ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲಿಂಗ ಅನುಪಾತ ಸೂಚ್ಯಂಕ: ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನ ಯಾರಿಗೆ? ಭಾರತದ ಸ್ಥಾನವೆಷ್ಟು?

Global Gender Gap Index 2026: ವಿಶ್ವ ಆರ್ಥಿಕ ವೇದಿಕೆಯು ಬುಧವಾರ ಲಿಂಗ ಅಂತರ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ. ಜಾಗತಿಕ ಲಿಂಗ ಅಂತರ ಸೂಚ್ಯಂಕ 2026ರಲ್ಲಿ ಮೊದಲ ಸ್ಥಾನ ಐಸ್‌ಲ್ಯಾಂಡ್‌ಗೆ ಸಿಕ್ಕಿದ್ದರೆ, ಭಾರತದ ಸ್ಥಾನ 131ರಲ್ಲಿ ಸ್ಥಿರವಾಗಿದೆ. ಐಸ್‌ಲ್ಯಾಂಡ್ ಬಳಿಕ ಫಿನ್‌ಲ್ಯಾಂಡ್ ಮತ್ತು ನಾರ್ವೆ ದೇಶ ಕ್ರಮವಾಗಿ ಸ್ಥಾನ ಪಡೆದಿವೆ.

ಲಿಂಗ ಅಂತರ ಸೂಚ್ಯಂಕ: ಭಾರತ ಯಾವ ಸ್ಥಾನದಲ್ಲಿದೆ?

ಸಂಗ್ರಹ ಚಿತ್ರ -

ನವದೆಹಲಿ: ಲಿಂಗ ಅಂತರ (Gender Gap) ಸೂಚ್ಯಂಕದಲ್ಲಿ (Gender Gap ratio) ಭಾರತ 131ರ ಸ್ಥಾನದಲ್ಲಿ ಸ್ಥಿರವಾಗಿದೆ. ವಿಶ್ವದ ಅತಿ ಹೆಚ್ಚು ಸುಮಾರು 150 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಲಿಂಗ ಸಮಾನತೆಯ ಪ್ರಗತಿಯು (India's rank on Global Gender Gap Index) ಶೇ. 64.5ರಷ್ಟಿದೆ. ಇದು ಜಾಗತಿಕ ಸರಾಸರಿಗಿಂತ ಕಡಿಮೆಯಾದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ ಸುಧಾರಣೆ ಕಂಡುಬಂದಿದೆ ಎಂಬುದಾಗಿ ಜಿನೀವಾ ಮೂಲದ ವಿಶ್ವ ಆರ್ಥಿಕ ವೇದಿಕೆಯು (World Economic Forum) ಬುಧವಾರ ಬಿಡುಗಡೆ ಮಾಡಿರುವ ಜಾಗತಿಕ ಲಿಂಗ ಅಂತರ ಸೂಚ್ಯಂಕ 2026ರಲ್ಲಿ (Global Gender Gap Index 2026) ತಿಳಿಸಿದೆ.

ಒಟ್ಟು 145 ದೇಶಗಳನ್ನು ಒಳಗೊಂಡ ಜಾಗತಿಕ ಲಿಂಗ ಅಂತರ ಸೂಚ್ಯಂಕದಲ್ಲಿ ಭಾರತ 131ನೇ ಸ್ಥಾನವನ್ನು ಕಾಯ್ದುಕೊಂಡಿದ್ದರೆ ಐಸ್‌ಲ್ಯಾಂಡ್, ಫಿನ್‌ಲ್ಯಾಂಡ್ ಮತ್ತು ನಾರ್ವೆ ದೇಶಗಳು ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಉಳಿಸಿಕೊಂಡಿವೆ.

ಪಾಕಿಸ್ತಾನ ಮೂಲದ ಶಹಜಾದ್ ಭಟ್ಟಿ ಜಾಲವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಕೇಂದ್ರ

ಭಾರತದ ಬಳಿಕ ಕೇವಲ 14 ದೇಶಗಳು ಸ್ಥಾನ ಪಡೆದಿದ್ದು, ಇವುಗಳಲ್ಲಿ ಪಪುವಾ ನ್ಯೂಗಿನಿಯಾ, ಕುವೈತ್, ಓಮನ್, ಕತಾರ್, ತಜಕಿಸ್ತಾನ್, ಸೌದಿ ಅರೇಬಿಯಾ, ಈಜಿಪ್ಟ್, ಮೊರಾಕೊ, ಮಾಲಿ, ಅಲ್ಜೀರಿಯಾ ಮತ್ತು ಕಾಂಗೋ ಸೇರಿವೆ.ಇರಾನ್ ಮತ್ತು ಪಾಕಿಸ್ತಾನ ಕೊನೆಯ ಮೂರು ದೇಶಗಳ ಸ್ಥಾನದಲ್ಲಿವೆ.

ಈ ಸೂಚ್ಯಂಕದ ಪ್ರಕಾರ ಬಹುತೇಕ ಎಲ್ಲಾ ಆರ್ಥಿಕತೆಗಳು ಲಿಂಗ ಸಮಾನತೆಯಲ್ಲಿ ಪ್ರಗತಿಯನ್ನು ಸಾಧಿಸಿವೆ. ಆದರೆ ಸಂಪೂರ್ಣ ಸಮಾನತೆ ಸಾಧಿಸಲು ಇನ್ನೂ 120 ವರ್ಷಗಳು ಬೇಕಾಗಬಹುದು. ಜಾಗತಿಕ ಲಿಂಗ ಅಂತರದಲ್ಲಿ ಶೇ. 69.2ರಷ್ಟು ಅಂತರವನ್ನು ಕಡಿಮೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಶೇ. 0.4ರಷ್ಟು ಹೆಚ್ಚಳವಾಗಿದೆ ಎಂದು ವಿಶ್ವ ಆರ್ಥಿಕ ವೇದಿಕೆಯು ತಿಳಿಸಿದೆ.

2006ರಿಂದ ಭಾರತದಲ್ಲಿ ಲಿಂಗ ಸಮಾನತೆಯ ಮಟ್ಟ ಶೇ. 4.3ರಷ್ಟು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿ ಎನ್ನುತ್ತದೆ ವಿಶ್ವ ಆರ್ಥಿಕ ವೇದಿಕೆ. ಆರ್ಥಿಕ ಭಾಗವಹಿಸುವಿಕೆ ಮತ್ತು ಅವಕಾಶ ಎಂಬ ಉಪ-ಸೂಚ್ಯಂಕದಲ್ಲಿ ಭಾರತವು ಶೇ. 41.2ರಷ್ಟು ಸಮಾನತೆಯನ್ನು ದಾಖಲಿಸಿದೆ. ಇದು ಹಿಂದಿನ ಸಾಲಿಗಿಂತ ಶೇ. 0.5ರಷ್ಟು ಹೆಚ್ಚಾಗಿದ್ದರೂ, 2013ರಲ್ಲಿ ದಾಖಲಿಸಿದ್ದ ಅತ್ಯುತ್ತಮ ಫಲಿತಾಂಶಕ್ಕಿಂತ ಶೇ. 3.5ರಷ್ಟು ಕಡಿಮೆಯಾಗಿದೆ.

ವೃತ್ತಿಪರ ಮತ್ತು ತಾಂತ್ರಿಕ ಉದ್ಯೋಗಿಗಳ ಕ್ಷೇತ್ರದಲ್ಲಿ ಭಾರತದಲ್ಲಿ ಲಿಂಗ ಸಮಾನತೆಯ ಪ್ರಮಾಣ ದ್ವಿಗುಣಗೊಂಡಿದೆ. 2006ರಲ್ಲಿ ಇದು ಶೇ. 26.6ರಷ್ಟಿದ್ದು, 2026ರಲ್ಲಿ ಶೇ. 49.9ರಷ್ಟಾಗಿದೆ. ಶಾಸಕರು, ಹಿರಿಯ ಅಧಿಕಾರಿಗಳು ಮತ್ತು ವ್ಯವಸ್ಥಾಪಕರ ಮಟ್ಟದಲ್ಲಿ 2006ರ ಬಳಿಕ ಶೇಕಡಾವಾರು 10ರಷ್ಟು ಸುಧಾರಣೆಯಾಗಿದ್ದರೂ ಶೇಕಾಡ 13.1ರಷ್ಟು ಕಡಿಮೆಯಾಗಿದೆ. ಕಳೆದ ಎರಡು ದಶಕಗಳಲ್ಲಿ ಕಾರ್ಮಿಕ ಬಲದಲ್ಲಿ ಭಾಗವಹಿಸುವಿಕೆಯ ಸಮಾನತೆಯು ಅಲ್ಪ ಪ್ರಮಾಣದ ಸುಧಾರಣೆಯನ್ನು ಕಂಡಿದ್ದು, 2026ರಲ್ಲಿ ಇದು ಶೇ. 44.1 ರಷ್ಟಿದೆ.

ಶೈಕ್ಷಣಿಕ ಸಾಧನೆಯ ಉಪ-ಸೂಚ್ಯಂಕದಲ್ಲಿ ಭಾರತವು ಶೇ. 96.6 ರಷ್ಟು ಸಮಾನತೆ ಅಂಕ ದಾಖಲಿಸಿದೆ. ಇದು ಹಿಂದಿನ ವರ್ಷಕ್ಕಿಂತ ಶೇಕಡಾ 0.5 ಅಂಕ ಕಡಿಮೆಯಾಗಿದೆ. 'ಆರೋಗ್ಯ ಮತ್ತು ಬದುಕುಳಿಯುವಿಕೆ' ವಿಭಾಗದಲ್ಲಿ ಭಾರತವು ಹಿಂದಿನ ಸಾಲಿಗಿಂತ ತನ್ನ ಅಂಕವನ್ನು ಸುಧಾರಿಸಿಕೊಂಡು ಶೇ. 95.6ರಷ್ಟು ಸಮಾನತೆಯನ್ನು ತಲುಪಿದೆ. 2026ರಲ್ಲಿ ಭಾರತದ ಜನನ ಸಮಯದ ಲಿಂಗಾನುಪಾತ 2006ರ ಮಟ್ಟಕ್ಕಿಂತ ಸುಮಾರು ಒಂದು ಶೇಕಡಾವಾರು ಅಂಕ ಕಡಿಮೆಯಾಗಿದೆ. 'ರಾಜಕೀಯ ಸಬಲೀಕರಣ'ದಲ್ಲಿ ಶೇಕಡಾ 24.5ರಷ್ಟು ಸಮಾನತೆ ಇದ್ದು, ಜಾಗತಿಕವಾಗಿ 67ನೇ ಸ್ಥಾನ ಪಡೆದುಕೊಳ್ಳಲಾಗಿದೆ. 'ರಾಷ್ಟ್ರದ ಮುಖ್ಯಸ್ಥರು' ಸೂಚ್ಯಂಕದಲ್ಲಿ 2021ರ ಬಳಿಕ ಭಾರತದ ಸೂಚ್ಯಂಕದಲ್ಲಿ ಕುಸಿತ ಕಂಡು ಪ್ರಸ್ತುತ ಶೇ. 40.7ಕ್ಕೆ ತಲುಪಿದೆ.

ಇತರ ವಿಷಯಗಳಲ್ಲಿ ಸಮಾನತೆಯ ಮಟ್ಟದಲ್ಲಿ ಭಾರತ ತುಲನಾತ್ಮಕವಾಗಿ ಕಡಿಮೆ ಇದೆ. ಸಂಸತ್ತಿನಲ್ಲಿ 2026ರ ವೇಳೆಗೆ ಲಿಂಗ ಅಂತರ ಶೇಕಡಾ 16.1ರಷ್ಟು ಕಡಿಮೆಯಾಗಿದೆ. 2006ರಿಂದೀಚೆಗೆ ಇದರಲ್ಲಿ ಶೇಕಡಾ 7 ಅಂಕಗಳ ಏರಿಕೆಯಾಗಿದೆ.

ರಾಜಕೀಯ ಸಬಲೀಕರಣದ ಕ್ಷೇತ್ರದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ 2016ರಿಂದೀಚೆಗೆ ಹಿಮ್ಮುಖವಾಗುತ್ತಿದೆ. ಆರ್ಥಿಕ ಕ್ಷೇತ್ರದಲ್ಲಿ ಮಹಿಳೆಯರ ನೇತೃತ್ವ ಕೂಡ ಕುಸಿದಿದೆ. ಉನ್ನತ ಕಾರ್ಯನಿರ್ವಾಹಕ ಹುದ್ದೆಗಳು, ಸಚಿವ ಸಂಪುಟ, ಅತ್ಯಂತ ಹೆಚ್ಚಿನ ಆರ್ಥಿಕ ಮತ್ತು ರಾಜಕೀಯ ಪ್ರಭಾವವನ್ನು ಹೊಂದಿರುವ ಹುದ್ದೆಗಳಲ್ಲಿ ಅವರ ಪ್ರಾತಿನಿಧ್ಯ ಕಡಿಮೆಯಾಗುತ್ತಿದೆ. ಆರ್ಥಿಕ ಭಾಗವಹಿಸುವಿಕೆ ಮತ್ತು ಅವಕಾಶಗಳ ವಿಷಯದಲ್ಲಿ ದಕ್ಷಿಣ ಏಷ್ಯಾವು ಅತ್ಯಂತ ಕಡಿಮೆ ಅಂಕಗಳನ್ನು ಪಡೆದಿದೆ ಎಂಬುದಾಗಿ ಲಿಂಗ ಅಂತರ ಸೂಚ್ಯಂಕ ತಿಳಿಸಿದೆ.

ಬ್ರಿಕ್ಸ್‌ ಶೃಂಗಸಭೆ ಭದ್ರತಾ ಕರ್ತವ್ಯದ ವೇಳೆಯಲ್ಲೇ ಬಂದೂಕು ಹಿಡಿದು ರೀಲ್ಸ್; ದೆಹಲಿ ಪೊಲೀಸ್ ಪೇದೆ ಅಮಾನತು

ಲಿಂಗ ಅಸಮಾನತೆಯ ಅಂತರವನ್ನು ಶೇಕಡಾ 90ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಹೋಗಲಾಡಿಸಿದ ಏಕೈಕ ದೇಶ ಐಸ್‌ಲ್ಯಾಂಡ್ ಆಗಿ ಗುರುತಿಸಿಕೊಂಡಿದ್ದು, ಮೊದಲ ಹತ್ತು ಸ್ಥಾನಗಳಲ್ಲಿ ನಮೀಬಿಯಾ ನಾಲ್ಕನೇ ಸ್ಥಾನಕ್ಕೆ ಏರಿದೆ. ಇದರ ಬಳಿಕ ಯುನೈಟೆಡ್ ಕಿಂಗ್‌ಡಮ್, ನ್ಯೂಜಿಲೆಂಡ್, ಸ್ವೀಡನ್, ಆಸ್ಟ್ರೇಲಿಯಾ, ಜರ್ಮನಿ ಮತ್ತು ಐರ್ಲೆಂಡ್ ಸ್ಥಾನ ಪಡೆದಿವೆ. ಆಸ್ಟ್ರೇಲಿಯಾ ಮೊದಲ ಬಾರಿಗೆ ಅಗ್ರ 10ರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.