Viral Video: ಮತ್ತೆ ಸುದ್ದಿಯಾದ ಗಾಯಕ ಸೋನು ನಿಗಮ್; ಸಂಗೀತ ಕಾರ್ಯಕ್ರಮದ ಮಧ್ಯೆ ಪ್ರೇಕ್ಷಕರಿಗೆ ಗದರಿದ್ದೇಕೆ?
ಖ್ಯಾತ ಬಹುಭಾಷಾ ಗಾಯಕ ಸೋನು ನಿಗಮ್ ಕೆಲ ದಿನಗಳ ಹಿಂದೆ ಸಂಗೀತ ಕಾರ್ಯಕ್ರಮದಲ್ಲೇ ಅನಾರೋಗ್ಯಕ್ಕೊಳಗಾಗಿ ಸುದ್ದಿಯಾಗಿದ್ದರು. ಆ ಬಳಿಕ ಚೇತರಿಸಿಕೊಂಡಿರುವ ಅವರು ಇದೀಗ ಇನ್ನೊಂದು ಸಂಗೀತ ಕಾರ್ಯಕ್ರಮದಲ್ಲಿ ಪ್ರೇಕ್ಷಕರನ್ನು ಗದರುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
![ಪ್ರೇಕ್ಷಕರ ವಿರುದ್ಧ ಗಾಯಕ ಸೋನು ನಿಗಮ್ ಗರಂ](https://cdn-vishwavani-prod.hindverse.com/media/original_images/Sonu_Nigam_Kolkotta_1.jpg)
ಸಂಗೀತ ಕಾರ್ಯಕ್ರಮದ ವೇದಿಕೆಯಿಂದಲೇ ಗುಂಪನ್ನು ನಿಯಂತ್ರಿಸಿದ ಗಾಯಕ ಸೋನು ನಿಗಮ್.
![Profile](https://vishwavani.news/static/img/user.png)
ಕೊಲ್ಕೊತಾ: ಖ್ಯಾತ ಗಾಯಕ ಮತ್ತು ಸಂಗೀತಗಾರ ಸೋನು ನಿಗಮ್ (Sonu Nigam) ಅವರು ಫೆ. 10ರಂದು ಕೊಲ್ಕೊತ್ತಾದಲ್ಲಿ (Kolkata) ನೀಡಿದ ಸಂಗೀತ ಕಾರ್ಯಕ್ರಮ (Concert)ದ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಈ ಗಾನ ಮಾಂತ್ರಿಕನ ಗಾಯನ ಸೊಬಗು ಕೋಲ್ಕತಾದ ಸಂಗೀತ ಪ್ರಿಯರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವುದರ ಜತೆಗೆ ಒಂದಷ್ಟು ಗೊಂದಲಗಳೂ ಎದ್ದು ಕಂಡವು. ಸೋನು ನಿಗಮ್ ಅವರು ಸಂಗೀತ ರಸದೌತಣ ಉಣಬಡಿಸುತ್ತಿದ್ದ ಸಂದರ್ಭದಲ್ಲೇ ಸಭೆಯ ನಡುವೆ ಎದ್ದುನಿಂತು ಗುಂಪೊಂದು ಗಲಾಟೆ ಆರಂಭಿಸಿತ್ತು. ಈ ಗುಂಪನ್ನು ನಿಯಂತ್ರಿಸಲು ಸ್ವತಃ ಸೋನು ನಿಗಮ್ ಅವರೇ ಮೈಕ್ ಕೈಗೆತ್ತಿಕೊಳ್ಳಬೇಕಾಯಿತು. ಅವರು ಈ ಸಂದರ್ಭದಲ್ಲಿ ಗೊಂದಲ ಉಂಟು ಮಾಡುತ್ತಿದ್ದ ಗುಂಪನ್ನು ನಿಯಂತ್ರಿಸಲು ಹೇಳಿದಂತಹ ಮಾತುಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಟ್ರೆಂಡಿಂಗ್ ಆಗಿದೆ.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸೋನು ನಿಗಮ್ ಅವರ ಅಭಿಮಾನಿಯೊಬ್ಬರು ಈ ವಿಡಿಯೊವನ್ನು ಇದೀಗ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಎಲ್ಲೆಡೆ ಹರಿದಾಡುತ್ತಿದೆ. ಸೋನು ನಿಗಮ್ ವೇದಿಕೆಯಿಂದಲೇ ನೆರವಾಗಿ ಪ್ರೇಕ್ಷಕ ಸಂದಣಿಯಲ್ಲಿ ಅನಾವಶ್ಯಕವಾಗಿ ನಿಂತು ತೊಂದರೆ ಉಂಟು ಮಾಡುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ʼʼಅಗರ್ ತುಮ್ ಕೋ ಖಡಾ ಹೋನಾ ಹಿ ಹೈ, ಎಲೆಕ್ಷನ್ ಮೆ ಖಡೇ ಹೋ ಜಾವೋ ಯಾರ್ʼʼ (ಅಷ್ಟಕ್ಕೂ ನಿಮಗೆ ನಿಲ್ಲಲೇಬೇಕೆಂದಿದ್ದರೆ ಎಲೆಕ್ಷನ್ ನಲ್ಲಿ ನಿಲ್ಲಿ) ಎಂದು ಅವರು ವ್ಯಂಗ್ಯ ಭರಿತವಾಗಿ ಟಾಂಟ್ ನೀಡಿದ್ದಾರೆ. ಈ ಮೂಲಕ ಪದೇ ಪದೆ ನಿಲ್ಲುವ ಮೂಲಕ ಇತರ ಪ್ರೇಕ್ಷಕರಿಗೆ ಕಿರಿಕಿರಿಯುಂಟು ಮಾಡುತ್ತಿದ್ದವರಿಗೆ ಸೋನು ಭರ್ಜರಿಯಾಗಿ ತಿರುಗೇಟು ನೀಡಿದ್ದಾರೆ.
ʼʼಪ್ಲೀಸ್ ಬೈಟೋ, ಜಲ್ದಿ ಕರೋ...ಇತ್ನಾ ಟೈಂ ಜಾ ರಹಾ ಹೈ ಮೇರಾ ಮಾಲೂಮ್ ಹೈ? ಆಪ್ ಕಾ ಕಟ್ ಆಫ್ ಟೈಂ ಆ ಜಾಯೆಗಾ ಫಿರ್, ಬೈಟೋ! ಜಲ್ದಿ ಬೈಟೋ! ಬೈಟೋ! ಬಾಹಾರ್ ನಿಕ್ಲೋ! ಮೇಕ್ ದಿಸ್ ಸ್ಪೇಸ್ ಎಂಪ್ಟಿʼʼ(ದಯವಿಟ್ಟು ಕುಳಿತುಕೊಳ್ಳಿ. ಬೇಗ...ನನ್ನ ಎಷ್ಟು ಸಮಯ ಹಾಳಾಗುತ್ತಿದೆ ನಿಮಗೆ ಗೊತ್ತೆ? ನಿಮ್ಮ ಕಟ್ ಆಫ್ ಸಮಯ ಬಂದು ಬಿಡುತ್ತದೆ ಮತ್ತೆ. ಕುಳಿತುಕೊಳ್ಳಿ. ಬೇಗ ಕುಳಿತುಕೊಳ್ಳಿ! ಆ ಸ‍್ಥಳವನ್ನು ತೆರವುಗೊಳಿಸಿ) ಎಂದು ಸೋನು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Viral Video: ಶಾರುಖ್ ಹಾಡಿಗೆ ಸಿಗ್ನೇಚರ್ ಸ್ಟೆಪ್ ಹಾಕಿ ಸಖತ್ ಡ್ಯಾನ್ಸ್ ಮಾಡಿದ ಕಿಲ್ ಪೌಲ್; ವಿಡಿಯೊ ಇಲ್ಲಿದೆ
ಸೋನು ನಿಗಮ್ ಅವರು ವೇದಿಕೆಯಿಂದಲೇ ಪ್ರೇಕ್ಷಕರನ್ನು ಮ್ಯಾನೇಜ್ ಮಾಡಲು ಪ್ರಯತ್ನಿಸುತ್ತಿರುವ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಇದರ ಬಗ್ಗೆ ನೆಟ್ಟಿಗರ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಹಲವರು ಸೋನು ನಿಗಮ್ ಅವರ ಈ ಕ್ರಮವನ್ನು ಪ್ರಶಂಸಿದ್ದಾರೆ ಮತ್ತು ಕಾರ್ಯಕ್ರಮ ಆಯೋಜಕರ ಕಳಪೆ ನಿರ್ವಹಣೆ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. ʼʼಕಾರ್ಯಕ್ರಮ ಆಯೋಜಕರ ಕಳಪೆ ನಿರ್ವಹಣೆಯ ಕಾರಣದಿಂದಾಗಿ ಸೋನು ಸರ್ ಅವರು ತಾವೇ ಮಧ್ಯ ಪ್ರವೇಶ ಮಾಡಿ ಪ್ರೇಕ್ಷಕರನ್ನು ನಿಯಂತ್ರಿಸುವಂತಾಗಿದ್ದು ದುರದೃಷ್ಟಕರʼʼ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ʼʼಆಯೋಜಕರ ವ್ಯವಸ್ಥೆ ಕಳಪೆಯಾಗಿದ್ದ ಕಾರಣ, ಅವರೇ ಜನರನ್ನು ನಿಭಾಯಿಸಬೇಕಾಯಿತು ಮತ್ತು ತನ್ನ ಸುರಕ್ಷತಾ ವ್ಯವಸ್ಥೆಯನ್ನೂ ನಿಭಾಯಿಸಬೇಕಾಗಿ ಬಂತುʼʼ ಎಂದು ಇನ್ನೊಬ್ಬರು ಹೇಳಿದ್ದಾರೆ.
ಇನ್ನು ಈ ಘಟನೆ 2022ರಲ್ಲಿ ಖ್ಯಾತ ಗಾಯಕ ಕೆಕೆ ಅವರ ಸಾವಿನ ನೆನಪನ್ನು ಮರುಕಳಿಸಿ, ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಒಬ್ಬರು ಮಾಡಿರುವ ಕಾಮೆಂಟ್ ಹೀಗಿದೆ: ʼʼಇವರೇ ಇದನ್ನೆಲ್ಲಾ ನಿಭಾಯಿಸುವುದು ಅನಿವಾರ್ಯವಾಗಿತ್ತು. ಯಾಕಂದರೆ ಇಂತಹ ಕಳಪೆ ರೀತಿಯ ಕಾರ್ಯಕ್ರಮ ಆಯೋಜನೆಯಿಂದ ಕೆಕೆ ಅವರಿಗೆ ಏನಾಯಿತು ಎಂಬುದು ಸೋನು ಅವರಿಗೆ ಚೆನ್ನಾಗಿ ಗೊತ್ತಿದೆ. ಸ್ವ-ರಕ್ಷಣೆ ಮೂಲಕ ಕಾರ್ಯಕ್ರಮ ನಡೆಬೇಕಾದ ಅನಿವಾರ್ಯ ಸಂದರ್ಭಗಳಲ್ಲಿ ಎಲ್ಲರೂ ಈ ರೀತಿಯಾಗಿಯೇ ಮಾಡಬೇಕಾಗುತ್ತದೆʼʼ ಎಂದು ತಿಳಿಸಿದ್ದಾರೆ.