ಸ್ಲಂನಲ್ಲಿ ವಾಸಿಸುತ್ತಿದ್ದ ಮುಂಬೈಯ ಟೈಲರ್ ಮಗ ವಿದೇಶದಲ್ಲಿ ಪೈಲಟ್ ತರಬೇತಿ ಪಡೆದಿದ್ದೇಕೆ? ಈತನಿಗೂ 9/11 ನ್ಯೂಯಾರ್ಕ್ ದಾಳಿಗೂ ಸಂಬಂಧವೇನು? ತನಿಖೆ ವೇಳೆ ಹೊರ ಬಂದ ರಹಸ್ಯವಿದು
9/11 New York Attacks: 2001ರ ಸೆಪ್ಟೆಂಬರ್ 11ರಂದು ವಿಶ್ವವನ್ನೇ ಬೆಚ್ಚಿಬೀಳಿಸಿದ ಭಯೋತ್ಪಾದಕ ದಾಳಿಯ ಹಲವು ವರ್ಷಗಳ ಬಳಿಕವೂ ಅದರ ಹಿಂದಿನ ಸಂಚುಗಳು ಹಾಗೂ ಆರೋಪಿಗಳ ಕುರಿತ ಮಾಹಿತಿಗಳು ಕುತೂಹಲ ಮೂಡಿಸುತ್ತಲೇ ಇವೆ. ಈ ಬಗ್ಗೆ ಭಾರತದಲ್ಲೂ ತನಿಖೆ ನಡೆದಿತ್ತು. ಅದೇಕೆ ಎನ್ನುವ ವಿವರ ಇಲ್ಲಿದೆ.
9/11ರ ನ್ಯೂಯಾರ್ಕ್ ದಾಳಿ (ಸಂಗ್ರಹ ಚಿತ್ರ) -
ನ್ಯೂಯಾರ್ಕ್, ಸೆ. 11: 25 ವರ್ಷಗಳ ಹಿಂದೆ ಅಂದರೆ 2001ರ ಸೆಪ್ಟೆಂಬರ್ 11ರಂದು (9/11 New York Attacks) ಅಪಹರಿಸಲ್ಪಟ್ಟ ಎರಡು ವಿಮಾನಗಳು ನ್ಯೂಯಾರ್ಕ್ ನಗರದ ವರ್ಲ್ಡ್ ಟ್ರೇಡ್ ಸೆಂಟರ್ (World trade centre) ಅವಳಿ ಗೋಪುರಗಳಿಗೆ ಅಪ್ಪಳಿಸಿದ ಆಘಾತಕಾರಿ ದೃಶ್ಯವನ್ನು ಇಡೀ ಜಗತ್ತೇ ದಿಗ್ಭ್ರಮೆಯಿಂದ ನೋಡಿತ್ತು. ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿದ್ದ ಅಮೆರಿಕದಂತಹ ಅಮೆರಿಕವನ್ನೇ ಬೆಚ್ಚಿಬೀಳಿಸಿದ ಭಯೋತ್ಪಾದಕ ದಾಳಿ ನಡೆದು 25 ವರ್ಷಗಳ ಬಳಿಕವೂ ಅದರ ಹಿಂದಿನ ಸಂಚುಗಳು ಹಾಗೂ ಆರೋಪಿಗಳ ಕುರಿತ ಮಾಹಿತಿಗಳು ಕುತೂಹಲ ಮೂಡಿಸುತ್ತಲೇ ಇವೆ. ಈ ದಾಳಿಯ ಬೆನ್ನಲ್ಲೇ, ಇದೇ ಮಾದರಿಯ ದಾಳಿಗಳನ್ನು ಇತರ ದೇಶಗಳಲ್ಲೂ ನಡೆಸಲು ಸಂಚು ರೂಪಿಸಲಾಗಿತ್ತು ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಮುಂಬೈ ಪೊಲೀಸರಿಗೆ ಸಿಕ್ಕಿಬಿದ್ದ ವ್ಯಕ್ತಿ ಯಾರು? ಆತನಿಗೆ ಪೈಲಟ್ ತರಬೇತಿ ಏಕೆ ನೀಡಲಾಗಿತ್ತು? 9/11 ದಾಳಿಯೊಂದಿಗೆ ಆತನ ಸಂಬಂಧವೇನು? ಎಂಬ ಬಗ್ಗೆ ಇಲ್ಲಿದೆ ವಿವರ.
25 ವರ್ಷಗಳ ಹಿಂದೆ ನಡೆದಿದ್ದ ಈ ಭೀಕರ ದಾಳಿಯು ಅಮೆರಿಕದ ಆ ಐತಿಹಾಸಿಕ ಕಟ್ಟಡಗಳನ್ನು ನೆಲಸಮಗೊಳಿಸಿದ್ದಲ್ಲದೆ, ಸಾವಿರಾರು ಜನರ ಪ್ರಾಣವನ್ನು ಬಲಿ ಪಡೆದಿತ್ತು. ಈ ದಾಳಿ ನಡೆದ ಒಂದು ತಿಂಗಳ ನಂತರ ಮುಂಬೈ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ವ್ಯಕ್ತಿಯೊಬ್ಬ, ಅದೇ ದಿನ ಬ್ರಿಟನ್ ಮತ್ತು ಆಸ್ಟ್ರೇಲಿಯಾದ ಮೇಲೂ ಇಂತಹದೇ ಮಾದರಿಯ ವಿಮಾನ ದಾಳಿಗಳನ್ನು ನಡೆಸಲು ಸಂಚು ರೂಪಿಸಲಾಗಿತ್ತು ಎಂಬ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದ.
ಮೊಹಮ್ಮದ್ ಅಫ್ರೋಜ್ ತಾನು 9/11 ದಾಳಿಯ ಸಂಚಿನ ಭಾಗವಾಗಿದ್ದಾಗಿ ಒಪ್ಪಿಕೊಂಡಿದ್ದ. ಆತನ ಈ ಹೇಳಿಕೆಗಳು ಭಾರಿ ಅಂತಾರಾಷ್ಟ್ರೀಯ ತನಿಖೆಗೆ ಕಾರಣವಾಗಿದ್ದವು. ಆತನ ಹೇಳಿಕೆಗಳನ್ನು ಪರಿಶೀಲಿಸುವ ಸಲುವಾಗಿ, ಮುಂಬೈ ಪೊಲೀಸರು ವಿವಿಧ ದೇಶಗಳಿಗೆ ತನಿಖಾ ತಂಡಗಳನ್ನು ಕಳುಹಿಸಿದ್ದರು. ಅಂದಿನ ಮುಂಬೈ ಪೊಲೀಸ್ ಕಮಿಷನರ್ ಆಗಿದ್ದ ಎಂ.ಎನ್. ಸಿಂಗ್ ಈ ತನಿಖೆಯ ಭಾಗವಾಗಿ ಬ್ರಿಟನ್‌ಗೂ ಪ್ರಯಾಣಿಸಿದ್ದರು.
ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕ ದಾಳಿ ನಡೆಸಿದ ಉಗ್ರರು ಭಾರತೀಯರೇ? ವರದಿ ಹೇಳಿದ್ದೇನು?
ಪ್ರಕರಣದ ಹಿನ್ನೆಲೆ
2001ರ ಅಕ್ಟೋಬರ್‌ನಲ್ಲಿ ಮುಂಬೈಯ ಟ್ರಾಂಬೆ ಸಮೀಪದ ತಗ್ಗು ಪ್ರದೇಶವಾದ ಚೀತಾ ಕ್ಯಾಂಪ್‌ನಲ್ಲಿ ವಾಸಿಸುತ್ತಿದ್ದ ಆಫ್ರೋಜ್ ಕುರಿತು ಮುಂಬೈ ಪೊಲೀಸರಿಗೆ ರಹಸ್ಯ ಮಾಹಿತಿ (ಇಂಟೆಲಿಜೆನ್ಸ್) ಲಭಿಸಿತ್ತು. ಆತ ಪೈಲಟ್ ತರಬೇತಿ ಪಡೆಯಲು ವಿದೇಶಕ್ಕೆ ಪ್ರಯಾಣ ಬೆಳೆಸಿದ್ದ ಎನ್ನುವ ವಿಷಯ ಬಹಿರಂಗವಾಗಿತ್ತು.
ಈ ಮಾಹಿತಿಯು ತನಿಖಾಧಿಕಾರಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತು. ಏಕೆಂದರೆ ಚೀತಾ ಕ್ಯಾಂಪ್ ಒಂದು ಕೊಳಗೇರಿ ಪ್ರದೇಶವಾಗಿದ್ದು, ಮೊಹಮ್ಮದ್ ಆಫ್ರೋಜ್‌ನ ತಂದೆ ದರ್ಜಿಯಾಗಿ ಕೆಲಸ ಮಾಡುತ್ತಿದ್ದರು. ಇಷ್ಟು ಬಡತನ ಹಿನ್ನೆಲೆಯುಳ್ಳ ಕುಟುಂಬದ ಯುವಕನಿಗೆ ವಿದೇಶದಲ್ಲಿ ಅತ್ಯಂತ ದುಬಾರಿಯಾದ ಪೈಲಟ್ ತರಬೇತಿ ಕೋರ್ಸ್ ಮಾಡಲು ಹೇಗೆ ಹಣ ಹೊಂದಿಸಲು ಸಾಧ್ಯವಾಯಿತು ಎಂಬ ವಿವಚಾರವೇ ಪೊಲೀಸರ ತಲೆ ಕೊರಯಲು ಆರಂಭಿಸಿತು.
ಆಫ್ರೋಜ್‌ನ ಶಿಕ್ಷಣಕ್ಕೆ ಯಾರಾದರೂ ಅಥವಾ ರಹಸ್ಯ ಸಂಘಟನೆ ಧನಸಹಾಯ ಮಾಡಿರಬಹುದು ಎಂದು ತನಿಖಾಧಿಕಾರಿಗಳು ತೀವ್ರವಾಗಿ ಶಂಕಿಸಿ, ಆತನಿಗಾಗಿ ಹುಡುಕಾಟವನ್ನು ಪ್ರಾರಂಭಿಸಿದರು. ಆಫ್ರೋಜ್ ಭಾರತಕ್ಕೆ ಮರಳಿದ್ದಾನೆ ಎಂಬುದನ್ನು ಪೊಲೀಸರು ಶೀಘ್ರದಲ್ಲೇ ಪತ್ತೆಹಚ್ಚಿದರು. ಆದರೆ ಆತ ಎಲ್ಲಿ ತಂಗಿದ್ದಾನೆ ಎಂಬುದು ಆತನ ಕುಟುಂಬದವರಿಗೂ ತಿಳಿದಿರಲಿಲ್ಲ.
ನಂತರ ತನಿಖಾಧಿಕಾರಿಗಳು ಆತನನ್ನು ನವಿ ಮುಂಬೈಯ ವಾಶಿಯಲ್ಲಿರುವ ಹೋಟೆಲ್ ಅಬಾಟ್‌ನಲ್ಲಿ ಪತ್ತೆಹಚ್ಚಿದ್ದರು. ಪೊಲೀಸರು ತಕ್ಷಣವೇ ಆ ಹೋಟೆಲ್ ಮೇಲೆ ದಾಳಿ ನಡೆಸಿ ಆತನನ್ನು ಯಶಸ್ವಿಯಾಗಿ ಬಂಧಿಸಿದ್ದರು. ಸೆಪ್ಟೆಂಬರ್ 11ರಂದು ಅಮೆರಿಕದಲ್ಲಿ ನಡೆದ ದಾಳಿಯ ಹಿಂದಿನ ಅಲ್‌ಖೈದಾ ಪಿತೂರಿಯಲ್ಲಿ ತಾನು ಭಾಗಿಯಾಗಿದ್ದಾಗಿ ಅಫ್ರೋಜ್ ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಮುಂಬೈ ಪೊಲೀಸರು ಹೇಳಿದ್ದರು.
ಜಮ್ಮು-ಕಾಶ್ಮೀರದಲ್ಲಿ ನಿಷೇಧಿತ ಜಮಾತ್-ಎ-ಇಸ್ಲಾಮಿ ಸೇರಿದ 26 ಸ್ಥಳಗಳ ಮೇಲೆ ದಾಳಿ
ಬ್ರಿಟಿಷ್ ಸಂಸತ್ತಿನ ಮೇಲೆ ದಾಳಿ ನಡೆಸಲು ಸಂಚು
ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಮ್ಯಾಂಚೆಸ್ಟರ್‌ಗೆ ಪ್ರಯಾಣಿಸುವ ವಿಮಾನವನ್ನು ಅಪಹರಿಸಿ, ಅದನ್ನು ಬ್ರಿಟಿಷ್ ಸಂಸತ್ತಿಗೆ ಡಿಕ್ಕಿ ಹೊಡೆಸುವ ಜವಾಬ್ದಾರಿ ಹೊತ್ತಿದ್ದ ತಂಡದ ಸದಸ್ಯ ತಾನಾಗಿದ್ದಾಗಿ ಆಫ್ರೋಜ್ ಒಪ್ಪಿಕೊಂಡಿದ್ದ.
ಸಂಚಿನ ಪ್ರಕಾರ, ಆತ 2001ರ ಸೆಪ್ಟೆಂಬರ್ 11ರಂದೇ ಈ ದಾಳಿ ನಡೆಸಬೇಕಿತ್ತು. ಆದರೆ ಅಮೆರಿಕದಲ್ಲಿ ನಡೆದ ದಾಳಿಯ ಸುದ್ದಿ ಹೊರಬೀಳುತ್ತಿದ್ದಂತೆ ಪ್ರಪಂಚದಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಯಿತು. ಇದರಿಂದಾಗಿ ಆತನಿಗೆ ಈ ಕಾರ್ಯಾಚರಣೆಯನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ.
ಮುಬಾರಕ್ ಮುಸಲ್ಮಾನ್ ಎಂಬ ಬ್ರಿಟನ್‌ನ ಶ್ರೀಮಂತ ಉದ್ಯಮಿಯೊಬ್ಬ ತನ್ನ ಪೈಲಟ್ ತರಬೇತಿಗೆ ಧನಸಹಾಯ ಮಾಡಿದ್ದಾಗಿ ಆಫ್ರೋಜ್ ವಿಚಾರಣೆ ವೇಳೆ ತನಿಖಾಧಿಕಾರಿಗಳಿಗೆ ತಿಳಿಸಿದ್ದ. ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ರಿಯಾಲ್ಟೊ ಟವರ್ಸ್ ಮೇಲೆಯೂ ದಾಳಿ ನಡೆಸಲು ಮತ್ತೊಂದು ಉಗ್ರರ ತಂಡವನ್ನು ಸಿದ್ಧಪಡಿಸಲಾಗಿತ್ತು ಎಂದೂ ಸಹ ಆತ ದೃಢಪಡಿಸಿದ್ದ.
ಮುಂಬೈ ಪೊಲೀಸರು ಆರಂಭದಲ್ಲಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಫ್ರೋಜ್‌ನನ್ನು ವಶಕ್ಕೆ ಪಡೆದು, ನಂತರ ಭಯೋತ್ಪಾದನಾ ತಡೆ ಕಾಯ್ದೆ (ಪೋಟಾ) ಅಡಿಯಲ್ಲಿ ಬಂಧಿಸಿದ್ದರು. ಅವನ ಹೇಳಿಕೆಗಳ ಗಂಭೀರತೆಯನ್ನು ಪರಿಗಣಿಸಿ, ಮುಂಬೈ ಪೊಲೀಸರು ಅವನು ಒದಗಿಸಿದ್ದ ಮಾಹಿತಿಯನ್ನು ಪರಿಶೀಲಿಸಲು ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾಕ್ಕೆ ತನಿಖಾ ತಂಡಗಳನ್ನು ಕಳುಹಿಸಿದ್ದರು.
ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೊದಲು ಕೇಳಿದ್ದೇನು?
ಈ ಸುದೀರ್ಘ ಅಂತಾರಾಷ್ಟ್ರೀಯ ತನಿಖೆಯು ಆತನ ಆರೋಪಗಳನ್ನು ಪುಷ್ಟೀಕರಿಸಲು ಯಾವುದೇ ಬಲವಾದ ಸಾಕ್ಷ್ಯಗಳನ್ನು ಪತ್ತೆಹಚ್ಚುವಲ್ಲಿ ವಿಫಲವಾಯಿತು. ಇಷ್ಟು ವ್ಯಾಪಕವಾದ ತನಿಖೆಯ ಹೊರತಾಗಿಯೂ, ಮುಂಬೈ ಪೊಲೀಸರಿಗೆ ಆಫ್ರೋಜ್ ವಿರುದ್ಧ ನ್ಯಾಯಾಲಯದಲ್ಲಿ ಅಪರಾಧವನ್ನು ಸಾಬೀತುಪಡಿಸಲು ಅಗತ್ಯವಿದ್ದ ಸೂಕ್ತ ಸಾಕ್ಷ್ಯಗಳನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ.
ಇದರ ಪರಿಣಾಮವಾಗಿ, ಪ್ರಾಸಿಕ್ಯೂಷನ್ (ಅಭಿಯೋಜನೆ) ನಂತರ ಆತನ ಮೇಲಿದ್ದ ಪೋಟಾ (POTA) ಕಠಿಣ ಕಾನೂನಿನ ಆರೋಪಗಳನ್ನು ಕೈಬಿಡಲು ಅನುಮೋದನೆ ನೀಡಿತು. ಹೀಗಾಗಿ ಆಫ್ರೋಜ್ ಜೈಲಿನಿಂದ ಬಿಡುಗಡೆಯಾದ. ಪೊಲೀಸರು ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಆಫ್ರೋಜ್ ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದ್ದು, ತನ್ನ ಮೇಲಿನ ಎಲ್ಲ ಆರೋಪಗಳು ಸಂಪೂರ್ಣ ಕಲ್ಪಿತ ಮತ್ತು ಸುಳ್ಳು ಎಂದು ಹೇಳಿದ್ದಾನೆ.