ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ; ಏನಿದರ ಹಿನ್ನಲೆ? ಏನಿದರ ಮಹತ್ವ?

ದೇಶಾದ್ಯಂತ ಈ ಬಾರಿ 77ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಇದರ ಸಂಭ್ರಮಕ್ಕಾಗಿ ಸಂಪೂರ್ಣ ದೇಶವೇ ಈಗ ಸಿಂಗಾರಗೊಂಡು ಕುಳಿತಿದೆ. ದೆಹಲಿ ನಡೆಯುವ ಮೆರವಣಿಗೆಯತ್ತ ವಿಶ್ವದ ಕಣ್ಣು ನೆಟ್ಟಿದ್ದರೆ ಪ್ರತಿ ಜಿಲ್ಲೆ, ತಾಲೂಕು, ಊರುಗಳಲ್ಲಿ ಈ ದಿನವನ್ನು ಹಬ್ಬದಂತೆ ಆಚರಿಸಿ ಸಂಭ್ರಮಿಸಲಾಗುತ್ತದೆ. ಇಂತಹ ಮಹತ್ವಪೂರ್ಣ ದಿನದ ಹಿನ್ನೆಲೆ ಏನು ಗೊತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ

ಸಂಗ್ರಹ ಚಿತ್ರ -

ದೆಹಲಿ, ಜ. 26: ದೇಶಾದ್ಯಂತ ಗಣರಾಜ್ಯೋತ್ಸವ (Republic Day) ಆಚರಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಜನವರಿ 26ರಂದು ಭಾರತೀಯರೆಲ್ಲ 77ನೇ ಗಣರಾಜ್ಯೋತ್ಸವವನ್ನು (Republic Day 2026) ಆಚರಿಸುವ ಉತ್ಸಾಹದಲ್ಲಿದ್ದಾರೆ. ದೇಶದ ಸಂವಿಧಾನ (Constitution) ಮತ್ತು ಪ್ರಜಾಪ್ರಭುತ್ವದ ಗುರುತನ್ನು ಗೌರವಿಸುವ ಈ ದಿನವು ಭಾರತವು ತನ್ನದೇ ಆದ ಕಾನೂನು ಮತ್ತು ಆಡಳಿತವನ್ನು ಅಳವಡಿಸಿಕೊಂಡ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ದೇಶದ ಸಂಸ್ಕೃತಿ, ಶಕ್ತಿ ಪ್ರದರ್ಶನದ ಮೆರವಣಿಗೆಯು ವಿಶ್ವದ ಗಮನ ಸೆಳೆಯುತ್ತದೆ.

ಗಣರಾಜ್ಯೋತ್ಸವದಂದು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ದೆಹಲಿಯಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುವ ಮಿಲಿಟರಿ ಮೆರವಣಿಗೆಯಲ್ಲಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ಮತ್ತು ಸಾಂಪ್ರದಾಯಿಕ ನೃತ್ಯ ತಂಡಗಳು ಭಾಗವಹಿಸುತ್ತವೆ.

ಕನ್ನಡಿಗ ಶತಾವಧಾನಿ ಡಾ. ಆರ್. ಗಣೇಶ್‌ಗೆ ಪದ್ಮ ಭೂಷಣ

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರನ್ನು ಸ್ಮರಿಸಲು ಪ್ರಧಾನಿ ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಗೆ ಮಾಲಾರ್ಪಣೆ ಮಾಡುವುದರೊಂದಿಗೆ ಕಾರ್ಯಕ್ರಮ ಆರಂಭವಾಗುತ್ತದೆ. ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಮೆರವಣಿಗೆಯಲ್ಲಿ ರಾಷ್ಟ್ರಪತಿಗಳು ಮಿಲಿಟರಿ ವಂದನೆ ಸ್ವೀಕರಿಸುತ್ತಾರೆ. ವಿದೇಶಿ ರಾಷ್ಟ್ರದ ಮುಖ್ಯಸ್ಥರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವುದು ಗಣರಾಜ್ಯೋತ್ಸವದ ವಿಶೇಷತೆಗಳಲ್ಲಿ ಒಂದಾಗಿದೆ. ಗಣರಾಜ್ಯೋತ್ಸವದಂದು ದೇಶಾದ್ಯಂತ ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ.

ಏಕೆ ಆಚರಿಸಲಾಗುತ್ತದೆ?

ಭಾರತ ಸಂವಿಧಾನ ಜಾರಿಗೆ ಬಂದ 1950ರ ದಿನವನ್ನು ಸ್ಮರಿಸಲು ಜನವರಿ 26 ಅನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಬಳಿಕ ದೇಶದ ಸಾರ್ವಭೌಮತ್ವ ಮತ್ತು ಸ್ವತಂತ್ರ ಆಡಳಿತವನ್ನು ಸಂಕೇತಿಸುತ್ತದೆ.

1920ರ ದಶಕದ ಕೊನೆಯಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟ ನಿರ್ಣಾಯಕ ಹಂತವನ್ನು ತಲುಪಿತ್ತು. ಆಗ ಬ್ರಿಟಿಷರು ರಾಣಿಯ ಅಧಿಕಾರದಲ್ಲಿ ಭಾರತೀಯರಿಗೆ ಸೀಮಿತ ಆಡಳಿತ ನೀಡುವ ಕುರಿತು ಪ್ರಸ್ತಾಪಿಸಿದರು. ಆದರೆ ಇದನ್ನು ಜವಾಹರಲಾಲ್ ನೆಹರು ಮತ್ತು ಸುಭಾಷ್ ಚಂದ್ರ ಬೋಸ್‌ ಸೇರಿದಂತೆ ಕಿರಿಯ ನಾಯಕರು ತಿರಸ್ಕರಿಸಿ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕೆಂದು ಆಗ್ರಹಿಸಿದರು.

1929ರ ಡಿಸೆಂಬರ್ 31ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಲಾಹೋರ್ ಅಧಿವೇಶನದಲ್ಲಿ ಸಂಪೂರ್ಣ ಸ್ವಾತಂತ್ರ್ಯ ನಿರ್ಣಯವನ್ನು ಅಂಗೀಕರಿಸಲಾಯಿತು. ಇದಾದ ಬಳಿಕ 1930ರ ಜನವರಿ 26 ಅನ್ನು ಕಾಂಗ್ರೆಸ್ ದೇಶದ ಸ್ವಾತಂತ್ರ್ಯ ದಿನವೆಂದು ಘೋಷಿಸಿತು. ಈ ಮೂಲಕ ಭಾರತೀಯರು ಪೂರ್ಣ ಸ್ವಾತಂತ್ರ್ಯಕ್ಕಾಗಿ ಹೋರಾಡುವುದಾಗಿ ಸಾರ್ವಜನಿಕವಾಗಿ ಪ್ರತಿಜ್ಞೆ ಮಾಡಿದರು.

ಅಂತಿಮವಾಗಿ 1947ರ ಆಗಸ್ಟ್ 15ರಂದು ಭಾರತ ಸ್ವಾತಂತ್ರ್ಯ ಪಡೆಯಿತು. ದೇಶವು ಬ್ರಿಟಿಷ್ ಕಾನೂನು ಚೌಕಟ್ಟಿನ ಅಡಿಯಲ್ಲಿ ಉಳಿದು 6ನೇ ಕಿಂಗ್ ಜಾರ್ಜ್ ದೇಶದ ಮುಖ್ಯಸ್ಥರಾದರು. 1935ರ ಭಾರತ ಸರ್ಕಾರದ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿದ್ದ ದೇಶ ಪೂರ್ಣ ಸ್ವತಂತ್ರವಾಗಬೇಕಿದ್ದರೆ ಇದಕ್ಕೂ ಮೊದಲು ಪೂರ್ಣ ಗಣರಾಜ್ಯವಾಗಬೇಕಾಗಿತ್ತು.

ಮೂರು ವರ್ಷಗಳ ಕಾಲ ಭಾರತ ಸಂವಿಧಾನ ರಚನೆಯಲ್ಲಿ ತೊಡಗಿದ ಡಾ. ಬಿ.ಆರ್. ಅಂಬೇಡ್ಕರ್ ಅಂತಿಮವಾಗಿ 1949ರ ನವೆಂಬರ್ 26ರಂದು ಅದನ್ನು ದೇಶಕ್ಕೆ ಒಪ್ಪಿಸಿದರು. ಇದನ್ನು 1950ರ ಜನವರಿ 26ರಂದು ಜಾರಿಗೆ ತರಲು ನಿರ್ಧರಿಸಲಾಯಿತು. ಯಾಕೆಂದರೆ ಇದು ದೇಶದ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಮೊದಲು ಪ್ರತಿಜ್ಞೆ ಮಾಡಿದ ದಿನವಾಗಿತ್ತು. ಅನಂತರ ಭಾರತವು ಸಾರ್ವಭೌಮ ಗಣರಾಜ್ಯವಾಯಿತು. ಗವರ್ನರ್ ಜನರಲ್ ಕಚೇರಿಯಲ್ಲಿ ರಾಷ್ಟ್ರಪತಿ ಅಧಿಕಾರ ವಹಿಸಿಕೊಂಡರು.

ಗಗನಯಾತ್ರಿ ಶುಭಾಂಶು ಶುಕ್ಲಾಗೆ ಅಶೋಕ ಚಕ್ರ ಘೋಷಣೆ

2026ರ ಗಣರಾಜ್ಯೋತ್ಸವದ ಥೀಮ್

ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಬರೆದ ರಾಷ್ಟ್ರೀಯ ಗೀತೆ 150 ವರ್ಷಗಳ ʼವಂದೇ ಮಾತರಂʼ ಅನ್ನು ಈ ಬಾರಿ ಗಣರಾಜ್ಯೋತ್ಸವ ಥೀಮ್ ಆಗಿ ಮಾಡಲಾಗಿದೆ. ಈ ಹಾಡು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಾರತೀಯರಿಗೆ ಸ್ಫೂರ್ತಿ ನೀಡಿತ್ತು.