ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naxal Attack: ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ; ಇಬ್ಬರು ಗ್ರಾಮಸ್ಥರು ಬಲಿ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಬಸಗುದಾದ ನೆಲಾ ಕಂಕೇರ್ ಗ್ರಾಮದಲ್ಲಿ ಕೆಂಪು ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ಇಬ್ಬರೂ ಕಂಕೇರಾ ಗ್ರಾಮದ ನಿವಾಸಿಗಳಾಗಿದ್ದು, ಅವರ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಛತ್ತೀಸ್‌ಗಢದ ಬಿಜಾಪುರದಲ್ಲಿ ಮತ್ತೆ ನಕ್ಸಲ್ ದಾಳಿ

ಸಾಂದರ್ಭಿಕ ಚಿತ್ರ -

Profile Sushmitha Jain Oct 25, 2025 6:08 PM

ರಾಯ್‌ಪುರ: ಛತ್ತೀಸ್‌ಗಢ (Chhattisgarh)ದಲ್ಲಿ ಎಡಪಂಥೀಯ ಉಗ್ರವಾದಕ್ಕೆ ಮತ್ತೆರಡು ಅಮಾಯಕ ಜೀವಗಳು ಬಲಿಯಾಗಿವೆ. ಬಿಜಾಪುರ (Bijapur) ಜಿಲ್ಲೆಯಲ್ಲಿ ಬಸಗುದಾ (Basaguda) ಪೊಲೀಸ್ ಠಾಣಾ ವ್ಯಾಪ್ತಿಯ ನೆಲಾ ಕಂಕೇರ್ (Nela Kanker) ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಕ್ಸಲರು (Naxalites) ದಾಳಿ ನಡೆಸಿ ಇಬ್ಬರು ಗ್ರಾಮಸ್ಥರನ್ನು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, 25 ವರ್ಷದ ರವಿ ಕಟ್ಟಂ (Ravi Kattam) ಹಾಗೂ 38 ವರ್ಷದ ತಿರುಪತಿ ಸೋಧಿ (Tirupati Sodhi) ನಕ್ಸಲ್ ದಾಳಿಯಲ್ಲಿ ಸಾವನ್ನಪ್ಪಿದವರು ಎಂದು ತಿಳಿದುಬಂದಿದೆ. ಇಬ್ಬರೂ ಕಂಕೇರಾ ಗ್ರಾಮದ ನಿವಾಸಿಗಳಾಗಿದ್ದು, ಅವರ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

“ಈ ಘಟನೆಯ ಬಗ್ಗೆ ಅಕ್ಟೋಬರ್ 24ರ ರಾತ್ರಿ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ಹೆಚ್ಚಿನ ತಿನಿಖೆ ನಡೆಸಲಾಗುತ್ತಿದೆ" ಎಂದು ಬಿಜಾಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಜಿತೇಂದ್ರ ಯಾದವ್ ತಿಳಿಸಿದ್ದಾರೆ.

ಬಸ್ತಾರ್‌ ಪ್ರದೇಶದಲ್ಲಿ ಭದ್ರತಾ ಪಡೆಗಳು ನಕ್ಸಲ್ ವಿರೋಧಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿರುವ ಬೆನ್ನಲ್ಲೇ ಈ ಹತ್ಯೆಗಳು ನಡೆದಿವೆ. ಉಸೂರು ಪೊಲೀಸ್ ಠಾಣೆಯ ತಂಡಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದ್ದು, ದಾಳಿಯ ಹಿನ್ನೆಲೆ ಮತ್ತು ಸಂದರ್ಭಗಳ ಕುರಿತು ತನಿಖೆ ನಡೆಯುತ್ತಿದೆ.

ಈ ಸುದ್ದಿಯನ್ನು ಓದಿ: Viral Video: ಚಲಿಸುತ್ತಿದ್ದ ವಾಹನದಿಂದ ರಸ್ತೆಗೆ ಜಿಗಿದ ಸಿಂಹ; ಹಿಂದಿನಿಂದ ಬರುತ್ತಿದ್ದ ವಾಹನದಲ್ಲಿ ದೃಶ್ಯ ಸೆರೆ

ಇನ್ನೂ ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರದಲ್ಲಿ ಹಿರಿಯ ನಕ್ಸಲ್‌ ನಾಯಕ ನಲ್ಲುಜೋಲ ವೇಣುಗೋಪಾಲ್ ತನ್ನ 60 ಮಂದಿ ಸಹಚರರೊಂದಿಗೆ ಶರಣಾದ್ದ. ಇದರ ಬೆನ್ನಲ್ಲೇ ಛತ್ತೀಸ್‌ಗಢದ ಕಂಕೇರಾ ಮತ್ತು ಸುಕ್ಮಾ ಜಿಲ್ಲೆಗಳ ದಟ್ಟ ಅರಣ್ಯದಲ್ಲಿ ಅಡಗಿದ್ದ 42 ಮಹಿಳೆಯರು ಸೇರಿದಂತೆ ಒಟ್ಟು 77 ನಕ್ಸಲರು 39 ಶಸ್ತ್ರಾಸ್ತ್ರಗಳೊಂದಿಗೆ ಗಡಿ ಭದ್ರತಾ ಪಡೆಯ (BSF) ಮುಂದೆ ಶರಣಾಗಿದ್ದರು.

ಈ ಪೈಕಿ 16 ಮಂದಿ ನಕ್ಸಲರ ಮಾಹಿತಿ ನೀಡಿದವರಿಗೆ 50 ಲಕ್ಷ ರೂ. ಬಹುಮಾನ ಸಹ ಘೋಷಿಸಲಾಗಿತ್ತು. ಕಂಕೇರಾ ಜಿಲ್ಲೆಯಲ್ಲಿ 32 ಮಹಿಳೆಯರು ಸೇರಿದಂತೆ 50 ನಕ್ಸಲರು ಶರಣಾಗಿದ್ದಾರೆ. ಇವರೆಲ್ಲರೂ BSF ಕ್ಯಾಂಪ್‌ಗೆ ಬಂದು ಶರಣಾಗಿದ್ದಾರೆ. ಅಲ್ಲದೇ ದಂಡಕಾರಣ್ಯ ವಿಶೇಷ ವಲಯ ಸಮಿತಿ ಸದಸ್ಯರಾದ ರಾಜ್‌ಮಾನ್‌ ಮಾಂಡವಿ ಮತ್ತು ರಾಜು ಸಲಾಂ ನೇತೃತ್ವದ ಮಾವೋವಾದಿ ಕಾರ್ಯಕರ್ತರ ಗುಂಪು ಕಂಕೇರ್‌ನಲ್ಲಿರುವ ಕೊಯ್ಲೆಬೇಡ ಪೊಲೀಸ್ ಠಾಣೆ ವ್ಯಾಪ್ತಿಯ BSFನ 40ನೇ ಬೆಟಾಲಿಯನ್ ಶಿಬಿರವನ್ನು ತಲುಪಿತ್ತು.

ಈ ಶರಣಾಗತಿ ಬೆನ್ನಲ್ಲೇ ಇದೀಗ ಮತ್ತೆ ನಕ್ಸಲರ್ ದಾಳಿಗೆ ಎರಡು ಜೀವಗಳು ಬಲಿಯಾಗಿರುವುದು ಆತಂಕ ಮೂಡಿಸಿದೆ. ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ 2026ರ ಮಾರ್ಚ್ ಒಳಗೆ ಛತ್ತೀಸ್‌ಗಢದಲ್ಲಿ ನಕ್ಸಲಿಸಂ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ ಎಂದು ಪುನರುಚ್ಛರಿಸಿತ್ತು.