ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Readers Colony: ಇಲ್ಲ ಸಲ್ಲದ ಅಪವಾದ

ಪತ್ರಕರ್ತ ವಿನಾಯಕ ಮಠಪತಿ ಅವರ ‘ವಿಶ್ವೇಶ್ವರ ಭಟ್ಟರು ಲಿಂಗಾಯತ ವಿರೋಧಿಯಾಗಿದ್ದರೆ, ಇದೆಲ್ಲ ಸಾಧ್ಯವೇ?’ ಎಂಬ ತಲೆಬರಹದ ಅಂಕಣ ಸತ್ಯಕ್ಕೆ ಕನ್ನಡಿ ಹಿಡಿದಂತೆ ಇತ್ತು. ಇಷ್ಟು ದಶಕಗಳ ಕಾಲ ಜವಾಬ್ದಾರಿಯುತವಾಗಿ ಪತ್ರಿಕೋದ್ಯಮ ನಡೆಸಿಕೊಂಡು ಬಂದಿರುವ ಭಟ್ಟರು ಎಂದೂ ವೃತ್ತಿಯಲ್ಲಿ ಜಾತಿವಾದವನ್ನು ಬಿತ್ತಿದವರಲ್ಲ. ಭಟ್ಟರ ವಿರೋಧಿಗಳು ಜಾತಿವಾದಿ ಎಂಬ ಅಪವಾದ ಹೊರಿಸಿ, ಅವರ ಹೆಸರಿಗೆ ಮಸಿ ಬಳಿಯುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂಬ ಬಲವಾದ ಶಂಕೆ ಮೂಡುತ್ತದೆ.

Readers Colony: ಇಲ್ಲ ಸಲ್ಲದ ಅಪವಾದ

-

Profile
Ashok Nayak Nov 29, 2026 12:15 AM

ಪತ್ರಕರ್ತ ವಿನಾಯಕ ಮಠಪತಿ ಅವರ ‘ವಿಶ್ವೇಶ್ವರ ಭಟ್ಟರು ಲಿಂಗಾಯತ ವಿರೋಧಿಯಾಗಿದ್ದರೆ, ಇದೆಲ್ಲ ಸಾಧ್ಯವೇ?’ ಎಂಬ ತಲೆಬರಹದ ಅಂಕಣ ಸತ್ಯಕ್ಕೆ ಕನ್ನಡಿ ಹಿಡಿದಂತೆ ಇತ್ತು. ಇಷ್ಟು ದಶಕಗಳ ಕಾಲ ಜವಾಬ್ದಾರಿಯುತವಾಗಿ ಪತ್ರಿಕೋದ್ಯಮ ನಡೆಸಿಕೊಂಡು ಬಂದಿರುವ ಭಟ್ಟರು ಎಂದೂ ವೃತ್ತಿಯಲ್ಲಿ ಜಾತಿವಾದವನ್ನು ಬಿತ್ತಿದವರಲ್ಲ. ಭಟ್ಟರ ವಿರೋಧಿಗಳು ಜಾತಿವಾದಿ ಎಂಬ ಅಪವಾದ ಹೊರಿಸಿ, ಅವರ ಹೆಸರಿಗೆ ಮಸಿ ಬಳಿಯುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂಬ ಬಲವಾದ ಶಂಕೆ ಮೂಡುತ್ತದೆ.

ಭಟ್ಟರ ಗರಡಿಯಲ್ಲಿ ಪಳಗುತ್ತಿರುವ ಎಷ್ಟೋ ಪತ್ರಕರ್ತರಲ್ಲೂ ಲಿಂಗಾಯತರು ಇದ್ದಾರೆ. ಹಿರಿಯ ಕನ್ನಡ ಪತ್ರಕರ್ತರ ಮೇಲೆ ಈ ರೀತಿ ಚಿತಾವಣೆ ತೀರಾ ಹೇಯ. ಅವರ ಅಭಿಮಾನಿಯಾಗಿ ಅವರ ಬಗ್ಗೆ ಈ ಅಪವಾದ ಬಂದಿರುವುದು ನನಗೆ ಬೇಸರ ತಂದಿದೆ.

- ರಜತ್ ರಾಜ್ ಡಿ.ಹೆಚ್, ಮಡಿಕೇರಿ

ಅಭಿಪ್ರಾಯ ಪ್ರಕಟ ತಪ್ಪೇ?

ಲೇಖಕ ರವಿ ಹಂಜ್ ಅವರ ಲೇಖನಗಳನ್ನು ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟಿಸಿದ್ದಕ್ಕೆ, ಬಸವಣ್ಣ ನವರಿಗೆ ಅವಮಾನ ಮಾಡಿದ್ದಾರೆ ಎಂದು ಪ್ರತಿಭಟನೆ ನಡೆಸುತ್ತಿರುವರ ಬಗ್ಗೆ ಲೇಖಕ ನಂಜನಗೂಡು ಮೋಹನ್ ಸೇರಿದಂತೆ ಹಲವರು ಸರಿಯಾದ ಉತ್ತರ ಕೊಟ್ಟಿದ್ದಾರೆ. ಒಬ್ಬ ಚಿಂತಕ ಅಥವಾ ಸಂಶೋಧಕ ಲೇಖನದ ಮೂಲಕ ತನ್ನ ವಿಚಾರವನ್ನು ಅಭಿವ್ಯಕ್ತಿಸಿದರೆ, ಪ್ರತಿವಾದದಿಂದ ಅದನ್ನು ತಿರಸ್ಕರಿಸಬಹುದು. ಜನ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ಬಸವಣ್ಣನವರೇ ಜಾತಿ ವರ್ಗ ಲಿಂಗಭೇದವಿಲ್ಲದ ಅನುಭವ ಮಂಟಪದಲ್ಲಿ ಶರಣರಿಗೆ ಮುಕ್ತ ಚರ್ಚೆಗೆ ಅವಕಾಶ ನೀಡಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯವನ್ನು ಎತ್ತಿ ಹಿಡಿದರು.

ಇದನ್ನೂ ಓದಿ: Vinayaka Mathapathy Column: ವಿಶ್ವೇಶ್ವರ ಭಟ್ಟರು ಲಿಂಗಾಯತ ವಿರೋಧಿಯಾಗಿದ್ದರೆ ಇದೆಲ್ಲ ಸಾಧ್ಯವೇ ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮನ್ನಣೆ ಇರಬೇಕು. ರವಿ ಹಂಜ್ ಅವರು ಬಸವಣ್ಣನವರನ್ನು ಚಿತ್ರಿಸಿದ ರೀತಿಗೆ ಬಸವ ಭಕ್ತರಲ್ಲಿ ನೋವುಂಟಾಗಿದ್ದರೆ ಸ್ವಾಬಾವಿಕ. ಆದರೆ ಅದಕ್ಕೆ ಸಂಪಾದಕರನ್ನು ಬಲಿಯಾಗಿಸಕೂಡದು.

- ವಿ.ಜಿ. ಇನಾಮದಾರ, ಸಾರವಾಡ

ಕಾಡಾನೆ ಪ್ರಹಸನ

ಕರ್ನಾಟಕದ ಈ ನವೆಂಬರ್ ರಾಜ್ಯೋತ್ಸವ ತಿಂಗಳಿನಲ್ಲಿ ಕಾಡಾನೆಗಳ ಸ್ಥಳಾಂತರದ ವಿಚಾರದಲ್ಲಿ ರಾಜಕೀಯ, ಮೂರು ಕಾಂಗ್ರೆಸ್ ಶಾಸಕರ ರಾಜೀನಾಮೆ ಬೆದರಿಕೆ ಹಾಗೂ ಅರಣ್ಯ ಸಚಿವರ ರಾಜೀನಾಮೆ ಆಕ್ರೋಶದ ಹೇಳಿಕೆಗಳು ಜನತೆಯಲ್ಲಿ ವಿಸ್ಮಯ ಮೂಡಿಸಿದೆ. ಈ ಅಕ್ಟೋಬರ್‌ನ ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಆನೆಗಳು ಕಾಡಿನಿಂದ ನಾಡಿಗೆ ಬಂದು ಮತ್ತೆ ಕಾಡಿಗೆ ಮರಳಿದ ಸಚಿತ್ರ ದಿನಪತ್ರಿಕೆಗಳ ಸುದ್ದಿ ವರದಿಗಳು ಓದಿದ್ದ ಜನತೆಗೆ ಈಗ ಹಾಸನ, ಬೇಲೂರು, ಚಿಕ್ಕಮಗಳೂರಿನ ಆನೆ ಸ್ಥಳಾಂತರ ವಿವಾದ ಬೇಸರ ಮೂಡಿಸಿದೆ.

ಮಾನವ- ಕಾಡಾನೆಗಳ ಸಂಘರ್ಷ ಹೆಚ್ಚಾಗುತ್ತಿದೆ. ಅರಣ್ಯಗಳಿಂದ ಆನೆಗಳು ನಾಡಿಗೆ ಬಂದು ಬೆಳೆ ನಾಶ ಮಾಡಿದ ಪ್ರಕರಣಗಳು ರೈತರಲ್ಲಿ ಕಣ್ಣೀರು ಮೂಡಿಸಿದೆ. ಆನೆಗಳ ದಾಳಿಯಿಂದ ಕೆಲವರು ಮರಣ ಹೊಂದಿದರು. ಆನೆ ಕಾರಿಡಾರ್, ಆನೆ ಆಭಯಾರಣ್ಯಗಳ ನಿರ್ವಹಣೆಯಲ್ಲಿ ಸರಕಾರಗಳು ವಿಫಲ ಆಗಿವೆ. ಕಾಡಾನೆ- ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು ಎಂದು?

- ಮಂಜುಳಾ ರಾಮಶೇಷ, ಹುಲಿಮಂಗಲ

ಭರವಸೆ ನಂಬಲು ಸಾಧ್ಯವೆ?

ಆಶಾ ಕಾರ್ಯಕರ್ತರ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ‘ಲಿಖಿತ ಭರವಸೆ ನೀಡಲು ಸಾಧ್ಯವಿಲ್ಲ. ಒಬ್ಬ ಮುಖ್ಯಮಂತ್ರಿಯ ಮಾತನ್ನೇ ನಂಬುವುದಿಲ್ಲ ಎಂದರೆ ಹೇಗೆ’ ಎಂದು ಹೇಳಿದ್ದಾರೆ. ಆಡಳಿತಾರೂಢರು ಮತ್ತು ರಾಜಕಾರಣಿಗಳು ನೀಡಿರುವ ಸಾಕಷ್ಟು ಭರವಸೆಗಳು ಸಮಾಧಿ ಸೇರಿವೆ. ಇದನ್ನು ಅರಿತ ಆಶಾ ಕಾರ್ಯಕರ್ತೆಯರು ಲಿಖಿತ ಭರವಸೆ ಬಯಸಿರುವುದು ಸರಿಯಿದೆ.

‘ಆಶಾ ಕಾರ್ಯಕರ್ತೆಯರು ಇಲ್ಲದಿದ್ದರೂ ಆರೋಗ್ಯ ಸೇವೆಗೆ ತೊಂದರೆ ಇಲ್ಲ’ ಎಂದು ಸಚಿವ ಖಾದರ್ ಹೇಳಿರುವುದು ಒಪ್ಪುವುದಾದರೆ, ಮಂತ್ರಿಮಂಡಲ ಇಲ್ಲದಿದ್ದರೂ ಎಲ್ಲ ಸೇವೆಗಳೂ ರಾಜ್ಯಪಾಲರ ಅಡಿ ಜನರಿಗೆ ದೊರಕುತ್ತವೆ. ಅವರ ಮಾತಿನಂತೆ ಆದರೆ ವಿಧಾನಸಭೆ ವಿಸರ್ಜಿಸಿ ನಾಲ್ಕಾರು ವರ್ಷಗಳ ಕಾಲ ಜನಪ್ರತಿನಿಧಿಗಳು ಮನೆಯಲ್ಲಿರಲಿ.

- ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಅಧಿವೇಶನ ಹೀಗಿರಲಿ

ಬೆಳಗಾವಿಯ ಭವ್ಯ ಸುವರ್ಣ ವಿಧಾನಸೌಧದಲ್ಲಿ ಮತ್ತೊಂದು ಚಳಿಗಾಲದ ಅಧಿವೇಶನಕ್ಕೆ ವೇದಿಕೆ ಸಜ್ಜಾಗಿದೆ. ಆದರೆ, ಈ ಬಾರಿಯಾದರೂ ಕಲಾಪಗಳು ಕೇವಲ ರಾಜಕೀಯ ಕೆಸರೆರಚಾಟ, ಟೀಕೆ-ಟಿಪ್ಪಣಿಗಳಿಗೆ ಸೀಮಿತವಾಗದಿರಲಿ ಎಂಬುದೇ ಉತ್ತರ ಕರ್ನಾಟಕದ ಜನತೆಯ ಕಳಕಳಿಯ ಆಶಯ. ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಡಾ.ನಂಜುಂಡಪ್ಪ ವರದಿಯ ಸಮರ್ಪಕ ಅನುಷ್ಠಾನ, ಉತ್ತಮ ಆರೋಗ್ಯ ಹಾಗೂ ಶಿಕ್ಷಣ ಸೌಲಭ್ಯಗಳ ಬಗ್ಗೆ ಗಂಭೀರ ಚರ್ಚೆ ನಡೆದು ದೀರ್ಘಾವಧಿ ಯೋಜನೆ ರೂಪಿಸಿ, ಕಾರ್ಯಾನುಷ್ಠಾನದ ಬದ್ದತೆ ತೋರ್ಪಡಿಸುವ ದಿಸೆಯಲ್ಲಿ ಸರ್ಕಾರ ಯೋಚಿಸುವದು ಒಳಿತು.

ಸರ್ಕಾರದ ಜವಾಬ್ದಾರಿ ಮಾತ್ರವಲ್ಲ ಪ್ರತಿಪಕ್ಷ ನಾಯಕರ ಜವಾಬ್ದಾರಿಯೂ ಸಾಕಷ್ಟಿದೆ. ಆರೋಪಗಳಲ್ಲಿ ತೊಡಗದೆ ಉತ್ತರ ಕರ್ನಾಟಕದ ಅಭಿವೃದ್ಧಿ ದಿಸೆಯಲ್ಲಿ ಆಗಬೇಕಾದ ವಿಷಯ ಗಳನ್ನು ಪಟ್ಟಿ ಮಾಡಿ ಸರ್ಕಾರದ ಮೇಲೆ ಒತ್ತಡ ಹಾಕುವ ಕಾರ್ಯವನ್ನು ಮಾಡಬೇಕಿದೆ.

- ಉದಯ ಮ. ಯಂಡಿಗೇರಿ, ಧಾರವಾಡ

ತಿಮ್ಮಪ್ಪ ಮೆಚ್ಚುವನೇ?

ಚೆನ್ನೈ ಉದ್ಯಮಿ ವರ್ಧಮಾನ್ ಜೈನ್ ತಮ್ಮ ಕಂಪನಿಯ ಶೇರುಗಳನ್ನು ಮಾರಿ ಬಂದ ಲಾಭ ರೂ.6000 ಕೋಟಿಗಳಲ್ಲಿ ಶೇ.1 ಪಾಲು ರೂ.207 ಕೋಟಿ ಮೌಲ್ಯದ 121 ಕೇಜಿ ಚಿನ್ನವನ್ನು ತಿರುಪತಿ ಯ ವೆಂಕಟೇಶ್ವರ ದೇಗುಲಕ್ಕೆ ಕಾಣಿಕೆಯಾಗಿ ಅರ್ಪಿಸಿದ್ದಾರೆ. ಶ್ಲಾಘನೀಯ! ಆದರೆ ಈಗಾಗಲೇ ವಿಶ್ವದ ಅತ್ಯಂತ ಶ್ರೀಮಂತ ದೇವರೆಂದು ಹೆಸರಾಗಿರುವ ತಿಮ್ಮಪ್ಪನಿಗೆ ಮತ್ತಷ್ಟು ಕಾಣಿಕೆ ಕೊಡುವುದರಿಂದ ದೇಗುಲದ ಉಗ್ರಾಣದ ಗುಡ್ಡದ ಗಾತ್ರ ಏರಬಹುದು ಅಷ್ಟೇ.

ಬದಲಾಗಿ ದೇವರೂ ಮೆಚ್ಚುವಂತೆ ಕೆಲವು ಕಾಯಕ ಮಾಡಬಹುದಿತ್ತು. ದೇಶದಾದ್ಯಂತ ದುಸ್ಥಿತಿ ಯಲ್ಲಿರುವ ಅನಾಥರು, ವಿಧವೆಯರು, ಕಂದಮ್ಮಗಳು, ವೃದ್ಧರು, ವಿಕಲಾಂಗರ ಆಶ್ರಮಗಳಿಗೆ ಧನಸಹಾಯ ಮಾಡಬಹುದಿತ್ತು. ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಧನಸಹಾಯ, ಬೀಳುವ ಸ್ಥಿತಿಯಲ್ಲಿರುವ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಬಹುದಿತ್ತು.

ಪಾಳುಬಿದ್ದ ದೇಗುಲಗಳ ಪುನರುತ್ಥಾನ, ಹೊತ್ತಿನ ಕೂಳಿಗೂ ಗತಿಯಿಲ್ಲದ ಕಡುಬಡವರಿಗೆ ಗುಡಿಸಲು, ರಸ್ತೆ, ವಿದ್ಯುತ್ ಸೌಲಭ್ಯ, ನೀರು, ಊಟದ ವ್ಯವಸ್ಥೆ ಮಾಡಬಹುದಿತ್ತು. ಇಂತಹ ಸಮಾಜಮುಖಿ ಕೆಲಸಗಳನ್ನು ಖಂಡಿತ ತಿಮ್ಮಪ್ಪ ಮೆಚ್ಚುತ್ತಾನೆ.

- ಕೆ.ಶ್ರೀನಿವಾಸ ರಾವ್, ಹರಪನಹಳ್ಳಿ

ಹೂಳೆತ್ತುವ ಕಾರ್ಯ

ರಾಜ್ಯದ ಪ್ರಮುಖ 14 ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ 135 ಟಿಎಂಸಿ ನೀರಿನ ಕೊರತೆಯಿದ್ದು ಕೇವಲ 65 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿರುವುದು ಆತಂಕಕಾರಿ. ತುಂಗಭದ್ರಾ ಜಲಾಶಯ ದಲ್ಲಿ 26 ಟಿಎಂಸಿ, ಆಲಮಟ್ಟಿಯಲ್ಲಿ 7.5 ಟಿಎಂಸಿ ಹಾಗೂ ನಾರಾಯಣಪುರದಲ್ಲಿ 4.9 ಟಿಎಂಸಿ ಹೂಳು ತುಂಬಿಕೊಂಡಿರುವುದರಿಂದ ಅಮೂಲ್ಯ ಮಳೆನೀರು ಸಂಗ್ರಹವಾಗದೆ ವ್ಯರ್ಥವಾಗುತ್ತಿದೆ ಎಂದು ವರದಿಗಳು ಹೇಳುತ್ತವೆ.

ಬೆಂಗಳೂರಿಗೆ ವಾರ್ಷಿಕ 22 ಟಿಎಂಸಿ ನೀರು ಅಗತ್ಯವಿದ್ದು, ಹೂಳಿನ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ಬೇಸಿಗೆಯಲ್ಲಿ ತೀವ್ರ ಜಲಕ್ಷಾಮ ಎದುರಾಗುವುದು ಖಚಿತ. ಹೂಳೆತ್ತುವ ಕುರಿತು ತಾಂತ್ರಿಕ ಸಮಿತಿ ರಚಿಸಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ವರದಿಗಾಗಿ ಕಾಯದೆ ಆಧುನಿಕ ತಂತ್ರಜ್ಞಾನ ಬಳಸಿ ಹೂಳು ತೆರವುಗೊಳಿಸಬೇಕು.

- ಡಾ. ವಿಜಯಕುಮಾರ್ ಎಚ್. ಕೆ., ರಾಯಚೂರು