ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಂತ್ರಾಲಯದಲ್ಲಿ ಅದ್ದೂರಿಯಾಗಿ ರಿಲೀಸ್‌ ಆಯ್ತು 'ರಾಯರ ದರ್ಶನ' ಆಲ್ಬಂ ಸಾಂಗ್; ಶ್ರೀಸುಬುಧೇಂದ್ರ ತೀರ್ಥರಿಗೆ ಟಿಎನ್ಐಟಿ ಪ್ರಶಸ್ತಿ ಪ್ರದಾನ

ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಭಕ್ತಿಪ್ರಧಾನ 'ರಾಯರ ದರ್ಶನ' ಆಲ್ಬಂ ಸಾಂಗ್ ಅನ್ನು ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಅದ್ದೂರಿಯಾಗಿ ಲೋಕಾರ್ಪಣೆಗೊಳಿಸಿದರು. ರಘು ಭಟ್ ನಿರ್ದೇಶನ ಹಾಗೂ ಅಜನೀಶ್ ಲೋಕನಾಥ್ ಸಂಗೀತವಿರುವ ಈ ವಿಡಿಯೋ ಗೀತೆಯಲ್ಲಿ ಮಠದ ವರ್ಷಪೂರ್ತಿಯ ಧಾರ್ಮಿಕ ಉತ್ಸವಗಳನ್ನು ನೈಜವಾಗಿ ಚಿತ್ರಿಸಲಾಗಿದೆ.

ಮಂತ್ರಾಲಯದಲ್ಲಿ ಅದ್ದೂರಿಯಾಗಿ ರಿಲೀಸ್‌ ಆಯ್ತು 'ರಾಯರ ದರ್ಶನ' ಆಲ್ಬಂ ಸಾಂಗ್

-

Avinash GR
Avinash GR Jun 28, 2026 8:39 PM

ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಸಹಯೋಗದಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ಅಕಾಡೆಮಿ (ಟಿ.ಎನ್.ಐ.ಟಿ) ಅರ್ಪಿಸುವ ಭಕ್ತಿಪ್ರಧಾನ 'ರಾಯರ ದರ್ಶನ' ಆಲ್ಬಂ ಸಾಂಗ್ ಇತ್ತೀಚೆಗೆ ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಅದ್ದೂರಿಯಾಗಿ ಅನಾವರಣಗೊಂಡಿತು. ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಈ ವಿಶೇಷ ವಿಡಿಯೋ ಗೀತೆಯನ್ನು ಲೋಕಾರ್ಪಣೆಗೊಳಿಸಿ, ಆಶೀರ್ವಚನ ನೀಡಿದರು.

ಗುರುರಾಯರ ಅನುಗ್ರಹ ಸದಾ ಇರಲಿ

ಹಾಡು ಬಿಡುಗಡೆ ಮಾಡಿ ಮಾತನಾಡಿದ ಶ್ರೀಗಳು, "ಜಾತ್ಯತೀತವಾಗಿ ರಾಯರ ಭಕ್ತರೆಲ್ಲರ ಸಹಕಾರದಿಂದ ಈ ಆಲ್ಬಂ ಸಾಂಗ್ ಅತ್ಯಂತ ಸುಂದರವಾಗಿ ಮೂಡಿಬಂದಿದೆ. ರಘು ಭಟ್ ನಿರ್ದೇಶನದಲ್ಲಿ, ಸುಗುಣ ಭಟ್ ನಿರ್ಮಾಣದಲ್ಲಿ, ಅಜನೀಶ್ ಲೋಕನಾಥ್ ಸ್ವರ ಸಂಯೋಜನೆ ಹಾಗೂ ಅಬ್ಬಿ. ವಿ ಅವರ ಗಾಯನದಲ್ಲಿ ಮೂಡಿಬಂದಿರುವ ಈ ಆಲ್ಬಂನಲ್ಲಿ ಕೇವಲ ಗೀತೆಯನ್ನಷ್ಟೇ ತೋರಿಸದೆ, ಮಠದಲ್ಲಿ ಜರುಗುವ ನಿತ್ಯ ಪೂಜೆ, ದೈನಂದಿನ ಉತ್ಸವ ಹಾಗೂ ವಾರ್ಷಿಕ ಮಹೋತ್ಸವಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಈ ಕಾರ್ಯಕ್ಕೆ ಶ್ರಮಿಸಿದ ಪ್ರತಿಯೊಬ್ಬರಿಗೂ ಗುರುರಾಯರ ಅನುಗ್ರಹ ಸದಾ ಇರಲಿ" ಎಂದು ಹರಸಿದರು.

ʻರಾಯರ ದರ್ಶನʼ ಆಲ್ಬಂ ಸಾಂಗ್‌ಗೆ ಧ್ವನಿ ನೀಡಿದ ʻಬ್ರಹ್ಮಕಳಶʼ ಖ್ಯಾತಿಯ ಅಬ್ಬಿ; ಮಂತ್ರಾಲಯದಲ್ಲಿ ಬಿಡುಗಡೆಯಾಗಲಿರುವ ಹಾಡು

ಭಾರತದಲ್ಲೇ ಇದು ಮೊದಲ ಪ್ರಯತ್ನ

ಈ ಗೀತೆಯ ನಿರ್ದೇಶಕ ರಘು ಭಟ್‌ ಮಾತನಾಡಿ, "ಕಳೆದ ಎಂಟು ತಿಂಗಳ ನಿರಂತರ ಶ್ರಮದಿಂದ ಈ ಹಾಡನ್ನು ನೈಜತೆಗೆ ಅತ್ಯಂತ ಹತ್ತಿರವಾಗಿ ಚಿತ್ರೀಕರಿಸಲಾಗಿದೆ. ನನ್ನ ಜ್ಞಾನಕ್ಕೆ ತಿಳಿದಂತೆ, ಇಡೀ ಭಾರತದಲ್ಲೇ ಮಠವೊಂದರ ಕುರಿತಾಗಿ ಇಷ್ಟು ಸಮಗ್ರವಾದ ವಿಡಿಯೋ ಸಾಂಗ್ ಮಾಡಿರುವುದು ಇದೇ ಮೊದಲು. ಮಂತ್ರಾಲಯದಲ್ಲಿ ವರ್ಷಪೂರ್ತಿ ನಡೆಯುವ ಧಾರ್ಮಿಕ ಕೈಂಕರ್ಯಗಳನ್ನು ಇದರಲ್ಲಿ ಅಳವಡಿಸಲಾಗಿದೆ" ಎಂದು ಮಾಹಿತಿ ಹಂಚಿಕೊಂಡರು.

ಶ್ರೀಗಳಿಗೆ ಒಲಿದ ಪತ್ರಿಕೋದ್ಯಮ ಪ್ರಶಸ್ತಿ

"ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಟಿಎನ್ಐಟಿ ಮೀಡಿಯಾ ಅವಾರ್ಡ್ ನೀಡಲಾಗುತ್ತಿತ್ತು. ಆದರೆ ಈ ಬಾರಿ ಆಲ್ಬಂ ಬಿಡುಗಡೆ ಹಿನ್ನೆಲೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಸೆಪ್ಟೆಂಬರ್‌ಗೆ ಮುಂದೂಡಲಾಗಿದೆ. ಆದಾಗ್ಯೂ, ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಪೂರ್ವಾಶ್ರಮದಲ್ಲಿ ಪತ್ರಕರ್ತರಾಗಿದ್ದ ಹಿನ್ನೆಲೆಯಲ್ಲಿ, ಈ ವರ್ಷದ ಮೊದಲ 'ಟಿ.ಎನ್.ಐ.ಟಿ ಮೀಡಿಯಾ ಅವಾರ್ಡ್' ಅನ್ನು ಇದೇ ಮಂತ್ರಾಲಯದ ವೇದಿಕೆಯಲ್ಲಿ ಶ್ರೀಗಳಿಗೆ ನೀಡಿ ಗೌರವಿಸಲಾಗಿದೆ" ಎಂದು ರಘು ಭಟ್ ತಿಳಿಸಿದರು.

Mantralaya Kannada Row: ಮಂತ್ರಾಲಯದಲ್ಲಿ ಕನ್ನಡ ಭಾಷೆಯ ಬರಹಕ್ಕೆ ತೆಲುಗರ ವಿರೋಧ

ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್, ಹಿರಿಯ ನಟಿ ಗಿರಿಜಾ ಲೋಕೇಶ್, ಸಿ.ಆರ್. ಬಾಬಿ, ಪ್ರಾಜೆಕ್ಟ್‌ ಹೆಡ್ ಶ್ರೀನಿಧಿ ಕರಣಂ, ಗಾಯಕ ಅಬ್ಬಿ ವಿ, ನಿರ್ಮಾಪಕಿ ಸುಗುಣ ರಘು, ಶ್ರೀಶ ಜೋಯಿಸ್ ಮತ್ತು ಛಾಯಾಗ್ರಾಹಕ ನಾಗೇಶ್ ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಇನ್ನು, ಈ ಸಮಾರಂಭಕ್ಕೆ ಹಿರಿಯ ಸಂಪಾದಕ ರವಿ ಹೆಗಡೆ, ಹಿರಿಯ ನಟರಾದ ಶ್ರೀನಾಥ್, ಮುಖ್ಯಮಂತ್ರಿ ಚಂದ್ರು, ʻನೆನಪಿರಲಿʼ ಪ್ರೇಮ್, ನಟಿಯರಾದ ತಾರಾ ಅನುರಾಧ, ಸುಧಾರಾಣಿ, ಮಾನ್ವಿತಾ ಹರೀಶ್, ಭಾವನಾ ರಾವ್ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು.