ಮುಂದುವರಿದ ವಿಮಾನಗಳ ಸಮಸ್ಯೆಗಳ ಸರಣಿ; ಪ್ರಯಾಗ್‌ರಾಜ್-ದೆಹಲಿ ಫ್ಲೈಟ್‌ನಲ್ಲಿ ಎಂಜಿನ್ ದೋಷ: ದಹಲಿಯಲ್ಲಿ 44 ಪ್ರಯಾಣಿಕರೊಂದಿಗೆ ಸುರಕ್ಷಿತವಾಗಿ ಇಳಿದ ಅಲೈಯನ್ಸ್ ಏರ್
Engine Trouble on Flight: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಿಂದ ದೆಹಲಿಗೆ ಹೊರಟಿದ್ದ ಅಲೈಯನ್ಸ್ ಏರ್ ವಿಮಾನವು ಇಳಿಯುವ ಮುನ್ನ ತಾಂತ್ರಿಕ ದೋಷವನ್ನು ಎದುರಿಸಿತು. ತಾಂತ್ರಿಕ ದೋಷದ ನಂತರ, ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ವಿಮಾನದ ಒಂದು ಎಂಜಿನ್ ಕೈಕೊಟ್ಟಿದ್ದರಿಂದ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು.
ಸಾಂದರ್ಭಿಕ ಚಿತ್ರ -
ಲಖನೌ, ಸೆ. 11: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಿಂದ ದೆಹಲಿಗೆ ಹೊರಟಿದ್ದ ಅಲೈಯನ್ಸ್ ಏರ್ (Alliance Air) ವಿಮಾನವು ಇಳಿಯುವ ಮುನ್ನ ತಾಂತ್ರಿಕ ದೋಷವನ್ನು ಎದುರಿಸಿತು (Engine Trouble on Flight). ಅದರ ಒಂದು ಎಂಜಿನ್ ಕಾರ್ಯನಿರ್ವಹಿಸಲಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ತಾಂತ್ರಿಕ ದೋಷದ ನಂತರ, ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು.
ಅಲೈಯನ್ಸ್ ಏರ್ ಸಂಸ್ಥೆಗೆ ಸೇರಿದ, ಎಟಿಆರ್ 72 (ATR 72) ಮಾದರಿಯ 9I 698 ವಿಮಾನದಲ್ಲಿ ಸುಮಾರು 40 ಪ್ರಯಾಣಿಕರಿದ್ದರು. ವಿಮಾನದ ಒಂದು ಎಂಜಿನ್ ಕೈಕೊಟ್ಟಿದ್ದರಿಂದ ಮುನ್ನೆಚ್ಚರಿಕೆ ಕೈಗೊಳ್ಳಲಾಯಿತು. ತಕ್ಷಣವೇ ಅಗತ್ಯವಿರುವ ಎಲ್ಲ ತುರ್ತು ರಕ್ಷಣಾ ಕ್ರಮಗಳನ್ನು ಸಕ್ರಿಯಗೊಳಿಸಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫ್ಲೈಟ್‌ರಾಡಾರ್24.ಕಾಮ್ ವಿಮಾನ ಟ್ರ್ಯಾಕಿಂಗ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ವಿಮಾನವು ಸೆಪ್ಟೆಂಬರ್ 11ರ ಮಧ್ಯಾಹ್ನ ಸುಮಾರು 2:15ಕ್ಕೆ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಆದರೆ ಯಾವುದೇ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿಲ್ಲ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಅನಾರೋಗ್ಯಕ್ಕೀಡಾದ ಪೈಲೆಟ್; ವಾರಣಾಸಿ- ಮುಂಬೈ ಇಂಡಿಗೋ ವಿಮಾನ 3 ಗಂಟೆ ವಿಳಂಬ
ವಿಟಿ-ಎಐಯು (VT-AIU) ವಿಮಾನದಿಂದ ನಿರ್ವಹಿಸಲ್ಪಡುವ ಅಲೈಯನ್ಸ್ ಏರ್ ಫ್ಲೈಟ್ 9I-698, ಬಿಲಾಸ್ಪುರ್-ಪ್ರಯಾಗ್‌ರಾಜ್-ದೆಹಲಿ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ದೆಹಲಿಗೆ ಆಗಮಿಸುವ ಸಮಯದಲ್ಲಿ, LH ಸೈಡ್ (ಎಡಭಾಗದ) ಎಂಜಿನ್‌ನಲ್ಲಿ ಕಡಿಮೆ ತೈಲ ಒತ್ತಡವಿದ್ದ ಕಾರಣ ಪೈಲಟ್-ಇನ್-ಕಮಾಂಡ್ ಆದ್ಯತೆಯ ಮೇರೆಗೆ ವಿಮಾನ ಇಳಿಸಲು ವಿನಂತಿಸಿದರು ಎಂದು ವಿಮಾನಯಾನ ಸಂಸ್ಥೆಗಳು ಹೇಳಿಕೆಯಲ್ಲಿ ತಿಳಿಸಿವೆ.
ಹಿಂದೆಯೂ ನಡೆದಿತ್ತು
ಆಗಸ್ಟ್ 28ರಂದು ದೆಹಲಿ-ಬಿಲಾಸ್ಪುರ ಅಲೈಯನ್ಸ್ ಏರ್ ವಿಮಾನವು ಬಿಲಾಸ್ಪುರದ ಬಿಲಾಸಾ ದೇವಿ ಕೆವತ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಟೈರ್ ಸ್ಫೋಟಗೊಂಡು ಆತಂಕದ ಪ್ರಿಸ್ಥಿತಿ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಅಂದು ಎಲ್ಲ 37 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಸುರಕ್ಷಿತವಾಗಿ ಇಳಿದಿದ್ದರು.
ಬಿಲಾಸಾ ದೇವಿ ಕೆವಾತ್ ವಿಮಾನ ನಿಲ್ದಾಣದ ನಿರ್ದೇಶಕ ಬಿ. ಸಿಂಗ್ ಈ ಬಗ್ಗೆ ಮಾಹಿತಿ ನೀಡಿ, ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ಎಡ ಟೈರ್ ಸಿಡಿದಿತ್ತು. ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ರನ್‌ವೇಯಲ್ಲಿ ಇಳಿಸಲಾಯಿತು. ನಂತರ ಸುರಕ್ಷಿತವಾಗಿ ಟರ್ಮಿನಲ್ ಕಟ್ಟಡಕ್ಕೆ ಕರೆದೊಯ್ಯಲಾಯಿತು ಎಂದು ಅವರು ಹೇಳಿದ್ದರು.
ಸೆಪ್ಟೆಂಬರ್ 7ರಂದು ಏರ್ ಇಂಡಿಯಾದ ದಮ್ಮಾಮ್-ದೆಹಲಿ ವಿಮಾನದ ಸಿಬ್ಬಂದಿಯೊಬ್ಬರು ವಿಮಾನದ ಶೌಚಾಲಯದೊಳಗೆ ಬಾಂಬ್ ಎಂಬ ಪದವನ್ನು ಹೊಂದಿರುವ ಟಿಶ್ಯೂ ಪೇಪರ್ ಪತ್ತೆ ಹಚ್ಚಿದ ನಂತರ ಭೀತಿಯುಂಟಾದ ಘಟನೆ ನಡೆದಿದೆ. ಬಳಿಕ ವಿಮಾನವನ್ನು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ವಿಮಾನದಲ್ಲಿದ್ದ ಎಲ್ಲ 32 ಪ್ರಯಾಣಿಕರನ್ನು ಟರ್ಮಿನಲ್ 2 ರಲ್ಲಿ ಸುರಕ್ಷಿತವಾಗಿ ಇಳಿಸಲಾಗಿದ್ದು, ಭದ್ರತಾ ಸಿಬ್ಬಂದಿ ವಿಮಾನವನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರೆ.