ಇಂದೋರ್ ಕಲುಷಿತ ನೀರು ಪ್ರಕರಣ; 9 ಮಂದಿ ಸಾವಿಗೆ ಕಾರಣವಾದ ನೀರಿನಲ್ಲಿ ಒಳಚರಂಡಿ ಬ್ಯಾಕ್ಟೀರಿಯಾ ಪತ್ತೆ!
Indore Contaminated Water Tragedy: ಇಂದೋರ್‌ನ ಭಗೀರಥಪುರದಲ್ಲಿ ನಡೆದ ಕಲುಷಿತ ನೀರು ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿದ್ದು, ಉಳಿದವರ ಸ್ಥಿತಿ ಗಂಭೀರವಾಗಿದೆ. ಇದೀಗ ಈ ಅವಘಡಕ್ಕೆ ಸಂಬಂಧಪಟ್ಟಂತೆ ಕಾರಣ ಬಯಲಾಗಿದ್ದು, ಕುಡಿಯುವ ನೀರಿನ ಮಾದರಿಯಲ್ಲಿ ಒಳಚರಂಡಿ ನೀರಿನಲ್ಲಿ ಕಂಡುಬರುವ ಬ್ಯಾಕ್ಟೀರಿಯಾಗಳು ಪತ್ತೆಯಾಗಿರುವುದು ಪ್ರಾಥಮಿಕ ವರದಿಗಳಿಂದ ದೃಢಪಟ್ಟಿದೆ.
ಇಂದೋರ್ ಕಲುಷಿತ ನೀರು ಪ್ರಕರಣ -
ಇಂದೋರ್: ಮಧ್ಯಪ್ರದೇಶ (Madhya Pradesh)ದ ಇಂದೋರ್(Indore)ನ ಭಗೀರಥಪುರ (Bhagirathpura) ಪ್ರದೇಶದಲ್ಲಿ ಕಲುಷಿತ ನೀರು ಕುಡಿದು 9 ಮಂದಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಡಿಯುವ ನೀರಿನ ಮಾದರಿಯಲ್ಲಿ ಒಳಚರಂಡಿ ನೀರಿನಲ್ಲಿ ಕಂಡುಬರುವ ಬ್ಯಾಕ್ಟೀರಿಯಾ (Bacteria)ಗಳು ಪತ್ತೆಯಾಗಿರುವುದು ಪ್ರಾಥಮಿಕ ವರದಿಗಳಿಂದ ದೃಢಪಟ್ಟಿದೆ. ಅಲ್ಲಿಯ ನಿವಾಸಿಗಳಲ್ಲಿ ಉಂಟಾದ ವಾಂತಿ–ಅತಿಸಾರ ಉಲ್ಬಣಕ್ಕೆ ಮಾಲಿನ್ಯಗೊಂಡ ನೀರೇ ಕಾರಣ ಎಂಬುದನ್ನು ಪ್ರಯೋಗಾಲಯದ ಪರೀಕ್ಷೆಗಳಿಂದ ತಿಳಿದುಬಂದಿದೆ.
ವರದಿಗಳ ಪ್ರಕಾರ, ನೀರಿನ ಮಾದರಿಗಳಲ್ಲಿ ವೈಬ್ರಿಯೋ ಕೊಲೆರಾ (Vibrio cholerae), ಶಿಗೆಲ್ಲಾ (Shigella) ಮತ್ತು ಇ.ಕೋಲಿ (E. coli) ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ. ಇವು ಸಾಮಾನ್ಯವಾಗಿ ತೀವ್ರ ಅತಿಸಾರ ಮತ್ತು ವಾಂತಿಗೆ ಹಾಗೂ ಗಂಭೀರ ಜೀರ್ಣಾಂಗ ಸೋಂಕುಗಳಿಗೆ ಕಾರಣವಾಗುತ್ತವೆ. ಸತತ ಎಂಟು ವರ್ಷಗಳಿಂದ ದೇಶದ ಸ್ವಚ್ಛ ನಗರಗಳಲ್ಲಿ ಮೊದಲ ಸ್ಥಾನ ಪಡೆದಿರುವ ಇಂದೋರ್‌ನಲ್ಲಿ ಕುಡಿಯುವ ನೀರು ಕಲುಷಿತಗೊಂಡ ಬಗ್ಗೆ ವರದಿಯಾಗಿರುವುದು ಸುರಕ್ಷತೆಯ ಬಗ್ಗೆ ಗಂಭೀರ ಆತಂಕ ಮೂಡಿಸಿದೆ.
ಇಂದೋರ್‌ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (CMHO) ಡಾ. ಮಾಧವ ಪ್ರಸಾದ್ ಹಸಾನಿ (Madhav Prasad Hasani) ಅವರ ಪ್ರಕಾರ, ನಗರದ ವೈದ್ಯಕೀಯ ಕಾಲೇಜಿನಲ್ಲಿ ನಡೆಸಿದ ಪ್ರಯೋಗಾಲಯ ವಿಶ್ಲೇಷಣೆಯಲ್ಲಿ ಮಾಲಿನ್ಯಗೊಂಡ ಕುಡಿಯುವ ನೀರೇ ರೋಗದ ಮೂಲ ಎಂದು ದೃಢಪಟ್ಟಿದೆ. ಭಗೀರಥಪುರ ಪೊಲೀಸ್ ಚೌಕಿ ಬಳಿ ನೆಲದಲ್ಲಿ ಹಾಕಲಾದ ಪ್ರಮುಖ ನೀರು ಪೂರೈಕೆ ಪೈಪ್‌ಲೈನ್ ಒಡೆದಿದ್ದರಿಂದ ಚರಂಡಿ ನೀರು ಕುಡಿಯುವ ನೀರಿಗೆ ಮಿಶ್ರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದೋರ್ ಕಲುಷಿತ ನೀರು ಪ್ರಕರಣ; 10 ವರ್ಷಗಳ ಹರಕೆಯ ನಂತರ ಹುಟ್ಟಿದ ಮಗು ಕಳೆದುಕೊಂಡ ತಾಯಿಯ ರೋಧನೆ
ತನಿಖಾ ಸಮಿತಿಯ ಅಧ್ಯಕ್ಷರಾಗಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ದುಬೆ, ಆ ಪ್ರದೇಶದಲ್ಲಿನ ಸಂಪೂರ್ಣ ಕುಡಿಯುವ ನೀರಿನ ಪೈಪ್‌ಲೈನ್‌ಗಳಲ್ಲಿ ಇನ್ನಷ್ಟು ಲೀಕ್‌ಗಳಿಗಾಗಿವೆಯೇ ಪರಿಶೀಲಿಸಲಾಗುತ್ತಿದೆ. ಪರಿಶೀಲನೆ ಬಳಿಕ ಮನೆಗಳಿಗೆ ಶುದ್ಧ ನೀರು ಪೂರೈಕೆ ಮಾಡಲಾಗುವುದು, ಸದ್ಯ ಮುನ್ನೆಚ್ಚರಿಕೆ ಕ್ರಮವಾಗಿ ನೀರನ್ನು ಕುದಿಸಿ ಕುಡಿಯುವಂತೆ ನಿವಾಸಿಗಳಿಗೆ ಸಲಹೆ ನೀಡಲಾಗಿದೆ," ಎಂದರು. ಅಲ್ಲದೇ ಹೊಸ ನೀರಿನ ಮಾದರಿಗಳನ್ನೂ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಉಂಟಾಗದಂತೆ ರಾಜ್ಯದಾದ್ಯಂತ ಅಗತ್ಯ ಮಾನಕ ಕಾರ್ಯಾಚರಣೆ ವಿಧಾನ (SOP) ರೂಪಿಸಲಾಗುವುದು ಎಂದು ದುಬೆ ತಿಳಿಸಿದ್ದಾರೆ.
ಆಡಳಿತದ ಪ್ರಕಾರ, ಡಿಸೆಂಬರ್ 25ರ ಸುಮಾರಿಗೆ ಮೊದಲ ಬಾರಿಗೆ ದುರ್ವಾಸನೆಯ ನೀರು ಬರುತ್ತಿದೆ ಎಂದು ನಿವಾಸಿಗಳು ದೂರು ನೀಡಿದ್ದರು. ಆದರೆ ಕೆಲವು ಸ್ಥಳೀಯರು ಹಲವು ವಾರಗಲಿಂದಲೂ ಈ ಸಮಸ್ಯೆ ಇದ್ದು, ಇದೀಗ ತೀವ್ರಗೊಂಡಿದೆ ಎಂದು ಹೇಳಿದ್ದಾರೆ. ಆರಂಭದಲ್ಲಿ ಒಟ್ಟು 14 ಸಾವುಗಳು ವರದಿಯಾಗಿದ್ದರೂ, ಅವುಗಳಲ್ಲಿ 9 ಸಾವುಗಳು ಮಾತ್ರ ಮಾಲಿನ್ಯಗೊಂಡ ನೀರಿನಿಂದ ಉಂಟಾದ ಅತಿಸಾರಕ್ಕೆ ನೇರವಾಗಿ ಸಂಬಂಧಪಟ್ಟವು, ಉಳಿದವುಗಳು ಸಹವ್ಯಾಧಿಗಳು ಅಥವಾ ಬೇರೆ ಕಾರಣಗಳಿಂದ ಸಂಭವಿಸಿದ್ದವು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಈ ಕಲುಷಿತ ನೀರು ಸೇವನೆಯಿಂದ ಉಂಟಾದ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC), ಹಲವು ದಿನಗಳಿಂದ ದೂರುಗಳಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ವರದಿಗಳನ್ನು ಉಲ್ಲೇಖಿಸಿ ಮಧ್ಯಪ್ರದೇಶ ಸರ್ಕಾರಕ್ಕೆ ನೋಟಿಸ್ ನೀಡಿದೆ.