ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

'ಶಾಂತಿ ಕ್ರಾಂತಿ' ಹಾಡಿನ ಶೂಟಿಂಗ್‌ಗಾಗಿ ಎಂ.ಜಿ. ರೋಡ್‌ ಒದ್ದೆ ಮಾಡಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ರವಿಚಂದ್ರನ್;‌ 1 ದಿನದ ಚಿತ್ರೀಕರಣಕ್ಕೆ ಎಷ್ಟು ದುಡ್ಡು ಬೇಕಾಗುತ್ತಿತ್ತು?

`ಕ್ರೇಜಿ ಸ್ಟಾರ್' ವಿ. ರವಿಚಂದ್ರನ್ ಅವರ ವೃತ್ತಿಬದುಕಿನ ಅತೀ ದುಬಾರಿ ಪ್ಯಾನ್-ಇಂಡಿಯಾ ಸಿನಿಮಾವಾದ 'ಶಾಂತಿ ಕ್ರಾಂತಿ'ಯ ಮೇಕಿಂಗ್ ವೆಚ್ಚದ ಕಥೆ ಇಂದಿಗೂ ಸ್ಯಾಂಡಲ್‌ವುಡ್‌ನಲ್ಲಿ ಅಚ್ಚರಿ ಮೂಡಿಸುತ್ತದೆ. 1990ರ ದಶಕದಲ್ಲೇ ದಿನಕ್ಕೆ 8 ಲಕ್ಷಕ್ಕೂ ಅಧಿಕ ವೆಚ್ಚ ಮಾಡಿ ಶೂಟಿಂಗ್‌ ಮಾಡಲಾಗಿತ್ತು. ಎಂ.ಜಿ. ರೋಡ್ ಒದ್ದೆ ಮಾಡಲು ಲಕ್ಷಾಂತರ ಹಣವನ್ನು ಸುರಿಯಲಾಗಿತ್ತು.

MG ರೋಡ್‌ಗೆ ನೀರು ಸುರಿಯಲು ಲಕ್ಷಾಂತರ ರೂ. ಖರ್ಚು ಮಾಡಿದ್ದ ರವಿಚಂದ್ರನ್!

-

Avinash GR
Avinash GR Aug 11, 2026 5:52 PM

'ಕ್ರೇಜಿ ಸ್ಟಾರ್‌' ರವಿಚಂದ್ರನ್ ಅವರ ವೃತ್ತಿಜೀವನದ ಅತೀ ದುಬಾರಿ ಸಿನಿಮಾ ಎಂದರೆ ಅದು 'ಶಾಂತಿ ಕ್ರಾಂತಿ'! ಈ ಚಿತ್ರದಿಂದ ಅವರಿಗೆ ಆರ್ಥಿಕವಾಗಿ ಸಾಕಷ್ಟು ನಷ್ಟವಾಗಿತ್ತು. ಅದ್ಧೂರಿ ತಾರಾಗಣ, ಬೃಹತ್ ಸೆಟ್‌ ಹಾಗೂ ಮೂರು ವರ್ಷಗಳ ನಿರಂತರ ಶ್ರಮ ಎಲ್ಲವೂ ಸೇರಿ 'ಶಾಂತಿ ಕ್ರಾಂತಿ' ಚಿತ್ರದ ಬಜೆಟ್ ಕೈಮೀರಿ ಹೋಗಿತ್ತು. ಇಷ್ಟೆಲ್ಲಾ ಆದರೂ, "ಅದೊಂದು ನಮಗೆ ದೊಡ್ಡ ಪಾಠ" ಎನ್ನುವುದು ರವಿಚಂದ್ರನ್‌ ಅವರ ಅನುಭವದ ಮಾತು.

ಈ ಚಿತ್ರದ ಶೂಟಿಂಗ್‌ ಯಾವ ರೀತಿ ಇರುತ್ತಿತ್ತು ಮತ್ತು ರವಿಚಂದ್ರನ್‌ ಅವರ ಕಾರ್ಯವೈಖರಿ ಹೇಗಿತ್ತು ಎಂಬುದಕ್ಕೆ 'ಶಾಂತಿ ಕ್ರಾಂತಿ' ಚಿತ್ರದ 'ಮಧ್ಯರಾತ್ರಿಲಿ ಹೈವೇ ರಸ್ತೆಲಿ..' ಹಾಡಿನ ಮೇಕಿಂಗ್‌ ಕಥೆಯೇ ಸಣ್ಣ ಉದಾಹರಣೆ.

ರಸ್ತೆ ಒದ್ದೆ ಮಾಡಲು 5 ಲಕ್ಷ ರೂ. ಖರ್ಚು

"ಆ ಹಾಡು ಬರೋಬ್ಬರಿ 8 ನಿಮಿಷ ಇದೆ. ಅದನ್ನು ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಅದು ಮಳೆ ಬಂದು ನಿಂತ ಸಮಯದಲ್ಲಿ ಮೂಡಿಬರುವ ಹಾಡಾಗಿದ್ದರಿಂದ, ಇಡೀ ರಸ್ತೆಗೆ ನೀರು ಹಾಕಿ ಒದ್ದೆ ಮಾಡಿದ್ದೆವು. ಪ್ರತಿ ಶಾಟ್‌ನಲ್ಲೂ ರಸ್ತೆ ಸಂಪೂರ್ಣವಾಗಿ ಒದ್ದೆಯಾಗಿ ಕಾಣಿಸಬೇಕಿತ್ತು. ಅದಕ್ಕಾಗಿ ಆಗಿನ ಕಾಲಕ್ಕೇ ಬರೀ ರಸ್ತೆಗೆ ನೀರು ಸುರಿಯಲು 5 ಲಕ್ಷ ರೂಪಾಯಿ ಖರ್ಚು ಮಾಡಿದ್ದೆವು" ಎಂದು ಸ್ವತಃ ರವಿಚಂದ್ರನ್‌ ಒಮ್ಮೆ ನೆನಪಿಸಿಕೊಂಡಿದ್ದರು.

ಅವನು ಏನು ಕೇಳುತ್ತಾನೋ ಅದನ್ನು ಕೊಡಿ

"ಒಂದು ಟ್ಯಾಂಕರ್ ನೀರು ಕೂಡ ಕಡಿಮೆಯಾಗಬಾರದು, ಅವನು ಏನು ಕೇಳುತ್ತಾನೋ ಅದನ್ನು ಕೊಡಿ" ಎಂದು ಪ್ರೊಡಕ್ಷನ್ ಮ್ಯಾನೇಜರ್‌ಗೆ ಖುದ್ದು ರವಿಚಂದ್ರನ್ ಅವರ ತಂದೆ ಎನ್‌. ವೀರಾಸ್ವಾಮಿ ಅವರೇ ಹೇಳಿದ್ದರಂತೆ. ಅವರಿಗೆ ಮಗನ ಪ್ರತಿಭೆಯ ಮೇಲೆ ಅಷ್ಟೊಂದು ನಂಬಿಕೆಯಿತ್ತು. "ಅಂದು ನನಗೆ ಪ್ರೊಡಕ್ಷನ್ ಖರ್ಚು ಎಂದರೆ ಏನೆಂಬುದೇ ಗೊತ್ತಿರಲಿಲ್ಲ" ಎನ್ನುತ್ತಾರೆ ರವಿಚಂದ್ರನ್.

ನನ್ನ ಕನಸುಗಳು ಬೆಳ್ಳಿಪರದೆಯ ಮೇಲೆ ಬರಲು ನಮ್ಮಪ್ಪನೇ ಕಾರಣ

"ಆ ಚಿತ್ರದ ಹಾಡುಗಳನ್ನೆಲ್ಲ ಕೇಳಿದಾಗ ನನಗಂತೂ ರೋಮಾಂಚನವಾಗುತ್ತದೆ. ಇದೆಲ್ಲಾ ಹೇಗೆ ಮಾಡಿದ್ರಿ ಅಂತ ಎಲ್ಲರೂ ಕೇಳುತ್ತಾರೆ. ಆದರೆ ಅದು ಹೇಗಾಯ್ತು ಅಂತ ನನಗೂ ಗೊತ್ತಿಲ್ಲ! ಇದು ಯಾವುದೇ ದುರಹಂಕಾರವಿಲ್ಲದ, ಬರೀ ಮುಗ್ಧತೆ ಮತ್ತು ಶ್ರೇಷ್ಠತೆಯ ಸಂಯೋಜನೆ ಎಂದು ಹೇಳಬಹುದು. ಈ ಎಲ್ಲಾ ಕನಸುಗಳು ಬೆಳ್ಳಿಪರದೆಯ ಮೇಲೆ ಬರಲು ನಮ್ಮಪ್ಪನೇ ಕಾರಣ. ಅವರು ಇಲ್ಲದೇ ಹೋಗಿದ್ದರೆ ಇದೆಲ್ಲವೂ ಸಾಧ್ಯವೇ ಆಗುತ್ತಿರಲಿಲ್ಲ" ಎನ್ನುತ್ತಾರೆ ರವಿಚಂದ್ರನ್.

"ನನ್ನ ತಂದೆ ಕೊಟ್ಟ ಪ್ರೀತಿ ಮತ್ತು ನಂಬಿಕೆಯಿಂದಲೇ ನನ್ನ ಸಿನಿಮಾ ಪಯಣ ಸಾಗಿತು. ಅವರು ಒಂದು ವೇಳೆ 'ನಿನಗೇನೂ ಗೊತ್ತಿಲ್ಲ' ಎಂದಿದ್ದರೆ, ನನ್ನ ಅಧ್ಯಾಯ ಅಂದೇ ಮುಗಿದು ಹೋಗುತ್ತಿತ್ತು. ಅವರು ನೀಡಿದ ಧೈರ್ಯದಿಂದಲೇ ನಾನು ಇಷ್ಟು ದೂರ ಬಂದಿದ್ದೇನೆ" ಎಂದು ಅವರು ಹೇಳಿಕೊಂಡಿದ್ದಾರೆ.

ಅಂದು ‘ಶಾಂತಿ ಕ್ರಾಂತಿ’ ಜೊತೆಜೊತೆಗೆ ರವಿಚಂದ್ರನ್ ಮಾಡಿದ ಸಿನಿಮಾಗಳೆಷ್ಟು? ಇಂದಿನ ಪೀಳಿಗೆಗೆ ಇದು ನಿಜಕ್ಕೂ ಸ್ಫೂರ್ತಿ!

ಒಂದು ದಿನಕ್ಕೆ 8 ಲಕ್ಷ ರೂ. ಖರ್ಚು!

1990ರ ದಶಕದಲ್ಲಿ 8 ರಿಂದ 10 ಲಕ್ಷ ರೂಪಾಯಿಗಳಲ್ಲಿ ಒಂದು ಕಡಿಮೆ ಬಜೆಟ್ ಸಿನಿಮಾವನ್ನೇ ನಿರ್ಮಾಣ ಮಾಡಬಹುದಿತ್ತು. ಆದರೆ ಅಂತಹ ಸಮಯದಲ್ಲಿ 'ಶಾಂತಿ ಕ್ರಾಂತಿ' ಸಿನಿಮಾದ ಶೂಟಿಂಗ್‌ಗಾಗಿ ಪ್ರತಿ ದಿನ ರವಿಚಂದ್ರನ್‌ 8 ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡುತ್ತಿದ್ದರು.

"ಅಂದು ಒಂದು ದಿನದ ಶೂಟಿಂಗ್‌ಗೆ 8 ಲಕ್ಷ ಖರ್ಚು ಮಾಡುತ್ತಿದ್ದೆ. ಬೆಂಗಳೂರಿನ ಎಲ್ಲಾ ಫೈವ್ ಸ್ಟಾರ್ ಹೋಟೆಲ್‌ಗಳಲ್ಲೂ ಕೊಠಡಿಗಳು ಬುಕ್ ಆಗಿರುತ್ತಿದ್ದವು. ಮೂರು ಭಾಷೆಯ ಬರಹಗಾರರು, ಕಲಾವಿದರು, ನೂರಾರು ಮಕ್ಕಳು, ಡ್ಯಾನ್ಸರ್ಸ್ ಸೇರಿದಂತೆ ನಾಲ್ಕು ಭಾಷೆಗಳಲ್ಲಿ (ಕನ್ನಡ, ತೆಲುಗು, ತಮಿಳು, ಹಿಂದಿ) ಏಕಕಾಲಕ್ಕೆ ಶೂಟಿಂಗ್ ನಡೆಯುತ್ತಿತ್ತು. ಇವತ್ತಿನ ಕಾಲಕ್ಕೆ ಅದನ್ನು ಕಲ್ಪನೆ ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ" ಎಂದು ರವಿಚಂದ್ರನ್ ಮೆಲಕು ಹಾಕಿದ್ದರು.