Holi 2025: ರಂಗು ತುಂಬಿದ ಹೋಳಿ ಆಚರಣೆಯ ಸಂಕೇತವೇನು?
Holi 2025: ಜಗತ್ತನ್ನೆಲ್ಲ ವರ್ಣಮಯವಾಗಿಸುವ ಹೋಳಿ ಹಬ್ಬವು, ನಮ್ಮೊಳಗಿನ ಕತ್ತಲೆಯನ್ನೂ ಕಳೆದು ಬದುಕಿಗೇ ಬಣ್ಣ ತುಂಬುವಂಥದ್ದು ಎನ್ನುತ್ತಾರೆ ಹಿರಿಯರು. ಹಾಗಾದರೆ ಹೋಳಿ ಎಂದರೆ ಏನರ್ಥ? ಕೇವಲ ರಂಗಿನಾಟ ಆಡಿದ್ದಕ್ಕೇ ಬದುಕೇ ಬದಲಾಗುತ್ತದೆ ಎನ್ನುವುದು ನಿಜವೇ? ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಹೋಳಿ ಆಚರಣೆ.

ಬೆಂಗಳೂರು: ವಸಂತ ಋತುವಿನ ಹಬ್ಬಗಳೆಂದರೆ ಹಾಗೆಯೇ, ಒಂದು ರೀತಿಯಲ್ಲಿ ಮರುಹುಟ್ಟು ಪಡೆದ ಹಾಗೆ. ಚಳಿಯಲ್ಲಿ ಮುದುರಿದ್ದ ಮೈ-ಮನಗಳಿಗೆಲ್ಲ ಹೊಸ ಚೈತನ್ಯ ನೀಡಿ, ಸುತ್ತಲೂ ಹಸಿರಾಗಿ ಚಿಗುರಿರುವ ಮತ್ತು ಬಣ್ಣದ ಹೂವುಗಳಿಂದ ನಳನಳಿಸುತ್ತಿರುವ ಪ್ರಕೃತಿಯಂತೆಯೇ ನಮಗೂ ಹೊಸ ರೂಪವನ್ನು ನೀಡುವಂಥ ಹಬ್ಬಗಳಿವು. ಇದೇ ದಿನಗಳಲ್ಲಿ ಬರುವಂಥ ಹೋಳಿ ಹುಣ್ಣಿಮೆಯೂ ಅಂಥದ್ದೇ ಒಂದು ಪರಿವರ್ತನೆಯ ಹಬ್ಬ (Holi 20250). ಜಗತ್ತನ್ನೆಲ್ಲ ವರ್ಣಮಯವಾಗಿಸುವ ಈ ಹಬ್ಬವು, ನಮ್ಮೊಳಗಿನ ಕತ್ತಲೆಯನ್ನೂ ಕಳೆದು ಬದುಕಿಗೇ ಬಣ್ಣ ತುಂಬುವಂಥದ್ದು ಎನ್ನುತ್ತಾರೆ ಇದನ್ನು ಪರಂಪರೆಯಿಂದ ಆಚರಿಸುತ್ತಾ ಬಂದವರು. ಏನಿದರರ್ಥ? ಕೇವಲ ರಂಗಿನಾಟ ಆಡಿದ್ದಕ್ಕೇ ಬದುಕೇ ಬದಲಾಗುತ್ತದೆ ಎನ್ನುವುದು ನಿಜವೇ?
ಹೋಳಿ ಹುಣ್ಣಿಮೆಯ ಹಿಂದಿನ ರಾತ್ರಿ ಹೋಳಿಕಾ ದಹನ್ ಎನ್ನುವ ಆಚರಣೆ ಭಾರತದ ಬಹಳ ಕಡೆಗಳಲ್ಲಿ ಜಾರಿಯಲ್ಲಿದೆ. ಕರ್ನಾಟಕದಲ್ಲೂ ಕಾಮನ ಹಬ್ಬವನ್ನು ಆಚರಿಸುವಲ್ಲಿ, ಮನಸ್ಸಿನ ಕೊಳೆಯೆಲ್ಲ ಹರಿದು ಹೊರಗೆ ಹೋಗುವಂತೆ ಬೈಯ್ಯುವುದು, ಜರಿಯುವುದು ಮುಂತಾದವನ್ನು ಆಚರಣೆಯ ಭಾಗವಾಗಿ ಕಾಣಬಹುದು. ಇದೇ ಸಂದರ್ಭದಲ್ಲಿ ಪೊರಕೆಯೊಂದನ್ನು ಮೆರವಣಿಗೆ ಮಾಡಿ, ಸುಟ್ಟು, ಕೊಳೆಯನ್ನೆಲ್ಲ ದಹಿಸುವುದನ್ನು ಸಾಂಕೇತಿಕವಾಗಿ ನೋಡಬಹುದು. ಪೌರಾಣಿಕವಾಗಿ ಈ ದಿನದ ಹಿಂದಿನ ಕಥೆಗಳು ಏನೇ ಇರಲಿ, ಈ ಎಲ್ಲ ಆಚರಣೆಗಳ ಹಿಂದಿರುವುದು ಹಳೆಯ ಕೊಳೆಯನ್ನೆಲ್ಲ ಸುಟ್ಟು ತೆಗೆದು, ಹೊಸದಾಗಿ ಮೂಡುತ್ತಿರುವ ಪ್ರಕೃತಿಯೊಂದಿಗೆ ಸೇರಿಕೊಳ್ಳುವುದು. ಹೋಳಿಕಾ ದಹನದ ಹಿಂದೆ ಇರುವುದೂ ಇಂಥದ್ದೇ ಭಾವನೆಗಳು. ಮನಸ್ಸಿನ ಋಣಾತ್ಮಕತೆಯನ್ನು, ಭಾವನಾತ್ಮಕ ಹೊರೆಗಳನ್ನು, ಬೇಡದ ಸಂಬಂಧಗಳ ಗೋಜಲನ್ನು, ಹಳೆಯ ಕಹಿಗಳನ್ನೆಲ್ಲ ತೊಡೆದರೆ, ಹೊಸ ಆಲೋಚನೆಗಳಿಗೆ, ನವಭಾವಗಳಿಗೆ ನಾಂದಿ ಹಾಡಬಹುದಲ್ಲವೇ?
ಈ ಸುದ್ದಿಯನ್ನೂ ಓದಿ: Holi Skincare Tips: ಹೋಳಿ ಆಡಲು ಇಷ್ಟ: ತ್ವಚೆಗೆ ಕಷ್ಟವೇ? ಇಲ್ಲಿದೆ ಟಿಪ್ಸ್
ಓರಣವೇ ಆಗಬೇಕಿಲ್ಲ
ಬದುಕಿನಲ್ಲಿ ಎಲ್ಲವೂ ಒಪ್ಪವಾಗಿ, ಓರಣವಾಗಿಯೇ ಇರಬೇಕಿಲ್ಲ ಎನ್ನುತ್ತದೆ ಹೋಳಿ ಹಬ್ಬ. ಈ ಹಬ್ಬದಲ್ಲಿ ಚೆಲ್ಲಾಡುವ ಬಣ್ಣಗಳು, ಎರಚಾಡುವ ಓಕುಳಿಗಳೂ ಸಹ ಯಾವುದೇ ಒಪ್ಪ-ಓರಣ ಇಲ್ಲದವು. ಹೇಗೆಂದರೆ ಹಾಗೆ ಬಣ್ಣ ಚೆಲ್ಲಾಡಿದಾಗಲೇ ಈ ಹಬ್ಬಕ್ಕೆ ರಂಗೇರುವುದು. ಈ ಬಣ್ಣಕ್ಕೆ ಇಂಥಾ ಬಣ್ಣವನ್ನೇ ಬೆರೆಸಬೇಕೆಂಬ ಕಟ್ಟಳೆಯಿಲ್ಲ; ಯಾವುದನ್ನು ಯಾವುದಕ್ಕಾದರೂ ಬೆರೆಸಬಹುದು. ಕೆನ್ನೆಗೆ ಗುಲಾಬಿಯನ್ನೇ ಹಚ್ಚಬೇಕೆಂದಿಲ್ಲ; ನೀಲಿಯೂ ರಂಗೇರಿಸುತ್ತದೆ. ಈ ಬಣ್ಣದ ರಾಡಿಯೇ ನಮಗೆ ಹಿತವಾಗುವುದು. ಒಟ್ಟಿನಲ್ಲಿ ನಂನಮ್ಮ ರುಚಿಗೆ ಅನುಗುಣವಾಗಿ ಹೇಗೂ ಈ ಹಬ್ಬವನ್ನು ಆಚರಿಸಬಹುದು. ಬದುಕೂ ಹಾಗೆಯೇ, ಎಲ್ಲವೂ ಸೂತ್ರದಲ್ಲೇ ಇರಬೇಕೆಂದಿಲ್ಲ, ಸೂತ್ರ ತಪ್ಪಿದರೂ ಆ ಬಗ್ಗೆ ಬೇಸರ ಪಡಬೇಕಿಲ್ಲ.

ಆಡಾಡುತ್ತಾ...
ಹೋಳಿ ಹಬ್ಬದ ಆತ್ಮವಿರುವುದೇ ರಂಗಿನಾಟದಲ್ಲಿ. ಆಡುತ್ತಾ, ಹಾಡುತ್ತಾ, ಕುಣಿದಾಡುತ್ತಾ, ತಿಂದು-ಕುಡಿದು ಮೋಜು-ಮಸ್ತಿ ಮಾಡುವುದೇ ಈ ಹಬ್ಬದ ಆಚರಣೆಯಲ್ಲಿ ಪ್ರಧಾನವಾಗಿ ಕಾಣುವುದು. ಎಲ್ಲಿ ಸಂತೋಷವಿಲ್ಲವೋ ಅಲ್ಲಿ ಬದಲಾವಣೆ ಸಾಧ್ಯವೇ ಇಲ್ಲ. ಮನದಲ್ಲಿನ ಒತ್ತಡ, ಬೇಸರ, ಏಕತಾನತೆ, ಹಿಂಜರಿಕೆಯನ್ನೆಲ್ಲ ಹೋಗಲಾಡಿಸುವುದಕ್ಕೆ ಇಂಥ ಆಟ-ಹುಡುಗಾಟಗಳು ಬೇಕಾಗುತ್ತವೆ. ಬದುಕಿನ ನಾಗಾಲೋಟದಲ್ಲಿ ಕಳೆದೇ ಹೋದಂತಿರುವ ನಮ್ಮನ್ನು ನಾವು ಮತ್ತೆ ಹುಡುಕಿಕೊಳ್ಳುವುದಕ್ಕೆ ಇಂಥ ಮನಸೋಇಚ್ಛೆ ಆಡುವಂಥ ಅವಕಾಶಗಳು ಖಂಡಿತವಾಗಿ ಬೇಕಾಗುತ್ತವೆ.
ನಂಟುಗಳನ್ನು ಬೆಸೆಯಲು
ಬಣ್ಣದ ಹಿಂದಿರುವ ಮುಖಗಳೆಲ್ಲ ಒಂದೇ! ಯಾರನ್ನು ಯಾರೆಂದು ಗುರುತಿಸುವುದು? ವೃದ್ಧರು, ಯುವಕರು, ಮೇಲು-ಕೀಳು, ಕಪ್ಪು-ಬಿಳಿ ಮುಂತಾದ ಯಾವುದೇ ತರತಮ ಭಾವಗಳು ಇಲ್ಲದಂತೆ ಎಲ್ಲರೂ ಸೇರಿ ರಂಗಿನಾಟ ಆಡುವಾಗ ನಂಟುಗಳನ್ನು ಬೆಸೆಯುವುದು ಸುಲಭವಲ್ಲವೇ? ಇಂಥ ಸನ್ನಿವೇಶಗಳಲ್ಲೇ ಮನದ ನಡುವಿನ ಗೋಡೆಗಳು ಬಿದ್ದು, ಏಕತೆಯ ಭಾವನೆಗಳು ಬೆಳೆಯುವುದು. ಮನೆಯೊಳಗೆ ನಮ್ಮಷ್ಟಕ್ಕೆ ನಾವು ಆಚರಿಸಿಕೊಳ್ಳುವುದ ಹಬ್ಬಗಳಿಗಿಂತ, ಹೀಗೆ ಸೇರಿ ಆಡುವ ಹಬ್ಬಗಳು ಘನವಾದ ಮತ್ತು ಅರ್ಥಪೂರ್ಣವಾದ ನಂಟುಗಳು ಬೆಸೆಯುವುದಕ್ಕೆ ಹೆಚ್ಚಿನ ಅವಕಾಶಗಳನ್ನು ನೀಡುತ್ತವೆ.

ಈ ಎಲ್ಲವುಗಳ ಹಿನ್ನೆಲೆಯಲ್ಲಿ, ಹೋಳಿ ಎಂಬುದು ಕೇವಲ ಬಣ್ಣ ಎರಚುವ ಹಬ್ಬವಲ್ಲ. ಬೇಡದ ಕಾಮನೆಗಳನ್ನು ಸುಟ್ಟು, ಮನದ ಭಾರವನ್ನು ಹರಿಯಬಿಟ್ಟು, ಹಾಡುವ-ಆಡುವ-ಕುಣಿಯುವ ಖುಷಿಯನ್ನು ಮೈ ತುಂಬಿಕೊಳ್ಳುತ್ತಲೇ, ಪ್ರಕೃತಿಯ ಬದಲಾವಣೆಗೆ ನಾವೂ ಸ್ಪಂದಿಸಿ, ಪರಿವರ್ತನೆಗೆ ತೆರೆದುಕೊಳ್ಳುವ ಸುಂದರ ಸಂದರ್ಭವಿದು.