Varsha Bhavisya: 2026: ಮಿಥುನ ರಾಶಿಯವರ ದಾಂಪತ್ಯ ಜೀವನದಲ್ಲಿ ಬಿರುಗಾಳಿ, ಗುರುಬಲವಿದ್ದರೂ ತೊಂದರೆ ತಪ್ಪಿದ್ದಲ್ಲ
2026ರಲ್ಲಿ ಶನಿಗ್ರಹ ತನ್ನ ರಾಶಿ ಬದಲಾವಣೆ ಮಾಡದಿದ್ದರೂ ಸೂರ್ಯ, ಮಂಗಳ, ಬುಧ ಮೊದಲಾದ ಪ್ರಮುಖ ಗ್ರಹಗಳು ಸಂಚಾರ ಬದಲಾವಣೆಗೆ ಒಳಗಾಗಲಿವೆ. ಈ ಗ್ರಹ ಚಲನಗಳು ದ್ವಾದಶ ರಾಶಿಚಕ್ರದ ಎಲ್ಲ ರಾಶಿಗಳ ಮೇಲೆ ಸ್ಪಷ್ಟ ಪ್ರಭಾವ ಬೀರುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಮಿಥುನ ರಾಶಿಯವರಿಗೆ 2026ರ ಹೊಸ ವರ್ಷ ಯಾವ ರೀತಿಯ ಫಲ ನೀಡಲಿದೆ? ವಿದ್ಯಾರ್ಥಿಗಳ ಶಿಕ್ಷಣ ಜೀವನಕ್ಕೆ ಈ ವರ್ಷ ಅನುಕೂಲಕರವಾಗಿದೆಯೇ? ದಾಂಪತ್ಯ ಜೀವನದಲ್ಲಿ ಸ್ಥಿರತೆ ಇರುತ್ತದೆಯೇ? ಎಂಬ ಎಲ್ಲ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ.
ಭಾರತೀಯ ಜೋತಿಷಿ ಹಾಗೂ ವಿಜ್ಞಾನ ಸಂಶೋಧಕ ಮಹಾಬಲಮೂರ್ತಿ ಕೊಡ್ಲೆಕೆರೆ ಮತ್ತು ಸ್ವಾತಿ -
ಬೆಂಗಳೂರು, ಜ. 7: 2026ರಲ್ಲಿ ಶನಿಯು ತನ್ನ ರಾಶಿಯನ್ನು ಬದಲಿಸದೇ ಇದ್ದರೂ, ಸೂರ್ಯ, ಮಂಗಳ, ಬುಧ ಸೇರಿದಂತೆ ಪ್ರಮುಖ ಗ್ರಹಗಳ ಸ್ಥಾನ ಪಲ್ಲಟವಾಗಲಿದೆ. ಗ್ರಹಗಳ ಈ ಸಂಚಾರವು ಎಲ್ಲ ರಾಶಿ ಚಕ್ರದ ಜನರ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ದ್ವಾದಶ ರಾಶಿಗಳಲ್ಲಿ ವಿಶೇಷವಾಗಿರುವ ಮಿಥುನ ರಾಶಿಯವರಿಗೆ 2026ರ ಹೊಸ ವರ್ಷ ಹೇಗಿರಲಿದೆ? ವಿದ್ಯಾರ್ಥಿಗಳಿಗೆ ಈ ವರ್ಷ ಶುಭದಾಯಕವೇ? ದಾಂಪತ್ಯ ಜೀವನ ಹೇಗಿರಲಿದೆ? ಅವಿವಾಹಿತರಿಗೆ ಕಂಕಣ ಬಲ ಇದೆಯಾ? ಆರೋಗ್ಯ, ಆರ್ಥಿಕ ಸ್ಥಿತಿ ವೃದ್ಧಿಯಾಗಲಿದೆಯಾ? ಎಂಬುವುದನ್ನು ತಿಳಿಯೋಣ..
ಭಾರತೀಯ ಜೋತಿಷಿ ಹಾಗೂ ವಿಜ್ಞಾನ ಸಂಶೋಧಕ ಮಹಾಬಲಮೂರ್ತಿ ಕೊಡ್ಲೆಕೆರೆ ವಿಶ್ವವಾಣಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, ಮಿಥುನ ರಾಶಿಯವರಿಗೆ ಈ ವರ್ಷ ಸಾಮಾನ್ಯವಾಗಿರಲಿದೆ. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಶ್ರಮಿಸಬೇಕು.
ಗುರುಬಲವಿದ್ದರೂ ತೊಂದರೆ ತಪ್ಪಿದ್ದಲ್ಲ
ಜೂನ್ 2ರ ನಂತರ ಈ ರಾಶಿಯವರಿಗೆ ಗುರಬಲ ಪ್ರಾರಂಭವಾಗಲಿದೆ. ಗುರುಬಲವಿದ್ದರೂ ಅದರ ಲಾಭ ದೊರೆಯುವುದು ಕಷ್ಟ. ಗುರುಬಲ ಬಂದ ಸ್ವಲ್ಪ ಸಮಯದಲ್ಲೇ ತಪ್ಪಿಹೋಗಲಿದೆ. ಎಲ್ಲ ಕಾರ್ಮೋಡಗಳು ದೂರ ಸರಿದವು ಎನ್ನುವಷ್ಟರಲ್ಲಿ ಮತ್ತೆ ಯಾವೂದೋ ರೂಪದಲ್ಲಿ ಸಮಸ್ಯೆಗಳು ಉದ್ಭವವಾಗುತ್ತವೆ. ಹಾಗಾಗಿ ಮಿಥುನ ರಾಶಿಯವರು ಈ ವರ್ಷ ಗುರುಬಲದ ಮೇಲೆ ಹೆಚ್ಚಿನ ನಂಬಿಕೆ ಹೊಂದುವುದು ಕಷ್ಟ.
ವೃಷಭ ರಾಶಿಯವರಿಗೆ ಎಲ್ಲಿವರೆಗೆ ಇದೆ ಗುರುಬಲ?
ಶುಕ್ರನಿಂದ ಗೆಲುವು
ಮಿಥುನ ರಾಶಿಯವರು ಈ ವರ್ಷ ಶುಕ್ರನ ಮೇಲೆ ಹೆಚ್ಚಿನ ನಂಬಿಕೆ ಇಡುವುದು ಉತ್ತಮ. ಈ ರಾಶಿಯವರ ಜಾತಕದಲ್ಲಿ ಶುಕ್ರ ಬಲಿಷ್ಟನಾಗಿದ್ದೇ ಆದಲ್ಲಿ, ಗ್ರಹಗಳ ಚಲನವಲನ ವಿಚಾರದಲ್ಲಿ ಗುರುವಿನ ಮೇಲೆ ನಂಬಿಕೆ ಇಲ್ಲದ ಪರಿಸ್ಥಿತಿಯಲ್ಲೂ ಸಹ, ಶುಕ್ರನ ಮೂಲಕ ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯವಿದೆ.
ಜೀವನ ಸಂಗಾತಿಯನ್ನು ಆರಿಸುವಾಗ ಅವಸರ ಬೇಡ
ಕಳತ್ರ ಸ್ಥಾನ ಅಂದರೆ ಧನುರ್ ರಾಶಿಯ ಯಜಮಾನನಾದ ಗುರುವಿನಿಂದಲೇ ಈ ರಾಶಿಯವರ ವೈವಾಹಿಕ ಜೀವನಕ್ಕೆ ಚಾಲನೆ ದೊರೆಯುವಂತಾಗಲಿದೆ. ಈ ಧನುರ್ ಹಾಗೂ ಮಿಥುನ ರಾಶಿಗಳೆರಡೂ ದ್ವಿಸ್ವಭಾವ ಹೊಂದಿರುವ ರಾಶಿಗಳಾಗಿವೆ. ಯುವಕ-ಯುವತಿ ತಾವು ಇಷ್ಟಪಟ್ಟವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸುವಾಗ ಅವರ ಮನಸ್ಸಿನಲ್ಲಿ ಗೊಂದಲಗಳು ಉದ್ಭವವಾಗುತ್ತವೆ. ಹೀಗಾಗಿ ಮಿಥುನ ರಾಶಿಯವರು ವೈವಾಹಿಕ ಜೀವನಕ್ಕೆ ಕಾಲಿಡುವಾಗ ಅವಸರ ಮಾಡಬಾರದು.
ದಾಂಪತ್ಯ ಜೀವನದಲ್ಲಿ ಬಿರುಗಾಳಿ
ಈ ವರ್ಷ ಮಿಥುನ ರಾಶಿಯವರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಏಳುವ ಸಾಧ್ಯತೆ ಇದೆ. ಆದರೂ ಗರು ಮತ್ತು ಶುಕ್ರನ ಶಕ್ತಿಯಿಂದಾಗಿ ಸತಿ-ಪತಿಗಳ ನಡುವೆ ಎಷ್ಟೇ ಮನಸ್ತಾಪ ಬಂದರೂ ಇಬ್ಬರ ನಡುವೆ ಹೊಂದಾಣಿಕೆ ಇರಲಿದೆ. ಅತಿಯಾಗಿ ಯೋಚಿಸಿ ಮತ್ತು ದಿಢೀರ್ ಆಗಿ ನಿರ್ಧಾರಗಳನ್ನು ತೆಗೆದುಕೊಳ್ಳದೇ, ಸಮಯೋಚಿತವಾಗಿ ವರ್ತಿಸಿದ್ದಲ್ಲಿ ದಾಂಪತ್ಯ ಜೀವನ ಸುಖಮಯವಾಗಿರಲಿದೆ.
ಮಿಥನ ರಾಶಿಯವರು ಬುದ್ಧಿ ಜೀವಿಗಳಾಗಿದ್ದು, ಬೌದ್ಧಿಕ ಶಕ್ತಿಯನ್ನು ಉಪಯೋಗಿಸಿದ್ದಲ್ಲಿ ಈ 2026ರಲ್ಲಿ ಯಾವುದೇ ತೊಂದರೆಗಳಿಗೆ ಸಿಲುಕದೇ ಪಾರಾಗಲಿದ್ದಾರೆ ಎಂದು ಮಹಾಬಲಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.