ಮರಣದಂಡನೆ ಶಿಕ್ಷೆಗೊಳಗಾದವರಿಗೆ ಕಡಿಮೆ ನೋವಿನ ಇಂಜೆಕ್ಷನ್ ಬಳಕೆ ಸದ್ಯಕ್ಕಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ದೇಶದಲ್ಲಿ ಸದ್ಯಕ್ಕೆ ಮರಣದಂಡನೆಗೆ ಗಲ್ಲು ಶಿಕ್ಷೆಯ ವಿಧಾನವನ್ನೇ ಅನುಸರಿಸಲಾಗುತ್ತದೆ. ಇದರಲ್ಲಿ ಬದಲಾವಣೆ ತರಲು ಬಯಸಿದರೆ ಕೇಂದ್ರ ಸರ್ಕಾರವು ತಜ್ಞರ ಸಮಿತಿಯನ್ನು ರಚಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮರಣದಂಡನೆಯ ಅಪರಾಧಿಗೆ ಕಡಿಮೆ ನೋವುಂಟು ಮಾಡುವ ವಿಧಾನವನ್ನು ಅನುಸರಿಸಲು ವಕೀಲ ರಿಷಿ ಮಲ್ಹೋತ್ರಾ ಸಲ್ಲಿಸಿದ ಅರ್ಜಿ ವಿಚಾರಣೆಗೆ ನ್ಯಾಯಾಲಯ ತಿರಸ್ಕರಿಸಿದೆ.
ಸಂಗ್ರಹ ಚಿತ್ರ -
ನವದೆಹಲಿ: ಮರಣದಂಡನೆಗೆ (Death Penalty) ಗುರಿಯಾದವರಿಗೆ ಕಡಿಮೆ ನೋವಿನ ಮಾರಕ ಇಂಜೆಕ್ಷನ್ (lethal injection) ಬಳಕೆಗೆ ಸುಪ್ರೀಂ ಕೋರ್ಟ್ (Supreme Court) ಅನುಮತಿ ನಿರಾಕರಿಸಿದೆ. ಈ ಕುರಿತು ತಮ್ಮ ತೀರ್ಮಾನ ಅಂತಿಮವಲ್ಲ ಎಂದಿರುವ ನ್ಯಾಯಾಲಯ, ಕೇಂದ್ರ ಸರ್ಕಾರ ಬಯಸಿದರೆ ಇದನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸಬಹುದು ಎಂದು ಹೇಳಿದೆ. ಅಲ್ಲದೇ ಈ ಕುರಿತು ವಕೀಲ ರಿಷಿ ಮಲ್ಹೋತ್ರಾ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠ ವಜಾಗೊಳಿಸಿದೆ.
ದೇಶದಲ್ಲಿ ನೇಣು ಹಾಕುವ ಮೂಲಕ ವಿಧಿಸಲಾಗುವ ಮರಣ ದಂಡನೆಗೆ ಮಾರಕ ಇಂಜೆಕ್ಷನ್ ಸೇರಿದಂತೆ ಇತರ ಪರ್ಯಾಯ ವಿಧಾನವನ್ನು ಬಳಸಲು ಕೋರಿ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ನೇಣು ಹಾಕುವ ಮೂಲಕ ವಿಧಿಸಲಾಗುವ ಮರಣ ದಂಡನೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿದೆ.
20 ಗಂಟೆ ಕೆಲಸ , ಬೆಳಿಗ್ಗೆ 4 ಗಂಟೆಗೆ ಸಚಿವರಿಗೆ ಕಾಲ್; ಸಿಎಂ ವಿಜಯ್ ದಿನಚರಿ ಹೇಗಿರುತ್ತಾ ಗೊತ್ತಾ?
ದೇಶದಲ್ಲಿ ಮರಣ ದಂಡನೆಯ ವಿಧಾನವಾಗಿ ನೇಣು ಹಾಕುವುದನ್ನೇ ಮುಂದುವರಿಸಲಾಗುತ್ತದೆ ಎಂದಿರುವ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು, ಅಪರಾಧಿಗೆ ಕಡಿಮೆ ನೋವುಂಟು ಮಾಡುವ ಮತ್ತು ಅವರ ಘನತೆಯನ್ನು ರಕ್ಷಿಸುವ ರೀತಿಯಲ್ಲಿ ಮರಣ ದಂಡನೆಯನ್ನು ವಿಧಿಸುವ ಪರ್ಯಾಯ ವಿಧಾನಗಳನ್ನು ಅನುಸರಿಸಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಿದೆ.
ವಕೀಲ ರಿಷಿ ಮಲ್ಹೋತ್ರಾ ಸಲ್ಲಿಸಿದ ಅರ್ಜಿಯಲ್ಲಿ ಮರಣ ದಂಡನೆಗೆ ಪರ್ಯಾಯವಾಗಿ ಮಾರಕ ಇಂಜೆಕ್ಷನ್, ಗುಂಡು ಹಾರಿಸುವುದು, ವಿದ್ಯುತ್ ಆಘಾತ ಅಥವಾ ಗ್ಯಾಸ್ ಚೇಂಬರ್ ಅನ್ನು ಸೂಚಿಸಲಾಗಿದೆ. ಇದರಿಂದ ಅಪರಾಧಿಯು ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಲು ಸಾಧ್ಯವಿದೆ ಎಂದು ಹೇಳಿದೆ.
Supreme Court has dismissed a plea seeking an alternative way for the execution of death row convicts on the grounds that hanging till death is a painful way to execute the death penalty.
— ANI (@ANI) August 18, 2026
A bench of Justices Vikram Nath and Sandeep Mehta however, noted that this judgement should…
ನೇಣು ಹಾಕುವಿಕೆಯನ್ನು ಅತ್ಯಂತ ನೋವಿನಿಂದ ಕೂಡಿದ, ಅಮಾನವೀಯ ಮತ್ತು ಕ್ರೂರ ಎಂದು ಹೇಳಿರುವ ಅರ್ಜಿದಾರರು, ಸಿಆರ್‌ಪಿಸಿಯ ಸೆಕ್ಷನ್ 354(5) ರ ಅಡಿಯಲ್ಲಿ ನೇಣು ಹಾಕುವ ಮೂಲಕ ಮರಣದಂಡನೆ ವಿಧಿಸುವುದನ್ನು ಅಸಂವಿಧಾನಿಕ ಎಂದು ಘೋಷಿಸಬೇಕು ಮತ್ತು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಗೌರವಾನ್ವಿತ ಮರಣದ ಹಕ್ಕನ್ನು ಮೂಲಭೂತ ಹಕ್ಕು ಎಂದು ಗುರುತಿಸಬೇಕು ಎಂದು ಹೇಳಿದ್ದಾರೆ.
ಗಲ್ಲಿಗೇರಿಸಿದ ಅನಂತರ ಮರಣ ದಂಡನೆಯನ್ನು ಘೋಷಿಸಲು ಸುಮಾರು 40 ನಿಮಿಷಗಳು ಬೇಕಾಗುತ್ತದೆ. ಆದರೆ ಗುಂಡು ಹಾರಿಸುವುದು ಅಥವಾ ಮಾರಕ ಇಂಜೆಕ್ಷನ್ ನೀಡುವುದರಿಂದ ಸುಮಾರು 5 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿರುವ ಅರ್ಜಿದಾರರು ಮರಣದಂಡನೆ ವಿಧಿಸಲಾದ ಸ್ಥಳದಲ್ಲಿ ಅದನ್ನು ಕನಿಷ್ಠ ನೋವುಂಟು ಮಾಡುವ ರೀತಿಯಲ್ಲಿ ನಡೆಸಬೇಕು ಎಂದು ಹೇಳುವ ವಿಶ್ವಸಂಸ್ಥೆಯ ನಿರ್ಣಯವನ್ನು ಉಲ್ಲೇಖಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅಂತಿಮವಲ್ಲ. ಮರಣ ದಂಡನೆಯ ಪರ್ಯಾಯ ವಿಧಾನಗಳ ಮೂಲಕ ಬದಲಾಯಿಸಲು ಬಯಸಿದರೆ ಕೇಂದ್ರ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿ ಪರಿಶೀಲನೆ ನಡೆಸಲಿ. ಸದ್ಯಕ್ಕೆ ಈ ಅರ್ಜಿಯನ್ನು ವಜಾಗೊಳಿಸಲಾಗುತ್ತದೆ. ಭವಿಷ್ಯದಲ್ಲಿ ಈ ಕುರಿತು ಸಾಂವಿಧಾನಿಕ ಪರಿಶೀಲನೆಗೆ ಅವಕಾಶವಿದೆ. ಆದರೆ ಇದಕ್ಕಾಗಿ ಬಲವಾದ ವೈಜ್ಞಾನಿಕ, ವೈದ್ಯಕೀಯ ಅಥವಾ ಪ್ರಾಯೋಗಿಕ ಪುರಾವೆಗಳು ಬೇಕು ಎಂದು ಹೇಳಿದೆ.
ದುರಂತ ಅಂತ್ಯಕಂಡ ತಡರಾತ್ರಿಯ ಇಸ್ಪೀಟ್ ಆಟ: ಪೊಲೀಸ್ ಬಂದರೆಂದು ಓಡಿ ಬಾವಿಗೆ ಬಿದ್ದ ನಾಲ್ವರು, ಮೂವರು ದುರ್ಮರಣ
ಕಳೆದ ಜನವರಿ 22ರಂದು ಕಾಯ್ದಿರಿಸಿದ್ದ ಅರ್ಜಿ ವಿಚಾರಣೆಯನ್ನು ಈ ಮೂಲಕ ಸುಪ್ರೀಂ ಕೋರ್ಟ್ ಮಂಗಳವಾರ ಮುಕ್ತಾಯ ಗೊಳಿಸುತ್ತಿರುವುದಾಗಿ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ತಿಳಿಸಿದೆ.