ಕೌಲಾಲಂಪುರದಿಂದ ಸೌದಿ ಅರೇಬಿಯಾಗೆ ಹೊರಟಿದ್ದ ಮಲೇಷ್ಯಾ ಏರ್‌ಲೈನ್ಸ್‌ನಲ್ಲಿ ದೋಷ: ಚೆನ್ನೈಯಲ್ಲಿ ತುರ್ತು ಭೂಸ್ಪರ್ಶ; 186 ಪ್ರಯಾಣಿಕರು ಸೇಫ್
Malaysia Airlines: ಮಲೇಷ್ಯಾದ ರಾಜಧಾನಿ ಕೌಲಾಲಂಪುರದಿಂದ ಸೌದಿ ಅರೇಬಿಯಾದ ಜೆಡ್ಡಾಗೆ ಹೊರಟಿದ್ದ ಮಲೇಷ್ಯಾ ಏರ್‌ಲೈನ್ಸ್ ವಿಮಾನದ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ನಂತರ ಅದನ್ನು ತಮಿಳುನಾಡಿನ ಚೆನ್ನೈನಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ವಿಮಾನದಲ್ಲಿದ್ದ 186 ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಯಾವುದೇ ಸಮಸ್ಯೆಯಾಗಿಲ್ಲ.
ಸಾಂದರ್ಭಿಕ ಚಿತ್ರ -
ಚೆನ್ನೈ, ಸೆ. 7: ಮಲೇಷ್ಯಾದ ರಾಜಧಾನಿ ಕೌಲಾಲಂಪುರದಿಂದ ಸೌದಿ ಅರೇಬಿಯಾದ ಜೆಡ್ಡಾಗೆ ಹೊರಟಿದ್ದ ಮಲೇಷ್ಯಾ ಏರ್‌ಲೈನ್ಸ್ (Malaysia Airlines) ವಿಮಾನದ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ನಂತರ ಅದನ್ನು ತಮಿಳುನಾಡಿನ ಚೆನ್ನೈಯಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು (flight diverted). 186 ಜನರನ್ನು ಹೊತ್ತೊಯ್ಯುತ್ತಿದ್ದ ಮಲೇಷ್ಯಾ ಏರ್‌ಲೈನ್ಸ್ ವಿಮಾನ MH156 ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ಮೂಲಗಳು ತಿಳಿಸಿವೆ.
ವಿಮಾನ ನಿಲ್ದಾಣದ ವಕ್ತಾರರ ಪ್ರಕಾರ, ಎಂಎಚ್ 156 (MH156) ಸಂಖ್ಯೆಯ ಈ ಬೋಯಿಂಗ್ ವಿಮಾನದ ಎರಡನೇ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ನಂತರ ಪೈಲಟ್‌ಗಳು ಚೆನ್ನೈ ಏರ್ ಟ್ರಾಫಿಕ್ ಕಂಟ್ರೋಲ್ (ATC) ಅನ್ನು ಸಂಪರ್ಕಿಸಿ ತುರ್ತು ಲ್ಯಾಂಡಿಂಗ್‌ಗೆ ಅನುಮತಿ ಕೋರಿದರು. ವಿಮಾನ ನಿಲ್ದಾಣದಲ್ಲಿ ಪೂರ್ಣ ತುರ್ತು ಪರಿಸ್ಥಿತಿ ಘೋಷಿಸಿ, ಅಗ್ನಿಶಾಮಕ ವಾಹನಗಳು ಹಾಗೂ ಆಂಬ್ಯುಲೆನ್ಸ್‌ಗಳನ್ನು ಸನ್ನದ್ಧವಾಗಿಡಲಾಯಿತು. ವಿಮಾನದಲ್ಲಿದ್ದ 186 ಪ್ರಯಾಣಿಕರು ಮತ್ತು ಸಿಬ್ಬಂದಿ ಯಾವುದೇ ಹಾನಿಯಿಲ್ಲದೆ ಸುರಕ್ಷಿತವಾಗಿ ಇಳಿದರು.
ಇದೇ ವೇಳೆ, ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ತುರ್ತು ಲ್ಯಾಂಡಿಂಗ್ ಆಗಿದ್ದರೂ ವಿಮಾನ ನಿಲ್ದಾಣದ ಇತರ ಯಾವುದೇ ಸೇವೆಗಳಿಗೆ ಅಡಚಣೆಯಾಗಿಲ್ಲ ಎಂದು ವರದಿ ತಿಳಿಸಿದೆ.
ಮಿಯಾಮಿ ಏರ್‌ಪೋರ್ಟ್‌ನಲ್ಲಿ ರನ್‌ವೇಯಿಂದ ಜಾರಿ ಹೊತ್ತಿ ಉರಿದ ವಿಮಾನ: ಐವರು ಸಾವು
ಕೊಚ್ಚಿಗೆ ಮರಳಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ಆಗಸ್ಟ್ 31ರಂದು ಕೊಚ್ಚಿಯಿಂದ ಅಬುಧಾಬಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಬೋಯಿಂಗ್ 737 ವಿಮಾನ, ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ತುರ್ತಾಗಿ ಹಿಂತಿರುಗಬೇಕಾಯಿತು. ವಿಮಾನದ ಒಂದನೇ ಇಂಜಿನ್‌ನಲ್ಲಿ ತೈಲದ ಪ್ರಮಾಣ ವೇಗವಾಗಿ ಕುಸಿಯುತ್ತಿರುವುದನ್ನು ಸಿಬ್ಬಂದಿ ಪತ್ತೆಹಚ್ಚಿದ ನಂತರ ಈ ನಿರ್ಧಾರ ಕೈಗೊಳ್ಳಲಾಯಿತು.
ವಿಮಾನವು ಹಾರಾಟ ಆರಂಭಿಸಿ ಸುಮಾರು 50 ನಿಮಿಷಗಳು ಕಳೆದಿದ್ದು, 36,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಪೈಲಟ್ ಮತ್ತು ಸಹ ಪೈಲಟ್ ತೈಲದ ಪ್ರಮಾಣ ವೇಗವಾಗಿ ಕುಸಿಯುತ್ತಿರುವುದನ್ನು ಗಮನಿಸಿದರು. ಬಳಿಕ ಸಿಬ್ಬಂದಿ ಮೌಲ್ಯಮಾಪನ ನಡೆಸಿದರು. ತೈಲ ಪ್ರಮಾಣ ಕಡಿಮೆಯಾಗುತ್ತಲೇ ಇದ್ದುದರಿಂದ, ಅವರು ಅಬುಧಾಬಿಗೆ ಹೋಗುವುದನ್ನು ಬಿಟ್ಟು ಕೊಚ್ಚಿಗೆ ಮರಳಲು ನಿರ್ಧರಿಸಲಾಯಿತು.
ತೈಲ ಒತ್ತಡ ಅಪಾಯದ ವಲಯವನ್ನು ತಲುಪಿದ ನಂತರ ಸಿಬ್ಬಂದಿ ಎಂಜಿನ್ 1 ಅನ್ನು ಸ್ಥಗಿತಗೊಳಿಸಿದರು ಎಂದು ಮೂಲಗಳು ತಿಳಿಸಿವೆ. ಆ ಮೂಲಕ ವಿಮಾನವು ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಇದರಿಂದ ಬಹುದೊಡ್ಡ ದುರಂತವೊಂದು ತಪ್ಪಿತು.