ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bidadi Township: ಬಿಡದಿ ಟೌನ್‌ಶಿಪ್‌ ಬಿಕ್ಕಟ್ಟು; ಸಿಎಂ ಜತೆ ಚರ್ಚೆಗೆ ನಾನು ಈಗಲೂ ಸಿದ್ಧ ಎಂದ ಎಚ್.ಡಿ.ಕುಮಾರಸ್ವಾಮಿ

ರೈತರ ಹಿತಕ್ಕಿಂತ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚು ಆಸಕ್ತಿ ಇದೆ ಎನ್ನುವುದು ಎಲ್ಲರಿಗೂ ಗೊತ್ತು. ನಾಲ್ಕು ಗೋಡೆಗಳ ನಡುವೆ ಕೂತು ಭೂಮಿ ಕಳೆದುಕೊಳ್ಳುತ್ತಿರುವ ರೈತರನ್ನು ಹೊರಗಿಟ್ಟು ಸಭೆ ನಡೆಸುವ ಅಗತ್ಯ ಇಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಸಿಎಂ ಜತೆ ಚರ್ಚೆಗೆ ನಾನು ಈಗಲೂ ಸಿದ್ಧ ಎಂದ ಎಚ್.ಡಿ.ಕುಮಾರಸ್ವಾಮಿ

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ. -

Prabhakara R
Prabhakara R Jun 28, 2026 9:03 PM

ಬೆಂಗಳೂರು, ಜೂನ್ 28: ರೈತರ ಸಮ್ಮುಖದಲ್ಲಿ ಕೂತು ಬಿಡದಿ ಬಿಕ್ಕಟ್ಟಿನ (Bidadi Township) ಬಗ್ಗೆ ಚರ್ಚೆ ನಡೆಸಲು ನಾನು ಈಗಲೂ ತಯಾರಿದ್ದೇನೆ. ಮುಖ್ಯಮಂತ್ರಿಗಳು ಬಂದರೆ ನಾನು ಕೂಡ ಬರುತ್ತೇನೆ ಎಂದು ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು. ಪಕ್ಷದ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು, ನಾನು ಬಿಡದಿ ರೈತರ ಕಷ್ಟದ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದೆ. ಅದಕ್ಕೆ ಅವರು ಈವರೆಗೂ ಉತ್ತರ ನೀಡಿಲ್ಲ. ರೈತರ ನಡುವೆ ಕೂತು ಚರ್ಚೆ ಮಾಡೋಣ ಬನ್ನಿ ಎಂದು ಕರೆದರೆ ಅವರು ಬರಲೇ ಇಲ್ಲ ಎಂದರು.

ನಾನು ಈಗಲೂ ಸಿದ್ಧನಿದ್ದೇನೆ, ಬಿಡದಿ ಸಮಸ್ಯೆಯ ಬಗ್ಗೆ ಅಲ್ಲಿಗೆ ಹೋಗಿ ರೈತರ ನಡುವೆ ಕೂತು ಚರ್ಚಿಸಬೇಕು. ಅದನ್ನು ಮಾಡುವುದು ಬಿಟ್ಟು ಬಿಡದಿ ಭಾಗಕ್ಕೆ ಸಂಬಂಧ ಇಲ್ಲದವರನ್ನು ಹೊರಗಿನಿಂದ ಕರೆದುಕೊಂಡು ಬಂದು ಪ್ರತಿಭಟನೆ ಮಾಡಿಸುತ್ತಿದ್ದಾರೆ. ರೈತರ ಸಮ್ಮುಖದಲ್ಲಿ ನಾನು ಈಗಲೂ ಚರ್ಚೆಗೆ ಸಿದ್ಧನಿದ್ದೇನೆ ಎಂದು ಕೇಂದ್ರ ಸಚಿವರು ಹೇಳಿದರು.

ರೈತರ ಹಿತಕ್ಕಿಂತ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅವರಿಗೆ ಹೆಚ್ಚು ಆಸಕ್ತಿ ಇದೆ ಎನ್ನುವುದು ಎಲ್ಲರಿಗೂ ಗೊತ್ತು. ನಾಲ್ಕು ಗೋಡೆಗಳ ನಡುವೆ ಕೂತು ಭೂಮಿ ಕಳೆದುಕೊಳ್ಳುತ್ತಿರುವ ರೈತರನ್ನು ಹೊರಗಿಟ್ಟು ಸಭೆ ನಡೆಸುವ ಅಗತ್ಯ ಇಲ್ಲ. ಅಂತಹ ಸಭೆಗಳಿಂದ ಯಾವುದೇ ಉಪಯೋಗ ಇಲ್ಲ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಕಾನೂನು ಹೋರಾಟ ನಡೆಸುವುದು ಶತಸಿದ್ಧ. ನಮ್ಮ ಪಕ್ಷ ರೈತರ ಜೊತೆ ನಿಲ್ಲುತ್ತದೆ. 475 ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ಅಂತಿಮವಾಗಿ ನ್ಯಾಯಾಲಯದಲ್ಲೆ ತೀರ್ಮಾನ ಆಗಬೇಕಾಗಿದೆ. ಸರಕಾರ ಅಲ್ಲಿನ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದೆ. ಪ್ರತಿಷ್ಠೆ ಇಟ್ಟುಕೊಂಡು ಹೊರಟಿದ್ದಾರೆ. ಸಾವಿರಾರು ಕೋಟಿ ಅಕ್ರಮಕ್ಕೆ ಬಾಗಿಲು ತೆರದಿದ್ದಾರೆ. ಯೋಜನೆ ಹೆಸರಿನಲ್ಲಿ ಲೂಟಿ ಹೊಡೆಯಲು ಹೊರಟಿದ್ದಾರೆ ಎಂದು ಸಚಿವರು ಆರೋಪಿಸಿದರು.

ನಾನು ಮುಖ್ಯಮಂತ್ರಿ ಆಗಿದ್ದಕ್ಕೆ ಕೆಲವರು ಕೈ ಕೈ ಹಿಚುಕಿಕೊಳ್ಳುತ್ತಿದ್ದಾರೆ ಎಂದು ಡಿಕೆಶಿ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಕೇವಲ ಕೈ ಕೈ ಹಿಚುಕಿಕೊಳ್ಳೋದಾ? ಹೊಟ್ಟೆ ಹಿಚುಕಿಕೊಳ್ಳೋದಿಲ್ವಾ? ನಾನು ಕೂಡ ಸಿಎಂ ಕುರ್ಚಿ ನೋಡಿದ್ದೇನೆ. ಅಕ್ಬರ್ ಬೀರಬಲ್ ಕತೆ ಬೇಡ, ರಾಜ್ಯದ ಜನರ ಕತೆ ಏನು ಎಂಬುದನ್ನು ಇವರು ಕೇಳಿಕೊಳ್ಳಬೇಕು. ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಬಗ್ಗೆ, ಅವರ ಕಷ್ಟಗಳ ಪರಿಹಾರದ ಬಗ್ಗೆ ಮಾತನಾಡಬೇಕು ಎಂದು ತರಾಟೆಗೆ ತೆಗೆದುಕೊಂಡರು.

ಒಕ್ಕಲಿಗ ನಾಯಕ ಎಂದರೆ ಲೂಟಿಗೆ ಬಿಡಬೇಕಾ?

ಒಕ್ಕಲಿಗ ನಾಯಕನಾಗಿ ಬೆಳೆಯಲು ಜನ ಪೇಪರ್ ಪೆನ್ನು ಕೊಟ್ಟಿದ್ದಾರಲ್ಲ, ಬೆಳೆಯಲು ಬಿಡಿ. ನಮಗೇನೂ ತೊಂದರೆ ಇಲ್ಲ. ಸಿಕ್ಕಿದ ಅವಕಾಶ ಬಳಸಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಿ, ಹಳೆ ಚಾಳಿ ಬಿಡಿ. 2028ಕ್ಕೂ ನೀವೇ ಬನ್ನಿ. ಅಭಿವೃದ್ಧಿ ಹೆಸರಲ್ಲಿ ಕಾನೂನು ಬಾಹಿರ ಮಾಡಬೇಡಿ. ಅವರು ಮಾಡುವ ಜನವಿರೋಧಿ ಕೆಲಸಕ್ಕೆ ಜಾತಿ ಹೆಸರಲ್ಲಿ ಬೆಂಬಲಿಸಬೇಕಾ? ಜನರ ಆಸ್ತಿ ಲಪಟಾಯಿಸೋದು‌ ವಿರೋಧಿಸಿ ದನಿ ಎತ್ತುವುದನ್ನು ನಮ್ಮ ಪಕ್ಷ ನಿಲ್ಲಿಸದು. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ ಎಲ್ಲಾ ಕುರುಬರ ಜೀವನ ಹಸನಾಯಿತಾ? ಆ ಸಮುದಾಯದ ಬಹುತೇಕರು ಕಷ್ಟದಲ್ಲಿ ಇಲ್ಲವಾ? ಡಿಕೆಶಿ ಸಿಎಂ ಆದಾಕ್ಷಣ ಒಕ್ಕಲಿಗರೆಲ್ಲ ಅದ್ಬುತ ಜೀವನ ಮಾಡ್ತಾರ? ಇವರಿಂದ ರೈತರು ಎಷ್ಟು ಸುಖವಾಗಿದ್ದಾರೆ ಎಂಬುದನ್ನು ಜನ ನೋಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ಲೇವಡಿ ಮಾಡಿದರು.

ಬೆಂಗಳೂರಿನ ಇಂದಿನ ಸ್ಥಿತಿಗೆ ಯಾರು ಕಾರಣ? ನಾನು ಯಾವುದೇ ರಾಜಿಗೆ ಒಳಗಾಗದೆ ಹೇಳುತ್ತಿದ್ದೇನೆ. ಜನರ ಸಮಸ್ಯೆಗಳು ಅಂತ ಬಂದಾಗ ಮುಲಾಜಿಲ್ಲದೆ ಟೀಕಿಸುತ್ತೇನೆ. ಜನರ ಆಸ್ತಿಗಳನ್ನು, ಸರಕಾರಿ ಜಾಗಗಳನ್ನು ಲೂಟಿ ಮಾಡಿದಾಗ ಜಾತಿ ವ್ಯಾಮೋಹಕ್ಕೆ ಒಳಗಾಗಿ ಜನರಿಗೆ ಸತ್ಯ ಹೇಳದೇ ಇರಲು ಆಗುತ್ತದ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ಅಡ್ಡ ಮತದಾನ ಮುಗಿದ ಅಧ್ಯಾಯ:

ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಪ್ರಕರಣ ಮುಗಿದ ಅಧ್ಯಾಯ ಎಂದಿರುವ ಕೇಂದ್ರ ಸಚಿವರು, ಈ ಬಗ್ಗೆ ಬಿಜೆಪಿ ಕಡೆಯಿಂದ ಸಲ್ಲಿಕೆಯಾಗಿರುವ ಸತ್ಯಶೋಧನಾ ಸಮಿತಿ ವರದಿ ಬಗ್ಗೆ ಚರ್ಚಿಸಲು ನಿರಾಕರಿಸಿದರು.

ಅಡ್ಡ ಮತದಾನದ ವಿಚಾರವಾಗಿ ಈಗಾಗಲೇ ನಾನು ಹೇಳಿದ್ದೇನೆ. ಈ ವಿಷಯವನ್ನು ಇಲ್ಲಿಗೆ ಬಿಟ್ಟುಬಿಡಿ. ನಾನು ಅದು ಅಡ್ಡ ಮತದಾನಕ್ಕೆ ಹೆಚ್ಚು ಮಹತ್ವ ಕೊಡುವುದು ಅಗತ್ಯವಿಲ್ಲ. ಆ ವಿಷಯವನ್ನು ಇಲ್ಲಿಗೆ ಬಿಡಿ ಎಂದು ನಾನು ಈಗಾಗಲೇ ಹೇಳಿದ್ದೇನೆ. ಇದರ ಬಗ್ಗೆ ಚರ್ಚೆ ಮಾಡಿಕೊಂಡು ಹೋಗಲು ನನಗೆ ಇಷ್ಟವಿಲ್ಲ ಎಂದು ಕೇಂದ್ರ ಸಚಿವರು ಹೇಳಿದರು.

Bidadi township: ಬಿಡದಿಯಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಬಿಜೆಪಿ ಬಿಡಲ್ಲ; ಶೀಘ್ರದಲ್ಲೇ ಹೋರಾಟ ಎಂದ ವಿಜಯೇಂದ್ರ

ಪ್ರಚೋದನಕಾರಿ ಹೇಳಿಕೆಗಳಿಗೆ ಉದ್ವೇಗ ಅಗತ್ಯವಿಲ್ಲ:

ಕೆಲವರಿಗೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು ಚಾಳಿ. ಅಂತಹವರ ಹೇಳಿಕೆಗಳಿಗೆ ಮಹತ್ವ ನೀಡುವುದು ಬೇಡ. ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ವೇಳೆ ಗಲಾಟೆ ಅಗತ್ಯ ಇರಲಿಲ್ಲ. ನಮ್ಮ ಕಾರ್ಯಕರ್ತರು ಯಾರು ಇಂತಹ ಹೇಳಿಕೆಗಳಿಂದ ಉದ್ವೇಗಕ್ಕೆ ಒಳಗಾಗುವುದು ಬೇಡ. ಪ್ರಚೋದನೆ ಮಾಡಲೆಂದೇ ಒಂದು ಗುಂಪು ಕೆಲಸ ಮಾಡುತ್ತಿರುತ್ತದೆ. ಹೀಗಾಗಿ ಅಂತಹ ವ್ಯಕ್ತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಚಪ್ಪಲಿ ಎಸೆಯುವುದು ನಮ್ಮ ಸಂಸ್ಕೃತಿ ಅಲ್ಲ. ಯಾರ ವಿರುದ್ಧವು ಧಿಕ್ಕಾರ ಕೂಗುವುದು ಬೇಡ. ಸಮಾಜದಲ್ಲಿ ಅಶಾಂತಿ ಉಂಟು ಮಾಡುವುದು ಬೇಡ. ಇಂಥ ಸಂದರ್ಭದಲ್ಲಿ ಶಾಂತ ಚಿತ್ತದಲ್ಲಿ ನಿಮ್ಮ ನಡೆವಳಿಕೆ ಇರಲಿ ಎಂದು ಹೇಳುತ್ತೇನೆ ಎಂದು ಚಿಕ್ಕಬಳ್ಳಾಪುರ ಘಟನೆಯನ್ನು ಉಲ್ಲೇಖಿಸಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೇಳಿದರು.