ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇಂಜೆಕ್ಷನ್, ಇನ್‌ಸ್ಟಾಗ್ರಾಂ ಪೋಸ್ಟ್, ವೈರಲ್ ವಿಡಿಯೊ: ರಾಜಸ್ಥಾನದ ಸಾಧ್ವಿ ಪ್ರೇಮ್ ಬೈಸಾ ನಿಗೂಢ ಸಾವು

Sadhvi Prem Baisa Dies Mysteriously: ರಾಜಸ್ಥಾನದ ಖ್ಯಾತ ಧಾರ್ಮಿಕ ಪ್ರವಚನಕಾರ್ತಿ ಸಾಧ್ವಿ ಪ್ರೇಮ್ ಬೈಸಾ ನಿಗೂಢವಾಗಿ ಮೃತಪಟ್ಟಿದ್ದಾರೆ. ಇಂಜೆಕ್ಷನ್ ನೀಡಿದ ಬಳಿಕ ಅವರು ಪ್ರಜ್ಞೆ ತಪ್ಪಿದ್ದಾರೆ. ಅದಕ್ಕೂ ಮುನ್ನ ಮಾಡಿರುವ ಇನ್‌ಸ್ಟಾಗ್ರಾಂ ಪೋಸ್ಟ್ ಹಾಗೂ ಹಿಂದಿನ ವೈರಲ್ ವಿಡಿಯೊ, ಇದೀಗ ಭಾರಿ ಅನುಮಾನಕ್ಕೆ ಕಾರಣವಾಗಿದೆ.

ರಾಜಸ್ಥಾನದ ಸಾಧ್ವಿ ಪ್ರೇಮ್ ಬೈಸಾ ನಿಗೂಢ ಸಾವು

ರಾಜಸ್ಥಾನದ ಸಾಧ್ವಿ ಪ್ರೇಮ್ ಬೈಸಾ (ಸಂಗ್ರಹ ಚಿತ್ರ) -

Priyanka P
Priyanka P Jan 29, 2026 5:40 PM

ಜೈಪುರ, ಜ. 29: ಪಶ್ಚಿಮ ರಾಜಸ್ಥಾನದ ಖ್ಯಾತ ಧಾರ್ಮಿಕ ಪ್ರವಚನಕಾರ್ತಿ ಸಾಧ್ವಿ ಪ್ರೇಮ್ ಬೈಸಾ (Sadhvi Prem Baisa) ನಿಗೂಢವಾಗಿ ಮೃತಪಟ್ಟಿದ್ದಾರೆ. ಅವರ ನಿಧನವು ಭಾರಿ ಚರ್ಚೆಗೆ ಕಾರಣವಾಗಿದೆ. ಸಾಧ್ವಿಯ ನಿಧನವು ನಿಗೂಢತೆಯಿಂದ ಕೂಡಿರುವುದರಿಂದ ಸಿಬಿಐ (CBI) ತನಿಖೆ ನಡೆಸುವಂತೆ ಆರ್‌ಎಲ್‌ಪಿ ನಾಯಕ ಹಾಗೂ ಜಾಟ್ ಸಮುದಾಯದ ಪ್ರಭಾವಿ ಮುಖಂಡ ಹನುಮಾನ್ ಬೆನಿವಾಲ್ (Hanuman Beniwal) ಆಗ್ರಹಿಸಿದ್ದಾರೆ.

ಬುಧವಾರ (ಜನವರಿ 28) ಸಂಜೆ ಬೋರಾನಾಡಾ ಆಶ್ರಮದಿಂದ ಸಾಧ್ವಿ ಪ್ರೇಮ್ ಬೈಸಾ ಅವರನ್ನು ಅವರ ತಂದೆ ವೀರಂ ನಾಥ್ ಹಾಗೂ ಮತ್ತೊಬ್ಬ ಸಹಾಯಕ ಜೋಧಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಅವರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ವೈದ್ಯ ಪ್ರವೀಣ್ ಜೈನ್ ಸಾಧ್ವಿಯನ್ನು ಉಳಿಸಲು ಎಲ್ಲ ಪ್ರಯತ್ನಗಳನ್ನು ನಡೆಸಿದರೂ ಅವರ ದೇಹದಲ್ಲಿ ಯಾವುದೇ ಚಲನವಲನ ಇರಲಿಲ್ಲ ಎಂದು ತಿಳಿಸಿದ್ದಾರೆ. ಸಾಧ್ವಿಯ ತಂದೆಯೂ ಆಗಿರುವ ಅವರ ಗುರು, ಸಾಧ್ವಿಗೆ ಜ್ವರ ಇದ್ದುದರಿಂದ ಆಶ್ರಮಕ್ಕೆ ಒಬ್ಬ ಆರೋಗ್ಯ ಸಿಬ್ಬಂದಿಯನ್ನು ಕರೆಸಲಾಗಿತ್ತು ಎಂದು ಹೇಳಿದ್ದರು ಎಂದು ಡಾಕ್ಟರ್ ಜೈನ್ ತಿಳಿಸಿದ್ದಾರೆ. ಪರೀಕ್ಷಿಸಿದ ನಂತರ ಆ ಆರೋಗ್ಯ ಸಿಬ್ಬಂದಿ ಇಂಜೆಕ್ಷನ್ ನೀಡಿದ್ದು, ಅದರ ಬಳಿಕ ಸಾಧ್ವಿ ಪ್ರಜ್ಞೆ ಕಳೆದುಕೊಂಡಿದ್ದಾಗಿ ಹೇಳಿದ್ದಾರೆ.

ಇಲ್ಲಿದೆ ಪೋಸ್ಟ್:

ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲು ಆಂಬ್ಯುಲೆನ್ಸ್ ನೀಡುವುದಾಗಿ ವೈದ್ಯರು ಹೇಳಿದರು. ಆದರೆ, ಆಕೆಯ ತಂದೆ ನಾಥ್ ನಿರಾಕರಿಸಿ ತನ್ನ ಖಾಸಗಿ ಕಾರಿನಲ್ಲಿ ಆಕೆಯನ್ನು ಕರೆದೊಯ್ದರು.

ಸಾಧ್ವಿ ಬಹಳ ದಿನಗಳಿಂದ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು ಎಂದು ನಾಥ್ ಹೇಳಿದರು. ಅದಕ್ಕಾಗಿಯೇ ನಾವು ಆಶ್ರಮಕ್ಕೆ ಒಬ್ಬ ಕಾಂಪೌಂಡರ್ ಅನ್ನು ಕರೆಸಿದೆವು. ಆದರೆ ಆತ ಇಂಜೆಕ್ಷನ್ ನೀಡಿದ ಐದು ನಿಮಿಷಗಳ ನಂತರ ಆಕೆ ಪ್ರಜ್ಞೆ ತಪ್ಪಿದರು ಎಂದು ಹೇಳಿದರು. ಪ್ರಕರಣ ಸಂಬಂಧ ಕಾಂಪೌಂಡರ್‌ನನ್ನು ಬಂಧಿಸಲಾಗಿದ್ದು, ಆತನ ವೈದ್ಯಕೀಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

TMC ನಾಯಕನ ವಿರುದ್ಧದ ದೂರಿನ ಪ್ರಮುಖ ಸಾಕ್ಷಿಯ ಮಗ ಅಪಘಾತದಲ್ಲಿ ಸಾವು; ಸಿಬಿಐ ತನಿಖೆಗೆ ಆಗ್ರಹ

ಪ್ರೇಮ್ ಬೈಸಾ ಅವರ ಸಾವಿನ ಕುರಿತು ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಹಾಗೂ ರಾಜಸ್ಥಾನ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಗಂಭೀರವಾಗಿ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಲೋಕಸಭಾ ಸಂಸದ ಹನುಮಾನ್ ಬೆನಿವಾಲ್ ಆಗ್ರಹಿಸಿದ್ದಾರೆ. ಈ ವಿಷಯದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಅವರು ಹೇಳಿದರು.

ಅನುಮಾನಕ್ಕೆ ಕಾರಣವಾದ ಸಾಧ್ವಿ ಪ್ರೇಮ್ ಬೈಸಾ ಅವರ ಪೋಸ್ಟ್

ಸಾಧ್ವಿ ಅವರ ನಿಧನದ ಸುಮಾರು ನಾಲ್ಕು ಗಂಟೆಗಳ ನಂತರ ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬಂದಿರುವ ಒಂದು ಪೋಸ್ಟ್ ಅನುಮಾನಕ್ಕೆ ಕಾರಣವಾಗಿದೆ. ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ, ಅವರು ತಮ್ಮ ಅನುಯಾಯಿಗಳನ್ನು ಸ್ವಾಗತಿಸಿದ್ದಾರೆ.

ʼʼಸನಾತನ ಧರ್ಮದ ಪ್ರಚಾರಕ್ಕಾಗಿ ನಾನು ಜೀವನದ ಪ್ರತಿಕ್ಷಣವನ್ನೂ ಸಮರ್ಪಿಸಿದ್ದೇನೆ. ನನ್ನ ಜೀವನಪೂರ್ತಿ ಆದಿ ಜಗದ್ಗುರು ಶಂಕರಾಚಾರ್ಯರು, ವಿಶ್ವದ ಯೋಗಗುರುಗಳು ಹಾಗೂ ಪೂಜ್ಯ ಸಂತರು ಮತ್ತು ಋಷಿಗಳಿಂದ ಆಶೀರ್ವಾದಗಳನ್ನು ಪಡೆದಿದ್ದೇನೆ. ಅಗ್ನಿಪರೀಕ್ಷೆಗೆ ಒಳಪಡಿಸುವಂತೆ ಮನವಿ ಮಾಡಿ ನಾನು ಆದಿ ಗುರು ಶಂಕರಾಚಾರ್ಯರು ಮತ್ತು ದೇಶದ ಅನೇಕ ಮಹಾನ್ ಸಂತ-ಮಹಾತ್ಮರಿಗೆ ಪತ್ರಗಳನ್ನು ಬರೆದಿದ್ದೇನೆ. ಆದರೆ ಪ್ರಕೃತಿಗೆ ಏನು ವಿಧಿಸಿತ್ತೋ ಅದು ನಡೆಯಿತು. ನಾನು ಈ ಲೋಕಕ್ಕೆ ಶಾಶ್ವತವಾಗಿ ವಿದಾಯ ಹೇಳುತ್ತಿದ್ದೇನೆ. ಆದರೂ ನನಗೆ ದೇವರ ಮೇಲೆ ಹಾಗೂ ಪೂಜ್ಯ ಸಂತ-ಮಹಾತ್ಮರ ಮೇಲೂ ಸಂಪೂರ್ಣ ನಂಬಿಕೆ ಇದೆ. ನಾನು ಬದುಕಿದ್ದಾಗ ಅಲ್ಲದಿದ್ದರೂ, ನನ್ನ ಸಾವಿನ ನಂತರವಾದರೂ ನನಗೆ ಖಂಡಿತವಾಗಿ ನ್ಯಾಯ ಸಿಗಲಿದೆ ಎಂಬ ನಂಬಿಕೆಯಿದೆʼʼ ಎಂದು ಬರೆಯಲಾಗಿದೆ.

ಆ ಪೋಸ್ಟ್‌ ಅನ್ನು ಅವರ ಮೊಬೈಲ್‌ನಿಂದಲೇ ಹಂಚಿಕೊಳ್ಳಲಾಗಿದೆ ಎಂದು ಅವರ ತಂದೆ ದೃಢಪಡಿಸಿದ್ದಾರೆ. ಒಬ್ಬ ಸಹಗುರು ಮಹಾರಾಜ್ ಆ ಸಂದೇಶವನ್ನು ಕಳುಹಿಸಿದ್ದರು ಎಂದು ಅವರು ಹೇಳಿದರು. ಅಲ್ಲದೆ, ತಮ್ಮ ಪುತ್ರಿಯ ಸಾವಿನ ಕುರಿತು ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಸಾಧ್ವಿ ಪ್ರೇಮ್ ಬೈಸಾ ಅವರ ವೈರಲ್ ವಿಡಿಯೊ

ಕಳೆದ ವರ್ಷ ಪ್ರೇಮ್ ಬೈಸಾ ಮತ್ತು ಅವರ ತಂದೆ ವಿವಾದದಲ್ಲಿ ಸಿಲುಕಿದ್ದರು. ಪ್ರೇಮ್ ಬೈಸಾ ಅವರನ್ನು ಕೋಣೆಯಲ್ಲಿ ತಬ್ಬಿಕೊಳ್ಳುತ್ತಿರುವ ವಿಡಿಯೊ ವೈರಲ್ ಆಗಿತ್ತು. ಆ ವಿಡಿಯೊದಲ್ಲಿ, ಮತ್ತೊಬ್ಬ ಮಹಿಳೆ ಕಂಬಳಿ ತೆಗೆದುಕೊಳ್ಳಲು ಕೋಣೆಗೆ ಪ್ರವೇಶಿಸಿ ನಂತರ ಹೊರಗೆ ಹೋಗುವುದು ಕಂಡು ಬಂದಿತ್ತು. ಸಾಧ್ವಿ ಅದನ್ನು ಪ್ರೀತಿಯ ಅಭಿವ್ಯಕ್ತಿ ಎಂದು ಕರೆದಿದ್ದರು.

ಈ ವಿಡಿಯೊ ತಂದೆ ಮತ್ತು ಮಗಳ ನಡುವಿನ ಸಂಬಂಧವನ್ನು ಅವಮಾನಿಸುವ ಪ್ರಯತ್ನವಾಗಿದೆ ಎಂದು ಅವರು ಕಿಡಿ ಕಾರಿದ್ದರು. ಪೊಲೀಸರು ಪ್ರಕರಣದ ತನಿಖೆ ನಡೆಸಿ, ವಿಡಿಯೊ ವೈರಲ್ ಮಾಡಿದ್ದಕ್ಕೆ ಓರ್ವ ವ್ಯಕ್ತಿಯನ್ನು ಬಂಧಿಸಿದ್ದರು.