"ಕಾಶ್ಮೀರದ ತಂಟೆಗೆ ಬಂದ್ರೆ ಹುಶಾರ್"; ವಿಶ್ವಸಂಸ್ಥೆಯಲ್ಲಿ ಮತ್ತೆ ಪಾಕಿಸ್ತಾನದ ಮರ್ಯಾದೆ ತೆಗೆದ ಭಾರತ
ವಿಶ್ವಸಂಸ್ಥೆಯಲ್ಲಿ ಭಾರತ, ಪಾಕಿಸ್ತಾನವನ್ನು ‘ಫ್ರಾಂಕೆನ್‌ಸ್ಟೈನ್ ರಾಜ್ಯ’ ಎಂದು ಕರೆಯುತ್ತಾ ಭಯೋತ್ಪಾದನೆಗೆ ಬೆಂಬಲ ನೀಡುವ ರಾಷ್ಟ್ರವೆಂದು ಆರೋಪಿಸಿದೆ. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಪುನರುಚ್ಚರಿಸಿದ ಭಾರತ, ಸಿಂಧು ಜಲ ಒಪ್ಪಂದವೂ ಕಾಲಹರಣಗೊಂಡಿದೆ ಎಂದು ಹೇಳಿದೆ.
ಅನೂಪಮಾ ಸಿಂಗ್ -
ನ್ಯೂಯಾರ್ಕ್ ಜೂನ್ 19: ವಿಶ್ವಸಂಸ್ಥೆಯ (United Nations - UN) ವೇದಿಕೆಯಲ್ಲಿ ಭಾರತ (India) ಮತ್ತೊಮ್ಮೆ ಪಾಕಿಸ್ತಾನ (Pakistan) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಭಯೋತ್ಪಾದನೆಗೆ (Terrorism) ಬೆಂಬಲ ನೀಡುತ್ತಿರುವ ರಾಷ್ಟ್ರವೆಂದು ಆರೋಪಿಸಿದೆ. ಪಾಕಿಸ್ತಾನವನ್ನು "ಫ್ರಾಂಕೆನ್‌ಸ್ಟೈನ್ ರಾಜ್ಯ ಎಂದು ಬಣ್ಣಿಸಿದ ಭಾರತ, ತನ್ನದೇ ಸೃಷ್ಟಿಸಿದ ಭಯೋತ್ಪಾದಕ ದೈತ್ಯಗಳು (Terror Networks / Terror Monsters) ತಿರುಗಿ ಕಚ್ಚಿದಾಗ ಬೆಚ್ಚಿಬೀಳುವ ದೇಶ ಎಂದು ಟೀಕಿಸಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉನ್ನತ ಆಯುಕ್ತರ (UN High Commissioner for Human Rights) ವಾರ್ಷಿಕ ವರದಿ ಕುರಿತ ಸಂವಾದದಲ್ಲಿ ಭಾರತದ ಶಾಶ್ವತ ಪ್ರತಿನಿಧಿ ಮಂಡಳಿಯ ಪ್ರಥಮ ಕಾರ್ಯದರ್ಶಿ ಅನೂಪಮಾ ಸಿಂಗ್ ಈ ಹೇಳಿಕೆ ನೀಡಿದರು. ವೇದಿಕೆಯಲ್ಲಿ ಪಾಕಿಸ್ತಾನದ ಪ್ರತಿನಿಧಿ ಜಮ್ಮು-ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ ಬಳಿಕ ಭಾರತ ತನ್ನ ಉತ್ತರ ಹಕ್ಕು (Right of Reply) ಬಳಸಿಕೊಂಡು ತಿರುಗೇಟು ನೀಡಿತು.
"ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಹಾಗೂ ಅಳಿಯದ ಅಂಗವಾಗಿದ್ದು, ಅದು ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ ಮತ್ತು ಮುಂದೆಯೂ ಹಾಗೆಯೇ ಇರುತ್ತದೆ. ಬಗೆಹರಿಯದಿರುವ ಏಕೈಕ ವಿಷಯವೆಂದರೆ ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶಗಳನ್ನು ಹಿಂತಿರುಗಿಸುವುದು" ಎಂದು ಅನೂಪಮಾ ಸಿಂಗ್ ಸ್ಪಷ್ಟಪಡಿಸಿದರು.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ದಮನ ಆರೋಪ
ಪಾಕ್ ಆಕ್ರಮಿತ ಕಾಶ್ಮೀರ (PoJK) ಪ್ರದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದಮನದ ಕುರಿತು ಮಾತನಾಡಿದ ಅವರು, ರಾವಲಕೋಟ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾತ್ಮಕ ಪ್ರತಿಭಟನೆಗಳು ಹಾಗೂ ನಾಗರಿಕರ ಸಾವನ್ನು ಉಲ್ಲೇಖಿಸಿದರು.
"ರಾವಲಕೋಟ್‌ನಲ್ಲಿ ನಡೆಯುತ್ತಿರುವ ದುರಂತ, ನೂರಾರು ನಾಗರಿಕರ ಹತ್ಯೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ನಡೆಯುತ್ತಿರುವ ಕ್ರೂರ ದಮನವು ಬಲವಂತದ ಆಕ್ರಮಣ ಮತ್ತು ದಬ್ಬಾಳಿಕೆಯ ವ್ಯವಸ್ಥೆಯ ಪರಿಣಾಮವಾಗಿದೆ" ಎಂದು ಅವರು ಆರೋಪಿಸಿದರು.
ಇತ್ತೀಚೆಗೆ ರಾವಲಕೋಟ್‌ನಲ್ಲಿ ನಡೆದ ಪ್ರತಿಭಟನೆಗಳ ವೇಳೆ ನಾಲ್ವರು ಪೊಲೀಸ್ ಸಿಬ್ಬಂದಿ ಸೇರಿ 11 ಮಂದಿ ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದರು.
#WATCH | First Secretary at the Permanent Mission of India to the United Nations, Anupama Singh says, "Jammu and Kashmir was, is and will always remain an integral and inalienable part of India. The only unresolved issue is Pakistan's illegal occupation of Indian territories and… pic.twitter.com/Kjr0mq1STZ
— ANI (@ANI) June 18, 2026
‘ಭಯೋತ್ಪಾದಕರಿಗೆ ಆಶ್ರಯ ನೀಡುವ ರಾಷ್ಟ್ರ’
ಪಾಕಿಸ್ತಾನದ ರಕ್ಷಣಾ ಸಚಿವರ ಹೇಳಿಕೆಗಳನ್ನೂ ಉಲ್ಲೇಖಿಸಿದ ಅನೂಪಮಾ ಸಿಂಗ್, "ಭಯೋತ್ಪಾದಕರಿಗೆ ಆಶ್ರಯ, ತರಬೇತಿ ಮತ್ತು ನಿಯೋಜನೆಯನ್ನು ರಾಜ್ಯ ನೀತಿಯಾಗಿಸಿಕೊಂಡಿರುವ ದೇಶವೇ ಪಾಕಿಸ್ತಾನ. ಆದರೆ ಅದೇ ದೇಶ ತಾನು ಭಯೋತ್ಪಾದನೆಯ ಬಲಿಪಶು ಎಂದು ಹೇಳಿಕೊಳ್ಳುವುದು ದೊಡ್ಡ ವಿರೋಧಾಭಾಸ" ಎಂದರು.
"ತನ್ನದೇ ಸೃಷ್ಟಿಸಿದ ದೈತ್ಯದಿಂದ ಕಚ್ಚಿಸಿಕೊಂಡು ಬೆಚ್ಚಿಬೀಳುವ ಫ್ರಾಂಕೆನ್‌ಸ್ಟೈನ್ ರಾಜ್ಯಕ್ಕೆ ಪಾಕಿಸ್ತಾನ ಜೀವಂತ ಉದಾಹರಣೆ" ಎಂದು ಅವರು ಕಿಡಿಕಾರಿದರು.
ಸಿಂಧು ಜಲ ಒಪ್ಪಂದದ ಕುರಿತು ಭಾರತದ ನಿಲುವು
ಈ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಿಂಧು ಜಲ ಒಪ್ಪಂದ (Indus Waters Treaty) ಕುರಿತೂ ಅನೂಪಮಾ ಸಿಂಗ್ ಮಾತನಾಡಿದರು.
2025ರ ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟಿದ್ದರು. ಈ ದಾಳಿಯ ನಂತರ ಭಾರತ ಸಿಂಧು ಜಲ ಒಪ್ಪಂದದ ಅನುಷ್ಠಾನವನ್ನು ಸ್ಥಗಿತಗೊಳಿಸಿತ್ತು.
"ಭಯೋತ್ಪಾದನೆಯನ್ನು ವಿದೇಶಾಂಗ ನೀತಿಯ ಸಾಧನವಾಗಿ ಬಳಸುವ ರಾಷ್ಟ್ರವು ಸಹಕಾರ ಮತ್ತು ಸ್ನೇಹದ ಆಧಾರದ ಮೇಲೆ ದೊರೆಯುವ ಸೌಲಭ್ಯಗಳನ್ನು ನಿರಂತರವಾಗಿ ಬೇಡಿಕೊಳ್ಳುವುದು ತರ್ಕಕ್ಕೆ ವಿರುದ್ಧವಾಗಿದೆ" ಎಂದು ಅವರು ಹೇಳಿದರು.
#WATCH | First Secretary at the Permanent Mission of India to the United Nations, Anupama Singh says, "This is the country where the sitting Defense Minister boast of hosting, training and deploying terrorist estate policy and yet Pakistan calls itself a victim of terrorism,… pic.twitter.com/OrKNKUITev
— ANI (@ANI) June 18, 2026
‘1960ರ ಒಪ್ಪಂದ ಇಂದಿನ ಕಾಲಕ್ಕೆ ಹೊಂದಿಕೆಯಾಗುವುದಿಲ್ಲ’
1960ರಲ್ಲಿ ವಿಶ್ವ ಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧು ಜಲ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಸಿಂಧು ನದಿ ಹಾಗೂ ಅದರ ಉಪನದಿಗಳ ನೀರಿನ ಹಂಚಿಕೆ ಮತ್ತು ಬಳಕೆಯನ್ನು ಈ ಒಪ್ಪಂದ ನಿಯಂತ್ರಿಸುತ್ತದೆ.
ಆದರೆ, "1960ರಲ್ಲಿ ರೂಪುಗೊಂಡ ಒಪ್ಪಂದವನ್ನು ಶಾಶ್ವತ ಹಕ್ಕಾಗಿ ಪರಿಗಣಿಸಲು ಸಾಧ್ಯವಿಲ್ಲ. ಕಳೆದ ಆರು ದಶಕಗಳಲ್ಲಿ ವಿಶ್ವದಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ತಾಂತ್ರಿಕ ಒಪ್ಪಂದ ಕಾಲಾನುಸಾರ ಪರಿಷ್ಕರಣೆಗೊಳ್ಳಲೇಬೇಕು" ಎಂದು ಭಾರತ ಅಭಿಪ್ರಾಯ ವ್ಯಕ್ತಪಡಿಸಿದೆ.
ಭಯೋತ್ಪಾದನೆ, ಗಡಿ ಭದ್ರತೆ ಮತ್ತು ಪ್ರಾದೇಶಿಕ ಸ್ಥಿರತೆ ವಿಷಯಗಳಲ್ಲಿ ಪಾಕಿಸ್ತಾನ ತನ್ನ ನಿಲುವು ಬದಲಾಯಿಸದ ಹೊರತು ಸಹಕಾರದ ನಿರೀಕ್ಷೆ ಇಡುವುದು ಸೂಕ್ತವಲ್ಲ ಎಂಬ ಸಂದೇಶವನ್ನು ಭಾರತ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ.