ಆಸ್ಪತ್ರೆಯ ಶೌಚಾಲಯದ ಕಿಟಕಿಯಿಂದ ನವಜಾತ ಶಿಶುವನ್ನು ಎಸೆದ 19ರ ಯುವತಿ; ಹೆತ್ತಮ್ಮನ ಕ್ರೌರ್ಯ ಕಂಡು ಬೆಚ್ಚಿಬಿದ್ದ ದೇಶ
Woman throws newborn baby: ತೀವ್ರ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ 19 ವರ್ಷದ ಯುವತಿಯೊಬ್ಬಳು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ, ಅದನ್ನು ಕಿಟಕಿಯಿಂದ ಹೊರಗೆ ಎಸೆದಿರುವ ಆಘಾತಕಾರಿ ಘಟನೆ ಕೇರಳಂನಲ್ಲಿ ನಡೆದಿದೆ. ನವಜಾತ ಶಿಶುವಿನ ಅಳು ಧ್ವನಿಯನ್ನು ಕೇಳಿದ ಆಸ್ಪತ್ರೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಸದನ್ನು ರಕ್ಷಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ತಿರುವನಂತಪುರಂ, ಮೇ 26: ತೀವ್ರ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ 19 ವರ್ಷದ ಯುವತಿಯೊಬ್ಬಳು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ, ಅದನ್ನು ಕಿಟಕಿಯಿಂದ ಹೊರಗೆ ಎಸೆದಿರುವ ಆಘಾತಕಾರಿ ಘಟನೆ ಕೇರಳಂನಲ್ಲಿ ನಡೆದಿದೆ. ಮಂಗಳವಾರ (ಮೇ 26) ಮುಂಜಾನೆ ಆಳಪ್ಪುಳ ಜಿಲ್ಲೆಯ ಹರಿಪ್ಪಾಡ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅವಿವಾಹಿತ ಯುವತಿ ಮಗುವಿಗೆ ಜನ್ಮ ನೀಡಿದ ಕೂಡಲೇ ನವಜಾತ ಶಿಶುವನ್ನು (Newborn Baby) ಶೌಚಾಲಯದ ಹೊರಗೆ ಎಸೆದಿದ್ದಾಳೆ ಎನ್ನಲಾಗಿದೆ.
ನವಜಾತ ಶಿಶುವಿನ ಅಳು ಧ್ವನಿಯನ್ನು ಕೇಳಿದ ಆಸ್ಪತ್ರೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅದು ಬೀದಿನಾಯಿಗಳು ಓಡಾಡುವ ಸ್ಥಳವಾಗಿತ್ತು. ಈ ವೇಳೆ ನವಜಾತ ಶಿಶುವನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ ತಕ್ಷಣ ರಕ್ಷಣಾ ಕಾರ್ಯಕ್ಕೆ ಮುಂದಾದರು. ರಾತ್ರಿ ಕರ್ತವ್ಯ ನಿರತ ವೈದ್ಯಕೀಯ ತಂಡದ ಸಕಾಲಿಕ ಮಧ್ಯ ಪ್ರವೇಶದಿಂದ ಮಗುವಿನ ಜೀವ ಉಳಿಯಿತು ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಹೊಟ್ಟೆ ನೋವಿಗೆ ಚಿಕಿತ್ಸೆ ಪಡೆಯಲು ಯುವತಿ ಆಸ್ಪತ್ರೆಗೆ ಬಂದಿದ್ದಳು. ಆದರೆ ದೈಹಿಕ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ್ದಳು ಎಂದು ವೈದ್ಯರು ತಿಳಿಸಿದ್ದಾರೆ. ಇದು ಯುವತಿ ಗರ್ಭಿಣಿಯಾಗಿರಬಹುದೆಂಬ ಅನುಮಾನವನ್ನು ಹುಟ್ಟುಹಾಕಿತು ಎಂದು ಅವರು ಹೇಳಿದರು. ಇದೇ ವೇಳೆ ಯುವತಿ ಶೌಚಾಲಯಕ್ಕೆ ಹಲವು ಬಾರಿ ಹೋಗುವುದನ್ನು ಆಸ್ಪತ್ರೆ ಸಿಬ್ಬಂದಿ ಗಮನಿಸಿದರು. ʼʼಆಕೆ ಶೌಚಾಲಯಕ್ಕೆ ಪ್ರವೇಶಿಸಿದ ಸ್ವಲ್ಪ ಸಮಯದ ನಂತರ ಮಗುವಿನ ಅಳು ಧ್ವನಿ ಕೇಳಿಸಿತುʼʼ ಎಂದು ವೈದ್ಯರು ತಿಳಿಸಿದ್ದಾರೆ.
ವೈದ್ಯರ ಗ್ಲೌಸ್ ಗಟ್ಟಿಯಾಗಿ ಹಿಡಿದ ಆಗ ತಾನೇ ಹುಟ್ಟಿದ ಶಿಶು
ಅನುಮಾನಗೊಂಡ ವೈದ್ಯರು ಸಿಬ್ಬಂದಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆ ಪ್ರದೇಶವನ್ನು ಪರಿಶೀಲಿಸಲಾಯಿತು. ಆಗ ನವಜಾತ ಶಿಶು ಪತ್ತೆಯಾಗಿದೆ. ಸ್ವಲ್ಪ ವಿಳಂಬವಾದರೂ ಮಗುವಿನ ಜೀವಕ್ಕೆ ಅಪಾಯವಾಗುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ. ಸದ್ಯ ತಾಯಿ ಮತ್ತು ಮಗು ಇಬ್ಬರನ್ನೂ ಆಳಪ್ಪುಳದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನವಜಾತ ಶಿಶು ಅಪಾಯದಿಂದ ಪಾರಾಗಿದೆ ಎಂದು ವರದಿಯಾಗಿದೆ.
ದೇವನಹಳ್ಳಿಯ ಐಫೋನ್ ಫ್ಯಾಕ್ಟರಿ ಟಾಯ್ಲೆಟ್‌ನಲ್ಲಿ ನವಜಾತ ಶಿಶುವಿನ ಶವ ಪತ್ತೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಪ್ರತಿಷ್ಠಿತ ಐಫೋನ್ ತಯಾರಿಕೆ ಕಂಪನಿ ಫಾಕ್ಸ್‌ಕಾನ್‌ನ ಕಸದ ಬುಟ್ಟಿಯಲ್ಲಿ ಇತ್ತೀಚೆಗೆ ನವಜಾತ ಶಿಶುವಿನ ಶವ ಪತ್ತೆಯಾಗಿತ್ತು. ನವಜಾತ ಶಿಶುವಿನ ಕತ್ತು ಕೊಯ್ದು ತಾಯಿಯೇ ಕಸದ ಬುಟ್ಟಿಗೆ ಎಸೆದಿರುವ ಸಂಕೆ ವ್ಯಕ್ತವಾಗಿದೆ. ದೇವನಹಳ್ಳಿ ತಾಲೂಕಿನ ಬೀರಸಂದ್ರದ ಬಳಿ ಇರುವ ಫಾಕ್ಸ್ ಕಾನ್ ಕಂಪನಿಯ ಬಾತ್ರೂಮ್ನ ಕಸದ ಬುಟ್ಟಿಯಲ್ಲಿ ನವಜಾತ ಶಿಶು ಶವ ಕಂಡು ಸಿಬ್ಬಂದಿ ಶಾಕ್ ಆಗಿದ್ದರು. ಮದುವೆಯಾಗದೆ ಮಗು ಜನಿಸಿದ ಹಿನ್ನೆಲೆಯಲ್ಲಿ ತಾಯಿಯೇ ಕೊಂದು ಕಸದ ಬುಟ್ಟಿಗೆ ಎಸೆದಿದ್ದಾಳೆ ಎನ್ನಲಾಗಿತ್ತು.