ಪುಸ್ತಕ ಓದಲು ಸಮಯ ಇಲ್ಲವೇ ? ಹೀಗೂ ಓದಬಹುದು ಪುಸ್ತಕ !
ಪುಸ್ತಕ ಓದಲು ಸಮಯ ಇಲ್ಲವೇ ? ಹೀಗೂ ಓದಬಹುದು ಪುಸ್ತಕ !

ಹಲವರಿಗೆ ಒಳ್ಳೆಯ ಪುಸ್ತಕ ಓದಲು ಆಸೆ ಇರುತ್ತದೆ. ಆದರೆ ಓದಲು ಸಮಯ ಇಲ್ಲ ಎಂದು ಆ ಒಂದು ಹವ್ಯಾಸಕ್ಕೆ ನೀರೆರೆಯದೇ, ಸುಮ್ಮನಿರುವವರೇ ಹೆಚ್ಚು. ಅಂತಹವರಿಗೆ ಇಲ್ಲೊಂದು ಅಮೂಲ್ಯ ಸಲಹೆ ಇದೆ. ಇದನ್ನು ಪಾಲಿಸಿದರೆ, ಎಷ್ಟು ದಪ್ಪನೆಯ ಪುಸ್ತಕವನ್ನಾದರೂ ಓದಬಹುದು!
ಶ್ರೀನಿವಾಸ ನೆದರ್ಲ್ಯಾಂಡ್ಸ್
ಕಳೆದ ಎರಡು ವರ್ಷಗಳಿಂದ ನೆದರ್ಲ್ಯಾಂಡ್ ದೇಶದ ಚಿಕ್ಕ ಪಟ್ಟಣದಲ್ಲಿ ವಾಸಿಸುತ್ತಿದ್ದೇನೆ. ನನ್ನ ಬಾಲ್ಯದ ಊರು ದಾವಣಗೆರೆ ಬಳಿಯ ಹರಪನಹಳ್ಳಿ. ಅಲ್ಲಿ ಪ್ರತೀ ಶನಿವಾರ ಸಂತೆ ಇರುತ್ತಿತ್ತು. ಕಾಕತಾಳೀಯ ವೆಂಬಂತೆ ನಾನಿರುವ ಊರಿನಲ್ಲೂ ಶನಿವಾರ ಸಂತೆ ಇದೆ. ಆಗ ನನ್ನ ತಂದೆ ಸುಮಾರು 40-45 ರೂಪಾಯಿಯಲ್ಲಿ ಕೈಚೀಲದ ತುಂಬಾ ತರಕಾರಿ ಖರೀದಿಸು ತ್ತಿದ್ದರು. ಈಗ ನನ್ನ ಶನಿವಾರದ ಸಂತೆಯ ಖರ್ಚು ಕೂಡ ಸುಮಾರು 40-45 ಆಗುತ್ತದೆ. ವ್ಯತ್ಯಾಸ ಏನೆಂದರೆ ಅಂದು ರೂಪಾಯಿ, ಇಂದು ಯುರೋ!
ಇಲ್ಲಿ ಜರುಗುವ ಪ್ರತಿ ಶನಿವಾರದ ಸಂತೆಗೆ ಹೋಗುವ ರೂಢಿಯಾಗಿದೆ. ಸಂತೆಯ ನೆಪದಲ್ಲಿ ಇನ್ನೂ ಕೆಲವು ಅಂಗಡಿ, ರಸ್ತೆಗಳಿಗೆ ಭೇಟಿ ಕೊಡುವ ಅಭ್ಯಾಸವೂ ಉಂಟು. ಅಲ್ಲಿನ ಮುಂಜಾವಿನ ಎಳೆಬಿಸಿಲಿನಂತೆ ಇಲ್ಲಿ ದಿನವೆಲ್ಲ ಎಳೆಬಿಸಿಲಿ ರುತ್ತದೆ. ಅಂತಹ ಬಿಸಿಲಿಗೆ ಮೈಯ್ಯೊಡ್ಡಿ ಊರಿನ ಮಧ್ಯದ ಗಲ್ಲಿಗಳಲ್ಲಿ ಸೈಕಲ್ ಗಳಿಗೆಂದೇ ಮೀಸಲಾದ ಕೆಂಪನೆಯ ರಸ್ತೆಗಳಲ್ಲಿ, ನಿಧಾನವಾಗಿ ಸೈಕಲ್ ತುಳಿಯುತ್ತಾ, ಯಾವುದೇ ತರಾತುರಿಯಿಲ್ಲದೆ ಶನಿವಾರದ ಸಮಯ ಕಳೆಯುವುದು ನನ್ನ ಇಷ್ಟವಾದ ಹವ್ಯಾಸಗಳ ಲ್ಲೊಂದಾಗಿದೆ.
ಸಂತೆಯಲ್ಲಿ ಹೊಸ ಅಂಗಡಿ
ಹೀಗೆ ಒಂದು ಶನಿವಾರ ಯಥಾಪ್ರಕಾರ ಸಾಗುತ್ತಿರುವಾಗ ಹೊಸತೊಂದು ದಾರಿಯಲ್ಲಿ ಪುಸ್ತಕದಂಗಡಿಯೊಂದು ಕಂಡಿತು. ಸೈಕಲ್ ನಿಲ್ಲಿಸಿ, ಸಹಜ ಕುತೂಹಲದಿಂದ ಅದರ ಒಳ ಹೊಕ್ಕರೆ ಅಲ್ಲಿ ಕಂಡದ್ದು ಬರೀ ಡಚ್ ಭಾಷೆಯ ಪುಸ್ತಕಗಳು. ಅಲ್ಲಿನ ಮಾಲಿಕನಿಗೆ ಎಂಗೆಲ್ಸ್ (ಇಂಗ್ಲಿಷ್) ಪುಸ್ತಕಗಳಿವೆಯೇ ಎಂದು ಕೇಳಿದಾಗ ಮೂಲೆಯಲ್ಲಿದ್ದ ಒಂದು ಪುಸ್ತಕ ಸಾಲನ್ನು ತೋರಿಸಿದ.
ಬಹುತೇಕ ಪುಸ್ತಕಗಳು ಕಾದಂಬರಿಗಳು. ಅವುಗಳ ಮಧ್ಯೆ ಕಂಡ ಒಂದು ಹಳೆಯ ಚಿಕ್ಕ ಪುಸ್ತಕ ‘ದ ಮೊಘಲ್’. ಅರೆ.. ಇದೇನೋ ಭಾರತಕ್ಕೆ ಸಂಬಂಧಿಸಿದ ಹಾಗಿದೆ ಅಂತ ತೆಗೆದುಕೊಂಡು ಮುನ್ನುಡಿ ಓದಿದೆ. ಊಹೆ ನಿಜವಾಯಿತು. ಪುಸ್ತಕದ ಬೆಲೆ ಕೇವಲ 2 ಯುರೋ. ಖುಷಿಯಿಂದ ಖರೀದಿಸಿದೆ. ದೂರದ ದೇಶದ, ಸಣ್ಣ ಪಟ್ಟಣದ ಒಂದು ಚಿಕ್ಕ ಅಂಗಡಿಯಲ್ಲಿ ನಮ್ಮ ದೇಶದ ಇತಿಹಾಸದ ಕುರಿತ ಪುಸ್ತಕ ಅಗ್ಗದ ಬೆಲೆಗೆ ದೊರೆತ ಖುಷಿಯಲ್ಲಿ ಮನೆಗೆ ಮರಳಿದೆ.
ಓದಲು ಸಮಯವೆಲ್ಲಿ?
ಆದರೆ ಓದಲು ಸಮಯವೆಲ್ಲಿದೆ? ಆಫೀಸ್ ಕೆಲಸ, ಸಂಸಾರ, ಯೂಟ್ಯೂಬ್, ವಾಟ್ಸಾಪ್ ಹಾಗು ಇತ್ತೀಚೆಗೆ ಸೇರಿರುವ ವೆಬ್ ಸರಣಿ ಗಳು. ಇವೆಲ್ಲವೂ ದಿನದ 24 ಘಂಟೆಯನ್ನು ಬಹುತೇಕ ಆಕ್ರಮಿಸಿದ್ದವು. ಪುಸ್ತಕ ಓದಲು ಸಮಯವೇ ಇಲ್ಲದಾಗಿತ್ತು. ಸಮಯ ವನ್ನು ಹೊಂದಿಸುವುದು ಹೇಗೆ ಎಂದು ಯೋಚಿಸಿದಾಗ ಒಂದು ಉಪಾಯ ಹೊಳೆಯಿತು.
ದಿನವೂ ಸಿಗುವ 10-15 ನಿಮಿಷದ ಬಿಡುವಿನ ಸಮಯ ಅದು. ಅಲ್ಲಿ ಯಾವುದೇ, ಯಾರದೇ ಅಡಚಣೆಯಿಲ್ಲ. ಅದು ಯಾವ ಸಮಯ ಅಂತೀರಾ ... ಟಾಯ್ಲೆಟ್ ಸಮಯ! ನಾನು ಪ್ರತಿದಿನ ಎದ್ದ ಕೂಡಲೇ ವಾಟ್ಸಾಪ್ ಮೆಸೇಜುಗಳನ್ನು ಹಾಗು ಕನ್ನಡ ಪತ್ರಿಕೆಗಳನ್ನು ಓದುವ ಸಮಯ ಅದು. ಆ ಸಮಯವನ್ನು ಈ ಪುಸ್ತಕಕ್ಕೆ ಮೀಸಲಿಡಲು ನಿರ್ಧರಿಸಿದೆ.
ಇಲ್ಲಿನ ಟಾಯ್ಲೆಟ್ ರೂಮ್ ಗಳಲ್ಲೂ ಒಂದು ಸುಂದರವಾದ ಕಪ್-ಬೋರ್ಡ್ ಇರುವುದು ಸಾಮಾನ್ಯ. ಅದರಲ್ಲಿ ಈ ಪುಸ್ತಕ ವನ್ನಿಟ್ಟೆ. ದಿನವೂ ಟಾಯ್ಲೆಟ್ ಕೋಣೆಯಲ್ಲಿ ಕಳೆಯುತ್ತಿದ್ದ 10-15 ನಿಮಿಷಗಳಲ್ಲಿ ಕೆಲವು ಪುಟಗಳನ್ನು ಓದುವ ಅಭ್ಯಾಸ
ಶುರು ಮಾಡಿದೆ. ಹಾಗೆ ದಿನವೂ ಕೆಲವು ಪುಟಗಳನ್ನು ಓದುತ್ತಾ, 608 ಪುಟಗಳ ಪುಸ್ತಕವನ್ನು ಅಂದಾಜು 6 ತಿಂಗಳಲ್ಲಿ ಮುಗಿಸಿದೆ.
ಪ್ರತಿನಿತ್ಯ ಕೇವಲ 10-15 ನಿಮಿಷ ಫೋನ್ ಬಳಕೆ ಕಮ್ಮಿ ಮಾಡಿದರೆ ಒಂದು ಒಳ್ಳೆಯ ಪರಿಣಾಮವಾದಿತು ಎಂಬುದಕ್ಕೆ ಈ ನನ್ನ ಅನುಭವ ಒಂದು ಸಣ್ಣ ಉದಾಹರಣೆ!
ನೀವೂ ಕೂಡ ಎದ್ದ ಕೂಡಲೆ ಮೊಬೈಲ್ ಹಿಡಿದುಕೊಂಡು ಟಾಯ್ಲೆಟ್‌ಗೆ ಹೋಗುವ ಜಾಯಮಾನದವರಾಗಿದ್ದರೆ ಕೊಂಚ ಯೋಚಿಸಿ. ಆ ಸಮಯವನ್ನು ಅಪರೂಪದ ಪುಸ್ತಕ ಓದಲು ಉಪಯೋಗಿಸಬಹುದು! ಈ ರೀತಿಯ ಸಣ್ಣ ಸಣ್ಣ ಸಮಯದ ಸದುಪಯೋಗವು ಒಳ್ಳೆಯ ಹವ್ಯಾಸಕ್ಕೆ ಇಂಬು ಕೊಡುತ್ತದೆ, ಹನಿ ಹನಿಗೂಡಿದರೆ ಹಳ್ಳ ಎಂಬಂತೆ!
ಅಪರೂಪದ ಮಾಹಿತಿ
ಈ ಪುಸ್ತಕವು ಹದಿನಾರನೆಯ ಶತಮಾನದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಪ್ರವೇಶಿಸಲು ಹವಣಿಸುತ್ತಿದ್ದ ಸಂದರ್ಭದ ಕುರಿತಾಗಿದ್ದು. ಆಗಲೇ ಇಲ್ಲಿ ತಳವೂರಿದ್ದ ಪೋರ್ಚುಗೀಸರ ಪ್ರಾಬಲ್ಯವನ್ನು ಮೀರಲು ಹಾಗೂ ಭಾರತವನ್ನಾಳು ತ್ತಿದ್ದ ಮೊಘಲರೊಂದಿಗೆ ನೇರ ವ್ಯಾಪಾರ ಮಾಡಲು ವಿಲಿಯಂ ಹಾಕಿನ್ಸ್ (ಬ್ರಿಯಾನ್ ಹಾಕ್ಸ್‌ವರ್ತ್) ಎಂಬ ಸಾಹಸಿಯನ್ನು ಭಾರತಕ್ಕೆ ಕಳುಹಿಸುತ್ತಾರೆ. ಆತನ ಈ ಪ್ರವಾಸ ಮುಂದೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಭಾರತ ಪ್ರವೇಶಿಸಲು ಅಡಿಪಾಯ ವಾಗುತ್ತದೆ. ಆತ ಸೂರತ್ ಮೂಲಕ ಆಗ್ರಾಕ್ಕೆ ಬರುವ ದಾರಿ ಹಾಗು ಮಾರ್ಗದಲ್ಲಿ ಆತನು ಕಾಣುವ ಅಂದಿನ ಭಾರತದ ಕುರಿತಾದ ಚಿತ್ರಣ ಈ ಪುಸ್ತಕದಲ್ಲಿದೆ.
ಭಾರತದ ಅಂದಿನ ಜನಜೀವನ, ಜನರ ವೇಷ ಭೂಷಣಗಳು, ಖಾದ್ಯ, ಮದ್ಯ, ರಾಜರ ವಿಲಾಸಿ ಜೀವನ, ಶ್ರಮಿಕರ ಜೀವನ, ಸೂಫಿಗಳ ಪ್ರಭಾವ, ಮೊಘಲರ ಹಾಗು ಅರಮನೆಯ ಕುರಿತು ಅಚ್ಚರಿಯಿಂದ ವಿವರಿಸಿದ್ದಾನೆ. ಯುದ್ಧ ಕೈದಿಗಳಾಗಿದ್ದು ಅರಮನೆಯ ಸೇವಕ(ಕಿ)ಯರಾಗಿ ಮಾರ್ಪಾಡಾದವರು, ನರ್ತಕಿಯರು, ಮೊಘಲರ ದಬ್ಬಾಳಿಕೆಯ ನಡುವೆ ತಮ್ಮ ಅಸ್ಥಿತ್ವ ಉಳಿಸಿಕೊಂಡಿದ್ದ ರಜಪೂತರ ಬಗ್ಗೆಯೂ ಕೂಡ ವಿವರ ಉಂಟು.
ಈ ಪುಸ್ತಕ ಓದುವದರಿಂದ ಹಲವು ಸೋಜಿಗದ ವಿಷಯಗಳೂ ತಿಳಿದವು. ಈಗಿನ ಸ್ಪ್ರಿಂಟ್, ರಿಲೇ ಓಟವನ್ನು ಅಂದಿನ ಕಾಲದಲ್ಲಿ
ರಾಜರು ವಿಷಯವನ್ನು ವೇಗವಾಗಿ ತಲುಪಿಸಲು ಬಳಸುತ್ತಿದ್ದರು. ಅಂದರೆ ಅಂಚೆ ತಲುಪಿಸುವ ತ್ವರಿತ ವಿಧಾನ ಇತ್ತು. ಸತಿ ಪದ್ಧತಿಯ ವಿವರಣೆ ಇದೆ. ವಾಸ್ಕೋಡಗಾಮ ಭಾರತಕ್ಕೆ ಬಂದಿದ್ದು ನಮಗೆಲ್ಲ ತಿಳಿದಿದೆ. ಆತ ನಡೆಸಿದ ಪೈಶಾಚಿಕ ಕೃತ್ಯದ ವಿಷಯ
ತಿಳಿದು ಆತನ ಬಗ್ಗೆ ಅಸಹ್ಯವಾಯಿತು. ಹೀಗೆ ಅಂದಿನ ಕಾಲದ ಭಾರತದ ಕುರಿತ ಹಲವು ವಿಷಯಗಳನ್ನು, ಕೆಲವು ವರ್ಣನೆ ಯೊಂದಿಗೆ ಬರೆದಿದ್ದಾನೆ.
ಗೊತ್ತು ಗುರಿಯಿಲ್ಲದೆ ಹಲವು ತಾಸುಗಳನ್ನು ವಾಟ್ಸಾಪ್‌ನಲ್ಲಿ, ಇಂಟರ್ನೆಟ್ ಬ್ರೌಸಿಂಗ್‌ನಲ್ಲಿ ಕಾಲಹರಣ ಮಾಡುವುದಕ್ಕಿಂತ, ನಾವು ನೀವೆಲ್ಲ ಯಾವುದಾದರೂ ಪುಸ್ತಕವನ್ನು ಓದಬಹುದು ಮತ್ತು ಅದಕ್ಕೆ ಸಮಯ ಹೊಂದಿಸಲು ನಾವೇ ಉಪಾಯ
ಹುಡುಕಬೇಕು ಎಂದು ನಾನು ಧೈರ್ಯವಾಗಿ ಹೇಳಬಲ್ಲೆ. ಏಕೆಂದರೆ ಒಂದಿಡೀ ಪುಸ್ತಕವನ್ನು ಬೆಳಗಿನ ಟಾಯ್ಲೆಟ್ ಸಮಯದಲ್ಲಿ ಓದಿದ ಅನುಭವ ನನಗಿದೆ! ನೀವೂ ಸಹ ವಾಟ್ಸಾಪ್‌ನಲ್ಲಿ, ಇಂಟರ್ನೆಟ್‌ನಲ್ಲಿ ಗಂಟೆಗಟ್ಟಲೆ ಕಾಲಹರಣ ಮಾಡುವ ಬದಲು, ಅಪರೂಪದ ಪುಸ್ತಕಗಳನ್ನು ಓದಿ! ಜ್ಞಾನ ಹೆಚ್ಚಿಸಿಕೊಳ್ಳಿ!