ಚಿಕ್ಕಪ್ಪ ಭಾ.ಮಾ. ಗಿರೀಶ್ ಕಣ್ಣೀರಿಟ್ಟಿದ್ದಾರೆ. ಇಂದು ಬೆಂಗಳೂರಿನಲ್ಲಿ ಉಲ್ಲಾಸ್‌ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ.