Ragging Case: ಮಧುರೈ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯನ್ನು ವಿವಸ್ತ್ರಗೊಳಿಸಿ, ಖಾಸಗಿ ಅಂಗಗಳಿಗೆ ಹಲ್ಲೆ; ಆಘಾತಕಾರಿ ರ‍್ಯಾಗಿಂಗ್ ಪ್ರಕರಣ ಬಯಲಿಗೆ
ತಮಿಳುನಾಡಿನಲ್ಲಿ ಅಮಾನವೀಯ ಕೃತ್ಯ ನಡೆದಿದೆ. ಸೀನಿಯರ್ ವಿದ್ಯಾರ್ಥಿಗಳು ಜೂನಿಯರ್ ವಿದ್ಯಾರ್ಥಿಯೋರ್ವನ ಮೇಲೆ ದೌರ್ಜನ್ಯ ಎಸಗಿರುವ ಘಟನೆ ತಿರುಮಂಗಳಂನ ಐಟಿಐ ಕಾಲೇಜಿನ ಹಾಸ್ಟೆಲ್‌ನಲ್ಲಿ ನಡೆದಿದೆ. ವಿದ್ಯಾರ್ಥಿಯೋರ್ವ ಹೊಸದಾಗಿ ಹಾಸ್ಟೆಲ್ ಗೆ ಸೇರಿಕೊಂಡಿದ್ದ. ಈ ವೇಳೆ ಸಿನೀಯರ್‌ಗಳು ರ‍್ಯಾಗಿಂಗ್ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ -

ಚೆನ್ನೈ: ತಮಿಳುನಾಡಿನ (Tamil Nadu) ಮಧುರೈ (Madurai) ಜಿಲ್ಲೆಯ ತಿರುಮಂಗಳಂನ ಐಟಿಐ ಕಾಲೇಜು ಹಾಸ್ಟೆಲ್‌ನಲ್ಲಿ ಒಬ್ಬ ವಿದ್ಯಾರ್ಥಿಯನ್ನು ಸಹ ವಿದ್ಯಾರ್ಥಿಗಳು ಬೆತ್ತಲೆಗೊಳಿಸಿ ಥಳಿಸಿದ ಘಟನೆ ನಡೆದಿದೆ. ಈ ಭಯಾನಕ ರ‍್ಯಾಗಿಂಗ್‌ನ (Ragging Case) ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.
ವೈರಲ್ ಆದ ವಿಡಿಯೋದಲ್ಲಿ ಕೆಲವು ವಿದ್ಯಾರ್ಥಿಗಳು ಒಬ್ಬ ಜೂನಿಯರ್ ವಿದ್ಯಾರ್ಥಿಯ ಬಟ್ಟೆಯನ್ನು ಬಲವಂತವಾಗಿ ತೆಗೆಯುವುದು ಕಂಡುಬಂದಿದೆ. ಬಳಿಕ ಅವನನ್ನು ಗೇಲಿ ಮಾಡಿ, ಸ್ಲಿಪ್ಪರ್‌ನಿಂದ ಖಾಸಗಿ ಭಾಗಗಳಿಗೆ ಹೊಡೆಯುತ್ತಿದ್ದಾರೆ. ಈ ವಿದ್ಯಾರ್ಥಿ ಥೇನಿ ಜಿಲ್ಲೆಯ ಗ್ರಾಮವೊಂದರಿಂದ ಬಂದಿದ್ದು, 15-17 ವರ್ಷ ವಯಸ್ಸಿನವನಾಗಿದ್ದಾನೆ. ಈ ಘಟನೆಯನ್ನು ಒಬ್ಬ ವಿದ್ಯಾರ್ಥಿ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ.
ವಿದ್ಯಾರ್ಥಿಯ ತಾಯಿ-ತಂದೆ ದೂರು ನೀಡಿದ ಬಳಿಕ ಪೊಲೀಸರು ಮೂರು ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಆರೋಪಿಗಳು 15-17 ವರ್ಷದವರಾಗಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಹಾಸ್ಟೆಲ್ ವಾರ್ಡನ್‌ನನ್ನು ಅಮಾನತುಗೊಳಿಸಲಾಗಿದೆ. ಈ ಹಾಸ್ಟೆಲ್‌ನಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದು, ಘಟನೆಯ ಬಗ್ಗೆ ಇನ್ನಷ್ಟು ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.
ಈ ಸುದ್ದಿಯನ್ನು ಓದಿ: Bhau Gang: 5 ಕೋಟಿ ರೂ. ಕೊಡಿ...ಇಲ್ಲದಿದ್ದರೆ ಶೂಟ್ ಮಾಡ್ತೇವೆ... ಖ್ಯಾತ ಯೂಟ್ಯೂಬರ್‌ಗೆ ಭಾವು ಗ್ಯಾಂಗ್‌ನಿಂದ ಬೆದರಿಕೆ
ಕೇರಳದಲ್ಲಿಯೂ ರ‍್ಯಾಗಿಂಗ್
2025ರ ಫೆಬ್ರವರಿಯಲ್ಲಿ ಕೇರಳದ ಕೋಟ್ಟಯಂನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಇಂತಹದೇ ರ‍್ಯಾಗಿಂಗ್ ನಡೆದಿತ್ತು. ಐದು ವಿದ್ಯಾರ್ಥಿಗಳು ಜೂನಿಯರ್‌ಗಳನ್ನು ಕ್ರೂರವಾಗಿ ಕಾಡಿದ್ದರು. 2024ರ ನವೆಂಬರ್‌ನಿಂದ ಈ ದೌರ್ಜನ್ಯ ನಡೆಯುತ್ತಿತ್ತು. ಅವರು ಜೂನಿಯರ್‌ಗಳ ದೇಹದಲ್ಲಿ ಕಟ್ ಮಾಡಿ, ಗಾಯಗಳಿಗೆ ಕ್ರೀಮ್ ಹಚ್ಚಿ, ಬೆತ್ತಲೆಗೊಳಿಸಿ, ಖಾಸಗಿ ಭಾಗಗಳಿಗೆ ಡಂಬೆಲ್ ಕಟ್ಟಿ ಹೊಡೆದಿದ್ದರು. ಹಿಂಸೆ ಸಹಿಸಲಾರದೆ ಮೂರು ಜೂನಿಯರ್‌ಗಳು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಐದು ಆರೋಪಿಗಳನ್ನು ಬಂಧಿಸಿ, ಕಾಲೇಜು ಅವರನ್ನು ಅಮಾನತುಗೊಳಿಸಿತ್ತು.