ತಮಿಳುನಾಡು ಸರ್ಕಾರ ರಚನೆಗೆ ಕಾಂಗ್ರೆಸ್ ಬೆಂಬಲ ನೀಡಿದ್ದರೂ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಟಿವಿಕೆ ಪಾಲ್ಗೊಳ್ಳದಿರಲು ಕಾರಣವೇನು ?
ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಟಿವಿಕೆಗೆ ಸರ್ಕಾರ ರಚನೆಗೆ ಕಾಂಗ್ರೆಸ್ ಸಹಾಯ ಮಾಡಿದ್ದರೂ ಕೂಡ ದೆಹಲಿಯಲ್ಲಿ ಸೋಮವಾರ ಮಧ್ಯಾಹ್ನ ನಡೆಯಲಿರುವ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿಅದು ಪಾಲ್ಗೊಳ್ಳುವುದಿಲ್ಲ. ಇದಕ್ಕೆ ಮೂರು ಪ್ರಮುಖ ಕಾರಣಗಳು ಇವೆ. ಅವು ಯಾವುದು ಎಂಬುದರ ಕುರಿತು ಇಲ್ಲಿದೆ ಮಾಹಿತಿ.
ಸಂಗ್ರಹ ಚಿತ್ರ -
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Tamil Nadu Chief Minister C. Joseph Vijay) ನೇತೃತ್ವದ ತಮಿಳಗಾ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷವು ಸೋಮವಾರ ಮಧ್ಯಾಹ್ನ ದೆಹಲಿಯಲ್ಲಿ (Dehli) ನಡೆಯಲಿರುವ ಇಂಡಿಯಾ ಮೈತ್ರಿಕೂಟದ (India bloc) ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ತಮಿಳುನಾಡಿನ ವಿಧಾನ ಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದರೂ ಕೂಡ ಸರ್ಕಾರ ರಚನೆಗೆ ಬಹುಮತದ ಕೊರತೆಯಾದಾಗ ಕಾಂಗ್ರೆಸ್ ಸಹಾಯ ಮಾಡಿತ್ತು. ಹೀಗಾಗಿ ಟಿವಿಕೆ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಪಾಲ್ಗೊಳ್ಳದಿರುವುದು ಅಚ್ಚರಿ ಮೂಡಿಸಿದೆ.
ಇಂಡಿಯಾ ಮೈತ್ರಿಕೂಟದ ಪ್ರಮುಖ ಘಟಕವಾಗಿರುವ ಕಾಂಗ್ರೆಸ್ ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರ ರಚನೆಗೆ ಸಹಾಯ ಮಾಡಿದ್ದರೂ ಟಿವಿಕೆ ಸಭೆಗೆ ಗೈರು ಹಾಜರಾಗಲು ಮೂರು ಪ್ರಮುಖ ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ಈ ಸಭೆಗೆ ಅವರನ್ನು ಕರೆಯಲಾಗಿಲ್ಲ. ಇದಕ್ಕೆ ಮೂರು ಪ್ರಮುಖ ಕಾರಣಗಳನ್ನು ತಜ್ಞರು ವಿಶ್ಲೇಷಿಸಿದ್ದಾರೆ.
ಡಿಎಂಕೆ, ಎಎಪಿ ಇಲ್ಲದೆ ನಡೆಯಲಿದೆ ಇಂಡಿಯಾ ಮೈತ್ರಿಕೂಟ ಸಭೆ
1- ಜೂನ್ 8ರಂದು ಸೋಮವಾರ ನಡೆಯುವ ಇಂಡಿಯಾ ಮೈತ್ರಿಕೂಟದ ಸಭೆಯು ಪ್ರಾಥಮಿಕವಾಗಿ ಸಂಸದರನ್ನು ಹೊಂದಿರುವ ಪಕ್ಷಗಳಿಗೆ ಆಗಿದೆ. ಆದರೆ ಟಿವಿಕೆಯು ಪ್ರಸ್ತುತ ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಯಾವುದೇ ಸಂಸದರನ್ನು ಹೊಂದಿಲ್ಲ. ಈ ಸಭೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ವಿರೋಧ ಪಕ್ಷಗಳ ನಡುವಿನ ಸಮನ್ವಯ ಹೇಗಿರಬೇಕು ಎನ್ನುವ ಚರ್ಚಾ ವಿಷಯವನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯವಾಗಿ ಸಂಸತ್ತಿನ ಕಾರ್ಯಚಟುವಟಿಕೆ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ನೀತಿಗಳು ಮತ್ತು ವಿರೋಧ ಪಕ್ಷದ ಭವಿಷ್ಯದ ಹಾದಿಗಳ ಕುರಿತಾಗಿದೆ.
2- 2026ರ ವಿಧಾನಸಭಾ ಚುನಾವಣೆಯ ಅನಂತರ ಟಿವಿಕೆ ತಮಿಳುನಾಡಿನಲ್ಲಿ ಸರ್ಕಾರವನ್ನು ರಚಿಸಿದ್ದರೂ ಕೂಡ ಅದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಹೀಗಾಗಿ ಅದು ಇಂಡಿಯಾ ಮೈತ್ರಿಕೂಟದ ಭಾಗವಾಗಿಲ್ಲ.
3- ಟಿವಿಕೆ ಇಂಡಿಯಾ ಮೈತ್ರಿಕೂಟದ ಔಪಚಾರಿಕ ಸದಸ್ಯನಾಗಿಲ್ಲ. ತಮಿಳುನಾಡು ವಿಧಾನಸಭಾ ಚುನಾವಣೆಯ ಅನಂತರ ಕಾಂಗ್ರೆಸ್ ಟಿವಿಕೆಯನ್ನು ಬೆಂಬಲಿಸಿದ್ದರೂ ಕೂಡ ಅದು ಕೇವಲ ತಮಿಳುನಾಡು ರಾಜಕೀಯಕ್ಕೆ ಸೀಮಿತವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೆ ಸವಾಲೊಡ್ಡಲು ವಿರೋಧ ಪಕ್ಷಗಳು ರಚಿಸಿಸಿರುವ ಇಂಡಿಯಾ ಬ್ಲಾಕ್‌ಗೆ ಅದು ಇನ್ನು ಸೇರಿಕೊಂಡಿಲ್ಲ.
ಹೀಗಾಗಿ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಲು ಟಿವಿಕೆ ಒಕ್ಕೂಟಕ್ಕೆ ಆಹ್ವಾನವನ್ನು ನೀಡಲಾಗಿಲ್ಲ. ಮುಂದಿನ ದಿನಗಳಲ್ಲಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಟಿವಿಕೆಯ ಮಿತ್ರಪಕ್ಷವಾಗಿರಬಹುದು. ಆದರೆ ಅದು ಸ್ವತಂತ್ರವಾಗಿ ಟಿವಿಕೆಯನ್ನು ಇಂಡಿಯಾ ಒಕ್ಕೂಟದ ಸದಸ್ಯನಾಗಿ ಮಾಡುವುದಿಲ್ಲ.
ಟಿಎಂಸಿಯಲ್ಲಿ ಬಂಡಾಯದ ಬಿರುಗಾಳಿ? 20 ಸಂಸದರು ಬಿಜೆಪಿ ಸಂಪರ್ಕದಲ್ಲಿ ಎಂಬ ವರದಿಯಿಂದ ರಾಜಕೀಯ ಸಂಚಲನ
ತಮಿಳುನಾಡು ವಿಧಾನ ಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಟಿವಿಕೆಯನ್ನು ಬೆಂಬಲಿಸಿದ್ದರಿಂದ ಡಿಎಂಕೆ ಆಕ್ರೋಶಕ್ಕೆ ಕಾರಣವಾಗಿತ್ತು. ಡಿಎಂಕೆ ಜೊತೆ ಕಾಂಗ್ರೆ ಸ್ ದೀರ್ಘಕಾಲದ ಮೈತ್ರಿಯನ್ನು ಹೊಂದಿದ್ದು, ಅದನ್ನು ಬಿಟ್ಟು ವಿಜಯ್ ಅವರ ಸರ್ಕಾರ ರಚನೆಗೆ ಸಹಾಯ ಮಾಡಿದ್ದರಿಂದ ಡಿಎಂಕೆಗೆ ಕಾಂಗ್ರೆಸ್ ದ್ರೋಹ ಮಾಡಿದೆ ಎಂದು ಆರೋಪಿಸಿದೆ. ಜೊತೆಗೆ ತಾನು ಇನ್ನು ಇಂಡಿಯಾ ಮೈತ್ರಿಕೂಟದ ಭಾಗವಾಗಿಲ್ಲ ಎಂದು ಘೋಷಿಸಿದೆ.