ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ರೋಡ್‌ ರೇಜ್‌’ ಕಿರುಚಿತ್ರ ಬಿಡುಗಡೆ ಮಾಡಿದ ಪೊಲೀಸ್‌ ಕಮಿಷನರ್‌ ಸೀಮಂತ್‌ ಕುಮಾರ್‌ ಸಿಂಗ್‌; ಸಾಥ್‌ ನೀಡಿದ 'ರೋರಿಂಗ್‌ ಸ್ಟಾರ್‌' ಶ್ರೀಮುರಳಿ

ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ಸವಾರರ ನಡುರಸ್ತೆ ಗಲಾಟೆಗಳನ್ನು ತಡೆಯಲು ನಿರ್ಮಾಣಗೊಂಡಿರುವ ‘ರೋಡ್‌ ರೇಜ್‌’ ಜಾಗೃತಿ ಕಿರುಚಿತ್ರವನ್ನು ನಗರ ಪೊಲೀಸ್ ಕಮಿಷನರ್ ಸೀಮಂತ್‌ ಕುಮಾರ್‌ ಸಿಂಗ್‌ ಬಿಡುಗಡೆಗೊಳಿಸಿದರು. ಸೂರ್ಯ ನಿರ್ದೇಶನದ ಹಾಗೂ ರಾಜಶೇಖರ್ ಸೋಮಶೇಖರ್ ನಿರ್ಮಿಸಿದ ಈ ಚಿತ್ರಕ್ಕೆ 'ರೋರಿಂಗ್ ಸ್ಟಾರ್' ಶ್ರೀಮುರಳಿ ಹಿನ್ನೆಲೆ ಧ್ವನಿ ನೀಡಿದ್ದಾರೆ.

ʻರೋಡ್ ರೇಜ್ʼ ಕಿರುಚಿತ್ರ ಬಿಡುಗಡೆ; ಹಿನ್ನೆಲೆ ಧ್ವನಿ ನೀಡಿದ ನಟ ಶ್ರೀಮುರಳಿ

-

Avinash GR
Avinash GR Aug 13, 2026 3:50 PM

ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ 'ರೋಡ್ ರೇಜ್' ಘಟನೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಿರ್ಮಾಣಗೊಂಡಿರುವ ‘ರೋಡ್‌ ರೇಜ್‌’ (Road Rage) ಕಿರುಚಿತ್ರವನ್ನು ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಸೀಮಂತ್‌ ಕುಮಾರ್‌ ಸಿಂಗ್‌ ಅವರು ಅಧಿಕೃತವಾಗಿ ಬಿಡುಗಡೆಗೊಳಿಸಿದರು. ಈಚೆಗೆ ವಾಹನ ಸವಾರರು. ಚಾಲಕರು ನಡುರಸ್ತೆಗಳಲ್ಲೇ ಸಾಕಷ್ಟು ಗಲಾಟೆ ಮಾಡಿಕೊಳ್ಳುತ್ತಿರುವುದನ್ನು ನಾವು ಗಮನಿಸಬಹುದಾಗಿದೆ.

‘ಶ್ರೀ ಸಾಯಿ ಗಗನ್‌ ಡಿಸ್ಟ್ರಿಬ್ಯೂಟರ್ಸ್‌’ ಬ್ಯಾನರ್ ಅಡಿಯಲ್ಲಿ ರಾಜಶೇಖರ್‌ ಸೋಮಶೇಖರ್‌ ನಿರ್ಮಿಸಿರುವ ಈ ಶಾರ್ಟ್ ಫಿಲ್ಮ್ ಅನ್ನು ಸೂರ್ಯ ನಿರ್ದೇಶಿಸಿದ್ದಾರೆ. ವಿಶೇಷವೆಂದರೆ, ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅವರು ಈ ಜಾಗೃತಿ ಮೂಡಿಸುವಂತಹ ಕಿರುಚಿತ್ರಕ್ಕೆ ವಾಯ್ಸ್ ಓವರ್ ನೀಡುವ ಮೂಲಕ ತಂಡಕ್ಕೆ ಸಾಥ್ ನೀಡಿದ್ದಾರೆ.

ಬೆಂಗಳೂರಿನ ರಾಕ್‌ಲೈನ್ ಸ್ಟುಡಿಯೋದಲ್ಲಿ ಶ್ರೀಮುರಳಿ ನಟನೆಯ 'ಉಗ್ರಾಯುಧಮ್' ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

ಜಾಗೃತಿ ಚಿತ್ರಗಳ ಅಗತ್ಯವಿದೆ: ಪೊಲೀಸ್ ಕಮಿಷನರ್

ಚಿತ್ರ ವೀಕ್ಷಿಸಿ ಬಿಡುಗಡೆಗೊಳಿಸಿ ಮಾತನಾಡಿದ ಪೊಲೀಸ್‌ ಕಮಿಷನರ್ ಸೀಮಂತ್‌ ಕುಮಾರ್‌ ಸಿಂಗ್‌, "ನಗರದಲ್ಲಿ ರೋಡ್ ರೇಜ್‌ಗಳಂತಹ ಘಟನೆಗಳನ್ನು ತಡೆಯಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಇಂತಹ ಪ್ರಯತ್ನಗಳು ಹೆಚ್ಚು ಹೆಚ್ಚು ನಡೆಯಬೇಕಿದೆ. ಈ ಜಾಗೃತಿ ಚಿತ್ರವನ್ನು ನಿರ್ಮಿಸಿದ ಇಡೀ ತಂಡಕ್ಕೆ ಅಭಿನಂದನೆಗಳು. ಮುಂಬರುವ ದಿನಗಳಲ್ಲಿ 'ಡ್ರಗ್ಸ್ ಮುಕ್ತ ಸಮಾಜ' ನಿರ್ಮಾಣ ಮಾಡುವ ನಿಟ್ಟಿನಲ್ಲೂ ಇಂತಹ ಸಮಾಜಮುಖಿ ಕಿರುಚಿತ್ರಗಳು ಬರಲಿ" ಎಂದು ಆಶಿಸಿದರು.

'ಈಗೋ ಬಿಟ್ಟರೆ ಲೈಫ್ ಬ್ಯೂಟಿಫುಲ್': ಮಾಸ್ತಿ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಭಾಷಣೆಗಾರ ಮಾಸ್ತಿ ಮಾತನಾಡಿ, "ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಇಂತಹ ಚಿತ್ರಗಳಲ್ಲಿ ಭಾಗಿಯಾಗುವುದರಿಂದ ಆತ್ಮಸಾಕ್ಷಿಗೆ ದೊಡ್ಡ ಮಟ್ಟದ ಖುಷಿ ಸಿಗುತ್ತದೆ. ವಾಹನ ಚಲಾಯಿಸುವಾಗ ಪ್ರತಿಯೊಬ್ಬರೂ ತಮ್ಮ ಅಹಂ ಪಕ್ಕಕ್ಕಿಟ್ಟರೆ 'ಲೈಫ್ ಇಸ್ ಬ್ಯೂಟಿಫುಲ್' ಆಗಿರುತ್ತದೆ" ಎಂದು ಅಭಿಪ್ರಾಯಪಟ್ಟರು.

ಈ ಸಮಾರಂಭದಲ್ಲಿ ನಟ ಸುಚೇಂದ್ರ ಪ್ರಸಾದ್‌ ಹಾಗೂ ಲಹರಿ ವೇಲು ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ದೇಶಕ ಸೂರ್ಯ ನಿರ್ದೇಶಿಸಿರುವ ಈ ಕಿರುಚಿತ್ರದಲ್ಲಿ ಗಗನ್‌ ಶೇಖರ್‌, ಆದಿ, ಸಮೀರ್‌ ಆಚಾರ್ಯ, ಆದ್ಯ, ಯೋಷಿತಾ ಮತ್ತು ಮನು ಅಭಿನಯಿಸಿದ್ದಾರೆ. ಪವನ್‌ ರಾವ್‌ ಅವರ ಸಂಗೀತ ಹಾಗೂ ಪ್ರಮೋದ್‌ ಕೋಟ್ಯಾನ್‌ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.