ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಐವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಪ್ರಮಾಣ ವಚನ ಸ್ವೀಕಾರ; ಸಂಖ್ಯಾಬಲ 37ಕ್ಕೆ ಏರಿಕೆ

Supreme Court Judges: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಐವರು ಪ್ರಮಾಣ ವಚನ ಸ್ವೀಕರಿಸಿದರು. ಸಿಜೆಐ ಸೂರ್ಯಕಾಂತ್ ನ್ಯಾಯಮೂರ್ತಿಗಳಾದ ಶೀಲ್ ನಾಗು, ಚಂದ್ರಶೇಖರ್, ಸಂಜೀವ್ ಸಚ್‌ದೇವ, ಅರುಣ್ ಪಲ್ಲಿ ಮತ್ತು ಹಿರಿಯ ವಕೀಲೆ ವಿ. ಮೋಹನ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಆ ಮೂಲಕ ಜಡ್ಜ್‌ಗಳ ಸಂಖ್ಯಾ ಬಲ 37ಕ್ಕೆ ಏರಿದೆ.

ಐವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಪ್ರಮಾಣ ವಚನ ಸ್ವೀಕಾರ

ಸುಪ್ರೀಂ ಕೋರ್ಟ್‌ (ಸಂಗ್ರಹ ಚಿತ್ರ) -

Priyanka P
Priyanka P Jun 2, 2026 6:08 PM

ನವದೆಹಲಿ, ಜೂ. 2: ನಾಲ್ವರು ಹೈಕೋರ್ಟ್ (High court) ಮುಖ್ಯ ನ್ಯಾಯಮೂರ್ತಿಗಳು ಮತ್ತು ಹಿರಿಯ ವಕೀಲ ವಿ. ಮೋಹನಾ ಸುಪ್ರೀಂ ಕೋರ್ಟ್ (Supreme Court) ನ್ಯಾಯಮೂರ್ತಿಗಳಾಗಿ ಮಂಗಳವಾರ (ಜೂನ್‌ 2) ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಸರ್ವೋಚ್ಛ ನ್ಯಾಯಾಲಯದ ಜಡ್ಜ್‌ಗಳ ಸಂಖ್ಯೆ 37ಕ್ಕೆ ಏರಿದೆ. ಜತೆಗೆ ತನ್ನ ಪೂರ್ಣ ಸಾಮರ್ಥ್ಯದ ಸಮೀಪಕ್ಕೆ ತಲುಪಿದೆ. ನ್ಯಾಯಮೂರ್ತಿಗಳ ಅನುಮೋದಿತ ಸಂಖ್ಯೆಯನ್ನು ಹೆಚ್ಚಿಸಿದ ಬಳಿಕ ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಮಹತ್ವದ ನೇಮಕಾತಿಗಳಲ್ಲಿ ಇದೂ ಒಂದು.

ನ್ಯಾಯಮೂರ್ತಿಗಳಾದ ಶೀಲ್ ನಾಗು, ಚಂದ್ರಶೇಖರ್, ಸಂಜೀವ್ ಸಚ್‌ದೇವ, ಅರುಣ್ ಪಲ್ಲಿ ಮತ್ತು ಹಿರಿಯ ವಕೀಲೆ ವಿ. ಮೋಹನಾ ಅವರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಪ್ರಮಾಣ ವಚನ ಬೋಧಿಸಿದರು. ಸುಪ್ರೀಂ ಕೋರ್ಟ್ ಕೊಲಿಜಿಯಂ ಪದೋನ್ನತಿಯನ್ನು ಶಿಫಾರಸು ಮಾಡಿದ ನಾಲ್ಕು ದಿನಗಳ ನಂತರ ಸೋಮವಾರ ಕೇಂದ್ರ ಸರ್ಕಾರವು ಈ ನೇಮಕಾತಿ ಅಧಿಸೂಚನೆ ಹೊರಡಿಸಿತು. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮೂಲಕ ನೇಮಕಾತಿ ಪ್ರಕಟಿಸಿದರು.

ಸಿಜೆಐ ಸೂರ್ಯಕಾಂತ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಜೆ.ಕೆ. ಮಹೇಶ್ವರಿ, ಬಿ.ವಿ. ನಾಗರತ್ನಾ ಮತ್ತು ಎಂ.ಎಂ. ಸುಂದರೇಶ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಕೊಲಿಜಿಯಂ ಮೇ 27ರಂದು ಈ ಹೆಸರನ್ನು ಶಿಫಾರಸು ಮಾಡಿತು.

ನಾಲ್ವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಪುಟ ಅನುಮೋದನೆ

ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಸುಗ್ರೀವಾಜ್ಞೆ, 2026ರ ಮೂಲಕ ಸುಪ್ರೀಂ ಕೋರ್ಟ್‌ನ ಅನುಮೋದಿತ ನ್ಯಾಯಮೂರ್ತಿಗಳ ಸಂಖ್ಯೆಯನ್ನು 33 ರಿಂದ 37ಕ್ಕೆ ಹೆಚ್ಚಿಸಿದ ಕೆಲವೇ ದಿನಗಳ ನಂತರ ಈ ನೇಮಕಾತಿ ನಡೆದಿದೆ. ಹೆಚ್ಚುತ್ತಿರುವ ಬಾಕಿ ಪ್ರಕರಣಗಳ ಸಂಖ್ಯೆ 92,000 ದಾಟಿರುವ ಹಿನ್ನೆಲೆಯಲ್ಲಿ, ಇದನ್ನು ಪರಿಹರಿಸುವುದು ಮತ್ತು ದೊಡ್ಡ ಪೀಠಗಳ ನಿಯಮಿತ ರಚನೆಗೆ ಅನುಕೂಲವಾಗುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಐದು ಹೊಸ ನ್ಯಾಯಮೂರ್ತಿಗಳ ಪ್ರಮಾಣ ವಚನ ಸ್ವೀಕಾರದೊಂದಿಗೆ ಸಿಜೆಐ ಹೊರತುಪಡಿಸಿ ಸುಪ್ರೀಂ ಕೋರ್ಟ್‌ನ ಕಾರ್ಯನಿರತ ನ್ಯಾಯಮೂರ್ತಿಗಳ ಸಂಖ್ಯೆ 36ಕ್ಕೆ ಏರಿದೆ. 37 ನ್ಯಾಯಮೂರ್ತಿಗಳ ಅನುಮೋದಿತ ಬಲಕ್ಕೆ ಕೇವಲ ಒಂದು ಹುದ್ದೆಯಷ್ಟೇ ಖಾಲಿ ಉಳಿದಿದೆ.

ಇತ್ತೀಚಿನ ಈ ನೇಮಕಾತಿಗಳ ಸುತ್ತು, ದೇಶದ ಅತ್ಯುನ್ನತ ನ್ಯಾಯಾಲಯದ ಸಂಯೋಜನೆಯಲ್ಲಿ ಪ್ರಾದೇಶಿಕ ಪ್ರಾತಿನಿಧ್ಯ, ಹಿರಿತನ, ಅರ್ಹತೆ ಹಾಗೂ ಲಿಂಗ ವೈವಿಧ್ಯತೆ ನಡುವೆ ಸಮತೋಲನ ಸಾಧಿಸಲು ಕೊಲಿಜಿಯಂ (ಭಾರತದಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಹಾಗೂ ವರ್ಗಾವಣೆಗೆ ಶಿಫಾರಸು ಮಾಡುವ ಹಿರಿಯ ನ್ಯಾಯಮೂರ್ತಿಗಳ ಸಮಿತಿ) ಕೈಗೊಂಡ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ಶೀಲ್ ನಾಗು

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ನ್ಯಾಯಮೂರ್ತಿ ಶೀಲ್ ನಾಗು, ಮಧ್ಯ ಪ್ರದೇಶ ಹೈಕೋರ್ಟ್‌ನಲ್ಲಿ ತಮ್ಮ ನ್ಯಾಯಾಂಗ ವೃತ್ತಿ ಜೀವನವನ್ನು ಪ್ರಾರಂಭಿಸಿದರು. 2011ರಲ್ಲಿ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದರು. 2024ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು ಸಾಂವಿಧಾನಿಕ, ಸೇವಾ ಮತ್ತು ಆಡಳಿತಾತ್ಮಕ ಕಾನೂನು ವಿಷಯಗಳನ್ನು ವ್ಯಾಪಕ ಶ್ರೇಣಿಯಲ್ಲಿ ನಿರ್ವಹಿಸಿದ್ದಾರೆ.

‘'ಎನ್‌ಟಿಎ ಪಾಠ ಕಲಿಯದಿರುವುದು ನೋವಿನ ಸಂಗತಿʼʼ: 2026ರ ನೀಟ್ ಪತ್ರಿಕೆ ಸೋರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದಿಷ್ಟು

ಚಂದ್ರಶೇಖರ್

ನ್ಯಾಯಮೂರ್ತಿ ಚಂದ್ರಶೇಖರ್ ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು. 2013ರಲ್ಲಿ ಜಾರ್ಖಂಡ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ನಂತರ ಬಾಂಬೆ ಹೈಕೋರ್ಟ್‌ನ ಮುಖ್ಯಸ್ಥರಾಗಿ ವರ್ಗಾವಣೆಯಾಗುವ ಮೊದಲು ಅದರ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು.

ಸಂಜೀವ್ ಸಚ್‌ದೇವ್, ಅರುಣ್ ಪಲ್ಲಿ

ಸಂಜೀವ್ ಸಚ್‌ದೇವ್ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ನಂತರ ಇತ್ತೀಚೆಗೆ ಮಧ್ಯ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್‌ನ ಮುಖ್ಯಸ್ಥರಾಗಿದ್ದ ನ್ಯಾಯಮೂರ್ತಿ ಅರುಣ್ ಪಲ್ಲಿ 1988ರಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದರು.

ವಿ. ಮೋಹನಾ

ಇನ್ನು ವಿ. ಮೋಹನಾ ಅವರ ನೇಮಕವು ಸುಪ್ರೀಂ ಕೋರ್ಟ್ ಪೀಠದಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವುದರಿಂದ ಮಹತ್ವದ್ದಾಗಿದೆ. ಇಲ್ಲಿಯವರೆಗೆ, ನ್ಯಾಯಮೂರ್ತಿ ನಾಗರತ್ನಾ ಸುಪ್ರೀಂ ಕೋರ್ಟ್‌ನಲ್ಲಿ ಏಕೈಕ ಮಹಿಳಾ ನ್ಯಾಯಮೂರ್ತಿಯಾಗಿದ್ದರು.