ಕುಪ್ವಾರಾದ ಎಲ್‌ಒಸಿ ಬಳಿ ಪಾಕಿಸ್ತಾನಿ ಡ್ರೋನ್‌ಗಳು ಪತ್ತೆ; ಭಾರತೀಯ ಸೇನೆಯಿಂದ ಕಾರ್ಯಾಚರಣೆ ಶುರು
Pakistani drones spotted: ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ನಿಯಂತ್ರಣ ರೇಖೆ (LoC) ಬಳಿ ಪಾಕಿಸ್ತಾನಿ ಡ್ರೋನ್‌ಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಗುಂಡು ಹಾರಿಸಿದೆ. ನಂತರ ಡ್ರೋನ್‌ಗಳು ಹಿಂದಕ್ಕೆ ತಿರುಗಿ ಗಡಿಯ ಇನ್ನೊಂದು ಬದಿಗೆ ದಾಟಿದವು ಎಂದು ವರದಿಯಾಗಿದೆ. ಕೇರನ್ ಸೆಕ್ಟರ್‌ನ ಜೋಧಾ ಮಕಾನ್ ಬೀರಂದೋರಿ ಪ್ರದೇಶದ ಸಮೀಪ ಸುಮಾರು 15 ಪಾಕಿಸ್ತಾನಿ ಡ್ರೋನ್‌ಗಳು ಪತ್ತೆಯಾಗಿದೆ.
ಸಾಂದರ್ಭಿಕ ಚಿತ್ರ -
ಶ್ರೀನಗರ, ಜ.30: ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ನಿಯಂತ್ರಣ ರೇಖೆ (Line of Control) ಬಳಿ ಪಾಕಿಸ್ತಾನಿ ಡ್ರೋನ್‌ಗಳು (Pakistani drones) ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಕೇರನ್ ಸೆಕ್ಟರ್‌ನ ಜೋಧಾ ಮಕಾನ್ ಬೀರಂದೋರಿ ಪ್ರದೇಶದ ಸಮೀಪ ಸುಮಾರು 15 ಪಾಕಿಸ್ತಾನಿ ಡ್ರೋನ್‌ಗಳು ಪತ್ತೆಯಾಗಿದೆ.
ಸೂಕ್ಷ್ಮ ಗಡಿ ವಲಯದಲ್ಲಿ ನಿಯಮಿತ ಕಣ್ಗಾವಲು ನಡೆಸುತ್ತಿದ್ದಾಗ ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ ಪಡೆಗಳು ಡ್ರೋನ್‌ಗಳನ್ನು ಗಮನಿಸಿವೆ ಎಂದು ಮೂಲಗಳು ತಿಳಿಸಿವೆ. ಮಾನವರಹಿತ ಡ್ರೋನ್‌ಗಳು ಎಲ್‌ಒಸಿಯ ಸಮೀಪ ಹಾರುತ್ತಿರುವುದು ಕಂಡುಬಂದಿದ್ದು, ಸೈನಿಕರು ತಕ್ಷಣ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ.
ಯಾವುದೇ ಸಂಭಾವ್ಯ ಒಳನುಸುಳುವಿಕೆಯನ್ನು ತಡೆಯಲು ಸೇನಾ ಸಿಬ್ಬಂದಿ ಗುಂಡು ಹಾರಿಸಿದರು. ನಂತರ ಡ್ರೋನ್‌ಗಳು ಹಿಂದಕ್ಕೆ ತಿರುಗಿ ಗಡಿಯ ಇನ್ನೊಂದು ಬದಿಗೆ ದಾಟಿದವು ಎಂದು ವರದಿಯಾಗಿದೆ. ಈ ಗುಂಡಿನ ದಾಳಿ ಪ್ರತೀಕಾರಾತ್ಮಕ ಅಥವಾ ನೇರ ಮುಖಾಮುಖಿಯಾಗಿರಲಿಲ್ಲ ಮತ್ತು ಯಾವುದೇ ನೇರ ಸಂಘರ್ಷವೂ ಸಂಭವಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿದೆ ಫೈರಿಂಗ್ ವಿಡಿಯೊ:
Alert and decisive along the LoC 🇮🇳
— IndianArmy in Jammu & Kashmir (Fan Page) (@IndianArmyinJK) January 30, 2026
In the Keran sector, Kupwara, Kashmir, troops of Indian Army's 6 Rashtriya Rifles detected 15 Pakistani drones near the Jodha Makan–Beerandori area.
Swift action followed—8 drones were neutralised, while the rest fled back across the LoC.… pic.twitter.com/ZpoHXhNNQW
ಘಟನೆಯಲ್ಲಿ ಯಾವುದೇ ಸಾವುನೋವುಗಳು ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಆದರೆ, ಡ್ರೋನ್‌ಗಳು ಆಗಾಗ ಕಂಡುಬರುತ್ತಿರುವುದರಿಂದ ಮಾನವರಹಿತ ವಸ್ತುಗಳನ್ನು ಬಳಸಿಕೊಂಡು ಗಡಿಯಾಚೆಗಿನ ಪ್ರಯತ್ನಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಘಟನೆಯ ನಂತರ, ಈ ಪ್ರದೇಶದಲ್ಲಿ ಕಣ್ಗಾವಲು ಹೆಚ್ಚಿಸಲಾಗಿದ್ದು, ಎಲ್‌ಒಸಿ ಉದ್ದಕ್ಕೂ ಭದ್ರತಾ ಪಡೆಗಳು ಹೆಚ್ಚಿನ ಕಟ್ಟೆಚ್ಚರದಲ್ಲಿವೆ. ಭವಿಷ್ಯದಲ್ಲಿ ಇದೇ ರೀತಿಯ ಯಾವುದೇ ವೈಮಾನಿಕ ಚಟುವಟಿಕೆಯನ್ನು ತ್ವರಿತವಾಗಿ ಪತ್ತೆಹಚ್ಚಲು ಮತ್ತು ಎದುರಿಸಲು ಮೇಲ್ವಿಚಾರಣೆಯನ್ನು ಬಲಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಮೂಲಕ ಸ್ಫೋಟಕಗಳ ರವಾನೆ; ಪಾಕಿಸ್ತಾನದ ಸಂಚು ವಿಫಲಗೊಳಿಸಿದ ಭಾರತೀಯ ಸೇನೆ
ಪದೇ ಪದೇ ಕಂಡುಬರುತ್ತಿರುವ ಪಾಕ್ ಡ್ರೋನ್ ಹಾರಾಟ
ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ನೌಶೇರಾ- ರಾಜೌರಿ ವಲಯದಲ್ಲಿನ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಜನವರಿ 14ರ ರಾತ್ರಿ ಪಾಕಿಸ್ತಾನದ ಹಲವಾರು ಡ್ರೋನ್‌ಗಳು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಭದ್ರತೆಯನ್ನು ಅಂದಿನಿಂದಲೇ ಬಿಗಿಗೊಳಿಸಲಾಗಿದೆ. ಗಡಿ ಭಾಗದಲ್ಲಿ ಸೇನೆ ಮತ್ತು ಸ್ಥಳೀಯರು ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಹಲವಾರು ಡ್ರೋನ್‍ಗಳನ್ನು ನೋಡಿದ ಸ್ಥಳೀಯರು ಭಾರತೀಯ ಸೇನೆಯೊಂದಿಗೆ ನಾವಿದ್ದೇವೆ ಮತ್ತು ನಮಗೆ ಸಾಧ್ಯವಿರುವ ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತೇವೆ ಎಂದು ಹೇಳಿದ್ದರು ಎಂಬುದಾಗಿ ವರದಿಯಾಗಿತ್ತು.
ರಾಜೌರಿಯಲ್ಲಿರುವ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನದ ಡ್ರೋನ್ ಚಟುವಟಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಭಾರತೀಯ ಸೇನೆಯ ಚಟುವಟಿಕೆ ಹೆಚ್ಚಾಗಿದೆ. ನಾವು ಭಾರತೀಯ ಸೇನೆಯೊಂದಿಗೆ ನಿಲ್ಲುತ್ತೇವೆ. ಅವರಿಗೆ ಬೇಕಿರುವ ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತೇವೆ ಎಂದು ತಿಳಿಸಿದ್ದರು.
ಆರ್‌ಎಸ್ ಪುರ, ನೌಶೇರಾ ಮತ್ತು ಪೂಂಚ್ ಸೇರಿದಂತೆ ಇತರ ಗಡಿ ಭಾಗದಲ್ಲೂ ಡ್ರೋನ್‌ಗಳು ಪತ್ತೆಯಾಗಿತ್ತು. ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಿದ್ದರೂ ಮತ್ತೆ ಮತ್ತೆ ಅದು ಭಾರತವನ್ನು ಕೆಣಕುತ್ತಿದೆ. ಹೀಗಾಗಿ ಹಗಲು ರಾತ್ರಿ ಜಾಗರೂಕರಾಗಿದ್ದು, ಪಾಕಿಸ್ತಾನದ ಚಟುವಟಿಕೆಗಳನ್ನು ಭಾರತೀಯ ಸೇನೆಯು ಸೂಕ್ಷ್ಮವಾಗಿ ಗಮನಿಸುತ್ತಿದೆ.